ಶುಕ್ರವಾರ ರಾಜ್ಯ ಬಜೆಟ್: ಕ್ರೀಡಾ ವಲಯದ ನಿರೀಕ್ಷೆಗಳಿವು
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡಿಸಲಿದ್ದು, ಕ್ರೀಡಾ ವಲಯದ ನಿರೀಕ್ಷೆಗಳು ಗರಿಗೆದರಿವೆ.

Published : March 4, 2026 at 12:58 PM IST
ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನ ಮಾ.6ರಿಂದ ಮಾ.27ರವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ.
ಪಂಚ ಗ್ಯಾರಂಟಿಗಳು, ಆರ್ಥಿಕ ಹೊರೆ, ಕೃಷಿ, ಶಿಕ್ಷಣ, ಆರೋಗ್ಯ ಹೀಗೆ ಯಾವೆಲ್ಲಾ ಕ್ಷೇತ್ರಕ್ಕೆ ಏನೆಲ್ಲಾ ನೀಡಬಹುದು ಎಂಬ ಕುತೂಹಲವಿದೆ.
ಇದೇ ವೇಳೆ, ರಾಜ್ಯದ ಕ್ರೀಡಾ ವಲಯ ಕೂಡ ಕೆಲವು ನಿರೀಕ್ಷೆಗಳನ್ನು ಹೊಂದಿದೆ. ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಕೆಲವು ಯೋಜನೆಗಳು ಈ ಬಾರಿ ಅನುಷ್ಠಾನಕ್ಕೆ ಬರುವ ನಿರೀಕ್ಷೆಯನ್ನು ಕ್ರೀಡಾ ವಲಯ ಹೊಂದಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾಗುವ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ರೂಪಾಯಿ, ಬೆಳ್ಳಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ 4 ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ 2 ಕೋಟಿ ರೂಪಾಯಿ ಪ್ರೋತ್ಸಾಹಧನದ ಘೋಷಣೆಯನ್ನು ಈ ಹಿಂದಿನ ಬಜೆಟ್‌ನಲ್ಲಿ ಮಾಡಲಾಗಿತ್ತು.
ಅದೇ ರೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ (ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವಕಪ್) ಕ್ರೀಡಾಕೂಟಗಳಲ್ಲಿ ಅತ್ಯುನ್ನತ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂಬುದು ಸಾಕಷ್ಟು ಮಾಜಿ ಹಾಗೂ ಹಾಲಿ ಆಟಗಾರರ ಬಹುದಿನಗಳ ಬೇಡಿಕೆ.
ರೈಫಲ್ ಶೂಟಿಂಗ್ ಅಸೋಸಿಯೇಷನ್, ಹಾಕಿ ಕರ್ನಾಟಕ, ಹವ್ಯಾಸಿ ಬಾಕ್ಸಿಂಗ್ ಅಸೋಸಿಯೇಷನ್, ಆರ್ಚರಿ ಅಸೋಸಿಯೇಷನ್, ಅಥ್ಲೆಟಿಕ್ಸ್ ಅಸೋಸಿಯೇಷನ್, ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಅಕಾಡೆಮಿ, ಸೈಕ್ಲಿಂಗ್ ಅಕಾಡೆಮಿ ಫೆನ್ಸಿಂಗ್ ಅಸೋಸಿಯೇಷನ್‌ಗಳು ಅತ್ಯಾಧುನಿಕ ತರಬೇತಿ ಉಪಕರಣಗಳು ಹೆಚ್ಚಿನ ಅನುದಾನದ ನಿರೀಕ್ಷೆ ಹೊಂದಿವೆ.
2024ರ ಬಜೆಟ್‌ನಲ್ಲಿಯೇ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಲಭ್ಯವಿರುವ ಅಂದಾಜು 60 ಎಕರೆ ನಿವೇಶನದಲ್ಲಿ ಅತ್ಯಾಧುನಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯ ಒಳಗೊಂಡ ಕ್ರೀಡಾ ನಗರವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದರು. ಯಲಹಂಕ ಸಮೀಪದ ಮಾವಳ್ಳಿಪುರದಲ್ಲಿ 60 ಎಕರೆ ಜಾಗವನ್ನು ಗುರುತಿಸಲಾಗಿದ್ದು ಅಭಿವೃದ್ಧಿ ಕಾರ್ಯ ಆರಂಭವಾಗಬೇಕಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಕುರಿತು ಮತ್ತಷ್ಟು ಸ್ಪಷ್ಟನೆ ಸಿಗುವ ನಿರೀಕ್ಷೆಯನ್ನು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಕ್ತಪಡಿಸಿದೆ.
ರಾಜ್ಯದ ಕ್ರೀಡಾಪಟುಗಳಿಗೆ ಅತ್ಯುನ್ನತ ಸ್ಪರ್ಧಾ ಅವಕಾಶ ಒದಗಿಸಲು ಪ್ರತೀ ವರ್ಷ ಒಂದು ರಾಜ್ಯ ಮಟ್ಟದ ಒಲಿಂಪಿಕ್ಸ್ ಆಯೋಜಿಸಲಾಗುತ್ತಿದೆ. ಕ್ರೀಡಾಕೂಟ ಯಶಸ್ವಿ ಆಗುತ್ತಿರುವುದರಿಂದ ಮತ್ತಷ್ಟು ಹೆಚ್ಚಿನ ಕ್ರೀಡಾಪಟುಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಹಾಗೂ ಸ್ಪರ್ಧಾಳುಗಳಿಗೆ ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುದಾನದ ನಿರೀಕ್ಷೆಯನ್ನು ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಹೊಂದಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಇನ್ನೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಬೇಕು ಎಂಬುದು ಕ್ರಿಕೆಟ್ ಅಭಿಮಾನಿಗಳ ಹಲವು ವರ್ಷಗಳ ಕನಸು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಈ ಕೂಗು ಮತ್ತಷ್ಟು ಹೆಚ್ಚಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಸುರಕ್ಷತೆಯ ದೃಷ್ಟಿಯಿಂದ ಹೊಸ ಕ್ರೀಡಾಂಗಣದ ಅವಶ್ಯಕತೆಯಿದ್ದು, ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಬೆಂಗಳೂರು ಹೊರವಲಯದ ಸೂರ್ಯನಗರ ಹಾಗೂ ತುಮಕೂರಿನ ಪಿ.ಗೊಲ್ಲಹಳ್ಳಿ ಬಳಿ ಸ್ಥಳ ಗುರಿತಿಸಲಾಗಿದೆ. ಮುಂದಿನ ಹತ್ತಾರು ವರ್ಷಗಳ ಗಮನದಿಂದ ಅಭಿವೃದ್ಧಿಗೆ ವೇಗ ದೊರೆಯಬೇಕಿದ್ದು, ಅನುದಾನದ ನಿರೀಕ್ಷೆಯನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹೊಂದಿದೆ.
ಇದಲ್ಲದೇ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿಯೂ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಕೊಡುಗೆಯನ್ನ ರಾಜ್ಯ ಕ್ರಿಕೆಟ್ ಸಂಸ್ಥೆ ನಿರೀಕ್ಷಿಸುತ್ತಿದೆ. ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಕಳೆದ ಬಾರಿ ಘೋಷಿತವಾದ ಯೋಜನೆಗಳು ಈ ಬಜೆಟ್‌ನಲ್ಲಿ ಅನುಷ್ಠಾನದ ಹಂತಕ್ಕೆ ಬರಲಿ ಎಂಬುದು ಕ್ರೀಡಾಪ್ರೇಮಿಗಳ ಆಶಯ.
ಇದನ್ನೂ ಓದಿ: ಮಾ.6 ರಂದು ರಾಜ್ಯ ಬಜೆಟ್ ಮಂಡನೆ: ಸಿಎಂ ತವರು ಜಿಲ್ಲೆಯ ನಿರೀಕ್ಷೆಗಳು ಹೀಗಿವೆ

