ಸಕ್ಕರೆಗೆ ಎಂಎಸ್‌ಪಿ 60 ರೂ.ಗೆ ಹೆಚ್ಚಿಸದಿದ್ದರೆ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್: ಚೂನಪ್ಪ ಪೂಜಾರಿ ಎಚ್ಚರಿಕೆ
ಇಂದು ದೆಹಲಿಯಲ್ಲಿ ನಡೆಯಲಿರುವ ಕಬ್ಬು ಬೆಳೆಗಾರರ ಸಭೆಯಲ್ಲಿ ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗದಿದ್ದರೆ ನಾಳೆ ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.

Published : October 12, 2026 at 10:32 AM IST
ಬೆಳಗಾವಿ: ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗದಿದ್ದರೆ, ಅಕ್ಟೋಬರ್ 13 ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವುದು ನಿಶ್ಚಿತ. ಇದಕ್ಕಾಗಿ ಲಕ್ಷಾಂತರ ರೈತರು, ಯುವಕರು, ಮಾಜಿ ಸೈನಿಕರು, ವಕೀಲರು ಮತ್ತು ಕನ್ನಡಪರ ಸಂಘಟನೆಗಳು ಸನ್ನದ್ಧರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರು ಬೆಳಗಾವಿ ನಗರದ ಸಾಮ್ರಾ ವಿಮಾನ ನಿಲ್ದಾಣದಲ್ಲಿ, ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆಗೆ ರೈತರನ್ನು ಕಳುಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿ, "ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ದೆಹಲಿಯ ಕೃಷಿ ಭವನದಲ್ಲಿ ಇಂದು (ಮಧ್ಯಾಹ್ನ 3 ಗಂಟೆಗೆ) ಕಬ್ಬು ಬೆಳೆಗಾರರ ಸಭೆ ನಿಗದಿಯಾಗಿದೆ. ಮುಂದಿನ ಹೋರಾಟದ ಸಿದ್ಧತೆಗಳಿಗಾಗಿ ತಾವು ದೆಹಲಿಗೆ ತೆರಳದೆ ರಾಜ್ಯದಲ್ಲೇ ಉಳಿದಿರುವುದಾಗಿ" ಸ್ಪಷ್ಟಪಡಿಸಿದ್ದಾರೆ.
"ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದೆಹಲಿಯಲ್ಲಿ ಕರೆದಿರುವ ಸಭೆಗೆ ರಾಜ್ಯದ ವಿವಿಧ ಭಾಗಗಳಿಂದ 30-40 ರೈತ ಮುಖಂಡರು ತೆರಳುತ್ತಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸೇರಿದ 5 ಲಕ್ಷ ರೈತರು ಆಗ್ರಹಿಸಿದಂತೆ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕಡ್ಡಾಯವಾಗಿ 60 ರೂಪಾಯಿ ಹೆಚ್ಚಿಸಲೇಬೇಕು. ಜೊತೆಗೆ ಇಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಬೇಕು, ವಾಣಿಜ್ಯ ಬಳಕೆಯ ಸಕ್ಕರೆಗೆ 100 ರೂ. ನಿಗದಿಪಡಿಸಬೇಕು ಮತ್ತು ಸ್ವಾಮಿನಾಥನ್ ವರದಿ ಜಾರಿಯ ಕುರಿತು ಚರ್ಚೆಯಾಗಬೇಕು" ಎಂದು ಆಗ್ರಹಿಸಿದ್ದಾರೆ.
"ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಹಿಂದೇಟು ಹಾಕಿದರೆ, ನಾಳೆಯೇ (ಅ.13) ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಕೋಟ್ಯಂತರ ರೈತರು, ಯುವಕರು, ಮಾಜಿ ಸೈನಿಕರು, ವಕೀಲರು ಹಾಗೂ ಕನ್ನಡಪರ ಸಂಘಟನೆಗಳು ಪಕ್ಷಾತೀತವಾಗಿ ಸಿದ್ಧವಾಗಿವೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಎಂಎಸ್‌ಪಿ ಹೆಚ್ಚಿಸದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಪೆಟ್ರೋಲ್, ಡೀಸೆಲ್ ಮತ್ತು ರಸಗೊಬ್ಬರಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ, ಆದರೆ ಕಬ್ಬಿಗೆ ಮಾತ್ರ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರು ಯುದ್ಧಕ್ಕೆ ಸಿದ್ಧರಾಗಿದ್ದಾರೆ" ಎಂದು ಗುಡುಗಿದ್ದಾರೆ.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕಿಶನ್ ನಂದಿ ಅವರು ದೆಹಲಿಗೆ ತೆರಳುವ ಮುನ್ನ ಮಾತನಾಡಿ, "ಸಕ್ಕರೆ ಎಂಎಸ್‌ಪಿ 60 ರೂ. ಆದರೆ ಮಾತ್ರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 5,500 ರೂ. ಬೆಲೆ ಸಿಗಲು ಸಾಧ್ಯ. ಉತ್ತರ ಪ್ರದೇಶ ಮತ್ತು ಗುಜರಾತ್ ಮಾದರಿಯಲ್ಲಿ ನಮ್ಮ ರಾಜ್ಯಕ್ಕೂ ಇಥೆನಾಲ್ ಖರೀದಿಗೆ ಶೇ. 100ರಷ್ಟು ಅವಕಾಶ ನೀಡಬೇಕು. ಬರ ಮತ್ತು ಪ್ರವಾಹದಿಂದ ರೈತರು ಕಂಗೆಟ್ಟಿದ್ದು, ಸಾಲಬಾಧೆಯಿಂದಾಗಿ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಕೇಂದ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
"ದೇಶದ 145 ಕೋಟಿ ಜನರಿಗೆ ಸಿಹಿ ಉಣಿಸುವ ಕಬ್ಬು ಬೆಳೆಗಾರರು ಉಳಿಯಬೇಕಾದರೆ ರಾಷ್ಟ್ರೀಯ ಸಕ್ಕರೆ ನೀತಿ (National Sugar Policy) ಜಾರಿಗೆ ಬರಬೇಕು. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆ ಎಂದು ಸಕ್ಕರೆಯನ್ನು ವಿಂಗಡಿಸಬೇಕು. ಇಂದಿನ ಸಭೆಯಲ್ಲಿ ರೈತಪರ ನಿರ್ಧಾರ ಬರುವ ವಿಶ್ವಾಸವಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕೇರಳ ಗಡಿಗಳಿಗೆ ಸಂಪರ್ಕಿಸುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ನಾವು ಪ್ರಾಣ ಕೊಡಲೂ ಸಿದ್ಧರಿದ್ದೇವೆ, ಆದರೆ ಬೆಲೆ ನಿಗದಿಯಾಗುವವರೆಗೂ ಹೆದ್ದಾರಿಯಿಂದ ಕದಲುವುದಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಕಬ್ಬು ಹೋರಾಟಗಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಕುಂದಗೋಳ ಶಾಸಕ: ಸ್ವಂತ ಖರ್ಚಿನಲ್ಲೇ 34 ರೈತರಿಗೆ ವಿಮಾನ ಟಿಕೆಟ್ ಬುಕ್

