ETV Bharat / state

ಸಾಫ್ಟ್‌ವೇರ್ ಉದ್ಯೋಗಿ ಯುವತಿ ಆತ್ಮಹತ್ಯೆ: ಜ್ಯೋತಿಷ್ಯಕ್ಕೆ ಬೆದರಿ ನಿರ್ಧಾರದ ಶಂಕೆ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

software-employee-died-in-bengaluru
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : March 1, 2026 at 2:45 PM IST

2 Min Read
Choose ETV Bharat

ಬೆಂಗಳೂರು: ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಬಗಲಗುಂಟೆ ಠಾಣೆ ವ್ಯಾಪ್ತಿಯ ಎಂಇಐ ಬಡಾವಣೆಯಲ್ಲಿ ಶನಿವಾರ ನಡೆದಿದೆ. ವಿದ್ಯಾಜ್ಯೋತಿ (29) ಮೃತ ಯುವತಿ. ಇವರ ತಂದೆ ಉಮೇಶ್ ನೀಡಿದ ದೂರಿನನ್ವಯ ಬಾಗಲಗುಂಟೆ ಠಾಣೆ ಪೊಲೀಸರು ಯುಡಿಆರ್ (ಅಸಹಜ ಸಾವು ಪ್ರಕರಣ) ದಾಖಲಿಸಿಕೊಂಡಿದ್ದಾರೆ.

ಯುವತಿ ಜ್ಯೋತಿಷ್ಯ ಕೇಳಿದ್ದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಕೋರಮಂಗಲದ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ವಿದ್ಯಾ, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಪೋಷಕರನ್ನು ಒಪ್ಪಿಸಿದ್ದ ವಿದ್ಯಾ, ಇತ್ತೀಚಿಗೆ ಜ್ಯೋತಿಷಿಯೊಬ್ಬರ ಬಳಿ ಭವಿಷ್ಯ ಕೇಳಿದ್ದರಂತೆ. ಅದಕ್ಕೆ ಜ್ಯೋತಿಶಿ, ಮದುವೆಯಾದ 2 ವರ್ಷ ಸಂಸಾರ ಚೆನ್ನಾಗಿರುತ್ತದೆ. ನಂತರ ತೊಂದರೆಯಾಗಲಿದೆ. ಅದಕ್ಕಾಗಿ 9 ದಿನ ಪೂಜೆ ಮಾಡಿಸಬೇಕು ಎಂದು ಹೇಳಿದ್ದರು. ಬಳಿಕ ಮನೆಯವರು ಸೇರಿ ಮಾರಮ್ಮ ದೇವಿ ಪೂಜೆ ಮಾಡಿದ್ದರು. ಕೊನೆ ದಿನ ಶುಕ್ರವಾರ ಪೂಜೆ ಮಾಡಿಸಿ ದೇವಿಗೆ ತಾಳಿ ಸಮರ್ಪಿಸಬೇಕಾಗಿತ್ತು. ಪೂಜೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮನೆಯ ಕೊಠಡಿಗೆ ತೆರಳಿದ್ದ ವಿದ್ಯಾ, ರಾತ್ರಿಯಾದರೂ ಬಾಗಿಲು ತೆರೆದಿರಲಿಲ್ಲ. ಪೂಜೆಗೆ ತಡವಾಗುತ್ತಿದೆ ಎಂದು ಮಗಳನ್ನ‌ು ಕರೆತರಲು ತಾಯಿ ಹೋದಾಗ ಬಾಗಿಲು ಬಡಿದರೂ ತೆರೆದಿರಲಿಲ್ಲ. ಕಿಟಕಿಯಿಂದ ನೋಡಿದಾಗ ಆಕೆ ಆತ್ಮಹತ್ಯೆಗೆ ಶರಣಾಗಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಗುಂಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಕೊಂದು ಪತಿ ಆತ್ಮಹತ್ಯೆ: ಪತಿ ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೂರ್ಯನಗರ ಠಾಣೆ ವ್ಯಾಪ್ತಿಯ ಆನೇಕಲ್​ನ ಹೀಲಲಿಗೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಡಿಶಾದ ದೀಪಾಂತ ಸಬರ (31) ಮತ್ತು ಪತ್ನಿ ಮಂಜುಳಾ ಸಬರ (27) ಮೃತರು. 20 ದಿನಗಳ ಹಿಂದಷ್ಟೇ ದಂಪತಿ ಬಾಡಿಗೆ ಮನೆಗೆ ಬಂದಿದ್ದರು. ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ನಡುವೆ ಜಗಳ ನಡೆದಿದ್ದು, ಕೋಪದಲ್ಲಿ ಪತ್ನಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮನೆ ಮಾಲೀಕ ಶಿವಕುಮಾರ್ ಇಪ್ಪತ್ತು ದಿನಗಳ ಹಿಂದೆ ದಂಪತಿಗೆ ಮನೆ ಕೊಟ್ಟಿದ್ದರು. ಗುರುವಾರ ರಾತ್ರಿ ಮನೆ ಮಾಲೀಕರ ತಾಯಿ ಚೌಡಮ್ಮ ಮನೆ ಬಳಿ ನೋಡಿದಾಗ ಮಂಚದ ಮೇಲೆ ಮಹಿಳೆಯ ಶವ ಕಾಣಿಸಿದೆ. ಕೂಡಲೇ ಸೂರ್ಯ ನಗರ ಪೊಲೀಸರಿಗೆ ಶಿವಕುಮಾ‌ರ್ ಮಾಹಿತಿ ನೀಡಿದ್ದಾರೆ. ಪತ್ನಿಯ ಶವದ ಮುಂದೆ ಪತಿ ಅಳುತ್ತಲೇ ಸೆಲ್ಫಿ ವಿಡಿಯೋ ಮಾಡಿ ಆ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರಿಗೆ ಸಿಕ್ಕ ಮೊಬೈಲ್​ನಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಒಡಿಶಾ ದಂಪತಿ ಸಾವು: ಪತ್ನಿ ಕೊಂದು ಪತಿ ಆತ್ಮಹತ್ಯೆ