ETV Bharat / state

ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಿಎಂ ಗಾದಿ ಏರುತ್ತಿರುವ ಡಿಕೆಶಿ: ಹೀಗಿದೆ ಕಾಂಗ್ರೆಸ್​ ನಿಷ್ಠಾವಂತ ನಾಯಕನ ರಾಜಕೀಯ ಬದುಕಿನ ಹಾದಿ!

ವಿದ್ಯಾರ್ಥಿ ನಾಯಕನಿಂದ ಸಿಎಂ ಹುದ್ದೆಗೆ ಏರಲು ಸಜ್ಜಾಗಿರುವ ಡಿಕೆ ಶಿವಕುಮಾರ್​ ಅವರ ಹಾದಿ, ಸವಾಲುಗಳು, ತೊಡಕುಗಳ ಜೊತೆಗೆ ದಿಟ್ಟತನ, ಪಕ್ಷನಿಷ್ಟೆಯಿಂದ ಕೂಡಿತ್ತು ಎಂಬುದಕ್ಕೆ ಅವರ ರಾಜಕೀಯ ಬದುಕೇ ಸಾಕ್ಷಿಯಾಗಿದೆ.

DK SHIVAKUMAR POLITICAL CAREER
ಡಿಕೆ ಶಿವಕುಮಾರ್ (Getty Images)
author img

By ETV Bharat Karnataka Team

Published : May 28, 2026 at 3:52 PM IST

|

Updated : May 30, 2026 at 8:09 PM IST

5 Min Read
Choose ETV Bharat

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಬದಲಾವಣೆ ಆಗುತ್ತಿದೆ. ಈ ಹೊತ್ತಿನಲ್ಲಿ ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಸ್ಥಾನದಿಂದ​ ಮುಖ್ಯಮಂತ್ರಿ ಪದವಿಗೆ ಏರಲು ಸಜ್ಜಾಗಿದ್ದಾರೆ. ಈ ಮೂಲಕ ಅವರ ಪ್ರಾರ್ಥನೆ ಫಲಿಸುವ ಅಂತಿಮ ಹಂತದಲ್ಲಿದೆ.

ಈಗಾಗಲೇ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಕಾಂಗ್ರೆಸ್​ ಹೈ ಕಮಾಂಡ್​ ಡಿಕೆ ಶಿವಕುಮಾರ್​ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ. ಇಂದು ನಡೆದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್​ ನಿಷ್ಠಾವಂತ ಕಾರ್ಯಕರ್ತ: ಡಿಕೆ ಶಿವಕುಮಾರ್ ಹೆಸರು​ ಪಕ್ಷದಲ್ಲಿ ಕೇವಲ ನಾಯಕನಾಗಿ ಮಾತ್ರವಲ್ಲದೇ, ನಿಷ್ಠೆ, ಬದ್ದತೆ, ನಿಪುಣತೆ ಮತ್ತು ದೃಢ ಸಂಕಲ್ಪದೊಂದಿಗೆ ಬೆಸೆದುಕೊಂಡಿದೆ. ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಕಾರ್ಯಕರ್ತನಾಗಿ ಇವರು ತಮ್ಮ ಹೋರಾಟವನ್ನು ಆರಂಭಿಸಿದರು. ಆಗ ಅವರಿಗೆ ಕೇವಲ 18 ವರ್ಷ. 1989ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಧಾನಸಭೆಯ ಮೆಟ್ಟಿಲು ಏರಿದವರು. ಅಲ್ಲಿಂದ ಇಲ್ಲಿವರೆಗೆ ನಾಲ್ಕು ದಶಕಗಳ ರಾಜಕೀಯ ಜೀವನ ನಡೆಸಿದ್ದಾರೆ. ಅವರ ಈ ರಾಜಕೀಯ ಜೀವನ ಹೂವಿನ ಹಾದಿಯೇನೂ ಆಗಿರಲಿಲ್ಲ. ಹಲವು ಏರಿಳಿತಗಳನ್ನು ಕಂಡಿದ್ದಾರೆ. ಮತ್ತು ಅವೆಲ್ಲವುಗಳನ್ನು ದಿಟ್ಟವಾಗಿ ಎದುರಿಸಿದ್ದಾರೆ.

DK SHIVAKUMAR POLITICAL CAREER
ಮೇಕೆದಾಟು ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ (ETV Bharat)

ಇಂಧನ, ನಗರಾಭಿವೃದ್ಧಿ ಮತ್ತು ಸಹಕಾರ ಇಲಾಖೆಗಳ ಸಚಿವರಾಗಿ ಅವರು ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ತಮಗೆ ಎದುರಾದ ಪಕ್ಷದ ಬಿಕ್ಕಟ್ಟಿನ ಕ್ಷಣದಲ್ಲಿ ವಿಶ್ವಾಸಾರ್ಹ ನಾಯಕನಾಗಿ, ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಮೂಲಕ ಹೈಕಮಾಂಡ್​​​​ ನಾಯಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

2017ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆ ಸಮಯದಲ್ಲಿ ಪಕ್ಷದ ಶಾಸಕರನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅವರ ಈ ಯಶಸ್ವಿ ಕಾರ್ಯಾಚರಣೆ, ರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆಯನ್ನೂ ಗಳಿಸಿದ್ದು, ಈಗ ಇತಿಹಾಸ. ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಮಾಡುವಲ್ಲಿ ಅವರು ಹಾಕಿದ ಶ್ರಮ 2023ರ ಎಲೆಕ್ಷನ್​ನಲ್ಲಿ ಪ್ರತಿಫಲ ಕಂಡಿತು. ಆ ವಿಚಾರ ನಿಮಗೆ ಗೊತ್ತೇ ಇದೆ. ವಿದ್ಯಾರ್ಥಿ ನಾಯಕನಾಗಿ ಡಿಸಿಎಂ ಸ್ಥಾನದವರೆಗೆ ಹಲವು ಹುದ್ದೆಗಳನ್ನು ಅವರು ನಿಭಾಯಿಸಿದ್ದಾರೆ. ಇದು ಅವರ ವೈಯಕ್ತಿಕ ವಿಜಯ ಮಾತ್ರವಲ್ಲದೇ, ಪಕ್ಷ ಮತ್ತು ಜನರ ನಡುವೆ ನಿರಂತರ ಸಂಬಂಧ ಇಟ್ಟುಕೊಳ್ಳುವ ಅವರ ವಿಶ್ವಾಸದ ಕೆಲಸ, ದಿಟ್ಟ ನಿರ್ಧಾರಗಳು, ಕಷ್ಟದ ಕ್ಷಣದಲ್ಲಿ ಗಟ್ಟಿಯಾಗಿ ನಿಂತು ಹೋರಾಡುವ ಅವರ ಛಲ ಈ ಯಶಸ್ವಿಗೆ ಕಾರಣವಾದ ಅಂಶಗಳಾಗಿವೆ.

DK SHIVAKUMAR POLITICAL CAREER
ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ಡಿಕೆ ಶಿವಕುಮಾರ್​ (ETV Bharat)

ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ: 1962ರ ಮೇ 15ರಂದು ರಾಜ್ಯದ ಪ್ರಭಾವಿ ಒಕ್ಕಲಿಗ ಸುಮುದಾಯದಲ್ಲಿ ಜನಿಸಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ರಾಯಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಹಳೆ ಮೈಸೂರು ಭಾಗದ ಪ್ರಬಲ ಸಮುದಾಯದ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿರುವ ಡಿಕೆ ಶಿವಕುಮಾರ್, ಉಷಾ ಅವರನ್ನು ವಿವಾಹವಾಗಿದ್ದು, ಐಶ್ವರ್ಯಾ, ಆಭರಣ ಮತ್ತು ಆಕಾಶ್​​ ಎಂಬ ಮೂವರು ಮಕ್ಕಳ ತಂದೆಯಾಗಿದ್ದಾರೆ.

ಐಟಿ ದಾಳಿ, ಅಕ್ರಮ ಹಣದ ವ್ಯವಹಾರ ಪ್ರಕರಣದಲ್ಲಿ ಬಂಧನ ಸೇರಿದಂತೆ ಬಹು ವಿವಾದಗಳನ್ನು ಅವರು ಎದುರಿಸಿದ್ದರು. ಇಷ್ಟೆಲ್ಲ ಸಂಕಷ್ಟಗಳ ಮಧ್ಯ ತಮ್ಮ ಅಚಲತೆಯಿಂದ ಕನಕಪುರ ಬಂಡೆ ಎಂದು ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ.

DK SHIVAKUMAR POLITICAL CAREER
ಮೇಕೆದಾಟು ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಡಿ.ಕೆ.ಶಿವಕುಮಾರ್ (ETV Bharat)

ಡಿಕೆಶಿ ರಾಜಕೀಯ ಜೀವನ: 1980ರ ದಶಕದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಅವರು, 1984 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿದ್ಯಾರ್ಥಿ ವಿಭಾಗದ ಅಧ್ಯಕ್ಷರಾದರು. ಮೊದಲ ಚುನಾವಣೆಯಲ್ಲಿಯೇ 1985ರಲ್ಲಿ ಎಚ್​ಡಿ ದೇವೇಗೌಡ ಅವರ ವಿರುದ್ದ ಸ್ಪರ್ಧಿಸಿದ ಡಿಕೆಶಿ ಸೋಲು ಕಂಡರು.

1989ರಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆಗೆ ಆಯ್ಕೆಯಾದರು. ಇದುವರೆಗೆ ಒಟ್ಟು ಎಂಟು ಬಾರಿ ಯಶಸ್ವಿಯಾಗಿ ಮರು ಆಯ್ಕೆಯಾಗಿದ್ದಾರೆ.

1991ರಲ್ಲಿ ಅಂದಿನ ಮುಖ್ಯಮಂತ್ರಿ ವಿರೇಂದ್ರ ಪಾಟೇಲ್​ ಅನಾರೋಗ್ಯದ ಕಾರಣದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಅವರ ಉತ್ತರಾಧಿಕಾರಿಯಾಗಿ ಬಂಗಾರಪ್ಪ ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆಯಾದರು. ಇದರಲ್ಲಿ ಡಿಕೆ ಶಿವಕುಮಾರ್​ ಪ್ರಮುಖ ಪಾತ್ರವಹಿಸಿದ್ದರು. ಇದರಿಂದಾಗಿ ಬಂಗಾರಪ್ಪ ಅಧಿಕಾರಾವಧಿಯಲ್ಲಿ ಶಿವಕುಮಾರ್​ಗೆ ಬಂದೀಖಾನೆ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. 30ನೇ ವಯಸ್ಸಿನಲ್ಲೇ ಸಚಿವರಾದ ಖ್ಯಾತಿ ಕೂಡಾ ಡಿಕೆ ಅವರಿಗಿದೆ.

DK SHIVAKUMAR POLITICAL CAREER
ಸಿದ್ದರಾಮಯ್ಯ ಅವರೊಂದಿಗೆ ಡಿಕೆ ಶಿವಕುಮಾರ್ (ETV Bharat)

2002ರಲ್ಲಿ ನಗರಾಭಿವೃದ್ಧಿ ಸಚಿವಾಲಯದ ಉಸ್ತುವಾರಿಯಾಗಿ ಅದ್ಬುತ ಕೆಲಸ ಮಾಡಿದರು. ಕರ್ನಾಟಕ ರಾಜ್ಯ ಪಟ್ಟಣ ಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.

2013: 2013 ರಿಂದ 2018 ರ ಅವಧಿಯಲ್ಲಿ ಅವರು ಕನಕಪುರ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಅವಧಿಯಲ್ಲೇ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿ ಕೆಲಸ ಮಾಡಿದ್ದರು.

2018ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದ ಇವರು, ನೀರಾವರಿ ಮತ್ತು ವೈದ್ಯಕೀಯ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

2023ರಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಜೊತೆಗೆ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ವಿವಾದ ಮತ್ತು ಕಾನೂನು ಸವಾಲು: ಶಿವಕುಮಾರ್​ ರಾಜಕೀಯ ಜೀವನ ವಿವಾದ ಮತ್ತು ಸವಾಲುಗಳಿಂದ ತುಂಬಿದೆ. ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಬಂಧನಕ್ಕೆ ಒಳಗಾಗಿದ್ದರು. ತಿಹಾರ್ ಜೈಲಿನಲ್ಲಿ 50 ದಿನಗಳಿಗೂ ಹೆಚ್ಚು ಕಾಲ ಇದ್ದ ಅವರು ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

DK SHIVAKUMAR POLITICAL CAREER
ಚುನಾವಣಾ ಪ್ರಚಾರದಲ್ಲಿ ಡಿಕೆ ಶಿವಕುಮಾರ್​ (Getty Images)

ತನಿಖೆಗೆ ಅಸಹಕಾರ ಆರೋಪದ ಮೇಲೆ ಇಡಿ 2019ರ ಸೆಪ್ಟೆಂಬರ್​ನಲ್ಲಿ ಅವರನ್ನು ಬಂಧಿಸಿತು. ಅವರ ವಿರುದ್ಧ ಸುಮಾರು 200ಕ್ಕೂ ಹೆಚ್ಚು ಆರ್ಥಿಕ ಅಕ್ರಮಗಳ ದೂರುಗಳು ದಾಖಲಾಗಿದ್ದವು. ಇದರ ಹೊರತಾಗಿ 2015ರಲ್ಲಿ ಅಕ್ರಮ ಗ್ರಾನೈಟ್​ ಗಣಿಗಾರಿಕೆ ಆರೋಪದ ಮೇರೆಗೆ ಹೈಕೋರ್ಟ್​ ಡಿಕೆಶಿಗೆ ನೋಟಿಸ್​ ಜಾರಿ ಮಾಡಿತ್ತು.

ಶಾಂತಿನಗರ ವಸತಿ ಸಹಕಾರ ಸಂಘದಲ್ಲಿ ಭೂ ಕಬಳಿಕೆ ಆರೋಪ ಮತ್ತು ತಮ್ಮ ಅಳಿಯನಿಗೆ ಸರ್ಕಾರಿ ಒಪ್ಪಂದದ ಹಂಚಿಕೆಯಲ್ಲಿ ಸ್ವಜನಪಕ್ಷಪಾತ ನಡೆಸಿದ ಆರೋಪವೂ ಅವರ ವಿರುದ್ಧ ಕೇಳಿ ಬಂದಿತ್ತು.

ಎಸ್​ ಎಂ ಕೃಷ್ಣ ಅವರೊಂದಿಗೆ ಡಿಕೆ ಶಿವಕುಮಾರ್​ ಒಡನಾಟ: ತಮ್ಮ ರಾಜಕೀಯ ಗುರು ಎಂದು ಹಲವು ಬಾರಿ ಉಲ್ಲೇಖಿಸಿರುವ ಡಿಕೆ ಶಿವಕುಮಾರ್ ಅವರು​ ಎಸ್​ಎಂ ಕೃಷ್ಣ ಅವರೊಂದಿಗೆೆ, ರಾಜಕೀಯವಾಗಿ ಮಾತ್ರವಲ್ಲದೇ ಕೌಟುಂಬಿಕ ನಂಟನ್ನು​ ಹೊಂದಿದ್ದಾರೆ. ಎಸ್​ಎಂ ಕೃಷ್ಣ ಮೊಮ್ಮಗ ಅಮರ್ತ್ಯ ಹೆಗಡೆಗೆ ತಮ್ಮ ಮೊದಲ ಮಗಳಾದ ಐಶ್ವರ್ಯಾಳನ್ನು ಕೊಟ್ಟು ಮದುವೆ ಮಾಡಿದ್ದು, ಇತ್ತೀಚಿಗೆ ಈ ದಂಪತಿಗೆ ಜನಿಸಿದ ಮಗುವಿನ ತಾತನಾಗಿ ಡಿಕೆ ಶಿವಕುಮಾರ್​​ ಬಡ್ತಿ ಪಡೆದಿದ್ದಾರೆ.

ಆಸಕ್ತಿಕರ ಅಂಶಗಳು: ಕರ್ನಾಟಕ ಪ್ರಬಲ ರಾಜಕಾರಣಿಯಾಗುವುದರ ಜೊತೆಗೆ ಶಿವಕುಮಾರ್ ಅವರು ಭಾರತದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ನಿರಂತರವಾಗಿ ಸ್ಥಾನ ಪಡೆದಿದ್ದಾರೆ. ರಿಯಲ್ ಎಸ್ಟೇಟ್, ಆತಿಥ್ಯ ಮತ್ತು ಶಿಕ್ಷಣದಲ್ಲಿ ವೈಯಕ್ತಿಕ ಹೂಡಿಕೆಗಳನ್ನು ಮಾಡಿದ್ದು, ಈ ವಲಯದಲ್ಲಿ ಭಾರಿ ಪಾಲನ್ನು ಹೊಂದಿರುವ ಅತ್ಯಂತ ಯಶಸ್ವಿ ಉದ್ಯಮಿಯಾಗಿದ್ದಾರೆ.

2023ರ ಚುನಾವಣಾ ನಾಮಪತ್ರ ಸಲ್ಲಿಸುವಾಗ ಅವರು 1,413 ಕೋಟಿ ರೂ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಇದು 2018ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಘೋಷಿಸಿದ್ದ 840 ಕೋಟಿ ರೂಗಿಂತ ಹೆಚ್ಚಾಗಿದೆ. ಅವರ ಆಸ್ತಿ ಕೇವಲ ಐದು ವರ್ಷಗಳಲ್ಲಿ 573 ಕೋಟಿ ರೂಗಿಂತ ಹೆಚ್ಚಾಗಿದೆ.

ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಮತ್ತು ರಾಷ್ಟ್ರೀಯ ಶಿಕ್ಷಣ ಪ್ರತಿಷ್ಠಾನದಿಂದ ನಿರ್ವಹಿಸಲ್ಪಡುವ ಬಹು ಶಿಕ್ಷಣ ಸಂಸ್ಥೆಗಳ ಸ್ಥಾಪಕರು ಮತ್ತು ಅಧ್ಯಕ್ಷರಿ ಆಗಿದ್ದಾರೆ.

ಸಾಧನೆಗಳು: 30ನೇ ವಯಸ್ಸಿನಲ್ಲೇ ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾದ ಕೀರ್ತಿ ಅವರಿಗೆ ಸಲ್ಲುತ್ತದೆ.

ರಾಜೀವ್ ಗಾಂಧಿ ಯುವ ಶಕ್ತಿ ಸಂಘಟನೆಯನ್ನು ರೂಪಿಸುವಲ್ಲಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕೆ.ಆರ್. ಮಾರ್ಕೆಟ್ ಫ್ಲೈಓವರ್ ನಿರ್ಮಾಣ ಸೇರಿದಂತೆ ಪ್ರಮುಖ ಅಂಡರ್‌ಪಾಸ್‌ ಮತ್ತು ಫ್ಲೈಓವರ್‌ಗಳನ್ನು ಯೋಜಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

2013 ರಿಂದ 2018ರವರೆಗೆ ಇಂಧನ ಸಚಿವರಾಗಿದ್ದಾಗ ತುಮಕೂರಿನ ಪಾವಗಡದಲ್ಲಿ ಭಾರತದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಮುಖ್ಯ ಪಾತ್ರ ವಹಿಸಿದ್ದಾರೆ.

ಬಳ್ಳಾರಿ ಮತ್ತು ಬಿಹಾರ ಚುನಾವಣೆಗಳಂತಹ ಹಲವಾರು ನಿರ್ಣಾಯಕ ದ್ವಿಪಕ್ಷೀಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಸಾಧಿಸುವಲ್ಲಿ ಅವರ ಭಾಗಿಯಾಗುವಿಕೆ ಮತ್ತು ಕಾರ್ಯತಂತ್ರವು ಬಹಳ ಮೌಲ್ಯಯುತವಾಗಿದೆ.

ಗುಜರಾತ್‌ನಲ್ಲಿ ಪಕ್ಷವನ್ನು ಒಗ್ಗೂಡಿಸುವ ಮೂಲಕ ಅಹ್ಮದ್ ಪಟೇಲ್‌ ಅವರಿಗೆ ರಾಜ್ಯಸಭಾ ಚುನಾವಣೆಗಳನ್ನು ಗೆಲ್ಲಿಸುವಲ್ಲಿ ಅವರ ಪಾತ್ರ ಕಾಂಗ್ರೆಸ್​ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

ಡಿಕೆಶಿ ಮುಂದಿರುವ ಸವಾಲುಗಳು: ನಾಯಕತ್ವ ಬದಲಾವಣೆ ಒಪ್ಪಂದದಂತೆ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಡಿಕೆ ಶಿವಕುಮಾರ್​ ಸಿಎಂ ಆಗುವುದು ಖಚಿತವಾಗಿದೆ. ಆದರೆ, ಅವರ ಈ ಹಾದಿ ಸುಲಭವಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಇವುಗಳನ್ನೂ ಓದಿ:

Last Updated : May 30, 2026 at 8:09 PM IST