ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ: ಶಿವಮೊಗ್ಗದಲ್ಲಿ ನಾಟಿಕೋಳಿ ಬಿರಿಯಾನಿ, ಮೈಸೂರು, ದಾವಣಗೆರೆಯಲ್ಲಿ ಸಿಹಿ ಸಂಚಿ ಸಂಭ್ರಮಿಸಿದ ಅಭಿಮಾನಿಗಳು
ಸಿದ್ದರಾಮಯ್ಯನವರು ರಾಜ್ಯ ಮುಖ್ಯಮಂತ್ರಿಯಾಗಿ ದಿ.ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಹಿನ್ನೆಲೆ ಶಿವಮೊಗ್ಗದಲ್ಲಿಂದು ಅವರ ಅಭಿಮಾನಿಗಳು, ಬೆಂಬಲಿಗರೆಲ್ಲರೂ ಸೇರಿಕೊಂಡು ನಾಟಿಕೋಳಿ ಬಿರಿಯಾನಿ ಮಾಡಿದ್ದರೆ, ಮೈಸೂರು, ದಾವಣಗೆರೆ ಸೇರಿದಂತೆ ಹಲವೆಡೆ ತರಹೇವಾರಿ ಕಾರ್ಯಕ್ರಮ ಏರ್ಪಡಿಸಿದ್ದರು.

Published : January 6, 2026 at 5:33 PM IST
ಶಿವಮೊಗ್ಗ/ಮೈಸೂರು/ದಾವಣಗೆರೆ: ರಾಜ್ಯದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇರುವ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಇಂದು ಸಾಲು ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಈ ಸಂತಸಕ್ಕೆ ಶಿವಮೊಗ್ಗ ಕೂಡ ಸಾಕ್ಷಿಯಾಯಿತು. ಶಿವಮೊಗ್ಗದಲ್ಲಿಂದು ಸಿದ್ದರಾಮಯ್ಯ ಅವರ ಅಭಿಮಾನಿಗಳು, ಬೆಂಬಲಿಗರೆಲ್ಲರೂ ಸೇರಿಕೊಂಡು ನಾಟಿಕೋಳಿ ಬಿರಿಯಾನಿ ಮಾಡಿದ್ದರೆ, ಮೈಸೂರು, ದಾವಣಗೆರೆ ಸೇರಿದಂತೆ ಹಲವೆಡೆ ತರಹೇವಾರಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.

ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 30 ಅಡಿ ಎತ್ತರದ ಕಟೌಟ್ಗೆ ಪುಷ್ಪವನ್ನು ಅರ್ಪಿಸಿದ ಅಭಿಮಾನಿಗಳು, ನಂತರ ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.
ಈ ಸಂತಸಕ್ಕೆ ಮಾಡಿದ್ದ ನಾಟಿಕೋಳಿ ಬಿರಿಯಾನಿಯನ್ನು ಎಲ್ಲರಿಗೂ ಬಾಕ್ಸ್ ಮಾಡಿ ಹಂಚಲಾಯಿತು. ಈ ವೇಳೆ, ಬಿರಿಯಾನಿ ಬಾಕ್ಸ್ ಪಡೆಯಲು ಜನ ಮುಗಿ ಬಿದ್ದರು. ಸುಮಾರು ಒಂದು ಸಾವಿರಕ್ಕೂ ಅಧಿಕ ಬಿರಿಯಾನಿ ಬಾಕ್ಸ್ ಹಂಚಲಾಯಿತು.
ಕಾಂಗ್ರೆಸ್ ಮುಖಂಡರ ಹರ್ಷ: ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಸಿದ್ದರಾಮಯ್ಯ ಅವರು ದಿ.ದೇವರಾಜ ಅರಸು ನಂತರ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಅವರ ಅಭಿಮಾನಿಗಳು ನಾಟಿಕೋಳಿ ಬಿರಿಯಾನಿ ಹಂಚುತ್ತಿದ್ದಾರೆ. ಅವರ ಅಭಿಮಾನಿಗಳೆಲ್ಲರೂ ಖುಷಿ ಹಾಗೂ ಸಂತೋಷದಿಂದ ಬಿರಿಯಾನಿಯನ್ನು ಸವಿಯುತ್ತಿದ್ದಾರೆ ಎಂದರು.

ಸಿಎಂ ತವರು ಮೈಸೂರಿನಲ್ಲೂ ಸಂಭ್ರಮ: ಸಿಎಂ ತವರೂರು ಮೈಸೂರಿನಲ್ಲೂ ಈ ಸಂಭ್ರಮ ಕಳೆಗಟ್ಟಿತ್ತು. ಅತಿ ಹೆಚ್ಚು ಅವಧಿಯ ಸಿಎಂ ಎಂಬ ದಾಖಲೆ ಬರೆದ ಸಿದ್ದರಾಮಯ್ಯವರು ಇನ್ನೂ ಹೆಚ್ಚುಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಅವರ ಸ್ವಕ್ಷೇತ್ರ ವರುಣಾದಲ್ಲಿ ಅವರ ಕಾರ್ಯಕರ್ತರು ಸಿಹಿ ಹಂಚಿದರು. ಮೈಸೂರಿನ ಸಿಎಂ ಮನೆಯ ಮುಂದೆ ಸೇರಿದ ಕಾರ್ಯಕರ್ತರು, ಸಿದ್ದರಾಮಯ್ಯ ಪರ ಘೋಷಣೆ ಹಾಕಿ ಹರ್ಷ ವ್ಯಕ್ತಪಡಿಸಿದ್ದರು. ತಮ್ಮ ಭಾವಚಿತ್ರವನ್ನು ಹಿಡಿದು ಬಂದ ಕಾರ್ಯಕರ್ತರನ್ನು ಸ್ವತಃ ಸಿದ್ದರಾಮಯ್ಯನವರು ಭೇಟಿಯಾಗಿ ಅಹವಾಲು ಸ್ವೀಕರಿಸಿದರು.
ದಿ.ದೇವರಾಜ ಅರಸು ಅವರ ದಾಖಾಲೆ ಮುರಿದ ನಮ್ಮ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿ. ಇನ್ನೂ ಹೆಚ್ಚು ಭಾಗ್ಯಗಳನ್ನು ನೀಡಲಿ ಹಾಗೂ ಹೆಚ್ಚು ಬಜೆಟ್ ಮಂಡಿಸಲಿ ಎಂದು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲೂ ಸಂಭ್ರಮ: ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಿ. ದೇವರಾಜ ಅರಸು ಅವರ ದಾಖಲೆ ಪುಡಿಗಟ್ಟಿದ್ದಾರೆ. ಅವರೇ ಸಿಎಂ ಆಗಿ ಮುಂದುವರಿಯಬೇಕೆಂದು ದಾವಣಗೆರೆಯಲ್ಲಿ ಅವರ ಅಭಿಮಾನಿಗಳು ಬೀರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ಪಿಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ದರಾಮಯ್ಯನವರ ಹೆಸರಿನಲ್ಲಿ ವಿಶೇಷ ಪೂಜೆ ಕೂಡ ಸಲ್ಲಿಸಿದರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು. ದೇವರಾಜ ಅರಸರು ಹಾಗೂ ಸಿಎಂ ಸಿದ್ದರಾಮಯ್ಯ ಫೋಟೋ ಪ್ರದರ್ಶಿಸಿದ ಕಾರ್ಯಕರ್ತರು, ಸಾರ್ವಜನಿಕರಿಗೆ ಸಿಹಿ, ತಿಂಡಿ ಹಂಚಿ ಸಿದ್ದರಾಮಯ್ಯನವರಿಗೆ ಶುಭ ಕೋರಲಾಯಿತು. ಅಲ್ಲದೆ ಅಹಿಂದ ನಾಯಕ, ಬಡವರ ಬಂಧು ಸಿದ್ದರಾಮಯ್ಯ ಎಂದು ಅಭಿಮಾನಿಗಳು ಜೈಕಾರ ಹಾಕಿದರು.
ಕೆಳಗಿಳಿಸಿದರೆ ರಕ್ತ ಕ್ರಾಂತಿ: ಸಿದ್ದರಾಮಯ್ಯನವರ ಅಭಿಮಾನಿ ಲಿಂಗರಾಜ್ ಮಾತನಾಡಿ "ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ದೀರ್ಘಾವಧಿ ಕಾಲ ಸಿಎಂ ಆಡಳಿತ ನಡೆಸುತ್ತಿರುವ ಕಾರಣ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಅಲ್ಲದೇ ವಿಜಯೋತ್ಸವ ಕೂಡ ಆಚರಿಸಿದ್ದೇವೆ. ಐದು ವರ್ಷ ಆಡಳಿತ ನಡೆಸಲು ಅವರನ್ನು ಬಿಡಬೇಕು. ಅವರ ವಿರುದ್ಧ ಪಿತೂರಿ ಮಾಡಿ ಕೆಳಗಿಳಿಸಿದರೆ ರಕ್ತ ಕ್ರಾಂತಿಯಾಗುತ್ತೆ. ಅವರೇ ಐದು ವರ್ಷ ಸಿಎಂ ಆಗಿರಬೇಕು. ಸಂಕ್ರಾಂತಿ ನಂತರ ಏನಾದರೂ ಸಿಎಂ ಸ್ಥಾನದಿಂದ ಇಳಿಸಲು ಮುಂದಾದರೆ ರಾಜ್ಯದಲ್ಲಿ ರಕ್ತ ಕ್ರಾಂತಿ ಆಗಲಿದೆ. ಸಿದ್ದು ಅಭಿಮಾನಿಗಳಿಂದ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ಗೆ ಇದು ನಮ್ಮ ಎಚ್ಚರಿಕೆಯಾಗಿದೆ. ಅವರಿಂದಲೇ ರಾಜ್ಯದಲ್ಲಿ 144 ಸೀಟು ಗೆದ್ದು ಸರ್ಕಾರ ರಚನೆ ಆಗಿದೆ. ಅವರನ್ನು ಕೆಳಗಿಳಿಸಿದರೆ ದೇಶದಲ್ಲಿ ಕಾಂಗ್ರೆಸ್ ಅಂತ್ಯ ಆಗಲಿದೆ. ಅಹಿಂದ ವರ್ಗವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ದೇವರಾಜ ಅರಸು ಅವರ ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿಎಂ ಸಿದ್ದರಾಮಯ್ಯ

