ETV Bharat / state

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಗಾಯಾಳು ಯುವತಿ ಮನೆಗೆ ಆರ್.ಅಶೋಕ್ ಭೇಟಿ

ಓಂ ಶಕ್ತಿ ಮಾಲಾಧಾರಿಗಳು ಮೆರವಣಿಗೆ ಹೋಗುವಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡ ಯುವತಿ ಮನೆಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿದರು.

OM SHAKTI DEVOTEES
ಆರ್.ಅಶೋಕ್ ಹಾಗೂ ಭಾಸ್ಕರ್​ ರಾವ್ (ETV Bharat)
author img

By ETV Bharat Karnataka Team

Published : January 5, 2026 at 7:50 PM IST

2 Min Read
Choose ETV Bharat

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾಕ್ಷೇತ್ರದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ನಡೆದ ಕಲ್ಲು ತೂರಾಟ ಘಟನೆಯಲ್ಲಿ ಗಾಯಗೊಂಡಿದ್ದ ಯುವತಿ ಮನೆಗೆ ಇಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಭೇಟಿ ನೀಡಿ ಸಂತೈಸಿದರು.

ಜೆ.ಜೆ. ನಗರದ ಪಂಚಮುಖಿ ನಾಗದೇವತಾ ದೇವಸ್ಥಾನ ಬಳಿ ನಿನ್ನೆ ರಾತ್ರಿ ಓಂ ಶಕ್ತಿ ಮಾಲಾಧಾರಿಗಳು ಮೆರವಣಿಗೆ ಹೋಗುವಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಯುವತಿಗೆ ತಲೆಗೆ ಪೆಟ್ಟಾಗಿತ್ತು. ದುರ್ಘಟನೆ ಸಂಬಂಧ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೃತ್ಯ ಖಂಡಿಸಿ ಓಂ ಶಕ್ತಿ ಮಾಲಾಧಾರಿಗಳು ಪೊಲೀಸ್​ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಪರಿಸ್ಥಿತಿ ಗಂಭೀರತೆ ಅರಿತು ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದ್ತೋಬಸ್ತ್ ಮಾಡಲಾಗಿತ್ತು. ಸದ್ಯ ಮೂವರು ಅಪ್ರಾಪ್ತರನ್ನ ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.

ಈ ಸಂಬಂಧ ಗಾಯಾಳು ಯುವತಿ ಮನೆಗೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳುತ್ತಾರೆ. ಅದೇ ರೀತಿ ನಿನ್ನೆ ಪೂಜೆ ಮಾಡಿ ಮಾಲಾಧಾರಿಗಳು ದೇವಿಯ ಮೆರವಣಿಗೆ ಮಾಡುವಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಂತಹ ಕೃತ್ಯವೆಸಗುವುದಕ್ಕಾಗಿಯೇ ಆರೋಪಿಗಳಿಗೆ ತರಬೇತಿ ನೀಡುವ ಜಾಲವಿದೆ ಎಂದು ಆರೋಪಿಸಿದರು.

ಯುವತಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು, ಘಟನೆಯಿಂದ ಆತಂಕಗೊಂಡಿದ್ದಾಳೆ. ಯುವತಿಯ ಚಿಕಿತ್ಸೆಗೆ ನಾವು ಹಣಕಾಸಿನ ನೆರವು ನೀಡಲಿದ್ದೇವೆ. ಕಳೆದ ವರ್ಷದ ಚಾಮರಾಜಪೇಟೆಯ ಗಿರಿಪುರದಲ್ಲಿ ಹಸುವಿನ ಕೆಚ್ಚಲು ಕೂಯ್ದಿದ್ದರು. ಇಂತಹ ಘಟನೆಗಳ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದ ಮೇಲೆ ನಮಗೆ ನಂಬಿಕೆಯಿಲ್ಲ. ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆ ಮೇಲೆ ಕಲ್ಲೆಸೆದಿರುವುದನ್ನು ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಮಾಜಿ ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್ ಸೇರಿದಂತೆ ಹಲವರು ಖಂಡಿಸಿದ್ದಾರೆ.

"ಆರೋಪಿಗಳ ಕೃತ್ಯದ ಬಳಿಕ ನಿನ್ನೆ ಹಿಂದೂಗಳು ತಾಳ್ಮೆಯಿಂದ ವರ್ತಿಸಿದ್ದಾರೆ. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿತ್ತು. ರಾತ್ರಿಯೇ ಡಿಸಿಪಿ, ಹಾಗೂ ಇನ್ಸ್‌ಪೆಕ್ಟರ್ ಜತೆ ಮಾತನಾಡಿದ್ದೆ‌. ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಚಾಮರಾಜಪೇಟೆ, ಜೆ.ಜೆ.ನಗರ ಪ್ರದೇಶಗಳು ನಗರದ ಹೃದಯಭಾಗದಲ್ಲಿದ್ದರೂ ಸಹ ಅಭಿವೃದ್ಧಿಯಾಗಿಲ್ಲ. ಮೊದಲನೆಯದಾಗಿ ಈ ಪ್ರದೇಶಗಳನ್ನು ಅಪರಾಧ ಮುಕ್ತವಾಗಿಸಬೇಕು" ಎಂದು ಭಾಸ್ಕರ್​ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಕೀಳು ತುಷ್ಟೀಕರಣ, ಓಟ್ ಬ್ಯಾಂಕ್ ರಾಜಕೀಯಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಅಥವಾ ಇಲ್ಲವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ಮೇಲೆ ನಡೆದ ಕಲ್ಲೆಸೆತ ಪ್ರಕರಣವನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಅಮಾಯಕ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದು, ರಾಜ್ಯದಲ್ಲಿ 'ಗೂಂಡಾ ರಾಜ್ಯ' ತಲೆ ಎತ್ತಿರುವುದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನವಾಗಿದೆ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಎಂದು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಯುವಕರ ಗುಂಪಿನಿಂದ ಕಲ್ಲು ತೂರಾಟ ಆರೋಪ