ETV Bharat / state

ಹೆಚ್ಚುತ್ತಿವೆ ಸಿಲಿಂಡರ್​​ ಸ್ಫೋಟ, ಬೆಂಕಿ ಪ್ರಕರಣಗಳು: ಎಲ್​​​​​ಪಿಜಿ ವಾಸನೆಯ ತೀವ್ರತೆ ಹೆಚ್ಚಳ ಸೇರಿದಂತೆ KMCRI ವೈದ್ಯರ ಸಲಹೆಗಳಿವು!

ಬೆಂಕಿಯಿಂದ ದೇಹದ ಒಳಗಡೆ ಗಾಯವಾಗದಿದ್ದರೆ ಮಾತ್ರ ರೋಗಿಗಳು ಬದುಕುಳಿಯುತ್ತಾರೆ. ಶೇ.25ರಷ್ಟು ಗಾಯಗೊಂಡವರು ಬಹುತೇಕ ಸುಧಾರಣೆಯಾಗುತ್ತಾರೆ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಹೆಚ್.ಬಿ.ಗಡ್ಡದ ವರದಿ ಮಾಡಿದ್ದಾರೆ.

rise-in-gas-explosions-and-fire-incidents-what-advice-do-doctors-at-hubballi-kmcri-offer-to-prevent-such-mishaps
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : October 8, 2026 at 7:40 PM IST

5 Min Read
Choose ETV Bharat

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ‌ಬೆಂಕಿ ದುರಂತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್​​ಐ)ಗೆ ದಾಖಲಾಗುವ ಸುಟ್ಟ ಗಾಯಾಳುಗಳ ಅಂಕಿ-ಅಂಶಗಳಿಂದ ಇದು ಬಹಿರಂಗವಾಗಿದೆ. ಕೆಎಂಸಿಆರ್‌ಐ ಆಸ್ಪತ್ರೆಗೆ ಬೆಂಕಿ ಅವಘಡಕ್ಕೆ ತುತ್ತಾಗಿ ಕಳೆದ 4 ವರ್ಷದಲ್ಲಿ 744 ಜನ ದಾಖಲಾಗಿದ್ದು, 135 ಜನರು ಮೃತಪಟ್ಟಿದ್ದಾರೆ. ಅದರಲ್ಲಿ 505 ಜನ ಸೂಕ್ತ ಚಿಕಿತ್ಸೆ ಪಡೆದು ಡಿಸ್ಟಾರ್ಜ್ ಆಗಿದ್ದಾರೆ.

ಕೆಎಂಸಿಆರ್​​ಐನ ಸುಟ್ಟ ಗಾಯಗಳ ಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಯಲಿಗಾರ ಅವರು ಮಾತನಾಡುತ್ತಿರುವುದು. (ETV Bharat)

ಉತ್ತರ ಕರ್ನಾಟಕ ಭಾಗದ ಏಳೆಂಟು ಜಿಲ್ಲೆಗಳ ಜನರಿಗೆ ನಗರದ ಕೆಎಂಸಿಆರ್‌ಐ ಆಸ್ಪತ್ರೆಯೇ ಆಧಾರವಾಗಿದೆ. ಈ ಭಾಗದಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸಿದರೂ ಕೆಎಂಸಿಆರ್‌ಐ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯವಿದ್ದರೂ ಸಾವುಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ನಿತ್ಯ ಸಿಲಿಂಡರ್ ಸ್ಫೋಟಗಳಲ್ಲಿ ಸಾಮಾನ್ಯವಾಗಿ 3 - 4 ಜನರ ಸಾವು ಸಾಮಾನ್ಯವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಡಿಸೆಂಬರ್ 22, 2024ರಲ್ಲಿ ಉಣಕಲ್​ನ ಅಚ್ಚವನ ಕಾಲೋನಿಯಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದರು. ಅದರಲ್ಲಿ ಓರ್ವ ಬಾಲಕನನ್ನು ಹೊರತುಪಡಿಸಿ 8 ಮಂದಿ ಸಾವನ್ನಪ್ಪಿದ್ದರು.

ಇತ್ತೀಚೆಗೆ ಹಳೇ ಹುಬ್ಬಳ್ಳಿ ಅಯೋಧ್ಯಾನಗರದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡು, ಮಹಿಳೆಯೊಬ್ಬರು ಶೇ.25ರಷ್ಟು ಗಾಯಗೊಂಡಿದ್ದರು. ಆದರೂ ಮೂರು - ನಾಲ್ಕು ದಿನದ ಬಳಿಕ ಮೃತಪಟ್ಟಿದ್ದರು.

ಸಾಮಾನ್ಯವಾಗಿ ಅಗ್ನಿ ಅವಘಡದಲ್ಲಿ ಶೇ.65ರಷ್ಟು ಗಾಯಗೊಂಡಿದ್ದರೆ ಅಂಥವರು ಬದುಕುಳಿಯುವ ಸಾಧ್ಯತೆ ಕಡಿಮೆ. ದೇಹದ ಒಳಗಡೆ ಗಾಯವಾಗದಿದ್ದರೆ ಮಾತ್ರ ಇಂತಹ ರೋಗಿಗಳು ಬದುಕುಳಿಯುತ್ತಾರೆ. ಶೇ.25ರಷ್ಟು ಗಾಯಗೊಂಡವರು ಬಹುತೇಕ ಸುಧಾರಣೆಯಾಗುತ್ತಾರೆ. ಆದರೆ, ಮುಖದ ಮೇಲೆ ಗಂಭೀರ ಗಾಯ ಹಾಗೂ ಬೆಂಕಿ ಅವಘಡದ ಸಮಯದಲ್ಲಿ ಸುದೀರ್ಘವಾಗಿ ಉಸಿರಾಟದಿಂದ ತೊಂದರೆಯಾಗಿದ್ದರೆ ಬದುಕುವುದು ಕಷ್ಟ ಎನ್ನುತ್ತಾರೆ ವೈದ್ಯರು.

2026ರಲ್ಲಿ 33 ಮಂದಿ ಸಾವು: ಈ‌ ಕುರಿತಂತೆ ಕೆಎಂಸಿಆರ್​​ಐನ ಸುಟ್ಟ ಗಾಯಗಳ ಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಯಲಿಗಾರ ಅವರು, 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿ, ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಸ್ಫೋಟ, ಆಕಸ್ಮಿಕ ಬೆಂಕಿ ಅವಘಡಗಳಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಗಾಯಾಳುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2023ರಲ್ಲಿ 111 ಜನ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 22 ಜನ ಮೃತಪಟ್ಟು, 94 ಜನ ಡಿಸ್ಚಾರ್ಜ್ ಆಗಿದ್ದರು. 2024ರಲ್ಲಿ 196 ಜನ ದಾಖಲಾಗಿ, 47 ಜನ ಮೃತಪಟ್ಟರೆ, 148 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. 2025ರಲ್ಲಿ 268 ಜನ ಆಸ್ಪತ್ರೆಗೆ ದಾಖಲಾತಿ ಪಡೆದು 33 ಜನ ಮೃತಪಟ್ಟರೆ, ಉಳಿದಂತೆ 176 ಜನ ಡಿಸ್ಚಾರ್ಜ್​ ಆಗಿದ್ದರು. ಪ್ರಸಕ್ತ 2026ರಲ್ಲಿ ಇಲ್ಲಿಯವರೆಗೆ 169 ಜನ ಆಸ್ಪತ್ರೆಗೆ ದಾಖಲಾಗಿದ್ದು, 33 ಮಂದಿ ಮೃತಪಟ್ಟು, 90 ಜನ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.

ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವುದು ಬಹಳ ಕಷ್ಟ, ಇಲ್ಲಿ ಮುಂಜಾಗ್ರತಾ ಚಿಕಿತ್ಸೆ ಬಹಳ ಅವಶ್ಯವಿರುತ್ತದೆ. ಸುಟ್ಟ ಗಾಯ ಉಲ್ಬಣಗೊಳ್ಳದಂತೆ, ಸೋಂಕು ತಗುಲದಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ನಿತ್ಯ ಡ್ರೆಸಿಂಗ್ ಮಾಡಬೇಕು. ಆಂಟಿಬಯೋಟಿಕ್ ಔಷಧ ಹಾಗೂ ರಕ್ತ ನೀಡಬೇಕಾಗುತ್ತದೆ ಎಂದರು.

ಕಳೆದ 3-4 ವರ್ಷಗಳಲ್ಲಿ ಪ್ರಕರಣಗಳು ಹೆಚ್ಚಾಗಲು ಹಲವು ಕಾರಣಗಳಿವೆ. ಕೋವಿಡ್ ನಂತರದ ದಿನಗಳಲ್ಲಿ ಜನರಲ್ಲಿ ವಾಸನೆ ಗ್ರಹಣ ಸಾಮರ್ಥ್ಯ ಕಡಿಮೆ ಆಗಿರುವ ಸಾಧ್ಯತೆ ಹೆಚ್ಚಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ ಸಾರ್ವಜನಿಕರು ಗ್ಯಾಸ್ ವಾಸನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. 4-5 ವರ್ಷಗಳ ಹಿಂದೆ ವರ್ಷಕ್ಕೆ ಎರಡು ಕೇಸ್​​ಗಳು ಬಂದರೆ ಇತ್ತೀಚಿಗೆ ತಿಂಗಳಿಗೆ 2-3 ಅಪವಘಡಗಳು ಆಗುತ್ತಿವೆ. ಬೆಂಕಿ ಅವಘಡದಲ್ಲಿ ಗಾಯಗೊಂಡವರಿಂದ ಮಾಹಿತಿ ಸಂಗ್ರಹಿಸಿದಾಗ ಅವರು ಹೇಳಿದಂತೆ ವಾಸನೆ ಬಂದಿರುತ್ತದೆ. ಆದರೂ ಸಹ ನಿರ್ಲಕ್ಷ್ಯದಿಂದ ವಿದ್ಯುತ್ ದೀಪ ಹಚ್ಚುವುದು, ಬೆಂಕಿ ಕಡ್ಡಿ ಗೀರುವುದು, ಫ್ಯಾನ್ ಹಾಕುವುದು, ಲೈಟ್ ಅಫ್ ಮಾಡುವುದು ಮಾಡಿದ್ದಾಗಿ ಹೇಳುತ್ತಾರೆ. ಇದರಿಂದ ಬೆಂಕಿ ಅವಘಡಗಳ‌ ಪ್ರಮಾಣ ಹೆಚ್ಚಾಗಲು ಕಾರವಾಗಿದೆ ಎಂದು ಡಾ.ರವೀಂದ್ರ ಯಲಿಗಾರ ತಿಳಿಸಿದರು.

ಸಾರ್ವಜನಿರಿಗೆ ಕಿವಿಮಾತು: ಗ್ಯಾಸ್ ವಾಸನೆಯನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು. ವಾಸನೆ ಗ್ರಹಿಸಿದ ತಕ್ಷಣ ಯಾವುದೇ ತರಹದ ಬೆಂಕಿ ಕಡ್ಡಿ ಗೀರುವುದು, ಲೈಟರ್ ಹಚ್ಚಬಾರದು. ಫ್ಯಾನ್ ಆನ್ ಇದ್ದರೆ ಆಫ್ ಮಾಡುವುದು, ಆಫ್ ಇದ್ದರೆ ಆನ್ ಮಾಡುವುದು ಮಾಡಬಾರದು. ಲೈಟ್ ಕೂಡ ಆನ್, ಆಫ್ ಮಾಡಬಾರದು. ಮೊಟ್ಟ ಮೊದಲು ಎಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯೆಂದು ನೋಡಿಕೊಂಡು ಗ್ಯಾಸ್​​ನ ಸ್ವಿಚ್ ಬಂದ್ ಮಾಡಬೇಕು.‌‌‌ ಕಿಟಕಿ, ಬಾಗಿಲು ಎಲ್ಲಾ ಓಪನ್ ಮಾಡಿ ಇಡಬೇಕು. ಸ್ವಲ್ಪ ಸಮಯ ಅಲ್ಲಿಂದ ಹೊರಗಡೆ ಹೋಗಬೇಕು. ಬಳಿಕ ಕೆಲ ಸಮಯದ ನಂತರ ವಾಸನೆ ಹೋಗಿದೆಯಾ ಅಥವಾ ಇದೆಯಾ ಮತ್ತೆ ಗ್ಯಾಸ್ ಆಗುತ್ತಿದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಿಕೊಂಡು ಒಳಗೆ ಹೋಗಬೇಕು ಎಂದು ಸಲಹೆ ಅವರು ನೀಡಿದರು‌.

ಗ್ಯಾಸ್​ ವಾಸನೆ ತೀವ್ರತೆಗೆ ಸಲಹೆ: ಇತ್ತೀಚಿಗೆ ಜನರು ಗ್ಯಾಸ್ ವಾಸನೆ ಬಗ್ಗೆ ಬಹಳ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತೀವ್ರ ವಾಸನೆ ಇದ್ದಾಗಲೂ ಲೈಟ್, ಲೈಟರ್ ಹಚ್ಚುತ್ತಾರೆ. ಇದರಿಂದ ಮನೆಯಲ್ಲಿ ಅಥವಾ ರೂಂನಲ್ಲಿ ಇರುವ ಇಡೀ ಕುಟುಂಬ ಹಾಗೂ ಹಲವರು ಗಾಯಗೊಳ್ಳುತ್ತಾರೆ. ಅಯ್ಯಪ್ಪ ಮಾಲಾಧಾರಿಗಳು ಎಂಟು ಜನ ಸತ್ತಿದ್ದು ಕೂಡ ಕಣ್ಣುಮುಂದೆಯೇ ಇದೆ. ಆದರೂ ಕೂಡ ಎಲ್ಲಾ ಗ್ಯಾಸ್ ಕಂಪನಿಗಳು ಕೂಡ ಸಾರ್ವಜನಿಕರ ಹಿತದೃಷ್ಟಿಯಿಂದ ಗ್ಯಾಸ್ ವಾಸನೆ ತೀವ್ರತೆ ಹೆಚ್ಚು ಮಾಡುವುದು ಅನಿವಾರ್ಯವಾಗಿದೆ ಎಂದರು.

ಎರಡರಿಂದ ಐದು ಪಟ್ಟು ಹೆಚ್ಚಿಗೆ ಮಾಡಬೇಕು. ಈಗಿರುವ ಗ್ಯಾಸ್ ವಾಸನೆ ತೀವ್ರತೆಯನ್ನು ಜನರು ಅರಿಯುತ್ತಿಲ್ಲ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಅದರ ಜೊತೆಗೆ ಸಾರ್ವಜನಿಕರಿಗೂ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದು ಡಾ.ರವೀಂದ್ರ ಯಲಿಗಾರ ಸಲಹೆ ನೀಡಿದರು.

ಶೇ.65ರಷ್ಟು ಸುಟ್ಟ ಗಾಯಗಳಾದರೆ ಬದುಕುವುದು ಕಷ್ಟ: ಅಗ್ನಿ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಶೇ.65ರಷ್ಟು ಸುಟ್ಟ ಗಾಯಗಳಾಗಿದ್ದರೆ ಬದುಕಿಸುವುದು ಕಷ್ಟ. ಸಣ್ಣ ಪ್ರಮಾಣದ ಗಾಯಗಳಾಗಿದ್ದರೆ ಬದುಕುವ ಸಾಧ್ಯತೆ ಹೆಚ್ಚಿದೆ. ಆದರೆ, ಉಳಿದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಕೆಲವು ಪ್ರಕರಣಗಳಲ್ಲಿ ಶೇ.65ರಷ್ಟು ಸುಟ್ಟ ಗಾಯಗಳಾದವರೂ ಬದುಕಿದ್ದಾರೆ.‌ ಇದಕ್ಕೆ ಗಾಯಾಳುಗಳ ಆತ್ಮಸ್ಥೈರ್ಯ ಕೂಡ ಕಾರಣವಾಗಿದೆ. ಎಲ್ಲ ಸುಟ್ಟ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಅನಿವಾರ್ಯ ಇರುವುದಿಲ್ಲ. ಕೆಲವರಿಗೆ ಎರಡು-ಮೂರು ವಾರಗಳಾದರೂ ಕೂಡ ಗಾಯ ಮಾಯುವುದಿಲ್ಲ. ಅಂತವರಿಗೆ ಮಾತ್ರ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಸುಟ್ಟ ಗಾಯಗಳ ವಿಭಾಗ ಅಲ್ಲದೇ, ಕೆಎಂಸಿಆರ್​​ಐನ ಎಲ್ಲಾ ವಿಭಾಗಗಳಿಂದ ಬಂದಂತಹ ಎಲ್ಲ ರೋಗಿಗಳಿಗೂ ಎಲ್ಲ ತರಹದ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಟ್ಟ ಗಾಯಗಳ ಚಿಕಿತ್ಸೆ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ 7-8 ಜಿಲ್ಲೆಗಳ ರೋಗಿಗಳು ಇಲ್ಲಿಗೆ ಆಗಮಿಸುತ್ತಾರೆ. ಇದು ಗಾಯಾಳುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲು ಪ್ರಮುಖ ಕಾರಣ ಎಂದರು.

ಎಲ್ಲಿ ಅವಘಡಗಳು ಹೆಚ್ಚುತ್ತಿವೆ, ಕಾರಣಗಳೇನು?: ಮಂದಿರಗಳು ಮತ್ತು ಕಚೇರಿಗಳು, ಕಾರ್ಖಾನೆಗಳು ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚುತ್ತಿವೆ. ಬಹುತೇಕ ಅಗ್ನಿ ಆಕಸ್ಮಿಕಗಳ ಹಿಂದಿರುವ ಕಾರಣಗಳು ಒಂದೇ ಬಗೆಯವಾಗಿವೆ. ವಿದ್ಯುತ್ ಸರ್ಕ್ಯೂಟ್‌ನಲ್ಲಿನ ದೋಷ, ಅವೈಜ್ಞಾನಿಕವಾಗಿ ನಿರ್ಮಿಸಿದ ಹಾಗೂ ಜನಸಂದಣಿಯಿಂದ ಕಿಕ್ಕಿರಿದ ಕಟ್ಟಡಗಳು, ಇಕ್ಕಟ್ಟಾದ ಓಣಿಗಳು ಮತ್ತು ನಿರ್ಗಮನ ಮಾರ್ಗಗಳು, ಬೆಂಕಿ ಶಮನಗೊಳಿಸಲು ಅಗತ್ಯವಾದ ಪ್ರಾಥಮಿಕ ಸಲಕರಣೆಗಳು ಹಾಗೂ ಸುರಕ್ಷಿತ ನಿರ್ಗಮನದ ಬಗೆಗಿನ ಅರಿವಿನ ಕೊರತೆ. ಇಂತಹ ಅವಘಡಗಳಲ್ಲಿ ಅಮಾಯಕ ಜನರು ಮೃತರಾಗಲು ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: 150 ಕೋಟಿ ವೆಚ್ಚದಲ್ಲಿ ಪುನಶ್ಚೇತನ ಯೋಜನೆ: ನೀರಿನ ಶುದ್ದೀಕರಣ, ಸೌಂದರ್ಯೀಕರಣ ಹೊರತಾಗಿ ನಡೆಯಲಿದೆಯಾ ಕೆರೆ ಪುನಶ್ಚೇತನ?