ETV Bharat / state

ಬೆಳಗಾವಿ ಸರ್ಕಾರಿ ಶಾಲೆಯಲ್ಲಿ ರೋಬೋಟಿಕ್, ವರ್ಚುವಲ್ ರಿಯಾಲಿಟಿ ಲ್ಯಾಬ್: ಶಾಲಾ ಹಂತದಲ್ಲೇ ಸಿಗಲಿದೆ ರೋಬೋಟಿಕ್ ಜ್ಞಾನ!

ಬೆಳಗಾವಿಯ ಸರ್ದಾರ್ಸ್ ಸರ್ಕಾರಿ ಪ್ರೌಢಶಾಲೆಯಲ್ಲಿ 3.4 ಕೋಟಿ ಅನುದಾನದಡಿ ರೋಬೋಟಿಕ್, ಭಾಷಾ ಮತ್ತು ವರ್ಚುವಲ್ ಪ್ರಯೋಗಾಲಯ ಸ್ಥಾಪಿಸಲಾಗಿದೆ. ವರದಿ: ಸಿದ್ದನಗೌಡ ಪಾಟೀಲ್

ROBOTIC AND VIRTUAL REALITY LAB
ಸರ್ಕಾರಿ ಶಾಲೆಯಲ್ಲಿ ರೋಬೋಟಿಕ್, ವರ್ಚುವಲ್ ರಿಯಾಲಿಟಿ ಲ್ಯಾಬ್ (ETV Bharat)
author img

By ETV Bharat Karnataka Team

Published : August 28, 2026 at 9:23 PM IST

5 Min Read
Choose ETV Bharat

ಬೆಳಗಾವಿ: ರೋಬೋಟಿಕ್ ಲ್ಯಾಬ್, ವರ್ಚುವಲ್ ರಿಯಾಲಿಟಿ ಲ್ಯಾಬ್​ಗಳು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಮಾತ್ರ ಮಕ್ಕಳಿಗೆ ಕಲಿಯಲು ಸಿಗುತ್ತವೆ. ಆದರೆ, ಇದನ್ನು ಇಲ್ಲಿನ ಸರ್ಕಾರಿ ಶಾಲೆ ಸುಳ್ಳಾಗಿಸಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ರೋಬೋಟಿಕ್ ಲೋಕವೊಂದು ಇಲ್ಲಿ ತೆರೆದಿದೆ. ಇದು ವಿದ್ಯಾರ್ಥಿಗಳಲ್ಲಿ ಕೌತುಕತೆ ಹೆಚ್ಚಿಸಿದೆ.

ಬೆಳಗಾವಿಯ ಕರ್ನಾಟಕ ಪಬ್ಲಿಕ್ ಶಾಲೆ(ಸರ್ದಾರ್ಸ್ ಸರ್ಕಾರಿ ಪ್ರೌಢಶಾಲೆ)ಯಲ್ಲಿ 3.4 ಕೋಟಿ ಅನುದಾನದಡಿ ರೋಬೋಟಿಕ್, ಭಾಷಾ ಮತ್ತು ವರ್ಚುವಲ್ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದೇ ಆಗಸ್ಟ್ 23ರಂದು ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಸೇರಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

ಬೆಳಗಾವಿ ಸರ್ಕಾರಿ ಶಾಲೆಯಲ್ಲಿ ರೋಬೋಟಿಕ್, ವರ್ಚುವಲ್ ರಿಯಾಲಿಟಿ ಲ್ಯಾಬ್ (ETV Bharat)

ಇದಕ್ಕಾಗಿ ಎರಡು ಪ್ರತ್ಯೇಕ ಕೊಠಡಿ ಸಿದ್ಧಪಡಿಸಲಾಗಿದೆ. ವಾರದಲ್ಲಿ ಎರಡು ಅವಧಿ ಪ್ರಯೋಗಾಲಯಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಏಕಕಾಲಕ್ಕೆ ಎರಡೂ ಕಡೆ ತಲಾ 15 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ವಿದ್ವತ್ ಸಂಸ್ಥೆಯು ಪಠ್ಯವನ್ನು ತಯಾರಿಸಿದ್ದರೆ, ಬೆಲ್ ಸರ್ವೀಸಸ್‌ ಸಂಸ್ಥೆಯು ಇಡೀ ಪ್ರಯೋಗಾಲಯನ್ನು ಸಜ್ಜುಗೊಳಿಸಿದೆ. ಇಂಗ್ಲಿಷ್, ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಪಠ್ಯಗಳನ್ನು ತಯಾರಿಸಲಾಗಿದೆ. 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನದ ಪರಿಕಲ್ಪನೆಗಳನ್ನು ಸುಲಭವಾಗಿ ತಿಳಿಸಿ, ವಿಜ್ಞಾನದ ಕಡೆ ಮಕ್ಕಳ ಆಕರ್ಷಿತರಾಗಲಿ ಎಂಬುದು ಇದರ ಉದ್ದೇಶವಾಗಿದೆ.

ಚವ್ಹಾಟ ಗಲ್ಲಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಸರ್ದಾರ್ಸ್ ಪ್ರೌಢಶಾಲೆಯಲ್ಲಿ ರೋಬೋಟಿಕ್ ಲ್ಯಾಬ್ ಸದುಪಯೋಗ ಪಡೆದುಕೊಳ್ಳಬಹುದು. ಅದೇರೀತಿ ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲೂ ಇದೇ ಮಾದರಿಯ ರೋಬೋಟಿಕ್, ಭಾಷಾ ಮತ್ತು ವರ್ಚುವಲ್ ರಿಯಾಲಿಟಿ ಲ್ಯಾಬ್ ಸ್ಥಾಪಿಸಲಾಗಿದೆ. ಅಲ್ಲಿನ ಸುತ್ತಮುತ್ತಲಿನ ಪ್ರಾಥಮಿಕ‌ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಅಲ್ಲಿ ಕಲಿಯಲು ಅವಕಾಶ ನೀಡಲಾಗಿದೆ.

ರೋಬೋಟಿಕ್ ಲ್ಯಾಬ್​​ನಲ್ಲಿ ಏನಿದೆ?: ರೋಬೋಟಿಕ್ ಪ್ರಯೋಗಾಲಯದಲ್ಲಿ ಹಸಿರು ಕಣ್ಣುಗಳ, ದುಂಡು ಮುಖದ, ಬಿಳಿ ಬಣ್ಣದ 'ಎಮ್ಮಿ ಬಾಟ್' ಹೆಸರಿನ ರೋಬೊಟ್ ತನ್ನ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಅತ್ತಿಂದಿತ್ತ, ಇತ್ತಿಂದತ್ತ ಟೇಬಲ್ ಮೇಲೆ ಓಡಾಡುವುದು ಮಕ್ಕಳನ್ನು ಪುಳಕೀತಗೊಳಿಸುತ್ತದೆ. ಅದು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ವಿದ್ಯಾರ್ಥಿಗಳೇ ಕೋಡಿಂಗ್ ಮೂಲಕ ನಿರ್ದೇಶನ ನೀಡಬೇಕು. ಅದಕ್ಕೂ ಮೊದಲು ಕ್ಯೂಬಿಕ್ ಎಐ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಲಾಗಿನ್ ಆಗಬೇಕು. ಅದರಲ್ಲಿನ ಲೂಪ್‌ನಲ್ಲಿ ಒಂದೊಂದೇ ಕಮಾಂಡ್‌ಗಳನ್ನು ನೀಡುತ್ತಾ ಹೋಗಬೇಕು. ಜೊತೆಗೆ ಕಂಪ್ಯೂಟರ್ ಸ್ಕ್ರೀನ್ ಬಲ ಬದಿಯಲ್ಲಿ ಇದೇ ಕಮಾಂಡ್‌ಗಳನ್ನು ಆಧರಿಸಿದ 'ಕೋಡಿಂಗ್ ಲಾಂಗ್ವೇಜ್' ಜನರೇಟ್ ಆಗುತ್ತಾ ಹೋಗುತ್ತದೆ. ಜಾವಾ, ಸಿ + + ಮತ್ತು ಪೈಥಾನ್ ಕೋಡಿಂಗ್ ಲಾಂಗ್ವೇಜ್ ಗಳಲ್ಲಿ ಕೋಡಿಂಗ್ ಸೃಷ್ಟಿಯಾಗುತ್ತದೆ. ಈ ಕೋಡಿಂಗ್ ಕಲಿತು, ಆ ಮೂಲಕವೂ ರೋಬೊಟ್ ಗೆ ಸೂಚನೆ ನೀಡಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳಿಗೆ ಕೋಡಿಂಗ್ ಕೂಡ ಕಲಿಸುತ್ತೇವೆ ಎಂದು ಪ್ರಯೋಗಾಲಯ ನಿರ್ವಹಣೆ ಮಾಡುತ್ತಿರುವ ದತ್ತಾ ವಿವರಿಸಿದರು.

ROBOTIC AND VIRTUAL REALITY LAB
ವರ್ಚುವಲ್ ರಿಯಾಲಿಟಿ ಲ್ಯಾಬ್ (ETV Bharat)

ಹೇಗಿದೆ ವರ್ಚುವಲ್ ರಿಯಾಲಿಟಿ ಲ್ಯಾಬ್?: ವರ್ಚುವಲ್‌ ರಿಯಾಲಿಟಿ ಪ್ರಯೋಗಾಲಯದಲ್ಲಿ ಪ್ರತಿ ಮಗುವಿಗೂ ವಿಆರ್ ಹೆಡ್‌ ಸೆಟ್‌ಗಳನ್ನು ನೀಡಲಾಗುತ್ತದೆ. ಕುಳಿತುಕೊಳ್ಳಲು ಎಲ್ಲರಿಗೂ ಬೀನ್ ಬ್ಯಾಗ್ ಅಳವಡಿಸಲಾಗಿದೆ. ಹೆಡ್ ಸೆಟ್ ಧರಿಸಿ 360 ಡಿಗ್ರಿ ಆಕಾರದಲ್ಲಿ ತಿರುಗಿದರೆ ಕಣ್ಮುಂದೆಯೇ ನಡೆದಿರುವಂತೆ ಭಾಸವಾಗುವ ಪರಿಕಲ್ಪನೆಗಳು ಪರದೆ ಮೇಲೆ ಮೂಡುತ್ತವೆ. ಮಾನವ, ಪ್ರಾಣಿ-ಪಕ್ಷಿಗಳ ದೇಹ ರಚನೆ, ಹೃದಯ, ಕಣ್ಣು, ಮೆದುಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ. ಆಕಾಶಕಾಯಗಳು, ಸಮುದ್ರ ಜೀವಿಗಳು, ಭೂಗೋಳದ ರಚನೆ, ಗಿಡ-ಮರಗಳಿಗೆ ಆಮ್ಲಜನಕ ಯಾವ ರೀತಿ ಪೂರೈಕೆ ಆಗುತ್ತದೆ ಎಂಬ ಹಲವಾರು ವಿಷಯಗಳು ಕಣ್ಮುಂದೆ ಬರುತ್ತವೆ. ವರ್ಚುವಲ್ ಲ್ಯಾಬ್ ವಿದ್ಯಾರ್ಥಿಗಳಲ್ಲಿ ಕೌತುಕತೆ ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ.

ಭಾಷಾ ಪ್ರಯೋಗಾಲಯದಲ್ಲಿ ಏನಿದೆ?: ಭಾಷಾ ಪ್ರಯೋಗಾಲಯದಲ್ಲಿ ಇಂಗ್ಲೀಷ್ ಪದಗಳನ್ನು ಯಾವ ರೀತಿ ಉಚ್ಛಾರಣೆ ಮಾಡಬೇಕು ಎಂಬುದನ್ನು ಇಂಗ್ಲೀಷ್ ಕಮ್ಯುನಿಕೇಶನ್ ಸಾಫ್ಟವೇರ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದರಿಂದ ಮಕ್ಕಳು ಇಂಗ್ಲೀಷ್ ಪದಗಳನ್ನು ಸರಿಯಾಗಿ ಉಚ್ಛಾರಣೆ ಮಾಡಲು ಸುಲಭವಾಗಲಿದೆ.

ಇಂಗ್ಲಿಷ್​ ಕ್ಲೌಡ್: ಇಂಗ್ಲಿಷ್​ ವ್ಯಾಕರಣ ಮತ್ತು ಜನರಲ್ ನಾಲೇಜ್​​ಗೆ ಸಂಬಂಧಿಸಿದ ವೀಡಿಯೊಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಅವುಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತದೆ. ತರಗತಿಯಲ್ಲಿ ಶಿಕ್ಷಕರು ಹೇಳುವುದಕ್ಕಿಂತ ಹೆಚ್ಚು ಪರಿಣಾಮಕಾರಿ ಆಗಿ ಜ್ಞಾನವನ್ನು ಪಡೆಯಬಹುದು.

ROBOTIC AND VIRTUAL REALITY LAB
ಸರ್ಕಾರಿ ಶಾಲೆಯಲ್ಲಿ ರೋಬೋಟಿಕ್, ವರ್ಚುವಲ್ ರಿಯಾಲಿಟಿ ಲ್ಯಾಬ್ (ETV Bharat)

ರೋಬೊಟ್ ಬಳಕೆ ಅಷ್ಟೇ ಅಲ್ಲ, ರೋಬೊಟ್ ಹೇಗೆ ತಯಾರಿಸಬೇಕು ಎಂಬ ಬಗ್ಗೆಯೂ ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಯಾವ ರೀತಿ ರೋಬೊಟ್ ಅಸೆಂಬಲ್, ಪ್ರೊಗ್ರಾಮಿಂಗ್ ಮಾಡಬೇಕು ಮತ್ತು ಹೇಗೆ ಬಳಸಬೇಕು ಎಂಬುದನ್ನು ವಿವರವಾಗಿ ತಿಳಿಸಲಾಗುತ್ತದೆ. ಮಾಡಲ್ 1, 2 ಮತ್ತು 3ರಲ್ಲಿ ರೋಬೊಟ್ ಪ್ರೊಗ್ರಾಮಿಂಗ್ ನಿಂದ ಹಿಡಿದು ರಚನೆ, ಬಳಸುವಿಕೆ. ಅದೇರೀತಿ ಮೊಬೈಲ್ ಅಪ್ಲಿಕೇಶನ್ ವೈಜ್ ಕಮಾಂಡ್ ಮೂಲಕ ರೋಬೊಟ್ ಕಮಾಂಡ್ ಕೊಡುವುದನ್ನು ತಿಳಿಸಲಾಗುತ್ತದೆ ಎಂದು ದತ್ತಾ ತಿಳಿಸಿದರು.

ಈಟಿವಿ ಭಾರತ ಜೊತೆಗೆ ಮಾತನಾಡಿದ ಲ್ಯಾಬ್ ಶಿಕ್ಷಕ ಬಸನಗೌಡ ಪಾಟೀಲ, ಇದು ವಿಜ್ಞಾನ, ತಂತ್ರಜ್ಞಾನ, ಎಐ ಮತ್ತು ರೋಬೋಟಿಕ್ ಯುಗ‌. ಹಾಗಾಗಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೆ ಈ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಈ ಲ್ಯಾಬ್ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. 10ನೇ ತರಗತಿ ಮುಗಿದ ಮೇಲೆ ಬಹುತೇಕ ವಿದ್ಯಾರ್ಥಿಗಳು ಆರ್ಟ್ಸ್ ಅಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಇಲ್ಲಿ ರೋಬೋಟಿಕ್ ಬಗ್ಗೆ ಮಾಹಿತಿ ಗೊತ್ತಾದರೆ, ಹೆಚ್ಚು ಮಕ್ಕಳು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದರು.

ಉಪ ಪ್ರಾಂಶುಪಾಲ ಶಿವಶಂಕರ ಹಾದಿಮನಿ ಮಾತನಾಡಿ, ನಮ್ಮ ಶಾಲೆಯಲ್ಲಿ ರೋಬೋಟಿಕ್, ಲಾಂಗ್ವೇಜ್ ಮತ್ತು ವರ್ಚುವಲ್ ರಿಯಾಲಿಟಿ ಲ್ಯಾಬ್ ಅಭಿವೃದ್ಧಿ ಪಡಿಸಲಾಗಿದೆ. ರೋಬೊಟ್ ಯಾವ ರೀತಿ ಕೆಲಸ ಮಾಡುತ್ತದೆ?. ಕೋಡಿಂಗ್ ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೆ ತಿಳಿಸಲಾಗುತ್ತದೆ. ಜೊತೆಗೆ ವಿಜ್ಞಾನ, ಸಮಾಜವಿಜ್ಞಾನ ಮತ್ತು ಗಣಿತ ವಿಷಯಗಳ ಕಲಿಕಾಂಶಗಳನ್ನು ತ್ರಿಡಿ ಎಫೆಕ್ಟ್ ಮೂಲಕ ನೈಜವಾಗಿ ನೋಡಿ ಮಕ್ಕಳು ಅರಿಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ನೈಜ ಅನುಭವ ನೀಡಲಿದ್ದು, ಬಹಳ ದಿನಗಳ ಕಾಲ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ROBOTIC AND VIRTUAL REALITY LAB
ಸರ್ಕಾರಿ ಶಾಲೆಯಲ್ಲಿ ರೋಬೋಟಿಕ್, ವರ್ಚುವಲ್ ರಿಯಾಲಿಟಿ ಲ್ಯಾಬ್ (ETV Bharat)

ವಿದ್ಯಾರ್ಥಿಗಳು ಹೇಳುವುದೇನು?: ವಿದ್ಯಾರ್ಥಿನಿ ಗಂಗಾ ಮಾತನಾಡಿ, ರೋಬೋಟಿಕ್ ಲ್ಯಾಬ್ ಆರಂಭ ಆಗಿರುವುದಕ್ಕೆ ನನಗೆ ಬಹಳಷ್ಟು ಖುಷಿ ಇದೆ. ಇಲ್ಲಿ ಕಲಿಯಲು ನಾನು ಉತ್ಸುಕಳಾಗಿದ್ದೇನೆ. ಭವಿಷ್ಯದಲ್ಲಿ ರೋಬೋಟಿಕ್, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಲ್ಲಿ ನನಗೆ ಭದ್ರ ಬುನಾದಿ ಸಿಗುವ ವಿಶ್ವಾಸ ನನಗಿದೆ ಎಂದರು.

ಪಿಯುಸಿ, ಎಂಜಿನಿಯರಿಂಗ್ ತರಗತಿಗಳಲ್ಲಿ ಕಲಿಯುವ ವಿಷಯಗಳನ್ನು ಈಗಲೇ ಕಲಿಯುವ ಅವಕಾಶ ನಮಗೆ ಸಿಗಲಿದೆ. ಸರ್ಕಾರಿ ಶಾಲೆಯಲ್ಲಿ ಇಷ್ಟೊಂದು ಅತ್ಯಾಧುನಿಕ ಸೌಲಭ್ಯ ಒದಗಿಸಿದ ಸರ್ಕಾರ ಮತ್ತು ಶಾಸಕರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅದೇರೀತಿ ನಾನು ಸರ್ಕಾರಿ ಶಾಲೆ ವಿದ್ಯಾರ್ಥಿನಿ ಎನ್ನಲು ತುಂಬಾ ಹೆಮ್ಮೆ ಇದೆ ಎಂಬುದು ವಿದ್ಯಾರ್ಥಿನಿ ಶ್ರೀದೇವಿ ಕುಂಬಾರ ಅಭಿಪ್ರಾಯ.

ರೋಬೋಟಿಕ್ಸ್​, ಭಾಷಾ ಪ್ರಯೋಗಾಲಯ ಹಾಗೂ ಸ್ಮಾರ್ಟ್‌ ಸೌಲಭ್ಯಗಳು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಮತ್ತು ಕೌಶಲಾಧಾರಿತ ಕಲಿಕೆಗೆ ಹೊಸ ಅವಕಾಶ ಕಲ್ಪಿಸಲಿವೆ. ಸರ್ಕಾರಿ ಶಾಲೆಯನ್ನು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವ ಪ್ರಯತ್ನಕ್ಕೆ ಈ ಯೋಜನೆ ಮತ್ತಷ್ಟು ಬಲ ತುಂಬಲಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹೇಳಿದರು.

ಸರ್ದಾರ್ಸ್ ಕೆಪಿಎಸ್ ಮತ್ತು ರಾಮತೀರ್ಥ ನಗರ ಕೆಪಿಎಸ್ ಶಾಲೆಗಳಲ್ಲಿ ರೋಬೋಟಿಕ್​​​, ಲಾಂಗ್ವೇಜ್ ಮತ್ತು ವರ್ಚುವಲ್ ರಿಯಾಲಿಟಿ ಲ್ಯಾಬ್ ಆರಂಭಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಇಲ್ಲಿನ ಬಡ ಮಕ್ಕಳು ಇದರ ಸದುಪಯೋಗದಿಂದ ಉತ್ತಮ ಜ್ಞಾನ ಪಡೆದುಕೊಂಡು, ಭವಿಷ್ಯದಲ್ಲಿ ಇಡೀ ದೇಶವೇ ಮೆಚ್ಚುವ ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ ಎಂದು ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ತಿಳಿಸಿದರು.

ಇವುಗಳನ್ನೂ ಓದಿ: