ಶಿವಮೊಗ್ಗ: ಲೈಸನ್ಸ್ ಇಲ್ಲದ ಬಂದೂಕಿನಿಂದ ಗುಂಡು ಹಾರಿಸಿ ಬೀದಿನಾಯಿ ಕೊಂದ ಆರೋಪಿ ಸೆರೆ
ತಾನು ಸಾಕಿದ ನಾಯಿ ಜೊತೆ ಬೀದಿನಾಯಿ ಕಚ್ಚಾಡಿತೆಂದು ಅದನ್ನು ಮನೆಯಲ್ಲಿದ್ದ ಲೈಸನ್ಸ್ ಇಲ್ಲದ ಗನ್ ನಿಂದ ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Published : August 28, 2026 at 1:50 PM IST
ಶಿವಮೊಗ್ಗ: ತನ್ನ ಮನೆಯ ಸಾಕು ನಾಯಿಯೊಂದಿಗೆ ಬೀದಿನಾಯಿ ಕಚ್ಚಾಡಿತೆಂದು ಅದನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದ ನಿವಾಸಿ ಲಿಂಗಮೂರ್ತಿ ಬಂಧಿತ ಆರೋಪಿ.
ಏನಾಯ್ತು?: ನಾಡವಳ್ಳಿ ಗ್ರಾಮದ ಬೋರಪ್ಪ ಎಂಬವರು ಜಾನುವಾರುಗಳೊಂದಿಗೆ ಜಮೀನಿಗೆ ಹೋಗುವಾಗ ಇವರ ಹಿಂದೆ ಬೀದಿನಾಯಿಯೂ ಬಂದಿದೆ. ಈ ಬೀದಿನಾಯಿ ಲಿಂಗಮೂರ್ತಿ ಎಂಬಾತನ ಮನೆ ಬಳಿ ಬಂದಾಗ ಸಾಕುನಾಯಿಯೊಂದಿಗೆ ಕಚ್ಚಾಡಿದೆ. ಇದರಿಂದ ಕೋಪಗೊಂಡ ಲಿಂಗಮೂರ್ತಿ ಮನೆಯಲ್ಲಿದ್ದ ನಾಡ ಬಂದೂಕು ತೆಗೆದು ಗುಂಡಿಟ್ಟು ಕೊಂದಿದ್ದಾನೆ.
ಬೀದಿನಾಯಿಯ ಹಿಂಬದಿಯ ತೊಡೆಗೆ ಗುಂಡು ತಗುಲಿ ಸಾವನ್ನಪ್ಪಿದೆ ಎಂದು ಆನಂದಪುರಂ ಪೊಲೀಸ್ ಠಾಣೆಯ ಸಿಬ್ಬಂದಿ ನಿರಂಜನ್ ಅವರಿಗೆ ಮಾಹಿತಿ ಬಂದಿದೆ. ನಿರಂಜನ್ ಸ್ಥಳ ಪರಿಶೀಲಿಸಿದಾಗ ನಾಯಿಯ ಹಿಂಬದಿ ತೊಡೆಗೆ ಗುಂಡು ತಗುಲಿ ಸಾವನ್ನಪ್ಪಿರುವುದು ಕಂಡುಬಂದಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಅಡಿ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಬಳಿ ಇರುವ ಬಂದೂಕಿಗೆ ಲೈಸನ್ಸ್ ಇಲ್ಲದಿರುವುದೂ ತಿಳಿದು ಬಂದಿದೆ. ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು

