ETV Bharat / state

ರಾಜ್ಯದಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ವಿರುದ್ಧ ಬೃಹತ್ ಕಾರ್ಯಾಚರಣೆ: ಒಟ್ಟು 5,64,992 ಕೆಜಿ ಅಕ್ಕಿ ವಶಕ್ಕೆ

ರಾಜ್ಯದಲ್ಲಿ ಆಹಾರ ಇಲಾಖೆ ಮಿಂಚಿನ ಕಾರ್ಯಾಚರಣೆ ಭಾರಿ ಅಕ್ರಮವನ್ನು ಪತ್ತೆ ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ ಪಡಿತರ ಅಕ್ರಮ ಸಾಗಣೆ ಮತ್ತು ಮಾರಾಟ ಪತ್ತೆಯಾಗಿದ್ದು, 5 ಲಕ್ಷಕ್ಕೂ ಹೆಚ್ಚು ಕೆಜಿ ಅಕ್ಕಿ ಮತ್ತು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

File Photo
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : October 10, 2026 at 9:31 AM IST

2 Min Read
Choose ETV Bharat

ಬೆಂಗಳೂರು: ರಾಜ್ಯದಲ್ಲಿ ಬಡವರಿಗಾಗಿ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒಟ್ಟು 5,64,992 ಕೆಜಿ ಅಕ್ರಮ ಪಡಿತರ ಅಕ್ಕಿ ಹಾಗೂ ಕಳ್ಳಸಾಗಣೆಗೆ ಬಳಸುತ್ತಿದ್ದ 24 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಮೂರು ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ತಪಾಸಣೆ ಮತ್ತು ದಾಳಿಗಳ ವೇಳೆ ಅಗತ್ಯ ವಸ್ತುಗಳ ಕಾಯ್ದೆಯಡಿ ಒಟ್ಟು 5,64,992 ಕೆಜಿ ಅಕ್ರಮ ಪಡಿತರ ಅಕ್ಕಿ ಹಾಗೂ ಕಳ್ಳಸಾಗಣೆಗೆ ಬಳಸುತ್ತಿದ್ದ 24 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಪಡಿತರ ಅಕ್ಕಿಯ ಅಂದಾಜು ಮೌಲ್ಯ ರೂ. 1,34,43,033 ಹಾಗೂ ವಾಹನಗಳ ಅಂದಾಜು ಮೌಲ್ಯ ರೂ. 3,41,50,000 ಆಗಿದೆ. ಹೀಗೆ ಜಪ್ತಿ ಮಾಡಲಾದ ಒಟ್ಟು ಅಕ್ಕಿ ಮತ್ತು ವಾಹನಗಳ ಮೌಲ್ಯ ರೂ. 4,75,93,033 ಆಗಿದೆ. ಇಲಾಖೆಯು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 9 ಜನರ ವಿರುದ್ಧ ದೂರು ದಾಖಲಿಸಿದೆ.

ವಿವಿಧ ಜಿಲ್ಲೆಗಳಲ್ಲಿ ನಡೆದ ದಾಳಿಗಳ ವಿವರ:

ಬೆಳಗಾವಿ ಜಿಲ್ಲೆ: ಬೆಳಗಾವಿ ಜಿಲ್ಲಾ ಆಹಾರ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಣ್ಣದ ಪ್ಯಾಕೆಟ್‌ಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ 71,800 ಕೆಜಿ ಅಕ್ಕಿ ಮತ್ತು 3 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಾಲಕರಾದ ರತನ್ ಬಬನ್ ಸದಾನಂದೆ, ವಿಜಯನಾರಾಯಣ್ ಭೋಸ್ಥೆ ಹಾಗೂ ಮಹಮ್ಮದ್ ರಫೀಕ್ ಅತ್ತಾರ್ ಎಂಬುವರ ವಿರುದ್ಧ ನಿಪ್ಪಾಣಿ ಗ್ರಾಮೀಣ ಮತ್ತು ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯಪುರ: ಜಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 35,392 ಕೆಜಿ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅತ್ತಿಬೆಲೆ ಚೆಕ್ ಪೋಸ್ಟ್ (ಬೆಂಗಳೂರು ಗ್ರಾಮಾಂತರ): ತಮಿಳುನಾಡಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 35,000 ಕೆ.ಜಿ. ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಮಂಡ್ಯದ ಶ್ರೀ ಅನ್ನಪೂರ್ಣೇಶ್ವರಿ ಎಂಟರ್‌ಪ್ರೈಸಸ್‌ ಮಾಲೀಕರು, ಮಧ್ಯಪ್ರದೇಶದ ಸೇಲರ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಮಾಲೀಕರು ಹಾಗೂ ಲಾರಿ ಚಾಲಕರು ಸೇರಿದಂತೆ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಲೋಕೂರು ಗ್ರಾಮ (ಕಾಗವಾಡ): ಲೋಕೂರು ಗ್ರಾಮದ ಶ್ರೀ ಬನಶಂಕರಿ ಆಗ್ರೋ ಪ್ರೊಸೆಸಿಂಗ್ ಅಕ್ಕಿ ಗಿರಣಿ ಮೇಲೆ ಕೃಷಿ ಮಾರಾಟ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ 4,22,800 ಕೆಜಿ ಪಡಿತರ ಅಕ್ಕಿ ಹಾಗೂ 19 ಲಾರಿಗಳನ್ನು ವಶಕ್ಕೆ ಪಡೆದು, ಗೋದಾಮನ್ನು ಸೀಜ್ ಮಾಡಲಾಗಿದೆ.

ಕರ್ತವ್ಯಲೋಪ, ಇಬ್ಬರು ಅಧಿಕಾರಿಗಳ ಅಮಾನತು: ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ರವಿ ಟ್ರೇಡರ್ಸ್‌ಗೆ ಸೇರಿದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಮತ್ತು ಲಾರಿಯನ್ನು ಯಾವುದೇ ಕ್ರಮ ಜರುಗಿಸದೆ ಬಿಡುಗಡೆ ಮಾಡಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಹುಕ್ಕೇರಿ ತಾಲೂಕಿನ ಆಹಾರ ಇಲಾಖೆ ನಿರೀಕ್ಷಕ ಪ್ರವೀಣ ಸಾಗರ ಹಾಗೂ ಶಿರಸ್ತೇದಾರ ಎಲ್.ಬಿ. ಢಾಂಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆಹಾರ ಇಲಾಖೆ ಆಯುಕ್ತರಾದ ಬಿ. ಪೂರ್ಣಿಮಾ ಅವರು ಆದೇಶ ಹೊರಡಿಸಿದ್ದಾರೆ.

ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ: ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಆಹಾರ ಇಲಾಖೆ, ವಾಣಿಜ್ಯ ತೆರಿಗೆ, ಕೃಷಿ ಮಾರಾಟ (APMC) ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಕಾರ್ಯವನ್ನು ಸಚಿವ ರಿಜ್ವಾನ್ ಅರ್ಷದ್ ಅವರು ಶ್ಲಾಘಿಸಿದ್ದಾರೆ. ಬಡವರ ಅಕ್ಕಿಯನ್ನು ಕಳ್ಳಸಾಗಣೆ ಮಾಡಿ ಲಾಭ ಮಾಡಿಕೊಳ್ಳುವುದು ಅತ್ಯಂತ ಹೀನ ಕೃತ್ಯವಾಗಿದ್ದು, ಅಕ್ರಮದಲ್ಲಿ ತೊಡಗುವವರ ಹಾಗೂ ಅವರಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಸೇರಿ 9 ಕೈದಿಗಳು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್‌