ಕುಂದಾನಗರಿ ಪಾರ್ಕ್ಗಳಲ್ಲಿ ಅಧ್ವಾನ, ಮುರಿದು ಬಿದ್ದ ಜೋಕಾಲಿ, ಜಾನುವಾರು ಕಟ್ಟುವ ತಾಣ: ಶೌಚ, ಕುಡಿಯುವ ನೀರಿಗೆ ಪರದಾಟ
ಬೆಳಗಾವಿ ಮಹಾನಗರದಲ್ಲಿನ ಮಕ್ಕಳ ಪಾರ್ಕ್ಗಳ ಸ್ಥಿತಿಗತಿಗಳ ಬಗ್ಗೆ ಈಟಿವಿ ಭಾರತ್ ರಿಪೋರ್ಟರ್ ಸಿದ್ದನಗೌಡ ಎಸ್ ಪಾಟೀಲ್ ಅವರು ಸಿದ್ಧಪಡಿಸಿರುವ ವಿಶೇಷ ವರದಿ ಇಲ್ಲಿದೆ ನೋಡಿ.

Published : June 1, 2026 at 4:07 PM IST
ಬೆಳಗಾವಿ: ನಗರದ ಉದ್ಯಾನವನಗಳಲ್ಲಿ ಲಕ್ಷ ಲಕ್ಷ ಹಣ ವ್ಯಯಿಸಿ, ಮಕ್ಕಳಿಗೆ ಆಟ ಆಡಲು ವಿವಿಧ ಆಟಿಕೆ ಸಾಮಗ್ರಿಗಳನ್ನು ಸರ್ಕಾರ ಅಳವಡಿಸುತ್ತದೆ. ಆದರೆ, ಅವುಗಳ ನಿರ್ವಹಣೆ ಹೊಣೆ ಹೊತ್ತಿರುವ ಸ್ಥಳೀಯ ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿರುವುದು ಮಕ್ಕಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದರೆ, ಬೆಳಗಾವಿ ಮಹಾನಗರದಲ್ಲಿ ಮಕ್ಕಳ ಪಾರ್ಕ್ ಪರಿಸ್ಥಿತಿ ಹೇಗಿದೆ..? ಮಕ್ಕಳು, ಪಾಲಕರು, ಅಧಿಕಾರಿಗಳು ಏನಂತಾರೆ..? ಎಂಬ ಕುರಿತು ಈಟಿವಿ ಭಾರತದ ಪ್ರತ್ಯಕ್ಷ ವರದಿ ಇಲ್ಲಿದೆ.
ಮುರಿದು ಬಿದ್ದ ಜೋಕಾಲಿ, ಜಾರು ಬಂಡಿಯಲ್ಲಿ ರಂಧ್ರ, ನೆಲದ ಮೇಲೆ ಎದ್ದ ಕಲ್ಲುಗಳು, ಉದ್ಯಾನವನದಲ್ಲೇ ಕಟ್ಟಿರುವ ಜಾನುವಾರುಗಳು, ಬಾಗಿಲು ಮುಚ್ಚಿದ ಶೌಚಾಲಯಗಳು, ತುಕ್ಕು ಹಿಡಿದ ಡಸ್ಟ್ಬಿನ್ಗಳು, ಜೀವ ಕೈಯಲ್ಲಿ ಹಿಡಿದುಕೊಂಡೇ ಆಟದಲ್ಲಿ ತೊಡಗಿರುವ ಮಕ್ಕಳು.. ಇವು ಕುಂದಾನಗರಿ ಬೆಳಗಾವಿಯ ಬಹುತೇಕ ಉದ್ಯಾನವನಗಳಲ್ಲಿ ಕಂಡುಬಂದ ಅಧ್ವಾನಗಳು.
ಶ್ರೀನಗರ, ಹನುಮಾನ್ ನಗರ, ಶಿವಾಜಿ ಉದ್ಯಾನವನ, ರಾಮತೀರ್ಥನಗರ, ಬಾಕ್ಸೈಟ್ ರಸ್ತೆ, ಮಿಲಿಟರಿ ಮಹಾದೇವ ಮಂದಿರ ಆವರಣ ಸೇರಿ ನಗರದ ಬಹುತೇಕ ಉದ್ಯಾನವನಗಳಲ್ಲಿ ಇದೇ ಪರಿಸ್ಥಿತಿ ಇದೆ. ಜೋಕಾಲಿ, ಜಾರುಬಂಡಿ, ತೂಗುಯ್ಯಾಲೆ ಸೇರಿ ಮತ್ತಿತರ ಮಕ್ಕಳ ಆಟಿಕೆ ಪರಿಕರಗಳು ಹಾಳಾಗಿವೆ. ಇದಕ್ಕೆ ಕಾಲಕಾಲಕ್ಕೆ ನಿರ್ವಹಣೆ ಇಲ್ಲದಿರುವುದು ಮತ್ತು ಮಕ್ಕಳ ಆಟಿಕೆಗಳನ್ನು ದೊಡ್ಡವರು ಬಳಸುವುದೇ ಪ್ರಮುಖ ಕಾರಣ ಆಗಿದೆ. 4-10 ವರ್ಷದೊಳಗಿನ ಮಕ್ಕಳ ಸಾಮರ್ಥ್ಯ ಅನುಸಾರ ಆಟಿಕೆ ಸಲಕರಣೆಗಳನ್ನು ಅಳವಡಿಸುತ್ತಾರೆ. ಆದರೆ, ಅದಕ್ಕಿಂತ ದೊಡ್ಡವರು ಇಲ್ಲವೇ ಮಕ್ಕಳ ತಾಯಂದಿರು ಅವುಗಳನ್ನು ಬಳಸುತ್ತಿರುವುದು ಕೆಲವು ಉದ್ಯಾನಗಳಲ್ಲಿ ಸಾಮಾನ್ಯವಾಗಿತ್ತು.

ಉದ್ಯಾನವನಗಳನ್ನು ನಿರ್ವಹಿಸಲು ಬಹುತೇಕ ಕಡೆ ಸಿಬ್ಬಂದಿಗಳನ್ನು ನೇಮಿಸಿಲ್ಲ. ಹಾಗಾಗಿ, ಸಾರ್ವಜನಿಕರು ಬೇಕಾಬಿಟ್ಟಿ ಆಗಿ ಆಟಿಕೆ ವಸ್ತುಗಳನ್ನು ಬಳಸುತ್ತಿದ್ದಾರೆ. ಶ್ರೀನಗರ ಉದ್ಯಾನ, ಶಿವಾಜಿ ಉದ್ಯಾನ, ಬಸವೇಶ್ವರ ಉದ್ಯಾನವನ, ಅಂಬೇಡ್ಕರ್ ಉದ್ಯಾನವನ, ಬಾಬು ಜಗಜೀವನರಾಮ್ ಉದ್ಯಾನ ಸೇರಿ ಒಂದಿಷ್ಟು ಉದ್ಯಾನಗಳ ನಿರ್ವಹಣೆ ಚನ್ನಾಗಿದೆ. ಜನರು ಬೆಳಗ್ಗೆ ಮತ್ತು ಸಾಯಂಕಾಲ ವಾಕಿಂಗ್ ಮಾಡುತ್ತಾರೆ. ಆದರೆ, ಮಕ್ಕಳ ಆಟಿಕೆ ಪರಿಕರಗಳಿಗೆ ಗ್ರೀಸ್ ಹಚ್ಚುವುದು, ಬೋಲ್ಟ್ ಫಿಟ್ಟಿಂಗ್, ಕಳಚಿ ಬಿದ್ದ ಸರಪಣಿ ಜೋಡಿಸುವುದು ಸೇರಿ ಅವುಗಳ ದುರಸ್ತಿಗೆ ಗಮನ ಕೊಟ್ಟಿಲ್ಲ. ಮುರಿದು ಬಿದ್ದ ಪರಿಕರಗಳು ಅಲ್ಲಿಯೇ ತುಕ್ಕು ಹಿಡಿಯುತ್ತಿವೆ. ಅದೆಷ್ಟೋ ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಗರದಲ್ಲಿ ಒಟ್ಟು 148 ಉದ್ಯಾನವನಗಳಿವೆ. ಅದರಲ್ಲಿ ಸುಮಾರು 50 ಕಡೆ ಆಟಿಕೆ ವಸ್ತುಗಳನ್ನು ಅಳವಡಿಸಲಾಗಿದೆ. ಸಾರಥಿ ಕಾಲೋನಿ, ಮರಾಠಾ ಕಾಲೋನಿ, ಕುಮಾರಸ್ವಾಮಿ ಲೇಔಟ್, ಶಾಂತಿ ಕಾಲೋನಿ, ಸರಾಫ್ ಕಾಲೋನಿ ಸೇರಿ ಒಂದಿಷ್ಟು ಕಡೆಯ ಉದ್ಯಾನಗಳಲ್ಲಿ ಮಕ್ಕಳ ಆಟಿಕೆಗಳು ಸುವ್ಯವಸ್ಥೆಯಲ್ಲಿವೆ. ಇನ್ನುಳಿದಂತೆ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಹಾಳಾಗಿರುವುದು ಕಂಡು ಬಂದಿದೆ.

ಶೌಚಕ್ಕೆ ಪರದಾಟ, ಕುಡಿಯುವ ನೀರಿಲ್ಲ: ಬಹುತೇಕ ಉದ್ಯಾನಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಶೌಚಾಲಯ ಇರುವ ಕಡೆ ಸ್ವಚ್ಛತೆ ಮತ್ತು ಸಮರ್ಪಕ ನೀರಿನ ಪೂರೈಕೆ ಇಲ್ಲ. ಹಾಗಾಗಿ, ಮಕ್ಕಳು-ಮಹಿಳೆಯರು-ವೃದ್ಧರು ಸೇರಿ ಎಲ್ಲರೂ ಶೌಚಕ್ಕೆ ಪರದಾಡಬೇಕಿದೆ. ಶ್ರೀನಗರ ಉದ್ಯಾನದಲ್ಲಿ ಹೊಸದಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅವುಗಳಿಗೆ ಬೀಗ ಜಡಿದಿದ್ದು, ಸಾರ್ವಜನಿಕರ ಸೇವೆಗೆ ಕೊಡುತ್ತಿಲ್ಲ. ಇನ್ನು ಕುಡಿಯುವ ನೀರಿನ ವ್ಯವಸ್ಥೆ ಅಂತೂ ಯಾವ ಉದ್ಯಾನವನಗಳಲ್ಲೂ ಇಲ್ಲ. ಮನೆಯಿಂದಲೇ ಜನರು ನೀರು ತುಂಬಿಕೊಂಡು ಬರಬೇಕು. ಇಲ್ಲವೇ ಹೊರಗಡೆ ದುಡ್ಡು ಕೊಟ್ಟು ಖರೀದಿಸುವ ಅನಿವಾರ್ಯತೆ ಇದೆ.

ಉದ್ಯಾನವನಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ: ಉದ್ಯಾನವನಗಳ ನಿರ್ವಹಣೆಗೆ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. 100 ಸಿಬ್ಬಂದಿಗಳು ಉದ್ಯಾನ ಸ್ವಚ್ಛಗೊಳಿಸುವ ಜೊತೆಗೆ ನಗರದ ವೃತ್ತಗಳು, ರಸ್ತೆ ವಿಭಜಕಗಳನ್ನು ಇವರೇ ನೋಡಿಕೊಳ್ಳಬೇಕಿದೆ. ಇದರಿಂದಾಗಿ ಹನುಮಾನ ನಗರ ಸೇರಿ ಮತ್ತಿತರ ಉದ್ಯಾನವನಗಳಲ್ಲಿ ಎಲ್ಲಿ ನೋಡಿದರೂ ಕಸವೇ ಕಾಣಿಸುತ್ತಿದೆ. ಆಟಿಕೆ ಪರಿಕರಗಳ ಕೆಳಗೆ ಕಸ ಬೆಳೆದಿದೆ. ಇನ್ನು ಮುರಿದು ಬಿದ್ದ ಸಾಮಗ್ರಿಗಳ ದುರಸ್ಥಿತಿ ಅಥವಾ ಹೊಸದಾಗಿ ಅಳವಡಿಸುವ ಗೋಜಿಗೆ ಹೋಗದಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಬಿದ್ದು ಗಾಯಗೊಂಡರೆ ಕೇಳವರಿಲ್ಲ: ಇಲ್ಲಿನ ಮಿಲಿಟರಿ ಮಹಾದೇವ ಮಂದಿರದ ಆವರಣದಲ್ಲಿರುವ ಉದ್ಯಾನವನವನ್ನು ಸೈನಿಕರೇ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿ ಏನಾದರೂ ಮಕ್ಕಳು ಆಟ ಆಡುವಾಗ ಬಿದ್ದು ಗಾಯಗೊಂಡರೆ ತಕ್ಷಣ ಅವರು ಓಡಿ ಬಂದು ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ. ಆದರೆ, ಬೇರೆ ಉದ್ಯಾನಗಳಲ್ಲಿ ಈ ವ್ಯವಸ್ಥೆ ಇಲ್ಲ. ಕನಿಷ್ಠ ಪಕ್ಷ ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಡೆಟಾಲ್ ಸೇರಿ ಮತ್ತಿತರ ಔಷಧಿಗಳನ್ನು ವಿತರಿಸುವ ವ್ಯವಸ್ಥೆ ಆದರೂ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಉದ್ಯಾನವನದಲ್ಲಿ ಜಾನುವಾರು: ಹನುಮಾನ್ ನಗರ ಉದ್ಯಾನವನದಲ್ಲಿ ಯಾರೋ ಒಬ್ಬ ರೈತರು ತಮ್ಮ ಜಾನುವಾರು ಕಟ್ಟಿದ್ದಾರೆ. ಇದರಿಂದ ಇದು ಮನುಷ್ಯರಿಗಾಗಿ ಇದೆಯೋ ಅಥವಾ ಪ್ರಾಣಿಗಳಿಗೋ ಎಂಬ ಪ್ರಶ್ನೆ ಮೂಡಿದೆ. ಹೀಗೆ ಮಕ್ಕಳು ಆಟ ಆಡಲು ಬಂದಾಗ ಹಗ್ಗ ತುಂಡರಿಸಿ, ಜಾನುವಾರು ದಾಳಿ ಮಾಡಿ, ಮಕ್ಕಳ ಜೀವಕ್ಕೆ ಏನಾದರೂ ಹಾನಿ ಆದರೆ ಆಗ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ.? ಅಧಿಕಾರಿಗಳು ಉದ್ಯಾನಕ್ಕೆ ಭೇಟಿ ನೀಡಿ, ಪರಿಶೀಲನೆ ನೀಡದಿರುವುದೇ ಈ ಎಲ್ಲಾ ಅವ್ಯವಸ್ಥೆಗೆ ಪ್ರಮುಖ ಕಾರಣ ಎಂಬುದು ನಾಗರಿಕರ ದೂರು.

ವಿದ್ಯಾರ್ಥಿ ಚೇತನ ಛಲವಾದಿ ಈಟಿವಿ ಭಾರತ ಜೊತೆಗೆ ಮಾತನಾಡಿ, 'ಮುರಿದಿರುವ ಜೋಕಾಲಿ, ಜಾರುಬಂಡಿ ಸರಿಪಡಿಸಬೇಕು. ಮತ್ತಷ್ಟು ಆಟಿಕೆ ವಸ್ತುಗಳನ್ನು ಅಳವಡಿಸಬೇಕು. ಕುಡಿಯಲು ಸ್ವಚ್ಛ ನೀರು ಕೊಡಬೇಕು. ದೊಡ್ಡವರು ಆಡುವುದನ್ನು ತಡೆಯಬೇಕು. ಮಿಲಿಟರಿ ಮಹಾದೇವ ಮಂದಿರ ಉದ್ಯಾನವನದಲ್ಲಿ ಆಡುವಾಗ ಬಿದ್ದು ಗಾಯಗೊಂಡರೆ ಮಿಲಿಟರಿ ಅಂಕಲ್ ಬಂದು ಡೆಟಾಲ್ ಹಚ್ಚುತ್ತಾರೆ. ಇದೇ ರೀತಿ ಎಲ್ಲಾ ಉದ್ಯಾನವನಗಳಲ್ಲೂ ವ್ಯವಸ್ಥೆ ಮಾಡಬೇಕು' ಎಂದು ಹೇಳಿದರು.

ಗೃಹಿಣಿ ಅರ್ಪಿತಾ ಲೋಕಾಪುರ ಮಾತನಾಡಿ, 'ಶ್ರೀನಗರ ಉದ್ಯಾನದಲ್ಲಿ ಜೋಕಾಲಿ, ತೂಗೂಯ್ಯಾಲೆ ಸೇರಿ ಒಂದಿಷ್ಟು ಸಲಕರಣೆಗಳು ಮುರಿದು ಬಿದ್ದಿವೆ. ನೆಲದಲ್ಲಿ ಕಲ್ಲು ಎದ್ದಿವೆ. ಮಕ್ಕಳು ಆಟ ಆಡುವಾಗ ಆಯ ತಪ್ಪಿ ಬಿದ್ದರೆ ಪೆಟ್ಟಾಗುವ ಸಾಧ್ಯತೆ ಇದೆ. ಶೌಚಾಲಯ ಓಪನ್ ಮಾಡಿ ಅಂತಾ ಕೇಳಿದರೆ, ಇಲ್ಲಿನ ಸಿಬ್ಬಂದಿ ಅದು ಇನ್ನೂ ಓಪನಿಂಗ್ ಆಗಿಲ್ಲ. ನೀರಿನ ವ್ಯವಸ್ಥೆ ಇಲ್ಲ ಎನ್ನುತ್ತಾರೆ. ಉದ್ಯಾನವು ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಸ್ವಚ್ಛತೆಯನ್ನೂ ಚೆನ್ನಾಗಿ ಕಾಪಾಡಿದ್ದಾರೆ. ಆದರೆ, ಮಕ್ಕಳ ಆಟಿಕೆಗಳ ನಿರ್ವಹಣೆ ಬಗ್ಗೆ ಯಾಕೋ ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿವಾಜಿ ಉದ್ಯಾನವನದಲ್ಲಿ ಆಟ ಆಡುತ್ತಿದ್ದ ಸೋನಾಕ್ಷಿ ಎಂಬ ಬಾಲಕಿ, 'ಇಲ್ಲಿ ಜಾರು ಬಂಡಿ ಮುರಿದಿದೆ. ಆದರೂ ನಾವು ಅದರಲ್ಲೆ ಆಡುತ್ತೇವೆ. ಒಂದು ವೇಳೆ ಅವಸರದಲ್ಲಿ ನಮ್ಮ ಕಾಲು ಆ ಗುಂಡಿಯಲ್ಲಿ ಸಿಕ್ಕಿಕೊಂಡರೆ ಪೆಟ್ಟು ಬೀಳುತ್ತೆ. ಶೌಚಾಲಯದಲ್ಲಿ ನೀರಿಲ್ಲ. ದಯವಿಟ್ಟು ಈ ಎಲ್ಲಾ ಸಮಸ್ಯೆ ಪರಿಹರಿಸಿ' ಅಂತಾ ಕೇಳಿಕೊಂಡಳು.

'ಹನುಮಾನ ನಗರ ಉದ್ಯಾನವನದಲ್ಲಿ ಒಂದೆರಡು ಬಿಟ್ಟರೆ, ಇನ್ನುಳಿದ ಎಲ್ಲಾ ಆಟಿಕೆ ವಸ್ತುಗಳು ಮುರಿದು ಬಿದ್ದಿವೆ. ಉದ್ಯಾನದ ಸುತ್ತಲೂ ಸಾಕಷ್ಟು ಪ್ರಮಾಣದಲ್ಲಿ ಕಸ ಬೆಳೆದಿದೆ. ಹೀಗಾಗಿ, ನಾವು ಅಲ್ಲಿ ಆಡುವುದಕ್ಕೆ ಹೋಗುವುದನ್ನೇ ಬಿಟ್ಟಿದ್ದೇವೆ. ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣ ಈ ಕಡೆ ಗಮನಹರಿಸಿ ಉದ್ಯಾನವನ್ನು ಅಭಿವೃದ್ಧಿ ಪಡಿಸಬೇಕು' ಅಂತಾ ಬಾಲಕ ಯಲ್ಲಾಲಿಂಗ ಸಾಯಣ್ಣವರ ಆಗ್ರಹ.

'ಹನುಮಾನ ನಗರದಲ್ಲಿ ಉದ್ಯಾನವನ ನಿರ್ಮಾಣ ಆದಾಗ ನಾವೆಲ್ಲಾ ಬಹಳಷ್ಟು ಖುಷಿ ಪಟ್ಟಿದ್ದೆವು. ಆದರೆ, ಈಗ ನಿರ್ವಹಣೆ ಕೊರತೆಯಿಂದ ಉದ್ಯಾನವು ಸಂಪೂರ್ಣ ಹಾಳಾಗಿದೆ. ಪಾಲಿಕೆ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ, ಇದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಇಲ್ಲಿನ ಸಮಸ್ಯೆ ನಿವಾರಿಸಿ, ಮೊದಲಿನ ರೀತಿ ಉದ್ಯಾನ ಮಾಡಿಕೊಡಬೇಕು' ಎಂದು ನಾಗರಿಕ ಮಂಜುನಾಥ ಹಿರೇಮಠ ಅಭಿಪ್ರಾಯ ಪಟ್ಟರು.
ಈಟಿವಿ ಭಾರತ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರನ್ನು ಸಂಪರ್ಕಿಸಿದಾಗ, 'ಎಲ್ಲೆಲ್ಲಿ ಮಕ್ಕಳ ಆಟಿಕೆಗಳು ಹಾಳಾಗಿವೆ ಎಂಬ ಕುರಿತು ವರದಿ ತರಿಸಿಕೊಳ್ಳುತ್ತೇನೆ. ಉದ್ಯಾನವನಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗೆ ಶೀಘ್ರವೇ ಕ್ರಮ ವಹಿಸಲಾಗುವುದು. ಅಮೃತ ನಗರ ಯೋಜನೆಯಡಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಒಟ್ಟಾರೆ ಮಕ್ಕಳಿಗೆ ಆಟ ಆಡಲು ಒಳ್ಳೆಯ ವಾತಾವರಣ ನಿರ್ಮಿಸಿ ಕೊಡಲಾಗುವುದು. ಸಾರ್ವಜನಿಕರು ಕೂಡ ಸ್ವಚ್ಛತೆ ಕಾಪಾಡಬೇಕು. ಜೊತೆಗೆ ಮಕ್ಕಳ ಆಟಿಕೆಗಳನ್ನು ದೊಡ್ಡವರು ಬಳಸಬಾರದು' ಎಂದರು.
ಇದನ್ನೂ ಓದಿ: ಕಣ್ಮರೆಯಾಗುತ್ತಿರುವ ಆಟದ ಮೈದಾನಗಳು ; ಪುಣೆಯಲ್ಲಿನ ಮಕ್ಕಳಿಗೆ ಪಾರ್ಕ್ಗಳೇ ಮನೋರ೦ಜನೆಯ ತಾಣ
ಇದನ್ನೂ ಓದಿ: ಕಾಂಕ್ರೀಟ್ ಕಾಡಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಉದ್ಯಾನವನಗಳು ಮಕ್ಕಳಿಗೆ ಎಷ್ಟು ಸುರಕ್ಷಿತ?
ಇದನ್ನೂ ಓದಿ: ಅಪಾಯದಲ್ಲಿವೆ ಪಾರ್ಕ್ಗಳು : ದೆಹಲಿಯ ಉದ್ಯಾನವನಗಳಲ್ಲಿ ಬಾಲ್ಯವನ್ನು ಉಳಿಸುವ ಅಭಿಯಾನ

