ಮರ್ಯಾದಾ ಹತ್ಯೆ: ಇನಾಂ ವೀರಾಪುರ ಗ್ರಾಮಕ್ಕೆ ಮಾನವ ಹಕ್ಕುಗಳ ಆಯೋಗ ಭೇಟಿ
ಮರ್ಯಾದಾ ಹತ್ಯೆ ನಡೆದ ಇನಾಂ ವೀರಾಪುರ ಗ್ರಾಮಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಭೇಟಿ ನೀಡಿ, ದೌರ್ಜನ್ಯಕ್ಕೊಳಗಾದ ಕುಟುಂಬದವರಿಂದ ಮಾಹಿತಿ ಪಡೆದರು.

Published : January 7, 2026 at 2:24 PM IST
ಹುಬ್ಬಳ್ಳಿ: ಮರ್ಯಾದಾ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್, ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡರು.
ದೌರ್ಜನ್ಯಕ್ಕೊಳಗಾದ ವಿವೇಕಾನಂದ ಅವರ ಮನೆ ಹಾಗೂ ಘಟನಾ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ಸಮಜ ಕಲ್ಯಾಣ ಇಲಾಖೆಯಿಂದ ಸಂಯುಕ್ತವಾಗಿ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶವಿಲ್ಲ ಎಂಬುದನ್ನು ಎಲ್ಲರೂ ಮನಗಂಡು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯೋಗದ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ದಲಿತ ಕುಟುಂಬಗಳಿಗೆ ಅಗತ್ಯ ಭದ್ರತೆ ಒದಗಿಸುವುದು. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಸಿಗುವಂತೆ ನೋಡಿಕೊಳ್ಳುವುದು ಹಾಗೂ ಘಟನೆಗೆ ಸಂಬಂಧಿಸಿದಂತೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದ ಅವರು, ಮುಂಬರುವ ದಿನಗಳಲ್ಲಿಯೂ ಸಹ ಗ್ರಾಮಗಳಲ್ಲಿ ಶಾಂತಿ ಸಭೆಗಳನ್ನು ಜರುಗಿಸಿ, ಜನರಲ್ಲಿನ ಭಯವನ್ನು ದೂರ ಮಾಡಿ, ವಿಶ್ವಾಸ ವಾತಾವರಣ ನಿರ್ಮಿಸಬೇಕು. ಜೊತೆಗೆ ಮಾನಸಿಕ ಧೈರ್ಯ, ಕಾನೂನು ಸಹಾಯ ಹಾಗೂ ಅಗತ್ಯ ಪರಿಹಾರ ಕಲ್ಪಿಸುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಇನಾಂ ವೀರಾಪುರ ಗ್ರಾಮದ ಪ್ರಕರಣದ ಕುರಿತು ತನಿಖೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು, ದೌರ್ಜನ್ಯಕ್ಕೊಳಗಾದ ಕುಟುಂಬದ ಪರವಾಗಿ ವಿಶೇಷ ಅಭಿಯೋಜಕರನ್ನು ನೇಮಿಸಲು ಮತ್ತು ಸದರಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪ್ರಸ್ತಾವನೆ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ ಜಿಲ್ಲಾಡಳಿತದಿಂದ ಗ್ರಾಮದಲ್ಲಿ ಶಾಂತಿ ಸಭೆ ಜರುಗಿಸಲಾಗಿದೆ. ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿ ಪರಸ್ಪರ ಸಹೋದರತ್ವ ಮತ್ತು ವಿಶ್ವಾಸದಿಂದ ಬದುಕುವುದಾಗಿ ಗ್ರಾಮಸ್ಥರು ಭರವಸೆ ನೀಡಿದ್ದಾರೆ. ಸ್ಥಳೀಯ ನಿವಾಸಿಗಳ ಸಲಹೆಗಳನ್ನು ಆಲಿಸಲಾಗಿದೆ. ಗ್ರಾಮ ಸಭೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ತಪ್ಪು ಮಾಹಿತಿ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಶಾಂತಿ ಸಭೆ ಮೂಲಕ ಗ್ರಾಮದ ಸಾರ್ವಜನಿಕರ ಭಯ ಮತ್ತು ಆತಂಕವನ್ನು ದೂರ ಮಾಡಿ, ಕಾನೂನು ಮತ್ತು ಆಡಳಿತದ ಮೇಲೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಹ ಅಗತ್ಯವಿದ್ದರೆ ಮತ್ತಷ್ಟು ಶಾಂತಿ, ಸೌಹಾರ್ದತೆಯ ಸಭೆಗಳನ್ನು ಆಯೋಜಿಸಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಅವರು ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದ ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬವನ್ನು ಭೇಟಿ ಮಾಡಿದರು ಮತ್ತು ಪರಿಶೀಲನೆಯ ನಂತರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದರು.
ಸಭೆಯಲ್ಲಿ ಮಾತನಾಡಿ, ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಭದ್ರತೆ ಕುರಿತು ಸಂಪೂರ್ಣ ಭರವಸೆ ಮೂಡಿಸಬೇಕು. ಗ್ರಾಮದಲ್ಲಿ ಎಲ್ಲಾ ಕುಟುಂಬಗಳು ಪ್ರಕರಣದ ಪೂರ್ವದಲ್ಲಿದ್ದಂತೆ ಅನ್ಯೋನ್ಯವಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ವಾಸಿಸುವಂತಹ ವಾತಾವರಣ ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿದ್ದರೆ, ಗ್ರಾಮದಲ್ಲಿ ಮತ್ತಷ್ಟು ಸಭೆಗಳನ್ನು ಆಯೋಜಿಸಬೇಕು. ಗ್ರಾಮಸ್ಥರಲ್ಲಾಗಲಿ ಅಥವಾ ದೊಡ್ಡಮನಿ ಕುಟುಂಬದಲ್ಲಿ ಯಾವುದೇ ಭಯದ ವಾತಾವರಣ ಇರದಂತೆ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಕುಟುಂಬ ಸದಸ್ಯರ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಕರಣದ ತನಿಖೆಯನ್ನು ಈಗಾಗಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. ಪೊಲೀಸ್ ಇಲಾಖೆ ತನಿಖೆಗೆ ಸಹಕಾರ ನೀಡಿ, ಗ್ರಾಮದಲ್ಲಿ ಅಗತ್ಯವಿದ್ದರೆ ಇನ್ನಷ್ಟು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಡಿಸಿಆರ್ಇ ಪಾರದರ್ಶಕ ತನಿಖೆ ಮಾಡಿ ಆದಷ್ಟು ಬೇಗನೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು. ಜಿಲ್ಲಾಡಳಿತ ಪ್ರಕರಣದ ಕುರಿತು ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ ಕೈಗೊಂಡ ಕ್ರಮಗಳ ಬಗ್ಗೆ ವರದಿ ಪಡೆದು ಆಯೋಗಕ್ಕೆ ಸಲ್ಲಿಸಬೇಕು ಮತ್ತು ಗ್ರಾಮದ ಶಾಂತಿ, ಸುವ್ಯವಸ್ಥೆ ಕಾಪಡಲು ಜಿಲ್ಲಾಡಳಿತ ನಿಗಾ ವಹಿಸಬೇಕೆಂದು ಹೇಳಿದರು.
ಇವುಗಳನ್ನೂ ಓದಿ:

