ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟ: ರಿಸಲ್ಟ್ ಹೀಗೆ ನೋಡಿ
ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

Published : April 22, 2026 at 8:39 PM IST
ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಹಾಗು ಪೋಷಕರುಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಹತ್ತನೇ ತರಗತಿ ಪರೀಕ್ಷೆ - 1 ರ ಫಲಿತಾಂಶ ಇಂದು ಪ್ರಕಟವಾಗಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಾರ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶದ ವಿವರಗಳನ್ನು ಮಧ್ಯಾಹ್ನ 12 ಗಂಟೆಗೆ ಮಾಧ್ಯಮಗೋಷ್ಟಿಯಲ್ಲಿ ಘೋಷಣೆ ಮಾಡಲಿದ್ದಾರೆ.
ವಿದ್ಯಾರ್ಥಿಗಳು ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆ - 1 ರ ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಮತ್ತು ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಪಡೆಯಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
ಡಿಜಿಲಾಕರ್ನಲ್ಲಿ ಅಂಕಪಟ್ಟಿ: ದ್ವಿತೀಯ ಪಿಯುಸಿಯಂತೆಯೇ ಹತ್ತನೇ ತರಗತಿ ವಿದ್ಯಾರ್ಥಿಗಳಿಗೂ ಸಹ ಡಿಜಿಲಾಕರ್ನಲ್ಲಿ ಅಂಕಪಟ್ಟಿಗಳು ಲಭ್ಯವಾಗುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಡಿದೆ. ವಿದ್ಯಾರ್ಥಿಗಳು https://digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಮಧ್ಯಾಹ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಎಪ್ರಿಲ್ 24 ಅನ್ನು ತಾತ್ಕಾಲಿಕ ದಿನಾಂಕ ಎಂದು ನಾನು ಮೊದಲೇ ಹೇಳಿದ್ದೆ, ಆದರೆ ನಾವು ಒಂದು ದಿನ ಮುಂಚಿತವಾಗಿ ಫಲಿತಾಂಶ ಪ್ರಕಟಿಸುತ್ತಿದ್ದೇವೆ ಎಂದು ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಮಾದ್ಯಮದವರಿಗೆ ತಿಳಿಸಿದರು.
ತೃತೀಯ ಭಾಷಾ ಪತ್ರಿಕೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ಆದೇಶಿಸಿರುವ ಸಂಬಂಧ ಈ ಬಾರಿ ನಾವು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗುತ್ತದೆ. ಹೆಚ್ಚಿನ ವಿವರಗಳನ್ನು ನಂತರ ನೀಡಲಾಗುವುದು ಎಂದರು.
ಫಲಿತಾಂಶಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಸಿಎಂ ಫಲಿತಾಂಶಗಳಿಂದ ತುಂಬಾ ಸಂತೋಷಪಟ್ಟಿದ್ದಾರೆ. ಅವರು ನಮಗೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಎಲ್ಲವನ್ನೂ ಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಸಚಿವರು ಪ್ರತಿಕ್ರಿಯೆ ನೀಡಿದರು.
ಮಾರ್ಚ್ 18 ರಿಂದ ನಡೆದಿದ್ದ ಪರೀಕ್ಷೆ: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18 ರಿಂದ ಎ.2ರ ವರೆಗೆ ನಡೆದಿತ್ತು. 8,65,988 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಫಲಿತಾಂಶ ಹೀಗೆ ನೋಡಿ: ಇಂದು ಮಧ್ಯಾಹ್ನ 12 ರಿಂದ https://karresults.nic.in/ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯ ಇರಲಿದೆ. ಜೊತೆಗೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ವಾಟ್ಸಾಪ್ಗೆ ಮತ್ತು Karnatakaone mobile App ಮೂಲಕ ಫಲಿತಾಂಶ ಸಿಗಲಿದೆ.
ಇದನ್ನೂ ಓದಿ: ತೃತೀಯ ಭಾಷೆಗಳಿಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಲು ಹೈಕೋರ್ಟ್ ಆದೇಶ; ರಾಜ್ಯ ಸರ್ಕಾರಕ್ಕೆ ಹಿನ್ನಡೆ

