ಕೇತುಗ್ರಸ್ತ ಚಂದ್ರಗ್ರಹಣ: ಶಿವಮೊಗ್ಗದ ದುರ್ಗಮ್ಮ, ಮರಿಯಮ್ಮ ದೇವಿಯರ ಜಾತ್ರೆ ಬೇಗ ಮುಗಿಸಿ ದೇವಾಲಯಕ್ಕೆ ಬೀಗ
ಚಂದ್ರಗ್ರಹಣ ಹಿನ್ನೆಲೆ ಶಿವಮೊಗ್ಗದ ದುರ್ಗಿಗುಡಿಯ ದುರ್ಗಮ್ಮ ಮತ್ತು ಮರಿಯಮ್ಮ ದೇವಿಯರ ರಥೋತ್ಸವ ಬೇಗ ಮುಗಿಸಿ ದೇವಾಯಲಯವನ್ನು ಬಂದ್ ಮಾಡಲಾಗಿದೆ.

Published : March 3, 2026 at 6:03 PM IST
ಶಿವಮೊಗ್ಗ: ದುರ್ಗಿಗುಡಿ ಬಡಾವಣೆಯ ಶ್ರೀ ದುರ್ಗಮ್ಮ ಮತ್ತು ಶ್ರೀ ಮರಿಯಮ್ಮ ದೇವಿಯರ ರಥೋತ್ಸವ ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ನಡೆಯುತ್ತದೆ. ರಥೋತ್ಸವ ನಡೆದ ಮರುದಿನ ಶಿವಮೊಗ್ಗದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಚಂದ್ರಗ್ರಹಣದ ಪ್ರಯುಕ್ತ ರಥೋತ್ಸವವನ್ನು ಬೇಗ ಮುಗಿಸಿ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಸೇರಿಸಲಾಗಿದೆ.
ಚಂದ್ರಗ್ರಹಣ ಹಿನ್ನೆಲೆ ಇತಿಹಾಸದಲ್ಲಿಯೇ ನಡೆಯದ ರಥೋತ್ಸವ ಇಂದು ಬೆಳಗ್ಗೆಯೇ ನಡೆಯಿತು. ಚಂದ್ರ ಗ್ರಹಣ ಪ್ರಾರಂಭವಾಗುವ ಮುನ್ನವೇ ಉತ್ಸವ ಮೂರ್ತಿಗಳು ದೇವಾಲಯದ ಮೂಲ ಸ್ಥಾನಕ್ಕೆ ಹೋಗಬೇಕಾದ ಕಾರಣಕ್ಕೆ ದೇವಾಲಯದ ಆಡಳಿತ ಮಂಡಳಿಯು ಬೆಳಗ್ಗೆ 7 ಗಂಟೆಯಿಂದಲೇ ಶಾಸ್ತ್ರವನ್ನು ಪ್ರಾರಂಭಿಸಿದ್ದರು. ನಂತರ ದೇವಿಯರ ಉತ್ಸವ ಮೂರ್ತಿಯು ಶಿವಮೊಗ್ಗ ನಗರ ಪ್ರದಕ್ಷಿಣೆ ಹಾಕಿ ನಂತರ ಗಾಂಧಿ ಬಜಾರ್ನ ರೇಣುಕಮ್ಮ ದೇವಾಲಯಕ್ಕೆ ತೆರಳಿ ವಾಪಸ್ ದುರ್ಗಿಗುಡಿಗೆ ಬಂದು ಸ್ಥಳೀಯ ನಿವಾಸಿಗಳಿಂದ ಪೂಜೆ ಸ್ವೀಕರಿಸಿ, ನಂತರ ಬೆಳಗ್ಗೆ 10 ಗಂಟೆಗೆ ರಥ ಏರಿದರು.
ಭಕ್ತರಿಗೆ ಮಧ್ಯಾಹ್ನ 1 ಗಂಟೆ ತನಕ ರಥದಲ್ಲಿ ದೇವಿಯರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 1 ಗಂಟೆ ನಂತರ ರಥವನ್ನು ಪುನಃ ದೇವಾಲಯದ ಬಳಿ ತಂದು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ದೇವಾಲಯದ ಸುತ್ತ 9 ಸುತ್ತು ಕೈಯಲ್ಲಿಯೇ ತೂಗಿಸಿ ದೇವಾಲಯ ಪ್ರವೇಶಿಸಿ ದೇವರನ್ನು ದೇವಾಲಯಕ್ಕೆ ಸೇರಿಸಲಾಯಿತು. ನಂತರ ದೇವಾಲಯಕ್ಕೆ ಬೀಗ ಹಾಕಲಾಯಿತು.
ಪ್ರತಿ ವರ್ಷ ಜಾತ್ರೆಯು ಬಿರು ಬಿಸಿಲಿನಲ್ಲಿ ನಡೆಯುತ್ತಿತ್ತು. ರಥರೋಹಣವು ಮಧ್ಯಾಹ್ನ 1 ಗಂಟೆಗೆ ನಡೆಯುತ್ತಿತ್ತು. ರಾತ್ರಿ 11 ಗಂಟೆಗೆ ರಥವನ್ನು ವಾಪಸ್ ಎಳೆದು ತರಲಾಗುತ್ತಿತ್ತು. ಆದರೆ ಗ್ರಹಣ ಹಿನ್ನೆಲೆ ಜಾತ್ರೆಯನ್ನು ಬೇಗ ಮುಗಿಸಲಾಗಿದೆ. ಈ ವೇಳೆ ಅನೇಕ ಭಕ್ತರು ಆಗಮಿಸಿ ದೇವಿಯರ ದರ್ಶನ ಪಡೆದು ಪುನೀತರಾದರು. ರಥೋತ್ಸವದ ಪ್ರಯುಕ್ತ ಭಕ್ತರು ಅನೇಕ ಕಡೆ ಪ್ರಸಾದದ ವ್ಯವಸ್ಥೆಯನ್ನು ಮಾಡಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಇದೇ ರೀತಿ ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯ, ಕೋಟೆ ಶ್ರೀ ಮಾರಿಕಾಂಬ, ಸಿಗಂದೂರು ದೇವಾಲಯಗಳನ್ನೂ ಬಂದ್ ಮಾಡಲಾಗಿತ್ತು.

ಗ್ರಹಣದ ಕಾರಣಕ್ಕೆ ದೇವಾಲಯಕ್ಕೆ ಬೀಗ ಹಾಕಿದ ಕುರಿತು ದೇವಾಲಯದ ಅಧ್ಯಕ್ಷರಾದ ರೇಣುಕೇಶ್ ಮಾತನಾಡಿ, ಶ್ರೀದುರ್ಗಮ್ಮ ಮತ್ತು ಮರಿಯಮ್ಮ ದೇವಿಯರ ರಥೋತ್ಸವದ ಪ್ರಯುಕ್ತ ಐದು ದಿನ ವಿವಿಧ ಹೋಮ, ಪೂಜೆ ನಡೆಯುತ್ತದೆ. ಇಂದು ಚಂದ್ರಗ್ರಹಣ ಇರುವ ಕಾರಣಕ್ಕೆ ಮಧ್ಯಾಹ್ನ ನಡೆಯಬೇಕಿದ್ದ ರಥೋತ್ಸವವನ್ನು ಬೆಳಗ್ಗೆ 10 ಗಂಟೆಗೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆ ತನಕ ದೇವಾಲಯದಲ್ಲಿ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈಗ ರಥವನ್ನು ಪುನಃ ಎಳೆದು ತಂದು ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯನ್ನು ದೇವಾಲಯದ ಒಳಗೆ ಇಡಲಾಗಿದೆ. ಸಂಜೆ 7 ಗಂಟೆಗೆ ಪುನಃ ದೇವಾಲಯ ತೆರೆಯಲಾಗುತ್ತದೆ ಎಂದರು.

ಇತಿಹಾಸ ಪ್ರಸಿದ್ಧ ದುರ್ಗಮ್ಮ ಮತ್ತು ಮರಿಯಮ್ಮನವರ ರಥೋತ್ಸವವು ಚಂದ್ರಗ್ರಹಣ ಇರುವುದರಿಂದ ಬೆಳಗ್ಗೆಯೇ ರಥೋತ್ಸವವನ್ನು ನಡೆಸಲಾಗಿದೆ. ಗ್ರಹಣ ಇರುವ ಕಾರಣಕ್ಕೆ ಆಡಳಿತ ಮಂಡಳಿಯು ರಥೋತ್ಸವ ಬೇಗ ನಡೆಸಿ, ಮಧ್ಯಾಹ್ನ 2 ಗಂಟೆಗೆ ದೇವಿಯನ್ನು ಮೂಲ ಸ್ಥಾನಕ್ಕೆ ತಂದು ಇಡಲಾಗಿದೆ. ಇದಕ್ಕೆ ಸ್ಥಳೀಯರು ಸಹಕಾರ ನೀಡಿದರು. ನಾಳೆ ಎಂದಿನಂತೆ ಹೋಳಿ ಹಬ್ಬ ನಡೆಯಲಿದೆ ಎಂದು ಹೇಳಿದರು.
ಇವುಗಳನ್ನೂ ಓದಿ:

