ಮಳೆ ಕೊರತೆ: ಹಾವೇರಿ ಜಿಲ್ಲೆಯಲ್ಲಿ ಜು.7 ರಿಂದ ಮೂರು ದಿನ ಮೋಡ ಬಿತ್ತನೆ
ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾಲೀಕತ್ವದ ವಿಶೇಷ ವಿಮಾನದಿಂದ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತದೆ.

Published : July 4, 2026 at 12:16 PM IST
ಹಾವೇರಿ: ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆ ಆರು ಶಾಸಕರು ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅಂತೆಯೇ ಜುಲೈ 7 ರಿಂದ ಜಿಲ್ಲೆಯಾದ್ಯಂತ 3 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
ಹಾವೇರಿ ಜಿಲ್ಲಾ ಪಂಚಾಯತ್ನಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಈ ಬಗ್ಗೆ ಚರ್ಚಿಸಿ ಮೋಡ ಬಿತ್ತನೆ ನಿರ್ಧಾರಕ್ಕೆ ಬಂದಿದ್ದಾರೆ. ಜುಲೈ 7ರಿಂದ ಜಿಲ್ಲೆಯಾದ್ಯಂತ 3 ದಿನ ಮೋಡ ಬಿತ್ತನೆ ಮಾಡಲಾಗುತ್ತದೆ. ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಲು ಹಾವೇರಿ ಜಿಲ್ಲೆಯ ಶಾಸಕರು ನಿರ್ಧರಿಸಿದ್ದಾರೆ. ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾಲೀಕತ್ವದ ವಿಶೇಷ ವಿಮಾನದಿಂದ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತದೆ.
ಈ ವೇಳೆ ಮಾತನಾಡಿದ ಶಾಸಕ ಪ್ರಕಾಶ್ ಕೋಳಿವಾಡ, ರೈತರಿಗೆ ಮಳೆ ಕೊರತೆಯಿಂದ ಸಮಸ್ಯೆ ಆಗಿದೆ. ಹೀಗಾಗಿ ಮೋಡ ಬಿತ್ತನೆ ಮಾಡಲು ನಿರ್ಧರಿಸಿದ್ದೇವೆ. ಮಂಗಳವಾರದಿಂದ ಮೋಡ ಬಿತ್ತನೆ ಮಾಡುತ್ತೇವೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ. ಮೋಡ ಬಿತ್ತನೆಗೆ ಕೇಂದ್ರದ ವಿಜ್ಞಾನಿಗಳು ಹಸಿರು ನಿಶಾನೆ ತೋರಿದ್ದಾರೆ. ಗಂಟೆಗೆ 15 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ರುದ್ರಪ್ಪ ಲಮಾಣಿ, ಬ್ಯಾಡಗಿ ಕ್ಷೇತ್ರದ ಬಸವರಾಜ್ ಶಿವಣ್ಣನವರ್, ಹಾನಗಲ್ ಕ್ಷೇತ್ರದ ಶ್ರೀನಿವಾಸ ಮಾನೆ, ಸವಣೂರು ಶಿಗ್ಗಾಂವ್ ಕ್ಷೇತ್ರದ ಯಾಸೀರಖಾನ್ ಪಠಾಣ್, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ರಾಣೆಬೆನ್ನೂರು ಶಾಸಕ ಶಾಸಕ ಪ್ರಕಾಶ್ ಕೋಳಿವಾಡ್ ಉಪಸ್ಥಿತರಿದ್ದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಬಾರದ ಮಳೆ; ಕಪ್ಪೆಗಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

