ETV Bharat / state

ಡಿಕೆಶಿ - ಸಿದ್ದರಾಮಯ್ಯ ಇಂದು ದೆಹಲಿಗೆ: ಸಂಪುಟ ಸದಸ್ಯರ ಪಟ್ಟಿಗೆ ಅಂತಿಮ ಟಚ್, ಡಿಸಿಎಂ ಹುದ್ದೆ ಬಗ್ಗೆ ಚರ್ಚೆ

ಕಾಂಗ್ರೆಸ್​ ಹೈಕಮಾಂಡ್ ಭೇಟಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.

Siddaramaiah and D K Shivakumar to discuss on cabinet formation with congress high command
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : June 1, 2026 at 7:53 AM IST

2 Min Read
Choose ETV Bharat

ಬೆಂಗಳೂರು: ಸಂಪುಟ ರಚನೆ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಂದು (ಸೋಮವಾರ) ದೆಹಲಿಗೆ ತೆರಳುತ್ತಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸಲಾಗುತ್ತಿದ್ದು, ಡಿಕೆಶಿ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುದು ಕುತೂಹಲ‌ ಹುಟ್ಟು ಹಾಕಿದೆ.

ಡಿಕೆಶಿ ಹೊಸ ಸರ್ಕಾರದಲ್ಲಿ ಸ್ಥಾನ‌ ಪಡೆಯಲು ಹಲವು ಆಕಾಂಕ್ಷಿಗಳು ಭಾರಿ ಲಾಬಿ ನಡೆಸುತ್ತಿದ್ದಾರೆ. ಹೊಸ ಮುಖಗಳಿಗೆ ಸ್ಥಾನ‌ ನೀಡುವಂತೆ ಹಲವು ಶಾಸಕರು ಒತ್ತಡ ಹೇರುತ್ತಿದ್ದಾರೆ. ಇತ್ತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿದ್ದ ಸಚಿವರುಗಳು ಮರಳಿ ಸ್ಥಾನ ಪಡೆಯಲು ತೀವ್ರ ಕಸರತ್ತು ಮಾಡುತ್ತಿದ್ದಾರೆ. ಹೀಗಾಗಿ ಹೊಸ ಸರ್ಕಾರದಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಹೈಕಮಾಂಡ್, ಸಿದ್ದರಾಮಯ್ಯ ಕಡೆ ಹಾಗೂ ಡಿ.ಕೆ.ಶಿವಕುಮಾರ್ ಕಡೆಯಿಂದ ಲಾಬಿ ನಡೆಸಲಾಗುತ್ತಿದೆ.

ಹೈಕಮಾಂಡ್ ಜೊತೆ ಚರ್ಚೆ: ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಸಂಪುಟ ರಚನೆ ಸವಾಲಾಗಿ ಪರಿಣಮಿಸಿದೆ. ಬುಧವಾರ ನಡೆಯಲಿರುವ ಡಿಕೆಶಿ ಸಿಎಂ ಪದಗ್ರಹಣ ಸಮಾರಂಭದ ವೇಳೆ ಸಂಪುಟ ಸದಸ್ಯರೂ ಪ್ರಮಾಣವಚನ ಸ್ವೀಕರಿಸಲು ಯೋಚಿಸಲಾಗಿದೆ. ಕನಿಷ್ಠ 10-15 ಸಂಪುಟ ಸದಸ್ಯರ ಪದಗ್ರಹಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸಂಪುಟ ಸದಸ್ಯರ ಪಟ್ಟಿ ಹಿಡಿದುಕೊಂಡು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ.‌ ಸಿದ್ದರಾಮಯ್ಯ ಕೂಡ ತಮ್ಮ ಆಪ್ತರನ್ನು ಸಂಪುಟಕ್ಕೆ ಸೇರಿಸಲು ಹೈಕಮಾಂಡ್​​ಗೆ ಮನವಿ ಮಾಡಲಿದ್ದಾರೆ.

ಡಿಸಿಎಂ ಹುದ್ದೆಗಳ ಬಗ್ಗೆಯೂ ಚರ್ಚೆ ಸಾಧ್ಯತೆ: ಇತ್ತ ಡಿಸಿಎಂ ಹುದ್ದೆ ಬಗ್ಗೆ ಗೊಂದಲ ಮುಂದುವರೆದಿದ್ದು, ತೀವ್ರ ಪೈಪೋಟಿ ಆರಂಭವಾಗಿದೆ.‌ ಸಾಕಷ್ಟು ಆಕಾಂಕ್ಷಿಗಳು ಡಿಸಿಎಂ ಪಟ್ಟದ ಮೇಲೆ ಕಣ್ಟಿಟ್ಟಿದ್ದಾರೆ.‌ ಎಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ಬಗ್ಗೆ ಗೊಂದಲ ಮುಂದುವರೆದಿದೆ. ಹೀಗಾಗಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಡಿಸಿಎಂ ಹುದ್ದೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಡಿಸಿಎಂ ಹುದ್ದೆಗೆ ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್, ಪ್ರಿಯಾಂಕ್ ಖರ್ಗೆ, ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ ಅವರ ಹೆಸರುಗಳು ಕೇಳಿ ಬರುತ್ತಿವೆ. ಈ ಪೈಕಿ ಕೆಲವರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಪವರ್ ಸೆಂಟರ್ ಆದ ಡಿಕೆಶಿ ಮನೆ: ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಮಾಜಿ ಸಚಿವರುಗಳು, ಶಾಸಕರು ಭಾನುವಾರ ಡಿಕೆಶಿಯ ಸದಾಶಿವನಗರ ನಿವಾಸಕ್ಕೆ ಆಗಮಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಆ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಶುಭಾಶಯ ಕೋರಿ, ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ನಾಯಕರು ಬೇಡಿಕೆ ಇಡುತ್ತಿದ್ದಾರೆ.

ಸಂತೋಷ್ ಲಾಡ್, ಪ್ರಿಯಾಂಕ್​ ಖರ್ಗೆ, ಕೆ.ಹೆಚ್.ಮುನಿಯಪ್ಪ, ಅಶೋಕ್ ಪಟ್ಟಣ್, ಮಂಕಾಳ ವೈದ್ಯ, ಎಂ.ಬಿ.ಪಾಟೀಲ್, ರೂಪಾ ಶಶಿಧರ್​, ಮಧು ಬಂಗಾರಪ್ಪ, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್ ಸೇರಿ ಹಲವರು ಡಿಕೆಶಿ ಮನೆಗೆ ತೆರಳಿ ಶುಭಾಶಯ ಕೋರಿದರು.

ಇದನ್ನೂ ಓದಿ: ಸತೀಶ ಜಾರಕಿಹೊಳಿ ವಿರುದ್ಧ ಪೋಸ್ಟ್: ಎರಡು ಫೇಸ್​​ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು