ETV Bharat / state

ಬಜ್ಪೆ- ಕಟೀಲು ರಸ್ತೆಯಲ್ಲಿ ಕಿರು ಸೇತುವೆ ಕುಸಿತ: ವಾಹನ ಸಂಚಾರ ಮಾರ್ಗ ಬದಲು: ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಎಚ್ಚರಿಕೆ

ಸೇತುವೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಗೂ ಮುನ್ನೆಚ್ಚರಿಕಾ ಪಟ್ಟಿಗಳನ್ನು ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಿದ್ದಾರೆ.

Short bridge collapses on Bajpe-Kateel road: Traffic route changed; Airport passengers warned
ಬಜ್ಪೆ- ಕಟೀಲು ರಸ್ತೆಯಲ್ಲಿ ಕಿರು ಸೇತುವೆ ಕುಸಿತ: (ETV Bharat)
author img

By ETV Bharat Karnataka Team

Published : September 2, 2026 at 8:07 PM IST

2 Min Read
Choose ETV Bharat

ಮಂಗಳೂರು: ಬಜ್ಪೆ ಹಾಗೂ ಕಟೀಲು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕರಂಬಾರು ಬಳಿಯ ರೇಗೋ ಪೆಟ್ರೋಲ್ ಪಂಪ್ ಸಮೀಪದಲ್ಲಿರುವ ಕಿರು ಸೇತುವೆಯ ಒಂದು ಪಾರ್ಶ್ವ ಬುಧವಾರ ಏಕಾಏಕಿ ಕುಸಿತವಾಗಿದೆ. ಪರಿಣಾಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ಗಂಭೀರ ವ್ಯತ್ಯಯ ಉಂಟಾಗಿದ್ದು, ಪೊಲೀಸರು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ಈ ಬಗ್ಗೆ ಮಂಗಳೂರು ನಗರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪ್ರಸಿದ್ಧ ಕ್ಷೇತ್ರ ಕಟೀಲನ್ನು ಬೆಸೆಯುವ ಮುಖ್ಯ ರಸ್ತೆಯ ಇದೇ ಕಿರು ಸೇತುವೆಯ ಕೆಳಭಾಗದ ಕಮಾನು ಕಲ್ಲುಗಳು ಜರಿದು ಬಿದ್ದಿದ್ದು, ಮೇಲ್ಭಾಗದ ಡಾಂಬರು ರಸ್ತೆಯಲ್ಲೂ ಬಿರುಕು ಮೂಡಿ ಕುಸಿತದ ಭೀತಿ ಎದುರಾಗಿದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಬಜ್ಪೆ ಠಾಣಾ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸೇತುವೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಗೂ ಮುನ್ನೆಚ್ಚರಿಕಾ ಪಟ್ಟಿಗಳನ್ನು ಅಳವಡಿಸಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ.

Traffic route changed; Airport passengers warned
ಬಜ್ಪೆ- ಕಟೀಲು ರಸ್ತೆಯಲ್ಲಿ ಕಿರು ಸೇತುವೆ ಕುಸಿತ (ETV Bharat)

ಬಜ್ಪೆ ಪೊಲೀಸ್ ಠಾಣೆಯಿಂದ ಪರ್ಯಾಯ ಮಾರ್ಗಗಳ ಪ್ರಕಟಣೆ: ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಪೊಲೀಸ್ ಠಾಣೆಯು ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದೆ.

ಮಂಗಳೂರು ಹಾಗೂ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವವರು: ಜರಿನಗರ ಅಥವಾ ಪೊರ್ಕೋಡಿ ರಸ್ತೆಯ ಮೂಲಕ ತೆರಳಬೇಕು. ಕಟೀಲು, ಬಜ್ಪೆ ಮತ್ತು ಕೈಕಂಬ ಕಡೆಗೆ ತೆರಳುವ ವಾಹನಗಳು: ಜರಿನಗರ ಅಥವಾ ಪೊರ್ಕೋಡಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬೇಕು. ಸಾರ್ವಜನಿಕರು ಹಾಗೂ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ಈ ಮಾರ್ಗ ಬದಲಾವಣೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಅಡ್ವೈಸರಿ: ಬಜ್ಪೆ ಕಡೆಯಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಪ್ರಾಧಿಕಾರವು ಮಹತ್ವದ ಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದೆ.

ಪ್ರಕಟಣೆ
ವಾಹನ ಸಂಚಾರ ಮಾರ್ಗ ಬದಲು: ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಎಚ್ಚರಿಕೆ (ETV Bharat)

ಕರಂಬಾರು ರೇಗೋ ಪೆಟ್ರೋಲ್ ಪಂಪ್ ಬಳಿಯ ಕಲ್ವರ್ಟ್ ಸಮಸ್ಯೆಯಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಹೆಚ್ಚುವರಿ ಸಮಯವನ್ನು ಮುಡಿಪಾಗಿಟ್ಟುಕೊಂಡು ಮುಂಚಿತವಾಗಿಯೇ ಪ್ರಯಾಣ ಯೋಜಿಸಬೇಕು. ಪೊಲೀಸ್ ಇಲಾಖೆ ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಅನುಸರಿಸಿ, ಸ್ಥಳೀಯ ಸಂಚಾರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಸಂಚರಿಸುವಂತೆ ವಿಮಾನ ನಿಲ್ದಾಣ ಆಡಳಿತ ಮಂಡಳಿ ತಿಳಿಸಿದೆ.

ಇವುಗಳನ್ನೂ ಓದಿ:

ಮಂಗಳೂರು: SIR ವೇಳೆ ಎಡವಟ್ಟು: ಬದುಕಿರುವ ವ್ಯಕ್ತಿಯನ್ನೇ 'ಮರಣ' ಎಂದು ನಮೂದು!

ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ: 3.81 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿದ 'ಹಲ್ಕಾ ಡಾನ್' ಚಿತ್ರತಂಡ: ಕನ್ನಡ - ತೆಲುಗು ಸೇರಿ ತುಳು ಭಾಷೆಯಲ್ಲೂ ಬಿಡುಗಡೆಗೆ ನಿರ್ಧಾರ