ಬೆಳಗಾವಿ ಡಿಸಿಸಿ ಬ್ಯಾಂಕ್ಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ RBI
ನಿಯಮಾವಳಿಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಆರ್‌ಬಿಐ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗೆ ದಂಡ ವಿಧಿಸಿದೆ.

Published : March 1, 2026 at 10:12 AM IST
ಬೆಳಗಾವಿ: ಬ್ಯಾಂಕಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ)ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2 ಲಕ್ಷ ರೂ ದಂಡ ವಿಧಿಸಿದೆ. ಈ ಕುರಿತಾಗಿ ಫೆ.23ರಂದೇ ಈ ಕುರಿತು ಆರ್‌ಬಿಐ ಆದೇಶ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-1949ರ ಸೆಕ್ಷನ್ 20ನ್ನು ಸೆಕ್ಷನ್ 56 ರೊಂದಿಗೆ ಓದಿದ ನಿಯಮಗಳ ಉಲ್ಲಂಘನೆ ಹಾಗೂ ಗೋಲ್ಡ್ ಲೋನ್-ಬುಲೆಟ್ ರಿಪೇಮೆಂಟ್ ಯೋಜನೆ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್‌ಗೆ ಎಕ್ಸ್‌ಪೋಜರ್ ಸಂಬಂಧ ಆರ್‌ಬಿಐ ನೀಡಿದ್ಧ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದೇ ದಂಡ ಬೀಳಲು ಕಾರಣವಾಗಿದೆ. ಸೆಕ್ಷನ್ 47A (1) (ಸಿ) ಅನ್ನು ಸೆಕ್ಷನ್ 46 (4) (i) ಮತ್ತು 56ರೊಂದಿಗೆ ಓದಿದ ಅಧಿಕಾರದಡಿ ಬೆಳಗಾವಿ ಡಿಸಿಸಿ ಬ್ಯಾಂಕ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
2025 ಮಾರ್ಚ್ 31ರ ಹಣಕಾಸು ಸ್ಥಿತಿಯನ್ನು ಆಧರಿಸಿ ನಬಾರ್ಡ್ ನಡೆಸಿದ ನಿಯಮಿತ ಪರಿಶೀಲನೆಯಲ್ಲಿ ಹಲವು ಲೋಪಗಳು ಕಂಡುಬಂದಿದ್ದವು. ಆ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಬ್ಯಾಂಕಿನ ಲಿಖಿತ ಉತ್ತರ ಮತ್ತು ವೈಯಕ್ತಿಕ ವಿಚಾರಣೆ ನಂತರ ಆರೋಪಗಳು ಸ್ಪಷ್ಟವಾಗಿವೆ ಎಂದು ಆರ್‌ಬಿಐ ಮೂಲಗಳು ಸ್ಪಷ್ಟಪಡಿಸಿವೆ.
ಬ್ಯಾಂಕ್ ನಿರ್ದೇಶಕರ ಸಂಬಂಧಿಗಳಿಗೆ ಸಾಲ ಮಂಜೂರು ಮಾಡಿರುವುದು, ನಿಗದಿತ ಮಿತಿಯನ್ನು ಮೀರಿ ಬುಲೆಟ್ ರಿಪೇಮೆಂಟ್ ಯೋಜನೆಯಡಿ ಚಿನ್ನದ ಸಾಲ ನೀಡಿರುವುದು ಹಾಗೂ ವಸತಿಯೇತರ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಸಾಲ ನೀಡಿರುವುದು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಈ ದಂಡ ವಿಧಿಸಲಾಗಿದೆ ಎನ್ನಲಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಲಕ್ ಡಿಸೆಂಬರ್ 17, 1918ರಂದು ದಿ.ಬೆಳಗಾವಿ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪ್ ಬ್ಯಾಂಕ್ ನೋಂದಾಯಿಸಲ್ಪಟ್ಟು, ಫೆಬ್ರವರಿ 10, 1919ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧಿಕೃತವಾಗಿ ಶುಭಾರಂಭ ಮಾಡಿತ್ತು. 13,043 ರೂ. ದುಡಿಯುವ ಬಂಡವಾಳದಿಂದ ಆರಂಭಗೊಂಡ ಈ ಬ್ಯಾಂಕ್ ಸದ್ಯ 500 ಕೋಟಿ ಅಧಿಕೃತ ಶೇರು ಬಂಡವಾಳ ಹೊಂದಿದ್ದು, ಆ ಪೈಕಿ ₹303 ಕೋಟಿ ಸಂಗ್ರಹಿಸಿದ ಶೇರು ಬಂಡವಾಳವಾಗಿದೆ. ಗ್ರಾಹಕರಿಂದ ₹6,087 ಕೋಟಿ ಠೇವಣಿ ಸಂಗ್ರಹಿಸಿದೆ. ₹2,275 ಕೋಟಿ ಹೂಡಿಕೆ ಮಾಡಿದ್ದು, ₹8,592 ಕೋಟಿ ದುಡಿಯುವ ಬಂಡವಾಳ, 5,892 ಕೋಟಿ ರೂ. ಸಾಲ ವಿತರಿಸುವ ಮೂಲಕ ಜಿಲ್ಲೆಯ ರೈತರು, ಗ್ರಾಹಕರಿಗೆ ವರದಾನವಾಗಿದೆ.
ಕಳೆದ ನವೆಂಬರ್ನಲ್ಲೂ ನಡೆದಿತ್ತು ಡಿಸಿಸಿ ಬ್ಯಾಂಕ್ ಚುನಾವಣೆ: 2025ರ ನವೆಂಬರ್ನಲ್ಲಿ ನಡೆದಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿತ್ತು. ಬಹುಮತದಿಂದ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾಸಾಹೇಬ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತ; ಜಿಲ್ಲಾಡಳಿತದ ಮಧ್ಯಸ್ಥಿಕೆಯಿಂದ ಹೊಸ ಕಟಿಂಗ್ ಶಾಪ್ ಆರಂಭ

