ಮಾ.6 ರಂದು ರಾಜ್ಯ ಬಜೆಟ್ ಮಂಡನೆ: ಸಿಎಂ ತವರು ಜಿಲ್ಲೆಯ ನಿರೀಕ್ಷೆಗಳು ಹೀಗಿವೆ
ಈ ಬಾರಿಯ ಬಜೆಟ್‌ನಲ್ಲಿ ನಿಮ್ಮ ನಿರೀಕ್ಷೆಗಳೇನು? ಹೀಗೊಂದು ಪ್ರಶ್ನೆಯನ್ನು ಮೈಸೂರು ಜಿಲ್ಲೆಯ ನಾಗರಿಕರ ಮುಂದಿಟ್ಟರೆ ಬಹುತೇಕರ ಉತ್ತರ ಹೀಗಿದೆ.

Published : March 3, 2026 at 3:21 PM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.6ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸಹಜವಾಗಿಯೇ ತವರು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು, ಈ ಸಾಲಿನ ಬಜೆಟ್‌ನಲ್ಲಿ ವಿವಿಧ ಯೋಜನೆಗಳು ಘೋಷಣೆಯಾಗುವುದನ್ನು ಜನರು ಎದುರು ನೋಡುತ್ತಿದ್ದಾರೆ.
ಕಳೆದ ಬಾರಿಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ನೀಡಿರುವ ಸಿಎಂ, ಈ ಬಾರಿ ಮೈಸೂರು ನಗರಕ್ಕೆ ಶಾಶ್ವತ ಹಾಗೂ ಗ್ರಾಮಾಂತರ ಪ್ರದೇಶಗಳ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕುಡಿಯುವ ನೀರು, ಆಸ್ಪತ್ರೆಗಳ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಮೈಸೂರು ಜಿಲ್ಲೆಯ ಜನರು ಮಾ. 6ರ ಆಯವ್ಯಯದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾತರದಿಂದ ಎದುರು ನೋಡುತ್ತಿದ್ದಾರೆ.

ಜಿಲ್ಲೆಯವರೇ ಆಗಿದ್ದ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಅವರ ಸುದೀರ್ಘ ಅವಧಿಯ ದಾಖಲೆ ಮುರಿದು ಹೆಜ್ಜೆ ಇರಿಸಿರುವ ಸಿದ್ದರಾಮಯ್ಯ, ಹಣಕಾಸು ಸಚಿವರಾಗಿ 17ನೇ ಬಾರಿಗೆ ಹಾಗೂ ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಆಯವ್ಯಯ ಮಂಡಿಸಲಿದ್ದಾರೆ. ಸಿಎಂ ಅವರು ಮೈಸೂರಿನ ಜನತೆಗೆ ಯಾವ್ಯಾವ ಕೊಡುಗೆಗಳನ್ನು ಪ್ರಕಟಿಸಲಿದ್ದಾರೆ ಎನ್ನುವುದೂ ಅಷ್ಟೇ ಕುತೂಹಲ ಮೂಡಿಸಿದೆ.

ನಿರೀಕ್ಷೆಗಳೇನು: ಪ್ರತಿ ವರ್ಷ ನಡೆಯುವ ದಸರಾ ಮಹೋತ್ಸವ ಸುಗಮವಾಗಿರಲು ದಸರಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂಬ ಬೇಡಿಕೆ ನಿರಂತರವಾಗಿ ಕೇಳಿ ಬಂದಿರುವುದರಿಂದ ಈ ಬಾರಿ ಘೋಷಣೆ ಮಾಡುವ ವಿಶ್ವಾಸದಲ್ಲಿ ನಗರದ ಜನತೆ ಇದ್ದರೆ, ಬಡವರ ಪಾಲಿನ ದೊಡ್ಡಾಸ್ಪತ್ರೆ ಎಂದೇ ಹೆಸರಾದ ಕೃಷ್ಣರಾಜೇಂದ್ರ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗೆ ಕಾಯಕಲ್ಪ ನೀಡಿ, ಪಾರಂಪರಿಕ ಕಟ್ಟಡಗಳ ಪುನರ್ ನಿರ್ಮಾಣ, ಮತ್ತೊಂದು ಹೊರರೋಗಿ ವಿಭಾಗ, ವಿಶ್ರಾಂತಿ, ಶಸ್ತ್ರಚಿಕಿತ್ಸಾ ಘಟಕದ ಕಟ್ಟಡ ನಿರ್ಮಾಣವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.

ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಬೇಕಾಗಿರುವ ಭೂಮಿ ಸ್ವಾಧೀನಕ್ಕೆ ಅನುದಾನ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಅನುದಾನ, ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯ ಸ್ವಾಧೀನಕ್ಕೆ ಅನುದಾನ ಮೀಸಲಿಡುವ ನಿರೀಕ್ಷೆ ಇಡಲಾಗಿದೆ. ಹಲವು ವರ್ಷಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಮೈಸೂರು ಟೂರಿಸಂ ಸರ್ಕೀಟ್ ರಚನೆ ಮಾಡಬೇಕೆಂಬ ಬೇಡಿಕೆ ಕೂಡ ಇದೆ.

ವರುಣ ತಾಲೂಕು ಕೇಂದ್ರವಾಗುವುದೇ? ಎರಡು ಬಾರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಕೊಟ್ಟ ವರುಣ ಕ್ಷೇತ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಇರಾದೆ ಇದ್ದು, ಹೊಸ ತಾಲೂಕುಗಳ ಘೋಷಣೆಯಾದರೆ ವರುಣ ಹೆಸರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯದ ಬಳಿ ಬೊಟಾನಿಕಲ್ ಗಾರ್ಡನ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ ಆಗಬೇಕೆಂಬ ಒತ್ತಡ ಬಂದರೂ ಪ್ರತಿವರ್ಷ ನಿರಾಸೆಯಾಗುತ್ತಲೇ ಇದೆ. ಈ ಬಾರಿ ಶಾಸಕ ಅನಿಲ್ ಚಿಕ್ಕಮಾದು ಅವರ ಒತ್ತಾಸೆಯಿಂದ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಮೈಸೂರು ನಗರದ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿರುವ ಅನುದಾನ ಕಡಿಮೆಯಾಗಿದ್ದು, ಮತ್ತಷ್ಟು ಅನುದಾನ ಘೋಷಿಸುವ ಜತೆಗೆ, ಪಾರಂಪರಿಕ ಕಟ್ಟಡಗಳ ಪುನರ್ ನಿರ್ಮಾಣ, ನವೀಕರಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡುವ ನಿರೀಕ್ಷೆ ಇದೆ. ಮೈಸೂರು ರೇಷ್ಮೆ ನೇಯ್ದೆ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯವಿರುವ 100 ಕೋಟಿ ರೂ. ಅನುದಾನದ ಪ್ರಸ್ತಾವನೆ ಕಳೆದ ವರ್ಷದಿಂದಲೂ ಹಣಕಾಸು ಇಲಾಖೆಯ ಎದುರು ಕಡತ ಇದ್ದು, ಅದನ್ನು ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ತವರು ಜಿಲ್ಲೆಗೆ ಭರಪೂರ ಕೊಡುಗೆಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ಬಗ್ಗೆ ಜಿಲ್ಲೆಯ ಜನರ ಮನದಲ್ಲಿ ಹತ್ತಾರು ನಿರೀಕ್ಷೆ, ಆಸೆಗಳನ್ನು ಇಟ್ಟುಕೊಂಡಿದ್ದರೆ, ಮೈಸೂರು ನಗರದ ಶಾಸಕರು ಕೂಡ ತವ ತಮ್ಮ ಕ್ಷೇತ್ರಕ್ಕೆ ಏನಾದರೂ ಯೋಜನೆಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ನಗರಪಾಲಿಕೆಯನ್ನು ಬೃಹತ್ ಮಹಾ ನಗರಪಾಲಿಕೆಯಾಗಿ ಘೋಷಣೆ ಮಾಡಿರುವ ಕಾರಣ ಕಾವೇರಿ, ಕಬಿನಿ ನದಿಯಿಂದ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯ ಜತೆಗೆ, ನಗರದಲ್ಲಿ ಒಳಚರಂಡಿಯನ್ನು ಪುನರ್ ನಿರ್ಮಾಣ ಮಾಡುವ ಪ್ರಸ್ತಾವಿತ ಯುಜಿಡಿ ಯೋಜನೆಯನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಬಜೆಟ್‌ನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಬೇಕಿದೆ ಬೆಂಬಲ: ಬೀಚ್ ಟೂರಿಸಂ, ಟೆಂಪಲ್ ಟೂರಿಸಂಗೆ ಬಲ ಬರುವ ನಿರೀಕ್ಷೆ

