ETV Bharat / state

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಸಿಸಿಎಸ್ಆರ್ ನೀತಿ ರೂಪಿಸಿಕೊಂಡ ಸರ್ಕಾರ: ಪ್ರಸ್ತಾಪಿತ ನೀತಿ ಹೀಗಿದೆ

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಸಿಸಿಎಸ್ಆರ್ ನೀತಿ ರೂಪಿಸಿಕೊಂಡಿದೆ. ರಾಜ್ಯದಲ್ಲಿನ ವಿವಿಧ ಕಾರ್ಪೋರೇಟ್‌ ಕಂಪನಿಗಳಿಂದ ವಾರ್ಷಿಕವಾಗಿ 8,500 ಕೋಟಿ ಸಿಎಸ್‌ಆರ್‌ ನಿಧಿಯಡಿ ಲಭ್ಯವಿದ್ದು, ಈ ನಿಧಿಯನ್ನು ಬಳಸಲು ಸರ್ಕಾರ ತೀರ್ಮಾನಿಸಿದೆ.

GOVERNMENT SCHOOLS
ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ ಕ್ಷಣ (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : January 6, 2026 at 2:44 PM IST

5 Min Read
Choose ETV Bharat

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವಕ್ಕೆ ಹೆಚ್ಚಿನ‌ ಒತ್ತು ನೀಡುತ್ತಿದೆ.‌ ಈ ಸಂಬಂಧ ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಸಿಎಸ್ಆರ್ ಹೂಡಿಕೆ ಉತ್ತೇಜಿಸಲು ಸಿಸಿಎಸ್ಆರ್ ನೀತಿ ರೂಪಿಸಿದೆ.‌

ಕರ್ನಾಟಕದಲಿನ ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೊರೆ ಹೋಗಿದೆ. ಕಾರ್ಪೊರೇಟ್ ಸಂಸ್ಥೆಗಳ ಸಿಎಸ್ಆರ್ ನಿಧಿಯನ್ನು ಬಹುವಾಗಿ ಸರ್ಕಾರಿ ಶಾಲೆಗಳ ಮೇಲೆ ಹೂಡಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.‌ ರಾಜ್ಯದಲ್ಲಿನ ವಿವಿಧ ಕಾರ್ಪೋರೇಟ್‌ ಕಂಪನಿಗಳಿಂದ ವಾರ್ಷಿಕವಾಗಿ 8,500 ಕೋಟಿ ಸಿಎಸ್‌ಆರ್‌ ನಿಧಿಯಡಿ ಲಭ್ಯವಿದೆ. ಈ ನಿಧಿಯನ್ನು ಹೆಚ್ಚಾಗಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಪ್ರಸ್ತುತ ರಾಜ್ಯದ ಶಿಕ್ಷಣ ವಲಯದಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಸಿಎಸ್ಆ‌ರ್) ಕೊಡುಗೆಗಳು ನೇರವಾಗಿ ಆಯಾ ಶಾಲೆ ಮತ್ತು ಕಾಲೇಜುಗಳಿಗೆ ದೇಣಿಗೆ ನೀಡುತ್ತಿದ್ದು, ಇದು ಸಾಮಾನ್ಯವಾಗಿ ಸ್ಥಳ, ಅನುಕೂಲ ಅಥವಾ ವ್ಯಕ್ತಿನಿಷ್ಠಗಳನ್ನು ಆಧರಿಸಿರುತ್ತದೆ. ಪ್ರಸ್ತುತ ಕೈಗಾರಿಕಾ ಘಟಕಗಳು ಅಥವಾ ಖಾಸಗಿ ಸಂಸ್ಥೆಗಳು ತಮ್ಮ ಪ್ರಧಾನ ಕಚೇರಿಗಳ ಸಮೀಪದ ಸ್ಥಳೀಯತೆ ಆಧರಿಸಿ ಸಿ.ಸಿ.ಎಸ್.ಆರ್. ನಿಧಿಯನ್ನು ಸ್ವತಂತ್ರ ತರಗತಿ ಕೊಠಡಿಗಳು, ಶೌಚಾಲಯಗಳು, ಪೀಠೋಪಕರಣಗಳು, ಪ್ರಯೋಗಾಲಯ ಉಪಕರಣಗಳು, ಕಂಪ್ಯೂಟರ್‌ಗಳು, ಸ್ಮಾರ್ಟ್ ಬೋರ್ಡ್‌ಗಳು ಮತ್ತು ಅಂತರ್ಜಾಲ ಸಂಪರ್ಕ ವೃದ್ಧಿ ಮುಂತಾದುವುಗಳ ಮೂಲಸೌಕರ್ಯಕ್ಕಾಗಿ ಒಂದು ಬಾರಿಗೆ ದೇಣಿಗೆಗಳ ರೂಪದಲ್ಲಿ ನೀಡುತ್ತಿವೆ. ಸಿಎಸ್ಆರ್ ನಿಧಿಯನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಇದೀಗ ಹೊಸ ಸಿಎಸ್ಆರ್ ನೀತಿ ರೂಪಿಸಲು ಮುಂದಾಗಿದೆ.

ರಾಜ್ಯದಲ್ಲಿನ ಸರ್ಕಾರಿ ಶಾಲೆಗಳೆಷ್ಟು?: ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ, ಅನೇಕ ಕಂಪನಿಗಳು, ಟ್ರಸ್ಟ್‌ಗಳು, ದಾನಿಗಳು, ಪ್ರತಿಷ್ಠಾನಗಳು, ಎನ್​ಜಿಒಗಳು ಸಿಸಿಎಸ್‌ಆರ್ ಅನುದಾನಗಳನ್ನು ವಿನಿಯೋಗ ಮಾಡುತ್ತಿವೆ. ಕರ್ನಾಟಕ ಸುಮಾರು 47,193 ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಹೊಂದಿದ್ದು, ಅವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿ ಪೂರ್ವ ಕಾಲೇಜುಗಳಾಗಿವೆ. ಪ್ರಸ್ತುತ 309 ಸರ್ಕಾರಿ ಶಾಲೆಗಳು ಮಾತ್ರ LKG ಯಿಂದ 12ನೇ ತರಗತಿಯವರೆಗೆ ಸಂಯೋಜಿತ ಶಿಕ್ಷಣವನ್ನು ಹೊಂದಿರುತ್ತವೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸರ್ಕಾರಿ ಶಾಲೆಗಳಲ್ಲಿ 2015-16 ರಲ್ಲಿ 47.1 ಲಕ್ಷ ವಿದ್ಯಾರ್ಥಿಗಳ ದಾಖಲಾತಿಯಿಂದ 2025 - 26ರಲ್ಲಿ 38.2 ಲಕ್ಷಕ್ಕೆ ಗಣನೀಯವಾಗಿ ಕುಸಿದಿದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು ಶೇ 46 ರಿಂದ ಶೇ.38 ಕ್ಕೆ ಇಳಿದಿದೆ (19% ಕುಸಿತ).

ಆದರೆ, ಅನುದಾನರಹಿತ ಖಾಸಗಿ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26ರಲ್ಲಿ 47.0 ಲಕ್ಷಕ್ಕೆ ಹೆಚ್ಚಾಗಿರುತ್ತದೆ (29% ಏರಿಕೆ). 2014-15 ರಲ್ಲಿ, 50ಕ್ಕಿಂತ ಕಡಿಮೆ ಅಥವಾ ಸಮಾನ ವಿದ್ಯಾರ್ಥಿಗಳನ್ನು ಹೊಂದಿರುವ 21,973 ಸರ್ಕಾರಿ ಶಾಲೆಗಳು ಇದ್ದವು. ಅದು ಈಗ 2025-26ರಲ್ಲಿ 25,683ಕ್ಕೆ ಏರಿದೆ. 2025-26ರಲ್ಲಿ ಸರ್ಕಾರಿ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 46,137 ಮತ್ತು 38.20 ಲಕ್ಷ ಮತ್ತು ಸರ್ಕಾರಿ ಪಿಯು ಕಾಲೇಜುಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 1.319 ಲಕ್ಷ ಮತ್ತು 2.77 ಲಕ್ಷ. 2025-26 ರಲ್ಲಿ ಖಾಸಗಿ ಅನುದಾನಿತ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 6.13 ಲಕ್ಷ ಮತ್ತು 11.16 ಲಕ್ಷ ಮತ್ತು 2025-26ರಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 16.52 ಲಕ್ಷ ಮತ್ತು 48.02 ಲಕ್ಷಗಳಾಗಿರುತ್ತದೆ.

ಸಿಸಿಎಸ್ಆರ್ ನೀತಿಯ ಉದ್ದೇಶ ಏನು?: ಈ ನೀತಿ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಡಿ ಪ್ರಭಾವ ಬೀರುವ ಉಪಕ್ರಮಗಳ ಕಡೆಗೆ CCSR ಹೂಡಿಕೆಗಳನ್ನು ಪ್ರೋತ್ಸಾಹಿಸಲು ಒಂದು ರಚನಾತ್ಮಕ ಮತ್ತು ಪಾರದರ್ಶಕ ಚೌಕಟ್ಟನ್ನು ರಚಿಸುವ ಗುರಿಯನ್ನು ಹೊಂದಿದೆ. ಇದು ಕರ್ನಾಟಕದಲ್ಲಿ ಶಿಕ್ಷಣ ಮೂಲಸೌಕರ್ಯಗಳ ಅಭಿವೃದ್ಧಿ, ಶೈಕ್ಷಣಿಕ ವರ್ಧನೆ ಮತ್ತು ಉಚಿತ ಸಾರಿಗೆ ವ್ಯವಸ್ಥೆಗಳನ್ನು ಕಲ್ಪಿಸಲು ಅನುವು ಮಾಡಿಕೊಡಲಿದೆ. ಪ್ರಸ್ತುತ ರಾಜ್ಯದಲ್ಲಿ ಹಲವಾರು ಖಾಸಗಿ ವಲಯದ ಸಂಸ್ಥೆಗಳು, ಟ್ರಸ್ಟ್​ಗಳು, ದಾನಿಗಳು, ಪ್ರತಿಷ್ಠಾನಗಳು, ಸರ್ಕಾರೇತರ ಸಂಸ್ಥೆಗಳು (NGOs) ಮುಂತಾದ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಕೊಡುಗೆ ನೀಡುತ್ತಿವೆ. 2023-24ನೇ ಆರ್ಥಿಕ ವರ್ಷದಲ್ಲಿ ಅಂದಾಜು ರೂ.81 ಕೋಟಿಗಳು ಮತ್ತು 2024-25ನೇ ಆರ್ಥಿಕ ವರ್ಷದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಕರಿಗೆ ತರಬೇತಿ ಮತ್ತು ಡಿಜಿಟಲ್ ಶಿಕ್ಷಣ ಬೆಂಬಲವನ್ನು ಒದಗಿಸುವುದು ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ರಾಜ್ಯಾದ್ಯಂತ ಅಂದಾಜು ರೂ.352 ಕೋಟಿಗಿಂತಲೂ ಹೆಚ್ಚು ಸಿ.ಸಿ.ಎಸ್.ಆರ್. ಕೊಡುಗೆಗಳನ್ನು ನೀಡಲಾಗಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಪ್ರಸ್ತಾವಿತ CCSR ನೀತಿಯನ್ನು 27.11.2025 ರಂದು ಸಚಿವ ಸಂಪುಟದ ಮುಂದೆ ಮಂಡಿಸಿ ಚರ್ಚಿಸಲಾಯಿತು. ಆದರೆ, ಪ್ರಸ್ತುತ ನೀತಿಯು ಕಂಪನಿಗಳನ್ನು ಮಾತ್ರ ಒಳಗೊಂಡಿದೆ. ಕರ್ನಾಟಕದಲ್ಲಿ ಫೌಂಡೇಶನ್‌ಗಳು, ಟ್ರಸ್ಟ್​ಗಳು, ದತ್ತಿ ಸಂಸ್ಥೆಗಳು, ದಾನಿಗಳು, NGOಗಳು, ಸಮುದಾಯ ಆಧಾರಿತ ಸಂಸ್ಥೆಗಳಿಂದ ಗಣನೀಯ ಪ್ರಮಾಣದ ಹಣವನ್ನು ಪಡೆಯುವ ಸಾಧ್ಯತೆ ಇರುವುದರಿಂದ ಅವುಗಳನ್ನು ಸಹ ಈ ನೀತಿಯ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಹೊಸ ನೀತಿ ರೂಪಿಸಲಾದೆ.

ಪ್ರಸ್ತಾಪಿತ ಸಿಸಿಎಸ್ಆರ್ ನೀತಿಯಲ್ಲೇನಿರಲಿದೆ?: ಸಿಸಿಎಸ್ಆರ್ ನಿಧಿಯಡಿ ಗ್ರಾಮೀಣ ಮತ್ತು ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕರ್ನಾಟಕ ಸಾರ್ವಜನಿಕ ಶಾಲೆಗಳನ್ನು ನಿರ್ಮಿಸಬೇಕು. ಆ ಮೂಲಕ ಶಿಕ್ಷಣ ಉದ್ದೇಶಗಳಿಗಾಗಿ ಪಟ್ಡಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ.

ಸಿಸಿಎಸ್ಆರ್ ನಿಧಿ ಬಳಸುವ ಇಂಥ ಶಾಲೆಗಳಿಗೆ ಜಿಲ್ಲಾಧಿಕಾರಿಗಳೇ ಎಲ್ಲ ಸ್ಥಳೀಯ ಮಟ್ಟದ ಮಂಜೂರಾತಿಗಳನ್ನು ನೀಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಂಜೂರಾತಿಯ ಅಗತ್ಯ ಇರುವುದಿಲ್ಲ.‌ ಸಿಸಿಎಸ್ಆರ್ ಪ್ರಸ್ತಾವನೆಯೊಂದಿಗೆ ಮುಂದೆ ಬರುವ ಸಂಸ್ಥೆಗಳು ಮತ್ತು ಶಿಕ್ಷಣ ಇಲಾಖೆ ಆಯುಕ್ತರ ಮಧ್ಯೆ ತಿಳಿವಳಿಕಾ ಪತ್ರ ಸಹಿ ಹಾಕಿಸುವ ಸಂಬಂಧ ಜಿಲ್ಲಾಧಿಕಾರಿಗಳು ಸಮನ್ವಯತೆ ಸಾಧಿಸಬೇಕು.

ಪ್ರಸ್ತಾಪಿತ ನೀತಿಯಲ್ಲಿ ದಾನಿಗಳು ಸರ್ಕಾರಕ್ಕೆ ಹಣ ಪಾವತಿ ಮಾಡುವ ಹಾಗಿಲ್ಲ. ಬದಲಾಗಿ ಕಂಪನಿಗಳು ತಮ್ಮದೇ ಏಜೆನ್ಸಿ ಮೂಲಕ ಶಾಲೆಗಳನ್ನು ನಿರ್ಮಿಸಬೇಕು. ಶಾಲೆಗಳ ನಾಮಕರಣವನ್ನು ಜಿಲ್ಲಾಧಿಕಾರಿಗಳೇ ಮಾಡಬೇಕು. ನಾಮಕರಣ ಮಾಡುವಾಗ ಕಂಪನಿಯ ಹೆಸರು ಹಾಗೂ ಸರ್ಕಾರದ ಶಾಲೆಯ ಹೆಸರು ಉಲ್ಲೇಖಿಸಬೇಕು.‌ ಶಾಲೆ ನಿರ್ಮಾಣಕ್ಕೆ ಬೇಕಾಗುವ ಯಾವುದೇ ಹೆಚ್ಚುವರಿ ಭೂಮಿಯನ್ನು ಸ್ಥಳೀಯ ಅಥವಾ ಜಿಲ್ಲಾ ಸಮುದಾಯಗಳ ಬೆಂಬಲ ಅಥವಾ ದಾನದ ಮೂಲಕ ಖರೀದಿಸಬೇಕು.

ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯಲ್ಲಿ ಪ್ರಸಕ್ತ ಇರುವ ಶಾಲೆಗಳ ಉನ್ನತೀಕರಣಕ್ಕೆ ಮಾತ್ರ ಸೀಮಿತವಾಗಿರಲಿದೆ.‌ ಜ್ಞಾನ ಪಾಲಿದಾರ ಒಂದು ಶಾಲೆಯನ್ನು ದತ್ತು ಪಡೆಯಬೇಕು. ಜ್ಞಾನ ಪಾಲುದಾರರು ಪ್ರಸಕ್ತ ಇರುವ ಶಾಲೆಗಳ ಉಪನ್ಯಾಸಕರುಗಳಿಗೆ ಕೌಶಲ್ಯ ಹೆಚ್ಚಿಸುವ ತರಬೇತಿ ನೀಡಬೇಕು. ಒಂದು ವೇಳೆ ಉಪನ್ಯಾಸಕರ ಹುದ್ದೆ ಖಾಲಿ ಇದ್ದರೆ ಜ್ಞಾನ ಪಾಲುದಾರರು ತಮ್ಮ ಶಾಲೆಗಳಿಂದ ಉಪನ್ಯಾಸಕರನ್ನು ನಿಯೋಜಿಸಬೇಕು. ಆಂಥ ಉಪನ್ಯಾಸಕರ ವೇತನವನ್ನು ಜ್ಞಾನ ಪಾಲುದಾರರೇ ಭರಿಸಬೇಕು.‌ ಇದರಿಂದ ಉಪನ್ಯಾಸಕರ ಕೊರತೆ ನೀಗಲಿದೆ.

ಹೊಸ ಸಿಸಿಎಸ್ಆರ್ ನೀತಿಯ ಅನುಕೂಲಗಳೇನು?: ಸಿ.ಸಿ.ಎಸ್.ಆ‌ರ್ ನೀತಿ ಸರ್ಕಾರಿ ಶಾಲೆಗಳನ್ನು LKG ಯಿಂದ 12ನೇ ತರಗತಿಯವರೆಗೂ ಸೌಲಭ್ಯಗಳನ್ನು ಹೊಂದಿರುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ, ಉತ್ತಮ ಸಂಪನ್ಮೂಲ ಬಳಕೆ ಮತ್ತು ಆಡಳಿತಕ್ಕಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಸಣ್ಣ ಶಾಲೆಗಳ ಒಗ್ಗೂಡುವಿಕೆಯ ಮೂಲಕ ಶಾಲಾ ಬಲವರ್ಧನೆ ಹಾಗೂ ಶಾಲಾ ಸಂಕೀರ್ಣಗಳ ಸ್ಥಾಪನೆಯ ಮೂಲಕ ಶಾಲಾ ಕ್ರೋಢೀಕರಣಕ್ಕೆ ಒತ್ತು ನೀಡಲಿದೆ.

ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ನವೀಕರಿಸುವುದರ ಮೇಲೆ ಈ ನೀತಿ ಕೇಂದ್ರೀಕೃತವಾಗಿರಲಿದೆ. ಈ ಶಾಲೆಗಳಲ್ಲಿನ ಮೂಲಭೂತ ಸೌಕರ್ಯ, ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಶೈಕ್ಷಣಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೆ ನವೀಕರಣದ ಮೂಲಕ ಕಲಿಕೆಯ ವಾತಾವರಣವನ್ನು ಉತ್ತಮಪಡಿಸಲಿದೆ.

ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ವಿಶ್ವಾದ್ಯಂತ ಕೊಡುಗೆದಾರರಿಗೆ ಪ್ರವೇಶವನ್ನು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣದ ಸುಧಾರಣೆಗಾಗಿ ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಬದ್ಧ ಪಾಲುದಾರರ ಗುಂಪನ್ನು ರಚಿಸಲು ಸಹ ಸಾಧ್ಯವಿದೆ. ಇದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಬಲೀಕರಣ ಮತ್ತು ಸಾಮರ್ಥ್ಯ ಅಭಿವೃದ್ಧಿ ಕ್ರಮಗಳ ಮೂಲಕ ಸಮಾಜದ ಸಮಗ್ರ ಬೆಳವಣಿಗೆ ಮತ್ತು ಸಮಾನ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶವಿರಲಿದೆ.

ಇದನ್ನೂ ಓದಿ: