ರೈತರಿಗೆ ಕನ್ಯೆ ಕೊಡುವವರಿಗೆ 2 ಲಕ್ಷ ರೂ. ಸಹಾಯಧನ ನೀಡಬೇಕು: ಸರ್ಕಾರಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಮನವಿ
ಈ ಹಿಂದೆಯೂ ಸಹಾಯಧನ ಕೊಡುವ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಡಾ. ಶಿವಕುಮಾರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

Published : February 10, 2026 at 5:41 PM IST
ಗದಗ: ರೈತರಿಗೆ ಕನ್ಯೆ ಕೊಡುವ ಕುಟುಂಬಗಳಿಗೆ ಸರ್ಕಾರದಿಂದ 2 ಲಕ್ಷ ರೂ. ಸಹಾಯಧನ ನೀಡುವಂತಾಗಬೇಕು ಎಂದು ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.
ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಅಚ್ಚುಕಟ್ಟಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ. ಇಂತಹ ಸಾಮೂಹಿಕ ವಿವಾಹ ಇಂದಿನ ದಿನಮಾನದಲ್ಲಿ ಹೆಚ್ಚಾಗಬೇಕಾಗಿದೆ. ರೈತ ಕುಟುಂಬಗಳ ಜೊತೆ ಸಂಬಂಧ ಬೆಳೆಸಲು ಹಿಂಜರಿಕೆ ಹೆಚ್ಚಾಗುತ್ತಿದ್ದು, ರೈತರಿಗೆ ಕನ್ಯೆ ಕೊಡುವವರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದಾರೆ ಎಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಮುಂದಿನ ದಿನಮಾನಗಳಲ್ಲಿ ರೈತರಿಗೆ ಕನ್ಯೆ ಕೊಡುವವರಿಗೆ ವಿಶೇಷ ಸಹಾಯಧನ ಯೋಜನೆ ಜಾರಿಗೊಳಿಸುವ ಅಗತ್ಯವಿದೆ. ಈ ಹಿಂದೆಯೂ ಇದೇ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದು ಮುಂದಿನ ದಿನಗಳಲ್ಲಿ ಜಾರಿಗೆ ಬರಬೇಕೆಂದರೆ, ನೀವೂ ಕೂಡ ಒತ್ತಾಯ ಮಾಡಬೇಕು ಎಂದರು.
ನಗೆ ಚಟಾಕಿಯೊಂದಿಗೆ ಮಾತನಾಡಿದ ಸ್ವಾಮೀಜಿ, ವರ–ಕನ್ಯೆ ಸಮಸ್ಯೆ ಇಂದು ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ರೈತರ ಬದುಕಿಗೆ ಗೌರವ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಾತಿಲ್ಲ, ಕಥೆಯಿಲ್ಲ ಬರೀ ಪ್ರೀತಿ! ಅಪರೂಪದ ಮದುವೆಗೆ ಸಾಕ್ಷಿಯಾದ ಬಳ್ಳಾರಿ!
ಇತ್ತೀಚೆಗೆ ಈ ಸಮಸ್ಯೆ ದೊಡ್ಡದಾಗುತ್ತಿದೆ. 2021 ರ ಅಕ್ಟೋಬರ್ನಲ್ಲಿ ರೈತಾಪಿ ವರ್ಗದ ಯುವಕರಿಗೆ ಮದುವೆ ಮಾಡಿಕೊಳ್ಳಲು ವಧು ಸಿಗುತ್ತಿಲ್ಲ. ಹಾಗಾಗಿ, ವಿವಾಹ ಭಾಗ್ಯ ಕಲ್ಪಿಸಲು ಪ್ರತ್ಯೇಕ ವಧು-ವರರ ವೇದಿಕೆ ತೆರೆಯುವಂತೆ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ಗೆ ಯುವ ರೈತರು ಮನವಿ ಸಲ್ಲಿಸಿರುವ ಪ್ರಸಂಗ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಕಗೊಂಡನಹಳ್ಳಿಯಲ್ಲಿ ನಡೆದಿತ್ತು.
ಇದೇ ವಿಚಾರವಾಗಿ ಕನ್ಯೆ ಸಿಗಲೆಂದು ಹಲವು ಯುವಕರು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಸಂಬಂಧ ಕೆಲವು ಯುವಕರು, ಪಕ್ಷದ ನಾಯಕರಿಗೆ ಪತ್ರವನ್ನು ಬರೆದಿದ್ದೂ ಉಂಟು. ಅಷ್ಟೇ ಅಲ್ಲ ತನಗೆ ವಧು ಸಿಗುವಂತೆ ಬೇಡಿಕೊಂಡು ಹುಂಡಿಗೆ ಚೀಟಿ ಬರೆದ ಪ್ರಸಂಗಗಳೂ ವರದಿಯಾಗಿವೆ. ಕುಮಾರಸ್ವಾಮಿ ಅವರು ಈ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದೂ ಇದೆ.
ಇತ್ತೀಚೆಗೆ ಕೆಲ ದಿನಗಳ ಹಿಂದೆ ಎನ್ಸಿಪಿ ನಾಯಕ ಶರದ್ ಪವಾರ್ ಅವರಿಗೆ ಮಹಾರಾಷ್ಟ್ರದ ರೈತ ಯುವಕನೊಬ್ಬ ತನಗೆ ಕನ್ಯ ಸಿಗುತ್ತಿಲ್ಲ ನೆರವಾಗುವಂತೆ ಪತ್ರ ಬರೆದಿದ್ದ. ಹೀಗೆ ಸಮಸ್ಯೆ ಗ್ರಾಮೀಣ ಭಾಗದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

