ರಜೆ ಬಳಿಕ ಶಾಲೆಗಳ ಪುನಾರಂಭ: ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ, ಮನೆಮಾಡಿದ ಮೊದಲ ದಿನ ಹಬ್ಬದ ಸಂಭ್ರಮ
ಕೆಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.

Published : June 1, 2026 at 12:29 PM IST
ಬಳ್ಳಾರಿ: ಬೇಸಿಗೆ ರಜೆಯ ಬಳಿಕ ಜಿಲ್ಲಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಸೋಮವಾರ ಪುನರಾರಂಭಗೊಂಡಿವೆ. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲು ಶಾಲೆಗಳು ವಿಶೇಷ ಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಆವರಣಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು.
ಶಾಲೆಗಳು ಪುನಾರಂಭ: ಶನಿವಾರ ಮತ್ತು ಭಾನುವಾರವೇ ಶಿಕ್ಷಕರು ಶಾಲಾ ಕೊಠಡಿಗಳು, ಶೌಚಾಲಯಗಳು, ಅಡುಗೆ ಮನೆ ಹಾಗೂ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಮಕ್ಕಳ ಆಗಮನಕ್ಕೆ ಸಜ್ಜುಗೊಳಿಸಿದ್ದರು. ಸರ್ಕಾರದ ಆದೇಶದಂತೆ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ತರಗತಿಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ತಳಿರು ತೋರಣಗಳಿಂದ ಅಲಂಕೃತವಾದ ಶಾಲೆಗಳು: ಶಾಲಾ ಕಟ್ಟಡಗಳನ್ನು ತಳಿರು ತೋರಣ, ಬಣ್ಣಬಣ್ಣದ ರಂಗೋಲಿ ಹಾಗೂ ಸ್ವಾಗತ ಫಲಕಗಳಿಂದ ಅಲಂಕರಿಸಲಾಗಿತ್ತು. ಮಕ್ಕಳ ಮುಖದಲ್ಲೂ ಹೊಸ ತರಗತಿಗೆ ಕಾಲಿಡುವ ಸಂಭ್ರಮ ಸ್ಪಷ್ಟವಾಗಿ ಗೋಚರಿಸಿತು. ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳಿಗೆ ಹೂವು ನೀಡಿ ಬರಮಾಡಿಕೊಂಡರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ: ಬೇಸಿಗೆ ರಜೆಯ ನಂತರ ಸ್ನೇಹಿತರನ್ನು ಭೇಟಿಯಾಗುವ ಸಂತಸ, ಹೊಸ ಪುಸ್ತಕಗಳು ಮತ್ತು ಹೊಸ ತರಗತಿಯ ಉತ್ಸಾಹದಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದರು. ಕೆಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.
ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿ ತಿಂಡಿ ವಿತರಿಸಿ ಸಂತಸ: ಶಾಲಾ ಆರಂಭೋತ್ಸವದ ಅಂಗವಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಸಿಹಿ ತಿಂಡಿಗಳನ್ನು ವಿತರಿಸಿ ಮಕ್ಕಳ ಸಂತಸವನ್ನು ಹೆಚ್ಚಿಸಲಾಯಿತು. ಹಲವು ಶಾಲೆಗಳಲ್ಲಿ ಪ್ರಾರ್ಥನಾ ಸಭೆ, ಪರಿಚಯ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಯಿತು.
ಆದರೆ, ಮೊದಲ ದಿನವಾಗಿದ್ದರಿಂದ ಅನೇಕ ಕಡೆಗಳಲ್ಲಿ ಪೂರ್ಣ ಪ್ರಮಾಣದ ಪಾಠ - ಪ್ರವಚನಗಳು ಆರಂಭವಾಗಲಿಲ್ಲ. ವಿದ್ಯಾರ್ಥಿಗಳ ಪರಿಚಯ, ಪುಸ್ತಕ ವಿತರಣೆ ಹಾಗೂ ಶಾಲಾ ನಿಯಮಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆದವು. ಕೆಲವು ಶಾಲೆಗಳಲ್ಲಿ ಇನ್ನೂ ವಿದ್ಯಾರ್ಥಿಗಳು ಊರುಗಳಿಂದ ಮರಳದ ಕಾರಣ ಹಾಜರಾತಿ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ಒಟ್ಟಾರೆ ಜಿಲ್ಲೆಯಾದ್ಯಂತ ಶಾಲೆಗಳ ಪುನರಾರಂಭವು ಉತ್ಸವದ ವಾತಾವರಣದಂತೆ ನಡೆದಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಉತ್ಸಾಹದಿಂದ ಚಾಲನೆ ನೀಡಿದರು.
ಶಿವಮೊಗ್ಗದಲ್ಲಿ ಮಕ್ಕಳಿಗೆ ಆರತಿ ಬೆಳಗಿ ಶಾಲೆಗೆ ಸ್ವಾಗತ: ಜೂನ್ 1ರಂದು ಅತ್ಯಂತ ಸಂತೋಷದಿಂದ ಸರ್ಕಾರಿ ಶಾಲೆಗಳಿಗೆ ಆಗಮಿಸುವ ಮಕ್ಕಳನ್ನು ಉತ್ತಮ ರೀತಿಯಲ್ಲಿ ಸ್ವಾಗತ ಮಾಡಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ. ಈ ಹಿನ್ನಲೆಯಲ್ಲಿ ಇಂದು ಎಲ್ಲಾ ಶಾಲೆಗಳಲ್ಲಿ ಬೆಳಗ್ಗೆ ಬಂದ ಮಕ್ಕಳನ್ನು ಶಿಕ್ಷಕರು ಅತ್ಯಂತ ಸಂತೋಷದಿಂದ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ.
ಕೆಲ ಶಾಲೆಗಳಲ್ಲಿ ಹೂ ಹಾಕಿ ಸ್ವಾಗತ ಮಾಡಿದರೆ, ಕೆಲ ಕಡೆ ಗುಲಾಬಿ ಹೂ ನೀಡಿ ಸ್ವಾಗತಿಸಿದ್ದಾರೆ. ಇನ್ನೂ ಕೆಲ ಶಾಲೆಯಲ್ಲಿ ತರಗತಿ ಒಳಗೆ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಆರತಿ ಎತ್ತಿ ಸ್ವಾಗತ ಕೋರಿದ್ದಾರೆ. ವಿದ್ಯಾರ್ಥಿಗಳು ಸಹ ಶಿಕ್ಷಕರನ್ನು ಕಂಡು ಸಂತೋಷದಿಂದ ಶಾಲೆಗೆ ಹೋಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಸಾಂಸ್ಕೃತಿಕ ಕಲೆಗಳನ್ನು ಸಹ ಕಲಿಸಲಾಗುತ್ತಿದೆ.
ಅಲ್ಲದೆ ಕೆಲ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸಹ ಇದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದೆ. ಶಾಲೆಗಳಲ್ಲಿ ಶಿಕ್ಷಕರ ಜೊತೆಗೆ ಎಸ್ಡಿಎಂಸಿ ಸದಸ್ಯರು ಸಹ ಕೈಜೋಡಿಸಿದ್ದಾರೆ. ಶಾಲೆಗಳಲ್ಲಿ ಇಂದು ಹಬ್ಬದ ವಾತಾವರಣ. ಶಾಲೆಗೆ ತಳಿರು ತೋರಣಗಳಿಂದ ಸಿಂಗರಿಸಿ ದೇಗುಲದ ರೀತಿ ಅಲಂಕರಿಸಿ ಮಕ್ಕಳನ್ನು ಸ್ವಾಗತ ಮಾಡಲಾಯಿತು.
ಇದನ್ನೂ ಓದಿ: ಜೂನ್ 1ರಂದು 1 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸಿಎಂ ಚಾಲನೆ: ಸಚಿವ ಮಧು ಬಂಗಾರಪ್ಪ

