ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಹೆಗ್ಗಳಿಕೆ ಪಡೆದ ಸಿದ್ದರಾಮಯ್ಯ; ರಾಜ್ಯದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಅವಧಿಗೆ ಸಿಎಂ ಗಾದಿ ಹಿಡಿದವರು ಯಾರು?
ರಾಜ್ಯದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಿದ್ದು, ಬುಧವಾರ (ಜ.07) ಅರಸು ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

Published : January 6, 2026 at 7:27 PM IST
|Updated : January 6, 2026 at 11:00 PM IST
ಬೆಂಗಳೂರು: ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಭಾಜನರಾಗಿದ್ದಾರೆ. ನಾಳೆಗೆ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿದ್ದು, ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆ ಬರೆಯಲಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡನೆಯ ಹೆಗ್ಗಳಿಕೆ ಪಡೆದಿರುವ ಸಿದ್ದರಾಮಯ್ಯ ಇದೀಗ ಸುದೀರ್ಘ ಅವಧಿ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿದ್ದಾರೆ.
ಪವರ್ ಫೈಟ್ ಗೊಂದಲದ ಮಧ್ಯೆ ಸಿದ್ದರಾಮಯ್ಯನವರು ಈ ವಿಶಿಷ್ಠ ದಾಖಲೆ ಬರೆದಿದ್ದಾರೆ. ಜನವರಿ 6 ರಂದು ದೇವರಾಜು ಅರಸು ದಾಖಲೆ ಸರಿಗಟ್ಟಿದ್ದು, ಜ.7ಕ್ಕೆ ರಾಜ್ಯದಲ್ಲಿ ಅತಿ ಹೆಚ್ಚು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ದೇವರಾಜ ಅರಸು ಅವರು 7 ವರ್ಷ 239 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ರು. ಆ ದಾಖಲೆಯನ್ನು ಸಿದ್ದರಾಮಯ್ಯ ಇಂದು ಸರಿಗಟ್ಟಿದ್ದಾರೆ. ನಾಳೆ ಅಂದರೆ ಬುಧವಾರ ಅರಸು ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಆ ಮೂಲಕ ರಾಜ್ಯ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಅವರ ಈ ಮೈಲಿಗಲ್ಲಿಗೆ ಕಾಂಗ್ರೆಸ್ ಮುಖಂಡರಿಂದ ಶುಭಾಶಯಗಳ ಹಾರೈಕೆ ಹರಿದು ಬರುತ್ತಿವೆ.

ಇತಿಹಾಸ ಬರೆದ ಮೈಸೂರು ಜಿಲ್ಲೆಯ ಉಭಯ ನಾಯಕರು: ದೇವರಾಜು ಅರಸು ಅವರು ಈವರೆಗೆ ಕರ್ನಾಟಕದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆ ಪಡೆದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಆ ಮೈಲಿಗಲ್ಲನ್ನು ದಾಟುತ್ತಿದ್ದಾರೆ. ಈ ಇಬ್ಬರು ನಾಯಕರು ಮೈಸೂರಿನವರೇ ಆಗಿರುವುದು ವಿಶೇಷವಾಗಿದೆ. ದೇವರಾಜು ಅರಸು ಅವರು ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕರಾಗಿ ಸಿಎಂ ಪಟ್ಟ ಅಲಂಕರಿಸಿದ್ದರೆ, ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಶಾಸಕರಾಗಿ ದೀರ್ಘಕಾಲೀನ ಮುಖ್ಯಮಂತ್ರಿಯಾದ ಹಿರಿಮೆಯನ್ನು ಪಡೆದುಕೊಂಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಗುರುತು ಮೂಡಿಸಿದ್ದ ದಿವಂಗತ ದೇವರಾಜ ಅರಸು ಅವರು 20-03-1972 ರಿಂದ 31-12-1977 ರವರೆಗೆ ಹಾಗೂ 28-02-1978 ರಿಂದ 07-01-1980 ರವರೆಗೆ ಒಟ್ಟಾರೆ 2792 ದಿನಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅಂದರೆ 7 ವರ್ಷ 239 ದಿನಗಳನ್ನು ಸಿಎಂ ಸ್ಥಾನದಲ್ಲಿದ್ದರು. ಆ ಮೂಲಕ ಈವರೆಗೆ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಸಿಎಂ ಗಾದಿ ಅಲಂಕರಿಸಿದ ಹೆಗ್ಗಳಿಕೆಯನ್ನು ಪಡೆದಿದ್ದರು. ದೇವರಾಜ್ ಅರಸು ಮೊದಲ ಅವಧಿ ಮಾರ್ಚ್ 20, 1972 ರಿಂದ ಡಿಸೆಂಬರ್ 31, 1977 ವರೆಗೆ 2,113 ದಿನಗಳು ಅಧಿಕಾರದಲ್ಲಿ ಇದ್ದರು. ಎರಡನೇ ಅವಧಿಯಲ್ಲಿ ಸಿಎಂ ಆಗಿ 679 ದಿನ ಕಾರ್ಯನಿರ್ವಹಿಸಿದ್ದರು. ಫೆಬ್ರವರಿ 28,1978 ರಿಂದ ಜನವರಿ 7, 1980 ರವರೆಗೆ ಕಾರ್ಯನಿರ್ವಹಣೆ ಮಾಡಿದ್ದರು.

ಇದೀಗ ಅವರದ್ದೇ ಜಿಲ್ಲೆಯವರಾದ ಮತ್ತೊಬ್ಬ ನಾಯಕ ಸಿದ್ದರಾಮಯ್ಯ ಅವರು ಆ ದಾಖಲೆಯನ್ನು ಸರಿಗಟ್ಟಿದ್ದಾರೆ. ಬುಧವಾರ ಅರಸು ದಾಖಲೆಯನ್ನು ಮುರಿಯಲಿದ್ದಾರೆ. ಅಂದರೆ 7 ವರ್ಷ 240 ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೈಲಿಗಲ್ಲು ಸಾಧಿಸಲಿದ್ದಾರೆ. ಸಿದ್ದರಾಮಯ್ಯ ಅವರು 13-05-2013 ರಿಂದ 15-05-2018 ರವರೆಗೆ ಮೊದಲ ಅವಧಿಯಲ್ಲಿ ಹಾಗೂ 20-05-2023 ರಿಂದ ಈವರೆಗೆ ಪ್ರಸ್ತುತ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೇ 13, 2013 ರಿಂದ ಮೇ 15, 2018ರವರೆಗಿನ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿ 1,829 ದಿನಗಳು ಅಧಿಕಾರದಲ್ಲಿದ್ದರು. ಪ್ರಸ್ತುತ ಎರಡನೇ ಅವಧಿಯಲ್ಲಿ ಮೇ 20, 2023ರಿಂದ ಈವರೆಗೆ ಅಧಿಕಾರ ನಡೆಸುತ್ತಿದ್ದಾರೆ.
ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದ ಅರಸು: ದೇವರಾಜ ಅರಸು ಸತತ ಎರಡು ಬಾರಿ ಸಿಎಂ ಆಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರು. ಮೊದಲ ಅವಧಿಯ ಬಳಿಕ ನಂತರ ಚುನಾವಣೆಯಲ್ಲೂ ಗೆದ್ದು ಸತತ ಎರಡನೇ ಅವಧಿಗೆ ಸಿಎಂ ಗಾದಿಗೆ ಏರಿದ್ದರು. ಆದರೆ, ಸಿದ್ದರಾಮಯ್ಯ 2018ರಲ್ಲಿ ಮೊದಲ ಅವಧಿ ಮುಗಿದ ಬಳಿಕ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. 2018ರ ವಿಧಾನಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿತ್ತು. ಹೀಗಾಗಿ ಸಿಎಂ ಆಗಿರಲಿಲ್ಲ. ಐದು ವರ್ಷದ ಬಳಿಕ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತಾಡಿದ ಸಿಎಂ, ಜನರ ಆಶೀರ್ವಾದಿಂದ ದೇವರಾಜ ಅರಸು ದಾಖಲೆ ಬ್ರೇಕ್ ಆಗ್ತಿದೆ.. ಖುಷಿ ಏನಂದ್ರೆ ದೇವರಾಜ ಅರಸು ಹಾಗೂ ನಾನು ಒಂದೇ ಜಿಲ್ಲೆಯವರಾಗಿದ್ದೇವೆ. ನನಗೂ ದೇವರಾಜ ಅರಸು ಅವರಿಗೆ ಯಾವುದೇ ಹೋಲಿಕೆ ಇಲ್ಲ. ದಾಖಲೆಗಳು ಶಾಶ್ವತವಲ್ಲ. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವಿರಾಟ್ ಕೋಹ್ಲಿ ಮುರಿದಿಲ್ಲವೇ?. ಮುಂದೆ ಯಾರಾದರೂ ನನ್ನ ದಾಖಲೆಯನ್ನು ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸುವವರು ಕೂಡ ಬರಬಹುದು. ಹೀಗಾಗಿ ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ ಅಂದಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಸಿಎಂಗಾದಿಯಲ್ಲಿದ್ದವರು ಯಾರು?: ಸಿದ್ದರಾಮಯ್ಯ ಮತ್ತು ದೇವರಾಜು ಅರಸು ಅವರ ಬಳಿಕ ಅತಿ ಹೆಚ್ಚು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಹೆಗ್ಗಳಿಕೆ ಇರುವುದು ಎಸ್.ನಿಜಲಿಂಗಪ್ಪನವರಿಗೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಅವರು 7 ವರ್ಷ 175 ದಿನಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಇವರ ಬಳಿಕ ರಾಜ್ಯದಲ್ಲಿ ಸುದೀರ್ಘ ಸಿಎಂ ಆಗಿ ಇದ್ದಿದ್ದು ರಾಮಕೃಷ್ಣ ಹೆಗಡೆ. ಜನತಾಪಕ್ಷದ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಒಟ್ಟು 5 ವರ್ಷ 216 ದಿನಗಳು ಸಿಎಂ ಆಗಿ ಆಡಳಿತ ನಡೆಸಿದ್ರು.

5ನೇ ಸ್ಥಾನದಲ್ಲಿ ಬಿ ಎಸ್ ಯಡಿಯೂರಪ್ಪ: ಇನ್ನು ಸುದೀರ್ಘ ಸಿಎಂ ಗಾದಿ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವವರು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ. ಬಿ.ಎಸ್.ವೈ ನಾಲ್ಕು ಬಾರಿ ಸಿಎಂ ಸ್ಥಾನವನ್ನು ಅಲಂಕರಿಸಿದ್ದರು. ಅತಿ ಹೆಚ್ಚು ಬಾರಿ ಸಿಎಂ ಸ್ಥಾನ ಅಲಂಕರಿಸಿದ ಹಿರಿಮೆ ಬಿ.ಎಸ್.ವೈ ಹೆಸರಿನಲ್ಲಿದೆ. ಜೊತೆಗೆ ಅಲ್ಪಾವಧಿಗೆ ಸಿಎಂ ಸ್ಥಾನ ಅಲಂಕರಿಸಿದವರು ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ. ನಾಲ್ಕು ಬಾರಿ ಸಿಎಂ ಆದ ಅವರು ಒಟ್ಟು 5 ವರ್ಷ 82 ದಿನಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿದಿದ್ದರು.
ಕಾಂಗ್ರೆಸ್ನ ದಿವಂಗತ ಎಸ್.ಎಂ.ಕೃಷ್ಣ ಆರನೇ ಸ್ಥಾನದಲ್ಲಿದ್ದಾರೆ. ಅವರು ಮೊದಲ ಅವಧಿಗೆ ಸಿಎಂ ಆಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ಒಟ್ಟು 4 ವರ್ಷ 230 ದಿನಗಳ ಕಾಲ ಸಿಎಂ ಆಗಿ ಅಧಿಕಾರದಲ್ಲಿದ್ದರು. ಆದರೆ, ಅವಧಿ ಪೂರ್ವ ಚುನಾವಣೆ ನಡೆಸಿದ ಹಿನ್ನೆಲೆ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಅತಿ ಕಡಿಮೆ ಅವಧಿಗೆ ಸಿಎಂ ಗಾದಿ ಹಿಡಿದವರು ಯಾರು?: ರಾಜ್ಯದಲ್ಲಿ ಅತಿ ಹೆಚ್ಚು ದಿನ ಸಿಎಂ ಗಾದಿ ಹಿಡಿದು ಹೆಗ್ಗಳಿಕೆ ಪಡೆದವರ ಜೊತೆಗೆ ಅತ್ಯಲ್ಪ ಕಾಲ ಸಿಎಂ ಪಟ್ಟ ಅಲಂಕರಿಸಿದವರೂ ಇದ್ದಾರೆ. ರಾಜ್ಯದಲ್ಲಿ ನಾಲ್ಕು ಮಂದಿ ಒಂದು ವರ್ಷಕ್ಕೂ ಕಡಿಮೆ ಅವಧಿಗೆ ಸಿಎಂ ಪಟ್ಟ ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲಿಗರಾಗಿರುವುದು ಎಸ್.ಆರ್.ಕಂಠಿ.

ಕಾಂಗ್ರೆಸ್ನ ಎಸ್.ಆರ್.ಕಂಠಿ ಅವರು ಮಾ.14, 1962 ರಿಂದ ಜೂ.21, 1962ರ ವರೆಗೆ ಕೇವಲ 99 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇವರ ನಂತರದ ಸ್ಥಾನದಲ್ಲಿರುವುದು ಜನತಾ ಪಕ್ಷದ ಎಸ್.ಆರ್.ಬೊಮ್ಮಾಯಿ. ಅವರು 13.08.1988 ರಿಂದ 21.04.1989 ವರೆಗೆ 251 ದಿನಗಳ ಕಾಲ ಸಿಎಂ ಹುದ್ದೆ ಅಲಂಕರಿಸಿದ್ದರು.
ಇನ್ನು ಬಿಜೆಪಿ ಜಗದೀಶ್ ಶೆಟ್ಟರ್ ಅವರು 12.07.2012ರಿಂದ 13.05.2013 ವರೆಗೆ 305 ದಿನಗಳ ಕಾಲ ಸಿಎಂ ಪಟ್ಟ ಹಿಡಿದಿದ್ದರು. ಇನ್ನು ಬಿಜೆಪಿಯ ಡಿ.ವಿ.ಸದಾನಂದ ಗೌಡ ಅವರು 5.08.2011 ರಿಂದ 12.07.2012ವರೆಗೆ 342 ದಿನಗಳ ಕಾಲ ಸಿಎಂ ಗಾದಿ ಹಿಡಿದಿದ್ದರು. ಈ ನಾಲ್ಕು ಮಂದಿ ವರ್ಷವನ್ನೂ ಪೂರೈಸಲಾಗದೇ ಅಲ್ಪಾವಧಿಗೆ ಸಿಎಂ ಆದವರಾಗಿದ್ದಾರೆ.
ಇದನ್ನೂ ಓದಿ:

