ಇಂದಿನಿಂದ ಪಿಯುಸಿ ಪರೀಕ್ಷೆ: ಭಯ ಬಿಟ್ಟು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಬೆಳಗಾವಿ DDPU ಸಲಹೆ
ಇಂದಿನಿಂದ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಭಯ ಬಿಟ್ಟು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಡಿಡಿಪಿಯು ಧೈರ್ಯ ತುಂಬಿದ್ದಾರೆ.

Published : February 28, 2026 at 8:07 AM IST
|Updated : February 28, 2026 at 8:20 AM IST
ಬೆಳಗಾವಿ: ಈ ಬಾರಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಒಟ್ಟು 22,411 ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶನಿವಾರ ಕನ್ನಡ ಪರೀಕ್ಷೆ ನಡೆಯಲಿದ್ದು, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಎಲ್ಲ ರೀತಿ ಸಿದ್ಧತೆ ಕೈಗೊಂಡಿದೆ. ಭಯ ಬಿಟ್ಟು, ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಡಿಡಿಪಿಯು ಸಲಹೆ ನೀಡಿದ್ದಾರೆ.
ಒಟ್ಟು 41 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಗಾವಿ ನಗರದಲ್ಲಿ 20, ರಾಮದುರ್ಗದಲ್ಲಿ 5, ಸವದತ್ತಿಯಲ್ಲಿ 3, ಬೈಲಹೊಂಗಲದಲ್ಲಿ 7, ಕಿತ್ತೂರಿನಲ್ಲಿ 3, ಖಾನಾಪುರದಲ್ಲಿ 3 ಪರೀಕ್ಷಾ ಕೇಂದ್ರಗಳಿವೆ. ಶನಿವಾರ ನಡೆಯಲಿರುವ ಕನ್ನಡ ವಿಷಯ ಪರೀಕ್ಷೆಯಲ್ಲಿ ಒಟ್ಟು 11,862 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.
19,981 ರೆಗ್ಯೂಲರ್ ವಿದ್ಯಾರ್ಥಿಗಳು, 501 ಖಾಸಗಿ ಅಭ್ಯರ್ಥಿಗಳು, ರಿಪಿಟರ್ಸ್ 1,900, ಫಲಿತಾಂಶ ಸುಧಾರಣೆಗಾಗಿ 29 ವಿದ್ಯಾರ್ಥಿಗಳು ಸೇರಿ ಒಟ್ಟು 22,411 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಡಿಡಿಪಿಯು ಎಂ.ಎಂ.ಕಾಂಬಳೆ, ಯಾವ ವಿದ್ಯಾರ್ಥಿ ಕೂಡ ಪರೀಕ್ಷೆಗೆ ಭಯ ಪಡುವ ಅವಶ್ಯಕತೆ ಇಲ್ಲ. ಪರೀಕ್ಷೆಗೆ ಅವಶ್ಯವಿರುವ ಹಾಲ್ ಟಿಕೆಟ್, ಐಡಿ ಕಾರ್ಡ್, ಪೆನ್ನು ಸೇರಿ ಮತ್ತಿತರ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು, ಧೈರ್ಯದಿಂದ ಪರೀಕ್ಷೆ ಬರೆಯವಂತೆ ಕಿವಿಮಾತು ಹೇಳುತ್ತೇನೆ. ಎಲ್ಲಾ ಮಕ್ಕಳಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಬಾರಿ ಉತ್ತಮ ಫಲಿತಾಂಶ ಸಿಗುತ್ತೆ: ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ವಿಶೇಷ ತರಗತಿ ನಡೆಸಿದ್ದೇವೆ. ಮೊದಲ ಟೆಸ್ಟ್, ಅರ್ಧ ವಾರ್ಷಿಕ ಪರೀಕ್ಷೆ ಹಾಗೂ ಎರಡು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿದ್ದೇವೆ. ಇದರಿಂದ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಿದೆ. ಮೊದಲ ಪರೀಕ್ಷೆಗಿಂತ ಎರಡನೇ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆ ಆಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಹಾಗಾಗಿ, ಈ ಬಾರಿ ಉತ್ತಮ ಫಲಿತಾಂಶ ದಾಖಲಾಗುವ ವಿಶ್ವಾಸ ಇದೆ ಎಂದು ಎಂ.ಎಂ.ಕಾಂಬಳೆ ಹೇಳಿದರು.
ಕಾಪಿ ಮಾಡೋಕೆ ಅವಕಾಶ ಇಲ್ಲ: ನಮ್ಮ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಪರೀಕ್ಷೆಯಲ್ಲಿ ನಕಲು ಮಾಡುವ ಪದ್ಧತಿ ಇಲ್ಲವೇ ಇಲ್ಲ. ಯಾಕೆಂದರೆ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಮಕ್ಕಳು ಪರೀಕ್ಷೆ ಬರೆಯುವ ಸಿಸಿಟಿವಿ ದೃಶ್ಯಾವಗಳಿಗಳನ್ನು ಜಿಲ್ಲಾ ಹಂತದಲ್ಲಿ, ಧಾರವಾಡ ಆಯುಕ್ತರ ಕಚೇರಿ ಹಾಗೂ ರಾಜ್ಯಮಟ್ಟದಲ್ಲಿ ನಿರಂತರವಾಗಿ ವೀಕ್ಷಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ವಿದ್ಯಾರ್ಥಿಗಳು ಒಳ್ಳೆಯ ರೀತಿ ಅಭ್ಯಾಸ ಮಾಡಿದ್ದಾರೆ. ಉಪನ್ಯಾಸಕರು, ಪ್ರಾಚಾರ್ಯರು ಕಷ್ಟಪಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಮಾಡಿಸಿದ್ದಾರೆ ಎಂದರು.
ಎಸ್ಕಾರ್ಟ್ನಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ: ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಯನ್ನು ವಿತರಿಸಲು ಜಿಲ್ಲಾಧಿಕಾರಿಗಳು ವಿಶೇಷ ಜಿಲ್ಲಾಧಿಕಾರಿ, ಉಪ ನಿರ್ದೇಶಕರು ಮತ್ತು ಜಿಲ್ಲಾ ಖಜಾನೆ ಅಧಿಕಾರಿಗಳನ್ನು ಒಳಗೊಂಡ ಮೂವರ ಸಮಿತಿ ರಚನೆ ಮಾಡಿದ್ದಾರೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದಲೇ ಜಿಲ್ಲಾ ಖಜಾನೆಯಿಂದ ಎಸ್ಕಾರ್ಟ್ನಲ್ಲೇ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಬಂಡಲ್ಗಳನ್ನು ತಲುಪಿಸಲು ಸಜ್ಜಾಗಿದ್ದೇವೆ. ಮೊದಲಿಗೆ ರಾಮದುರ್ಗ, ಸವದತ್ತಿ, ಬೈಲಹೊಂಗಲ, ಕಿತ್ತೂರ, ಖಾನಾಪುರ, ಬೆಳಗಾವಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಮುಟ್ಟಿಸಲಿದ್ದೇವೆ. ಈ ತಂಡದಲ್ಲಿ ತಹಶೀಲ್ದಾರ, ಬಿಇಒ, ಓರ್ವ ಪ್ರಾಚಾರ್ಯರು ಇರುತ್ತಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರ ನೇತೃತ್ವದಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆಸಲು 41 ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು, ಉತ್ತರಪತ್ರಿಕೆ ಪಾಲಕರು, ವಿಶೇಷ ಜಾಗೃತ ದಳದ ಸದಸ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಜಾಗೃತ ದಳ, ತಾಲೂಕಾ ಮಟ್ಟದಲ್ಲಿ ತಾಲೂಕು ಜಾಗೃತ ದಳ ಕೆಲಸ ಮಾಡಲಿದೆ. ಜೊತೆಗೆ ಪೊಲೀಸ್, ಆರೋಗ್ಯ ಮತ್ತು ಅಂಚೆ ಸೇರಿ ವಿವಿಧ ಇಲಾಖೆಗಳು ಸಹಕಾರ ನೀಡಲಿವೆ ಎಂದರು.
ಸುಗಮ ಪರೀಕ್ಷೆಗೆ ಎಲ್ಲ ರೀತಿ ಕ್ರಮ: ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಮತ್ತು ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ವಿಶೇಷ ತಂಡವು ವೆಬ್ ಕಾಸ್ಟಿಂಗ್ ವೀಕ್ಷಣೆ ಮಾಡಲಿದೆ. ಜೊತೆಗೆ ಪರೀಕ್ಷಾ ಕೊಠಡಿಗಳಲ್ಲಿ ಉತ್ತಮ ಸ್ವಚ್ಛತೆ, ಗಾಳಿ, ಬೆಳಕು, ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ದ್ವಿತೀಯ PUC ಪರೀಕ್ಷೆ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ KSRTC ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

