ಶಿರೂರು ಶ್ರೀಗಳ ಪುರಪ್ರವೇಶ: ವಿಜೃಂಭಣೆಯ ಪೌರ ಸನ್ಮಾನಕ್ಕೆ ಸಾವಿರಾರು ಭಕ್ತರು ಸಾಕ್ಷಿ
ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳ ದರ್ಶನ ಮುಗಿಸಿ ಉಡುಪಿಯ ಕಡಿಯಾಳಿಗೆ ತಲುಪಿದ ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಿ, ಬಳಿಕ ಅವರನ್ನು ಮೆರವಣಿಗೆಯಲ್ಲಿ ಮಠಕ್ಕೆ ಕರೆದೊಯ್ಯಲಾಯಿತು.

Published : January 10, 2026 at 10:51 AM IST
ಉಡುಪಿ: ಶಿರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಪುರಪ್ರವೇಶ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳ ದರ್ಶನ ಮುಗಿಸಿ ಉಡುಪಿಯ ಕಡಿಯಾಳಿಗೆ ತಲುಪಿದ ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಅವರನ್ನು ಮೆರವಣಿಗೆಯಲ್ಲಿ ಮಠಕ್ಕೆ ಕರೆದೊಯ್ಯಲಾಯಿತು. ಶೀರೂರು ಮಠದ ಪಟ್ಟದೇವರಾದ ರುಕ್ಮಿಣಿ, ಸತ್ಯಭಾಮ ಸಹಿತ ವಿಠಲ ದೇವರನ್ನು ಮೇನೆಯಲ್ಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ವೇದವರ್ಧನ ಶ್ರೀಗಳು ಮಯೂರಾಲಂಕೃತ ತೆರೆದ ವಾಹನದಲ್ಲಿ ತೆರಳಿದರು.
ಸಾವಿರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಕಲಾತಂಡಗಳು, ಕುಣಿತ ಭಜನೆ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ನಂತರ ಸ್ವಾಮೀಜಿ ವಿಶೇಷ ಅಲಂಕೃತ ವಾಹನದಲ್ಲಿ ಪುರಪ್ರವೇಶ ಮಾಡಿದರು. ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದರ್ಶನ ಪಡೆದ ಬಳಿಕ ಅವರು, ಶ್ರೀಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಶಿರೂರು ಸ್ವಾಮೀಜಿಯನ್ನು ಗೌರವಿಸಲಾಯಿತು. ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ತದನಂತರ ರಥಬೀದಿಯಲ್ಲಿ ಹಾಕಲಾದ ವೇದಿಕೆಯಲ್ಲಿ ಉಡುಪಿ ನಗರಸಭೆಯ ವತಿಯಿಂದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಿರೂರು ಸ್ವಾಮೀಜಿ ಅವರನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಪೌರ ಸಮ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ, ಕಾರ್ಯದರ್ಶಿ ಮೋಹನ್ ಭಟ್, ಕೋಶಾಧಿಕಾರಿ ಜಯ ಪ್ರಕಾಶ್ ಕೆದ್ಲಾಯ, ಪೌರಾಯುಕ್ತ ಮಹಾಂತೇಶ್ ಹಂಗರಗಿ ಉಪಸ್ಥಿತರಿದ್ದರು.
ಕೃಷ್ಣನಿಗೆ ಚಿನ್ನದ ಭಗವದ್ಗೀತೆ ಅರ್ಪಣೆ: ದೆಹಲಿಯ ದಾನಿಯೊಬ್ಬರು ನೀಡಿರುವ 2 ಕೋಟಿ ರೂ ವೆಚ್ಚದ ಚಿನ್ನದ ಭಗವದ್ಗೀತೆಯನ್ನು ಪುತ್ತಿಗೆ ಮಠದ ಶ್ರೀಗಳು ಇತ್ತೀಚೆಗೆ ಕೃಷ್ಣನಿಗೆ ಸಮರ್ಪಿಸಿದ್ದರು. ಭಗವದ್ಗೀತೆಯ 18 ಅಧ್ಯಾಯಗಳನ್ನು ಚಿನ್ನದ ಹಾಳೆಗಳಲ್ಲಿ ಬರೆಯಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಲಕ್ಷ್ಮಿ ನಾರಾಯಣನ್ ಎಂಬವರು ಈ ಅಪರೂಪದ ಗ್ರಂಥವನ್ನು ಕೃಷ್ಣಮಠಕ್ಕೆ ಕೊಡುಗೆಯಾಗಿ ನೀಡಿದ್ದರು. ವಿಶಿಷ್ಟ ಭಗವದ್ಗೀತೆಯಲ್ಲಿ ಎಲ್ಲ 18 ಅಧ್ಯಾಯಗಳು ಮತ್ತು 700 ಶ್ಲೋಕಗಳಿವೆ.
ಕೃಷ್ಣದೇವರಿಗೆ ಸಮರ್ಪಣೆಯ ವೇಳೆ ರಥ ಬೀದಿಯಲ್ಲಿ ಚಿನ್ನದ ಭಗವದ್ಗೀತೆಯ ಮೆರವಣಿಗೆ ನಡೆಸಲಾಗಿತ್ತು. ಚಿನ್ನದ ಪಾರ್ಥ ಸಾರಥಿ ರಥದಲ್ಲಿ ಮೆರವಣಿಗೆ ನಡೆಸಲಾಗಿತ್ತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ಉಡುಪಿ : ಕೃಷ್ಣಮಠ ವಿಶ್ವ ಗೀತಾ ಪರ್ಯಾಯ ವಿಶೇಷ - ಚಿನ್ನದ ಭಗವದ್ಗೀತಾ ಪುಸ್ತಕ ಲೋಕಾರ್ಪಣೆ

