ಬೆಂಗಳೂರು: ತಾಯಿಯ ಮುಂದೆಯೇ ರೌಡಿಶೀಟರ್ ಬರ್ಬರ ಹತ್ಯೆ; ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳಿಂದ ಕೃತ್ಯ
ತಾಯಿಯ ಮುಂದೆಯೇ ರೌಡಿಶೀಟರ್ ಬರ್ಬರ ಹತ್ಯೆಯಾಗಿರುವ ಹೃದಯವಿದ್ರಾವಕ ಘಟನೆ ಥಣಿಸಂದ್ರದಲ್ಲಿ ನಡೆದಿದೆ.

Published : February 26, 2026 at 11:16 AM IST
ಬೆಂಗಳೂರು: ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ರೌಡಿಶೀಟರ್ನನ್ನು ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಡರಾತ್ರಿ ಥಣಿಸಂದ್ರದ ಅಮರಜ್ಯೋತಿ ಲೇಔಟ್‌ನಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದಿನ ಕೃತ್ಯಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ
ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪವನ್ ಕುಮಾರ್ (28) ಕೊಲೆಯಾದವ. ಹೆಲ್ಮೆಟ್ ಧರಿಸಿ ಮೂರು ದ್ವಿಚಕ್ರ ವಾಹನಗಳಲ್ಲಿ ಆರು ಮಂದಿ ದುಷ್ಕರ್ಮಿಗಳು ಪವನ್‌ನ ಮನೆ ಬಳಿ ಬಂದು ಆತನ ತಾಯಿಯ ಕಣ್ಣೆದುರೇ ಕೃತ್ಯ ಎಸಗಿದ್ದಾರೆ.
ರೌಡಿಶೀಟರ್ ಕಪಿಲ್ ಹತ್ಯೆಗೆ ಪ್ರತೀಕಾರ: ಮೂರು ವರ್ಷಗಳ ಹಿಂದೆ ನಡೆದಿದ್ದ ರೌಡಿಶೀಟರ್ ಕಪಿಲ್ ಹತ್ಯೆ ಪ್ರರಣದಲ್ಲಿ ಬಂಧಿತನಾಗಿದ್ದ ಪವನ್ ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಒಂದೂವರೆ ತಿಂಗಳ ಹಿಂದಷ್ಟೆ ಬೇಕರಿಯನ್ನ ಆರಂಭಿಸಿದ್ದರು. ಆದರೆ ಕಪಿಲ್‌ನ ಹತ್ಯೆಯಾದ ಮಾದರಿಯಲ್ಲೇ ಹೆಲ್ಮೆಟ್ ಧರಿಸಿದ್ದ ತಂಡ ಪವನ್ ಕುಮಾರ್ ಹತ್ಯೆ ಮಾಡಿದೆ. ಕಪಿಲ್‌ನ ಸಹೋದರ ಸೇರಿದಂತೆ ಹಲವರ ವಿರುದ್ಧ ಈ ಹತ್ಯೆಯ ಆರೋಪ ಕೇಳಿಬಂದಿದೆ.
ಘಟನಾ ಸ್ಥಳಕ್ಕೆ ಸಂಪಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ನನ್ನ ಕಣ್ಣ ಮುಂದೆಯೇ ಕೊಲೆಗೈದ್ರು: ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ನನ್ನ ಮಗ 8 ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಬಂದಿದ್ದ. ಒಂದೂವರೆ ತಿಂಗಳ ಹಿಂದೆಯಷ್ಟೇ ಬೇಕರಿ ಹಾಕಿಕೊಂಡಿದ್ದ. ತಾನಾಯಿತು, ಮನೆ ಕೆಲಸ ಆಯಿತು ಅಂತಾ ಅಂದುಕೊಂಡಿದ್ದ. ರಾತ್ರಿ ಬೇಕರಿ ಬಂದ್ ಮಾಡಿ ಬರ್ತಾ ಇದ್ದೇನೆ ಎಂದು ಫೋನ್ನಲ್ಲಿ ನನಗೆ ಹೇಳಿದ್ದ. ಬೈಕ್ನಲ್ಲಿ ಚೇಜ್ ಮಾಡಿಕೊಂಡು ಬಂದು ಗೇಟ್ ಮುಂದೆನೇ ಚುಚ್ಚಿಚುಚ್ಚಿ ಕೊಂದಿದ್ದಾರೆ. ನನ್ನ ಕಣ್ಣ ಮುಂದೆಯೇ ನನ್ನ ಮಗನನ್ನು ಹೊಡೆದುಹಾಕಿದ್ರು, ನನಗೆ ಕಾಪಾಡಲು ಆಗಲಿಲ್ಲ. ಮೂರು ಬೈಕ್ನಲ್ಲಿ ಆರು ಜನ ಹೆಲ್ಮೆಟ್ ಹಾಕಿಕೊಂಡು ಬಂದು ಹತ್ಯೆ ಮಾಡಿದ್ದಾರೆ. ಹಳೆಯ ದ್ವೇಷ ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾರೆ. ಪ್ರೇಮ್ ಎಂಬಾತ ನನ್ನ ಮೇಲೆ ದಾಳಿ ಮಾಡಿಸುತ್ತಿದ್ದಾನೆ ಎಂದು ನನ್ನ ಮಗ ಹೇಳುತ್ತಿದ್ದ, ಅದಕ್ಕಾಗಿ ಕೆಲ ತಿಂಗಳು ಬೇರೆ ಊರಲ್ಲಿನ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದೆ. ಇತ್ತೀಚೆಗಷ್ಟೇ ಕರೆದುಕೊಂಡು ಬಂದಿದ್ದೆ ಎಂದು ಪವನ್ ಕುಮಾರ್ ತಾಯಿ ಕೋಮಲ ಮಾಧ್ಯಮಗಳಿಗೆ ಹೇಳಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ 6 ವರ್ಷದ ಬಾಲಕನ ಕೊಲೆ: ಘಟನೆಯ ಸತ್ಯ ಬಿಚ್ಚಿಟ್ಟ ಮೂವರು ಮಕ್ಕಳು, ದೊಡ್ಡಪ್ಪನಿಗೆ ಜೀವಾವಧಿ ಶಿಕ್ಷೆ

