ಮಲ್ಲಳ್ಳಿ ಫಾಲ್ಸ್‌ನ ಮಧ್ಯಭಾಗದಲ್ಲಿ ಸಿಲುಕಿದ್ದ ಆಂಧ್ರ ಮೂಲದ ಇಬ್ಬರು ವಿದ್ಯಾರ್ಥಿಗಳ ರೋಚಕ ರಕ್ಷಣೆ
ಇಬ್ಬರು ವಿದ್ಯಾರ್ಥಿಗಳು ಅಕ್ರಮವಾಗಿ ಬೇಲಿ ದಾಟಿ ಫಾಲ್ಸ್‌ನ ಮಧ್ಯಭಾಗಕ್ಕೆ ತೆರಳಿದ್ದರು.

Published : July 8, 2026 at 1:00 PM IST
ಕೊಡಗು: ಮಲ್ಲಳ್ಳಿ ಫಾಲ್ಸ್ನಲ್ಲಿ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಭಾನುವಾರ (ಜುಲೈ 5) ನಡೆದಿದೆ.
ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಂಧ್ರಪ್ರದೇಶ ಮೂಲದ ಬಿಟೆಕ್ ವಿದ್ಯಾರ್ಥಿಗಳಾದ ಗಣೇಶ್ ನಾಯಕ್ (23), ಸಂತೋಷ್ ಕುಮಾರ್ (23) ಸಾವಿನ ದವಡೆಯಿಂದ ಪಾರಾದವರು. ಭಾನುವಾರ ಮಧ್ಯಾಹ್ನ ಮಡಿಕೇರಿಯ ಬಳಿಯ ಸೋಮವಾರಪೇಟೆ ಜಲಾಶಯದ ಬಳಿಯ ಮಲ್ಲಳ್ಳಿ ಫಾಲ್ಸ್ ವೀಕ್ಷಣೆಗೆಂದು ಆಂಧ್ರ ಪ್ರದೇಶದ ಐದು ಜನ ವಿದ್ಯಾರ್ಥಿಗಳು ಬಂದಿದ್ದರು. ಈ ವೇಳೆ ಅಕ್ರಮವಾಗಿ ರಕ್ಷಣಾ ಬೇಲಿ ದಾಟಿ ಜಲಪಾತದ ಬಳಿಯ ಕಲ್ಲಿನ ಮೇಲೆ ಹೋಗಿದ್ದರು. ಆದರೆ ಮೂವರು ವಿದ್ಯಾರ್ಥಿಗಳು ಹೊರಗೆ ಉಳಿದಿದ್ದು, ಇಬ್ಬರು ಮಧ್ಯಭಾಗಕ್ಕೆ ಹೋಗಿದ್ದಾರೆ. ಈ ವೇಳೆ ವಿದ್ಯುತ್ ಉತ್ಪಾದನಾ ಘಟಕದಿಂದ ನೀರು ಬಿಡಲಾಗಿದೆ. ಏಕಾಏಕಿ ಹೆಚ್ಚಿಗೆ ನೀರು ಬಂದ ಕಾರಣ ಇಬ್ಬರು ಯುವಕರು ನೀರಿನ ರಭಸಕ್ಕೆ ಕೊಚ್ಚಿಹೋಗಿ ಬಂಡೆ ನಡುವೆ ಸಿಲುಕಿದರು.
ವಾಪಸ್ ಬರಲಾಗದೆ, ಅಲ್ಲೇ ಕಲ್ಲಿನ ಬಳಿ ಕೈಯಲ್ಲಿ ಜೀವ ಹಿಡಿದು ರಕ್ಷಣೆಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸೋಮವಾರಪೇಟೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಹರಸಾಹಸ ಪಟ್ಟು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಮಳೆ ಅಬ್ಬರಕ್ಕೆ ಧರೆಗುರುಳುತ್ತಿವೆ ಮರಗಳು: ವಿವಿಧೆಡೆ ಅಂಗನವಾಡಿ, ಶಾಲೆಗೆ ಇಂದು ರಜೆ ಘೋಷಣೆ

