ಹಾವೇರಿ: ಅದ್ಧೂರಿಯಾಗಿ ನಡೆದ ಶಿಶುನಾಳ ಶರೀಫರ ರಥೋತ್ಸವ
ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ ಅವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

Published : February 27, 2026 at 1:21 PM IST
ಹಾವೇರಿ : ಕೋಮು ಸಾಮರಸ್ಯ ಸಾರುವ ಜಿಲ್ಲಾ ಶಿಗ್ಗಾಂವಿ ತಾಲೂಕಿನ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ ಅವರ ರಥೋತ್ಸವ ವೈಭವದಿಂದ ನಡೆಯಿತು.
ಶಿಶುನಾಳ ಗ್ರಾಮದ ಶರೀಫಗಿರಿಯಲ್ಲಿ ನಡೆದ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಗುರು ಗೋವಿಂದ ಭಟ್ ಮತ್ತು ಶಿಶುನಾಳ ಶರೀಫರ ಬೆಳ್ಳಿಯ ಮೂರ್ತಿಗಳನ್ನ ಪಲ್ಲಕ್ಕಿಯಲ್ಲಿ ತರಲಾಯಿತು. ನಂತರ ರಥದ ಸುತ್ತ ಪ್ರದಕ್ಷಿಣೆ ಮಾಡಿದ ನಂತರ ಮೂರ್ತಿಗಳನ್ನ ರಥದಲ್ಲಿಟ್ಟು, ಪೂಜೆ ಸಲ್ಲಿಸಲಾಯಿತು.
ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರು ಶಿಶುನಾಳ ಶರೀಫ ಮತ್ತು ಗುರು ಗೋವಿಂದಭಟ್‌ರಿಗೆ ಜಯಕಾರ ಹಾಕಿದರು. ನಂತರ ಸಹಸ್ರಾರು ಸಂಖ್ಯೆಯ ಭಕ್ತರು ರಥ ಎಳೆದು ಪುನೀತರಾದರು. ರಥ ಸಾಗುತ್ತಿದ್ದಂತೆ ಭಕ್ತರು ರಥದ ಕಳಸಕ್ಕೆ ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣುಗಳನ್ನ ಎಸೆದು ಪ್ರಾರ್ಥನೆ ಸಲ್ಲಿಸಿದರು.
ರಥಕ್ಕೆ ಮಾಡಿದ್ದ ಹೂವಿನ ಅಲಂಕಾರ ಮತ್ತು ಬೃಹತ್ ದ್ರಾಕ್ಷಿಮಾಲೆಗಳು ಎಲ್ಲರ ಗಮನ ಸೆಳೆದವು. ರಥ ಸಾಗುತ್ತಿದ್ದಂತೆ ಹರಹರ ಮಹಾದೇವ ಜಯಘೋಷಗಳು ಮೊಳಗಿದವು. ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.
ವಿಶೇಷ ಪೂಜೆ, ವಿಶೇಷ ಅಲಂಕಾರ : ಜಾತ್ರಾ ಮಹೋತ್ಸವದ ಅಂಗವಾಗಿ ಶಿಶುನಾಳ ಶರೀಫರ ಮತ್ತು ಗುರು ಗೋವಿಂದ ಭಟ್‌ರ ದೇವಸ್ಥಾನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು, ಶಿಶುನಾಳ ಶರೀಫರ ಗದ್ದುಗೆ ದರ್ಶನ ಪಡೆದು ಶಿಶುನಾಳ ಶರೀಫರ ಮೂರ್ತಿ ಮತ್ತು ಗುರುಗೋವಿಂದ ಭಟ್‌ರ ಮೂರ್ತಿ ದರ್ಶನವನ್ನು ಪಡೆದರು.
ಮುಸ್ಲಿಂರು ಸಕ್ಕರೆ ನೈವೇದ್ಯ ಹಿಡಿದರೆ, ಹಿಂದೂಗಳು ತೆಂಗಿನಕಾಯಿ, ಬಾಳೆಹಣ್ಣು ನೈವೇದ್ಯ ಸಲ್ಲಿಸಿದರು. ಹಿಂದೂಗಳು ಹರ ಹರ ಮಹಾದೇವ ಎಂದು ಘೋಷಣೆ ಕೂಗಿದರೆ, ಮುಸ್ಲಿಂರು ಈಶ್ವರ ಅಲ್ಲಾ ನೀನೇ ಎಲ್ಲಾ ಎಂದು ಪ್ರಾರ್ಥನೆ ಸಲ್ಲಿಸಿದರು. ಹಿಂದೂ ಮುಸ್ಲಿಂ ಬಾಂಧವರು ಒಂದಾಗಿ ಗುರು ಶಿಷ್ಯರ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ನಂತರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗುರುಶಿಷ್ಯರ ರಥ ಎಳೆದು ಧನ್ಯತಾಭಾವ ವ್ಯಕ್ತಪಡಿಸಿದರು.
ಕೋಮುಸೌಹಾರ್ದದ ರಥೋತ್ಸವ : ಗುರು ಗೋವಿಂದಭಟ್ ಮತ್ತು ಶಿಷ್ಯ ಶಿಶುನಾಳ ಶರೀಫರು ಹಲವು ಪವಾಡಗಳನ್ನ ಮಾಡುವ ಮೂಲಕ ಜನಜನಿತರಾಗಿದ್ದರು. ಶರೀಫರು ರಚಿಸಿದ ಕವಿತೆಗಳು ಇಂದಿಗೂ ಸಮಾಜದ ಅಂಕು - ಡೊಂಕುಗಳನ್ನ ತಿದ್ದುತ್ತಿವೆ. ಶಿಶುನಾಳದೀಶನ ಅಂಕಿತದಲ್ಲಿ ಬರೆದ ಕವಿತೆಗಳು ಜನಮಾನಸದಲ್ಲಿ ಇಂದಿಗೂ ಹಸಿರಾಗಿವೆ.
ದೂರ ದೂರದ ಊರುಗಳಿಂದ ಆಗಮಿಸಿದ ಭಕ್ತರಿಗೆ ಶಿಶುನಾಳ ಶರೀಫರ ಅನುಯಾಯಿಗಳು ಉಪಹಾರ ಸೇರಿದಂತೆ ಭೋಜನ ಹಂಚುವ ಮೂಲಕ ಹರಕೆ ತೀರಿಸಿದರು. ಈ ಜಾತ್ರೆಗೆ ಬರುವ ಭಕ್ತರು ತತ್ರಾಣಿ ತೆಗೆದುಕೊಂಡು ಬರುವ ವಾಡಿಕೆ ಇದೆ. ಇಲ್ಲಿಗೆ ಬಂದಿದ್ದ ಭಕ್ತರು ಶಿಶುನಾಳ ಶರೀಫರ ತತ್ವಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.
ಈ ಕುರಿತು ಭಕ್ತ ವೀರಪ್ಪ ಅವರು ಮಾತನಾಡಿ, 'ಪ್ರತಿವರ್ಷವೂ ನಾವು ಈ ಜಾತ್ರೆಗೆ ಬಂದಿದ್ದೇವೆ. ಈ ಬಾರಿಯೂ ಬಂದಿದ್ದೇವೆ. ಇಲ್ಲಿಗೆ ಬಂದಾಗ ಮನಸ್ಸಿಗೆ ಏನೋ ಸಂತೋಷವಾಗುತ್ತದೆ. ಶರೀಫರು ಹಾಗೂ ಗೋವಿಂದಭಟ್ ಅವರು ಜಗತ್ತಿಗೆ ಸಾರಿರುವಂತೆ ನಾವು ಪಾಲಿಸಿಕೊಂಡು ಹೋಗುತ್ತೇವೆ' ಎಂದಿದ್ದಾರೆ.
ಭಕ್ತ ಬಸಪ್ಪ ಅವರು ಮಾತನಾಡಿದ್ದು, 'ನಾವು ಕುಟುಂಬ ಸಮೇತರಾಗಿ ಶಿಶುನಾಳರ ಜಾತ್ರೆಗೆ ಹೋಗುತ್ತೇವೆ. ಶರೀಫಜ್ಜರು ಹಾಗೂ ಗೋವಿಂದಭಟ್ ಅವರು ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆ ಸಾರಿದ್ದರು. ಅದನ್ನು ಈಗಿನ ಪೀಳಿಗೆ ಸೌಹಾರ್ದತೆಯಿಂದ ನಡೆಸಿಕೊಂಡು ಹೋಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸುಪ್ರಸಿದ್ಧ ಶಿರಸಿ ಜಾತ್ರೆ ಆರಂಭ: ಗದ್ದುಗೆಯಲ್ಲಿ ವಿರಾಜಮಾನಳಾದ ಶ್ರೀ ಮಾರಿಕಾಂಬಾ

