'ಕರ್ನಾಟಕ ಉಳಿಸಿ, ಕಾಂಗ್ರೆಸ್ ತೊಲಗಿಸಿ', 'ಬೆಂಗಳೂರು ಉಳಿಸಿ' ಹೋರಾಟಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ತೀರ್ಮಾನ
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಸೋಮವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಬಳ್ಳಾರಿ ಗಲಾಟೆ ಸೇರಿದಂತೆ ಕಾಂಗ್ರೆಸ್ ವಿರುದ್ಧದ ಪ್ರತಿಭಟನೆ ಕುರಿತು ಚರ್ಚಿಸಲಾಗಿದೆ.

Published : January 6, 2026 at 8:52 AM IST
ಬೆಂಗಳೂರು: ಬಳ್ಳಾರಿಯ ಅಹಿತಕರ ಘಟನಾವಳಿಗಳ ಕುರಿತು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕಳವಳ ವ್ಯಕ್ತಪಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆ ಕುರಿತು ಮಾಹಿತಿ ನೀಡಿದರು.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಹತ್ಯೆಗೆ ಪ್ರಯತ್ನ ಆಗಿದೆ. ಗುರಿ ತಪ್ಪಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಆಗಿದೆ. ಇದೆಲ್ಲ ನೋಡಿದಾಗ ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ತೀರ್ಮಾನಕ್ಕೆ ಕೋರ್ ಕಮಿಟಿ ಬಂದಿದೆ ಎಂದು ತಿಳಿಸಿದರು.
ವಿಧಾನಸಭೆ, ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಅಕಾಂಕ್ಷಿಗಳ ಕುರಿತು ಆರ್. ಅಶೋಕ್ ಅವರ ನೇತೃತ್ವದಲ್ಲಿ ಗೋವಿಂದ ಕಾರಜೋಳ, ನಾನು, ನಳಿನ್ ಕುಮಾರ್ ಕಟೀಲ್ ಮೊದಲಾದವರು ಪ್ರವಾಸ ಮಾಡಿದ್ದೇವೆ. ವರದಿಯನ್ನೂ ಕೊಟ್ಟಿದ್ದು, ಆ ವರದಿ ಆಧರಿಸಿ ಎನ್‍ಡಿಎ ಘಟಕದ ಜೆಡಿಎಸ್ ಜೊತೆಗೂ ಸಮಾಲೋಚನೆ ಮಾಡಿ ಶೀಘ್ರವೇ ಬಿಜೆಪಿ ಸಂಸದೀಯ ಮಂಡಳಿಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಪಟ್ಟಿ ಕಳಿಸುವ ಮತ್ತು ಜೆಡಿಎಸ್ ಜೊತೆ ಮಾತನಾಡುವ ಅಧಿಕಾರವನ್ನು ರಾಜ್ಯ ಘಟಕದ ಅಧ್ಯಕ್ಷರಿಗೆ ಕೋರ್ ಕಮಿಟಿ ಕೊಟ್ಟಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ, ಪರಿಷತ್ತಿನ ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಒಳಗೊಂಡ ಕೋರ್ ಕಮಿಟಿಯು ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದೆ. ಜನವರಿ 1ರಂದು ಬಳ್ಳಾರಿಯಲ್ಲಿ ಶಾಸಕ, ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಮನೆ ಮೇಲೆ ಸಾವಿರಾರು ಜನರು ದಾಳಿ ನಡೆಸಿದ್ದು, ಗನ್‍ನಲ್ಲಿ ಫೈರಿಂಗ್ ಮಾಡಿ ರಾಜಶೇಖರ್ ಎಂಬ ಸ್ಥಳೀಯರನ್ನು ಹತ್ಯೆ ಮಾಡಿದ್ದು ಆತಂಕಕರ ವಿಚಾರ ಎಂದರು.
ಹಿಂಸಾಕೃತ್ಯ ನಡೆಸಲೆಂದೇ ವ್ಯಾಪಕ ಸಿದ್ಧತೆ ಮಾಡಿಕೊಂಡು ಬಿಯರ್ ಬಾಟಲ್, ಸೋಡಾ ಬಾಟಲ್, ಮಾರಕಾಯುಧ ಇಟ್ಟುಕೊಂಡು ಸಾರ್ವಜನಿಕವಾಗಿಯೇ ಮನೆಯನ್ನು ಗುರಿಯಾಗಿ ಇಟ್ಟುಕೊಂಡು ಪಿಸ್ತೂಲ್‍ನಿಂದ ಶೂಟ್ ಮಾಡಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಈ ಎಲ್ಲ ಘಟನೆಗಳ ಬಗ್ಗೆ ಕೋರ್ ಕಮಿಟಿ ಸಭೆ ಕಳವಳ ವ್ಯಕ್ತಪಡಿಸಿದೆ ಎಂದು ವಿವರಿಸಿದರು.
ಇದು ಸಿನಿಮೀಯ ರೀತಿಯಲ್ಲಿ ನಡೆದಿದೆ. ಬಿಹಾರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಉತ್ತರ ಪ್ರದೇಶ ಅತ್ಯಂತ ಶಾಂತಿಯುತ ರಾಜ್ಯವಾಗಿದೆ. ಆದರೆ, ಶಾಂತಿಯುತ ರಾಜ್ಯವಾಗಿದ್ದ ಕರ್ನಾಟಕವು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗೂಂಡಾ, ಮಾಫಿಯ, ಮಾದಕವಸ್ತುಗಳ ರಾಜ್ಯವಾಗಿ ಬದಲಾಗುತ್ತಿರುವುದು ದುರದೃಷ್ಟಕರ. ಇದರ ಹಿನ್ನೆಲೆಯಲ್ಲಿ ದೊಡ್ಡ ಷಡ್ಯಂತ್ರವಿದ್ದು, ಕಾಂಗ್ರೆಸ್ ಶಾಸಕರೇ ಘಟನೆಗೆ ಪ್ರಚೋದಿಸಿದ್ದು, ದಾಳಿಯ ನೇತೃತ್ವ ವಹಿಸಿದ್ದು ಮಾಧ್ಯಮಗಳಲ್ಲಿ ನೋಡಿದ್ದೇವೆ. ರಾಜ್ಯ ಸರಕಾರದ ತನಿಖೆ ನ್ಯಾಯಯುತ- ನಿಷ್ಪಕ್ಷಪಾತದ್ದಾಗಿರುತ್ತದೆ ಎಂಬ ನಂಬಿಕೆ ನಮಗಿಲ್ಲ. ಒಬ್ಬನ ಹತ್ಯೆ ಆಗಿದ್ದರೂ ಸರಕಾರ ಕಾಂಗ್ರೆಸ್ ಖಾಜಿ ನ್ಯಾಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಬಿಜೆಪಿ ಶಾಸಕರ ಮನೆ ಮೇಲೆ ದಾಳಿ ಆಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. 16 ಜನ ಕಾಂಗ್ರೆಸ್ಸಿನವರನ್ನು, 11 ಜನ ಬಿಜೆಪಿಯವರನ್ನು ಬಂಧಿಸಿದ್ದಾರೆ. ಬಿಜೆಪಿ ಶಾಸಕರು ಕಾಂಗ್ರೆಸ್ ಶಾಸಕರ ಮನೆ ಮೇಲೆ ದಾಳಿಗೆ ಹೋಗಿದ್ದರೇ ಎಂದು ಕೇಳಿದರು. ಅಥವಾ ಕಾಂಗ್ರೆಸ್ಸಿನ ಕಾರ್ಯಕರ್ತರು ಅವರ ಶಾಸಕರ ಜೊತೆ ಬಿಜೆಪಿ ಶಾಸಕರ ಮನೆ ಮೇಲೆ ದಾಳಿಗೆ ಬಂದಿದ್ದರೇ ಎಂದು ಪ್ರಶ್ನಿಸಿದರು.
ಗೃಹಲಕ್ಷ್ಮಿಯ 11 ಸಾವಿರ ಕೋಟಿ ರೂ. ನಾಪತ್ತೆ: ಗೃಹಲಕ್ಷ್ಮಿ ಯೋಜನೆಯ ಹಣದ ದುರುಪಯೋಗ, 2 ವರ್ಷದಲ್ಲಿ 11 ಸಾವಿರ ಕೋಟಿ ರೂ. ಹಣ ನಾಪತ್ತೆಯಾಗಿದೆ. ಇದು ಸುರೇಶ್ ಕುಮಾರ್ ಅವರು ಹೇಳಿದಂತೆ ಹೈದರಾಲಿ ಲೆಕ್ಕ ಎಂದು ಟೀಕಿಸಿದರು. ಬಡ ಮಹಿಳೆಯರಿಗೆ ಕೊಡಬೇಕಾದ ಹಣ ನುಂಗಿದ ಸರಕಾರದ ನೀತಿಯ ವಿರುದ್ಧ, ಬ್ರ್ಯಾಂಡ್ ಬೆಂಗಳೂರು ಡ್ರಗ್ಸ್ ಬೆಂಗಳೂರಾಗಿ, ಬಾಂಗ್ಲಾ ನಿವಾಸಿಗಳ ಬೆಂಗಳೂರಾಗಿ, ಕೊಲೆ ಅತ್ಯಾಚಾರದ ಬೆಂಗಳೂರಾಗಿ, 750 ಮೀಟರ್ ಪ್ರಯಾಣ ಮಾಡಲು 86 ನಿಮಿಷ ತೆಗೆದುಕೊಳ್ಳುವ ಬೆಂಗಳೂರಾಗಿ, ಬ್ಯಾಡ್ ಬೆಂಗಳೂರಾಗಿ ಪರಿವರ್ತನೆ ಮಾಡುತ್ತಿರುವ ಕಾಂಗ್ರೆಸ್ ನೀತಿಯನ್ನು ಖಂಡಿಸಲಾಗಿದೆ. ನಾವು ಬೆಂಗಳೂರು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಹೋರಾಟ ಸಂಘಟಿಸುವ ಕುರಿತು ಚರ್ಚೆ: ಈ ವಿಷಯವನ್ನು ಆಧರಿಸಿ ಬಗರ್ ಹುಕುಂ ಚಳವಳಿ, ಬಿಪಿಎಲ್ ಕಾರ್ಡ್ ರದ್ದು, ಅತಿವೃಷ್ಟಿ ಪರಿಹಾರವನ್ನು ಸಮರ್ಪಕವಾಗಿ ವಿತರಿಸದೇ ಇರುವುದು, ಎಂಎಸ್‍ಪಿಯನ್ನು ಕೇಂದ್ರ ಸರಕಾರ ಪ್ರಕಟಿಸಿದ್ದರೂ ಖರೀದಿ ಕೇಂದ್ರವನ್ನು ನೆಪ ಮಾತ್ರಕ್ಕೆ ತೆರೆದು ಮೆಕ್ಕೆ ಜೋಳ ಖರೀದಿ ಕೇಂದ್ರವನ್ನು ಬಂದ್ ಮಾಡಿರುವುದು ಇತ್ಯಾದಿ ಎಲ್ಲ ವಿಷಯಗಳನ್ನು ಇಟ್ಟುಕೊಂಡು ರಾಜ್ಯದ ಉದ್ದಗಲಕ್ಕೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಗದಲ್ಲಿ ಹೋರಾಟ ಸಂಘಟಿಸುವ ಚರ್ಚೆ ನಡೆಸಿದ್ದೇವೆ. ಇದೆಲ್ಲದರ ಅಂತಿಮ ಯೋಜನೆ ತಯಾರಿಸಿ ನಾವು ಹೋರಾಟಕ್ಕೆ ಇಳಿಯುತ್ತೇವೆ. 'ಕರ್ನಾಟಕ ಉಳಿಸಿ, ಕಾಂಗ್ರೆಸ್ ತೊಲಗಿಸಿ' ಹಾಗೂ 'ಕೆಟ್ಟ ಸರಕಾರ- ಕೆಟ್ಟ ಜನರಿಂದ ಬೆಂಗಳೂರು ಉಳಿಸಿ' ಹೋರಾಟ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಬಾಗಲಕೋಟೆ, ದಾವಣಗೆರೆಯ ಮುಂಬರುವ ಉಪ ಚುನಾವಣೆ ಕುರಿತು ಚರ್ಚಿಸಿದ್ದೇವೆ. ಈ ಸಂಬಂಧ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿ ಅಭ್ಯರ್ಥಿ, ವಾತಾವರಣ ನಿರ್ಮಿಸುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಬಳ್ಳಾರಿ ಘಟನೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಬೇಕು: ವಿಜಯೇಂದ್ರ ಆಗ್ರಹ

