ಬಾರಿ ಬಂದೋಬಸ್ತ್ನಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮೈದಾನ ಅತಿಕ್ರಮಣ ತೆರವು
ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮೈದಾನದ ಅತಿಕ್ರಮಣವನ್ನು ಇಂದು ತೆರವುಗೊಳಿಸಲಾಯಿತು.

Published : December 9, 2025 at 7:39 PM IST
ಕಲಬುರಗಿ: ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಬಹುಕಾಲದ ಆಸ್ತಿ ವಿವಾದ ಇಂದು ಅಂತ್ಯ ಕಂಡಿದೆ. ಜಾತ್ರಾ ಮೈದಾನದಲ್ಲಿರುವ ಕೋಟ್ಯಾಂತರ ರೂಪಾಯಿ ಮೌಲ್ಯದ 42×72 ಚದರ್ ಅಡಿ ಅಳತೆಯ ವಿವಾದಿತ ಜಾಗವನ್ನು ಕೋರ್ಟ್ ದೇವಸ್ಥಾನದ ಪರವಾಗಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಭಾರಿ ಪೊಲೀಸ್ ಬಂದೋಬಸ್ತಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಶತಮಾನಗಳಿಂದ ಅನ್ನದಾಸೋಹ ಮತ್ತು ಜ್ಞಾನದಾಸೋಹ ಕೇಂದ್ರವಾಗಿರುವ ಈ ದೇವಸ್ಥಾನದ ಆಸ್ತಿ ದಶಕಗಳಿಂದಲೂ ವಿವಾದದ ಕೇಂದ್ರಬಿಂದು ಆಗಿತ್ತು. ಮಾಜಿ ಕಾರ್ಪೊರೇಟರ್ ಪ್ರಕಾಶ್ ಬೆನಕನಹಳ್ಳಿ ಈ ಜಾಗದಲ್ಲಿ ದೊಡ್ಡ ಶೆಡ್ ನಿರ್ಮಿಸಿ ಬಾಡಿಗೆಗೆ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಸ್ಥಳೀಯ ಸಂಸ್ಥೆ ಹಾಗೂ ದೇವಸ್ಥಾನ ಟ್ರಸ್ಟ್ ಹಲವು ಬಾರಿ ತೆರವು ನೋಟಿಸ್ ನೀಡಿತ್ತು. ಆದರೆ, ಈ ಜಾಗ ಮಹಾನಗರ ಪಾಲಿಕೆಗೆ ಸೇರಿದೆ ಎಂದು ಪ್ರಕಾಶ್ ಬೆನಕನಹಳ್ಳಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು. ಸುಮಾರು 17 ವರ್ಷಗಳ ನ್ಯಾಯಾಂಗ ಹೋರಾಟದ ಬಳಿಕ ದೇವಸ್ಥಾನದ ಪರವಾಗಿ ಅಂತಿಮ ತೀರ್ಪು ಬಂದಿದೆ.
ಕೋರ್ಟ್ನ ತೀರ್ಪಿನ ಅನ್ವಯ ಭಾರಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ : ಮಂಗಳವಾರ ಬೆಳಗ್ಗೆಯಿಂದಲೇ ಜಾತ್ರಾ ಮೈದಾನದಲ್ಲಿ ಪೊಲೀಸ್ ಪಡೆ, ನ್ಯಾಯಾಲಯ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಮೂರು ಜೆಸಿಬಿಗಳ ಸಹಯೋಗದಲ್ಲಿ ದೊಡ್ಡ ಪ್ರಮಾಣದ ಶೆಡ್ ಮತ್ತು ಪುಟ್ಟ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಈ ವೇಳೆ ತೆರವು ತಡೆಯಲು ಪ್ರಕಾಶ್ ಬೆನಕನಹಳ್ಳಿ ಸ್ಥಳಕ್ಕೆ ಬಂದು ವಾಗ್ವಾದ ನಡೆಸಿದರೂ, ಅಧಿಕಾರಿಗಳು ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಯನ್ನು ತೋರಿಸಿ ಕಾರ್ಯಾಚರಣೆಯನ್ನು ಮುಂದುವರೆಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದರು.
ದೇವಸ್ಥಾನದ ಜಾತ್ರಾ ಮೈದಾನದಲ್ಲಿನ ಸಣ್ಣ ಬಂಡಿಗಳು, ಪಾನಿಪುರಿ ಅಂಗಡಿಗಳು, ಹೋಟೆಲ್‌ಗಳು, ಪೂಜಾ ಸಾಮಗ್ರಿಗಳ ಅಂಗಡಿಗಳನ್ನು ಸಹ ತೆರವುಗೊಳಿಸಲಾಯಿತು.

ದಶಕಗಳ ವಿವಾದಕ್ಕೆ ತೆರೆ - ಭಕ್ತರಲ್ಲಿ ಸಂತಸ : ಕೋಟ್ಯಾಂತರ ಮೌಲ್ಯದ ಆಸ್ತಿ ದೇವಸ್ಥಾನಕ್ಕೆ ಮರಳಿ ಸಿಕ್ಕಿರುವುದರಿಂದ ಭಕ್ತರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ದಶಕಗಳ ಕಾಲ ವಿವಾದದ ಕೇಂದ್ರಬಿಂದುವಾಗಿದ್ದ ದೇವಸ್ಥಾನದ ಆಸ್ತಿ ಇಂದು ಅಧಿಕೃತವಾಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಸುರ್ಪದಿಗೆ ಒಪ್ಪಿಸಲಾಗಿದೆ. ಒಟ್ಟಿನಲ್ಲಿ ಕಲಬುರಗಿಯಲ್ಲಿ ಹಲವು ವರ್ಷಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಈ ವಿವಾದಕ್ಕೆ ಇಂದಿನ ತೆರವು ಕಾರ್ಯಾಚರಣೆ ಸ್ಪಷ್ಟ ಅಂತ್ಯ ನೀಡಿ, ದೇವಸ್ಥಾನದ ಆಸ್ತಿ ರಕ್ಷಣೆಯಲ್ಲಿ ಪ್ರಮುಖ ಹಂತವಾಗಿ ದಾಖಲಾಗಿದೆ.
ಸ್ಥಳ ಒತ್ತುವರಿ ಮಾಡಿಕೊಂಡಿದ್ದ ಪ್ರಕಾಶ್ ಬೆಳಕನಹಳ್ಳಿ ಅವರು ಮಾತನಾಡಿ, ''ಶರಣ ಬಸವೇಶ್ವರ ಜಾತ್ರಾ ಮೈದಾನದಲ್ಲಿ ಸಿಟಿಎಸ್ ನಂಬರ್ 1432, 41,953.04 ಚದರ್ ಮೀಟರ್ ಜಾಗದಲ್ಲಿ 72x42 ಚದರ್ ಅಡಿ ಅಳತೆಯಲ್ಲಿ ನನ್ನ ಅಂಗಡಿಯ ಜಾಗವಿತ್ತು. ಆದರೆ, 2008 ರಲ್ಲಿ ಶರಣ ಬಸವೇಶ್ವರ ಸಂಸ್ಥೆಯವರು ನನ್ನ ಮೇಲೆ ಹಲ್ಲೆ ಮಾಡಿ ಕೇಸ್ ದಾಖಲಿಸಿದ್ದರು. ನಂತರ ಇದೇ ಕೇಸ್ನಲ್ಲಿ ನ್ಯಾಯಾಲಯದಲ್ಲಿ ತೀರ್ಪು ಅವರ ಪರವಾಗಿ ಬಂದಿದೆ. ತೀರ್ಪಿನಲ್ಲಿ ಅವರಿಗೆ ಸ್ಥಳವನ್ನು ಬಿಟ್ಟುಕೊಡಲು ಕೋರ್ಟ್ ಆದೇಶಿಸಿದೆ. ಇದಕ್ಕೆ ನಾನು ಗೌರವಿಸುತ್ತೇನೆ. ಸರ್ವೇ ಆಗಿರುವ ಜಾಗವನ್ನು ನಾನು ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಡಲು ನಿಶ್ಚಯಿಸಿದ್ದೇನೆ. ಆದರೂ ಇವರ ಸಂಸ್ಥೆಯ ಮೇಲೆ ನನಗೆ ವಿಶ್ವಾಸವಿಲ್ಲ. ಹಾಗಾಗಿ, ನನಗೆ ರಕ್ಷಣೆ ಕೊಡಬೇಕು'' ಎಂದು ಕೋರಿದ್ದಾರೆ.
ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ್ ಶಿಂಧೆ ಅವರು ಮಾತನಾಡಿದ್ದು, ''ಕೋರ್ಟ್ನ ಆದೇಶದಂತೆ ಇವತ್ತು ಗುಡಿಯವರು ಜೆಸಿಬಿಯ ಮೂಲಕ ಅತಿಕ್ರಮಣವನ್ನು ತೆರವುಗೊಳಿಸುತ್ತಿದ್ದಾರೆ. ಜೊತೆಗೆ ಪೊಲೀಸ್ ರಕ್ಷಣೆ ಕೊಟ್ಟಿದ್ದಾರೆ. ಇವತ್ತು ಈ ಜಾಗದೊಂದಿಗೆ ಬೇರೆ ಎಲ್ಲಿಲ್ಲಿ ಒತ್ತುವರಿಯಾಗಿದೆಯೋ ಅಲ್ಲಿಯೂ ತೆರವುಗೊಳಿಸುತ್ತಿದ್ದೇವೆ. ಕಾರ್ಪೋರೇಷನ್ ಕಡೆಯಿಂದ ಈಗಾಗಲೇ ನಾವು ಗುರುತಿಸಿದ್ದೇವೆ. ಯಾರೆಲ್ಲ ಒತ್ತುವರಿ ಮಾಡಿ ಶೆಡ್ಗಳನ್ನು ಹಾಕಿದ್ದಾರೋ ಅವರಿಗೆ ತೆರವು ಮಾಡಲು ಸ್ವಲ್ಪ ಕಾಲಾವಕಾಶ ಕೊಟ್ಟಿದ್ದೇವೆ. ಅವರು ತೆರವುಗೊಳಿಸದಿದ್ದರೆ ನಾವೇ ತೆಗೆಯಬೇಕಾಗುತ್ತೆ ಎಂದು ಮೌಖಿಕವಾಗಿ ವಾರ್ನಿಂಗ್ ಕೊಟ್ಟಿದ್ದೇವೆ. ಅವರೂ ತೆರವಿಗೆ ಸಹಕರಿಸಿದ್ದಾರೆ. ಕೋರ್ಟ್ ಆದೇಶ ಪಾಲನೆ ನಡೆಯುತ್ತಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ: ಸುವರ್ಣಸೌಧಕ್ಕೆ ಮುತ್ತಿಗೆ ಯತ್ನ, ವಿಜಯೇಂದ್ರ, ಸಿ.ಟಿ. ರವಿ ಪೊಲೀಸ್ ವಶಕ್ಕೆ

