ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆ, ಅಕ್ರಮ ತಡೆಗೆ ಕ್ರಮ
ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಅಕ್ರಮ ತಡೆಗೆ ಪಿಯು ಬೋರ್ಡ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Published : February 28, 2026 at 12:43 PM IST
ಬೆಂಗಳೂರು: ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 17ರವರೆಗೆ ನಡೆಯಲಿದೆ. ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಪರೀಕ್ಷೆ ನಡೆಯಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆಯೂ ಪಿಯು ಬೋರ್ಡ್ ಕಣ್ಣಿರಿಸಿದೆ.
ಬೆಂಗಳೂರಲ್ಲಿ ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಮತ್ತು 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಸೈಬರ್ ಸೆಂಟರ್‌ಗಳು, ಜೆರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಶಾಪ್ ಬಂದ್ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ಅಲ್ಲದೇ ಈ ಹಿಂದಿನ ಪರೀಕ್ಷೆಗಳಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದವರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವವರು, ಪ್ರಶ್ನೆಪತ್ರಿಕೆಗಳ ಆಮಿಷವೊಡ್ಡುವವರ ಮೇಲೆ ನಿಗಾ ವಹಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪರೀಕ್ಷಾ ವ್ಯವಸ್ಥೆ ಮಾನಿಟರ್ ಮಾಡಲು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ, ಪ್ರತಿ ಜಿಲ್ಲೆಯ ಡಿಸಿಗಳು, ಎಸ್ಪಿಗಳು ಮಾನಿಟರ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕೊಂಡೊಯ್ಯುವಾಗಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪ್ರಶ್ನೆಪತ್ರಿಕೆ ರವಾನೆ ವಿಡಿಯೋ ಚಿತ್ರೀಕರಣದ ವ್ಯವಸ್ಥೆ ಮಾಡಲಾಗಿದ್ದು, ಪ್ರಶ್ನೆ - ಪತ್ರಿಕೆಗಳ ಜವಾಬ್ದಾರಿ ವಹಿಸಿರುವವರು ಅಕ್ರಮದಲ್ಲಿ ಶಾಮೀಲಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ, ಅಧಿಕಾರಿಗಳಿಗೆ ಸಂಪೂರ್ಣ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಪಿ, ಡಿಸಿಗಳ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ
- ಫೆ.28: ಕನ್ನಡ, ಅರೇಬಿಕ್
- ಮಾ.2: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
- ಮಾ.3: ಇಂಗ್ಲಿಷ್
- ಮಾ.4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮಾ.5: ಇತಿಹಾಸ
- ಮಾ.6: ಭೌತಶಾಸ್ತ್ರ
- ಮಾ.7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ ಭೂಗರ್ಭಶಾಸ್ತ್ರ
- ಮಾ.9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ
- ಮಾ.10: ಅರ್ಥಶಾಸ್ತ್ರ
- ಮಾ.11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹವಿಜ್ಞಾನ
- ಮಾ.12: ಹಿಂದಿ
- ಮಾ.13: ರಾಜ್ಯಶಾಸ್ತ್ರ
- ಮಾ.14: ಲೆಕ್ಕಶಾಸ್ತ್ರ, ಗಣಿತ
- ಮಾ.16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
- ಮಾ.17: ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟಿಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಆ್ಯಂಡ್ ವೆಲ್ನೆಸ್
ಇದನ್ನೂ ಓದಿ: ದ್ವಿತೀಯ PUC ಪರೀಕ್ಷೆ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ KSRTC ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

