ETV Bharat / state

ರೈಲ್ವೆ ಚತುಷ್ಪಥ ಯೋಜನೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ.ಪಾಟೀಲ್

ಕೇಂದ್ರ ಸರ್ಕಾರ ನಮ್ಮ ರಸ್ತೆ ಜಾಲಕ್ಕೆ ಪೂರಕವಾಗಿ ರಾಜ್ಯದಲ್ಲಿ ರೈಲು ಮಾರ್ಗಗಳನ್ನು ಅಭಿವೃದ್ಧಿ ಮಾಡದೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.

Injustice to the state in the railway four-lane project: Minister MB Patil
ಸಚಿವ ಎಂ.ಬಿ.ಪಾಟೀಲ್ (ETV Bharat)
author img

By ETV Bharat Karnataka Team

Published : August 28, 2026 at 4:25 PM IST

2 Min Read
Choose ETV Bharat

ಬೆಂಗಳೂರು: ಕೇಂದ್ರ ಸರ್ಕಾರ ದೇಶದಲ್ಲಿ ಸುಗಮ ರೈಲು ಸಂಚಾರ‌ ಮತ್ತು ಸರಕು ಸಾಗಣೆ ಉದ್ದೇಶದಿಂದ ಅತಿಸಾಂದ್ರತೆ (High Density) ಇರುವ ಏಳು ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಕರ್ನಾಟಕದ ಒಂದೇ ಒಂದು ಮಾರ್ಗವನ್ನೂ ಪರಿಗಣಿಸದೆ ಇರುವುದು ಅನ್ಯಾಯದ ಪರಮಾವಧಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮುಖ್ಯಮಂತ್ರಿಯವರಿಂದ ಪತ್ರ ಬರೆಸುವ ಜತೆಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನೂ ಖುದ್ದಾಗಿ ಭೇಟಿ ಮಾಡುವಂತೆ ಕೋರುತ್ತೇನೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಬಗ್ಗೆ ಶುಕ್ರವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಅಶ್ವಿನಿ ವೈಷ್ಣವ್ ಅವರು ದೆಹಲಿ- ಹೌರಾ, ಹೌರಾ-ಚೆನ್ನೈ, ಚೆನ್ನೈ -ಮುಂಬೈ, ಮುಂಬೈ-ದೆಹಲಿ, ದೆಹಲಿ-ಚೆನ್ನೈ, ಮುಂಬೈ-ಹೌರಾ, ದೆಹಲಿ-ಗುವಹಾಟಿ ಒಟ್ಟು 7 ರೈಲ್ವೆ ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿದ್ದರು. ರಾಜ್ಯದಲ್ಲಿ ಬೆಂಗಳೂರು-ಪುಣೆ-ಮುಂಬೈ, ಬೆಂಗಳೂರು- ಮೈಸೂರು, ಬೆಂಗಳೂರು-ಮಂಗಳೂರು, ಬೆಂಗಳೂರು-ಚೆನ್ನೈ, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ವಿಜಯಪುರ, ಬೆಂಗಳೂರು- ಕಲಬುರಗಿ- ಹೀಗೆ ಹತ್ತಾರು ಅತಿದಟ್ಟಣೆಯ ಮಾರ್ಗಗಳಿವೆ. ಇವುಗಳನ್ನು ಕೇಂದ್ರ ಸರ್ಕಾರವು ಸಮಗ್ರವಾಗಿ ಚತುಷ್ಪಥ ಮಾರ್ಗಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಇದು ಅದರ ಕರ್ತವ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ನಮ್ಮ ರಸ್ತೆ ಜಾಲಕ್ಕೆ ಪೂರಕವಾಗಿ ರಾಜ್ಯದಲ್ಲಿ ರೈಲು ಮಾರ್ಗಗಳನ್ನು ಅಭಿವೃದ್ಧಿ ಮಾಡದೆ ಮಲತಾಯಿ ಧೋರಣೆ ತೋರುತ್ತಿದೆ. ಇದರಿಂದಾಗಿ ನಮ್ಮ ಹೆದ್ದಾರಿಗಳ ಮೇಲೆ ವಿಪರೀತ ಒತ್ತಡ ಉಂಟಾಗಿದೆ. ರಾಜ್ಯದಲ್ಲಿ 330 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಕರಾವಳಿಯಲ್ಲಿರುವ ಬಂದರು ಪಟ್ಟಣಗಳಿಗೂ ಒಳನಾಡಿಗೂ ಸಮರ್ಪಕ ರೈಲು ಸಂಪರ್ಕ ಆಗಬೇಕು. ಆದರೆ, ಈ ವಿಚಾರದಲ್ಲಿ ಕೂಡ ನಮಗೆ ಅನ್ಯಾಯವಾಗಿದೆ. ಮಂಗಳೂರು, ಭಟ್ಕಳ, ಹೊನ್ನಾವರ, ಕುಂದಾಪುರ, ಕಾರವಾರ ಇತ್ಯಾದಿಗಳಿಂದ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಪ್ರಮುಖ ಕೇಂದ್ರಗಳಿಗೆ ಸರಿಯಾದ ರೈಲ್ವೇ ಸಂಪರ್ಕವೇ ಇಲ್ಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್​ಗೆ ಹೈಸ್ಪೀಡ್ ರೈಲು ಯೋಜನೆಗಳನ್ನು ಘೋಷಿಸಿದೆ. ಆದರೆ, ಇವುಗಳಿಂದ ತಮಿಳುನಾಡು ಮತ್ತು ಆಂಧ್ರ, ತೆಲಂಗಾಣಗಳಿಗೆ ಪ್ರಯೋಜನವಾಗುತ್ತದೆ. ಏಕೆಂದರೆ ಈ ಎರಡೂ ಮಾರ್ಗಗಳಲ್ಲಿ ರೈಲುಗಳು ನಮ್ಮ ರಾಜ್ಯದೊಳಗೆ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ. ಇದರ ಬಗ್ಗೆ ನಾನು ತಕ್ಷಣವೇ ಧ್ವನಿ ಎತ್ತಿ, ಬೆಂಗಳೂರು-ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ಹೈಸ್ಪೀಡ್ ರೈಲು ಮಾರ್ಗ ಬರಬೇಕು ಎಂದು ಗಮನ ಸೆಳೆದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.

ಕೇಂದ್ರದ ಈ ತಾರತಮ್ಯದ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತಬೇಕು. ಅದರಲ್ಲೂ ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿ ಸಂಸದರು ಮೌನವಾಗಿರುವುದು ಸರಿಯಲ್ಲ. ಹಲವರು ಮಾಜಿ ಮುಖ್ಯಮಂತ್ರಿಗಳು ಕೂಡ ಇದ್ದಾರೆ. ಹಾಗೆಯೇ ನಮ್ಮ ಪಕ್ಷದ ಸಂಸದರೂ ಆಗ್ರಹ ಮಾಡಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರೈಲ್ವೆ ಯೋಜನೆಗಳು ತ್ವರಿತವಾಗಿ ಆಗಬೇಕೆಂದು ನಾವು 50:50 ವೆಚ್ಚ ಹಂಚಿಕೆ ಆಧಾರದಲ್ಲಿ ಸಹಕರಿಸುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಹೀಗಿಲ್ಲ. ಆದರೂ ಕೇಂದ್ರ ಸರ್ಕಾರವು ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಕೊಡುವಷ್ಟು ಆದ್ಯತೆಯನ್ನು ಕರ್ನಾಟಕಕ್ಕೆ ಕೊಡುತ್ತಿಲ್ಲ ಎಂದು ದೂರಿದ್ದಾರೆ.

ಬೆಂಗಳೂರು ದೇಶದ ಐಟಿ ಸೇವೆ, ನವೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಆರ್&ಡಿ, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್, ಎಫ್.ಡಿ.ಐಗಳ ತೊಟ್ಟಿಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ನಮಗೆ ತಾನಾಗಿಯೇ ಚತುಷ್ಪಥ ರೈಲ್ವೆ ಮಾರ್ಗದಂತಹ ಯೋಜನೆಗಳನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ರೈಲ್ವೆ ಜಾಲ ನೈರುತ್ಯ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆ: ಬಹುದಿನಗಳ ಬೇಡಿಕೆಗೆ ಕೇಂದ್ರದ ಅಸ್ತು