ಈ ಬಾರಿ ಕಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗಲು ವಿಶಿಷ್ಟ ವೇಷ ಧರಿಸಿ ಹಣ ಸಂಗ್ರಹಿಸಲಿರುವ ಸಮಾಜಸೇವಕ ರವಿ ಕಟಪಾಡಿ!
ಈತನಕ 1.85 ಕೋಟಿ ಹಣ ಸಂಗ್ರಹಿಸಿರುವ ರವಿ ಕಟಪಾಡಿ ಅವರಿಗೆ 2 ಕೋಟಿ ರೂ. ಸಂಗ್ರಹಿಸಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಗುರಿಯಿದೆ.

Published : August 29, 2026 at 5:32 PM IST
ಉಡುಪಿ: ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿ ಅಂದರೆ ಅದೊಂದು ನಾಡಹಬ್ಬ. ಕೃಷ್ಣ ಜನ್ಮಾಷ್ಟಮಿ ಮತ್ತು ಉಡುಪಿ ಕೃಷ್ಣ ಮಠದಲ್ಲಿ ಮರುದಿನ ನಡೆಯುವ ವಿಟ್ಲಪಿಂಡಿ ಉತ್ಸವದ ವೇಳೆ ಹಲವರು ವೇಷ ಹಾಕಿಕೊಂಡು ಮನರಂಜನೆ ನೀಡುತ್ತಾರೆ. ಕೆಲವರು ಈ ವೇಳೆ ದೇಣಿಗೆ ಸಂಗ್ರಹಿಸಿ ಅದನ್ನು ಅಗತ್ಯ ಇರುವವರಿಗೆ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಅಂಥವರಲ್ಲೊಬ್ಬರು ಈ ರವಿ ಕಟಪಾಡಿ.
ಆರಂಭದ ವರ್ಷಗಳಲ್ಲಿ ಮನರಂಜನೆಗಾಗಿ ರವಿ ಕಟಪಾಡಿ ಕೂಡ ವೇಷ ಹಾಕಲಾರಂಭಿಸಿದರು. 2014 ರಿಂದ ದೇಣಿಗೆ ಸಂಗ್ರಹ ಆರಂಭಿಸಿದರು. ಇವರು ವರ್ಷಕ್ಕೆ ಒಂದು ಬಾರಿ ಮಾತ್ರ ವೇಷ ಹಾಕುವುದು. ಒಮ್ಮೆ ಹಾಕಿದ ವೇಷ ಕೃಷ್ಣ ಜನ್ಮಾಷ್ಟಮಿ ಮತ್ತು ಅದರ ಮರುದಿನವಷ್ಟೆ ಇರುತ್ತದೆ. ಎರಡು ದಿನ ಕಟಪಾಡಿ, ಉಡುಪಿ, ಶಿರ್ವ, ಮಲ್ಪೆ, ಕಾಪು ಭಾಗಗಳಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸುತ್ತಾರೆ. ಸಂಗ್ರಹವಾದ ಒಟ್ಟು ಹಣವನ್ನು, ಪ್ರತಿ ವರ್ಷ ಕಟಪಾಡಿಯ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಿ ಫಲಾನುಭವಿ ಮಕ್ಕಳ ಪೋಷಕರಿಗೆ ಹಸ್ತಾಂತರಿಸುತ್ತಾರೆ. ರವಿಯ ಸಮಾಜಮುಖಿ ಕಾರ್ಯಕ್ಕೆ 'ರವಿ ಕಟಪಾಡಿ ಫ್ರೆಂಡ್ಸ್' ಸಂಘಟನೆ ಸಹಕಾರ ನೀಡುತ್ತದೆ.
ಈತನಕ 1.85 ಕೋಟಿ.ರೂ ಸಂಗ್ರಹ!: ನೀವು ನಂಬಲಿಕ್ಕಿಲ್ಲ. ರವಿ ಕಟಪಾಡಿ ವರ್ಷಂಪ್ರತಿ ವೇಷ ವಿಭಿನ್ನ - ಗಮನ ಸೆಳೆಯುವ ವೇಷ ಹಾಕಿ ಈತನಕ ಸುಮಾರು 1.85 ಕೋಟಿ ರೂ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗೆ ನೆರವು ನೀಡಿದ್ದಾರೆ.ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸುತ್ತಲಿನ 204 ಬಡ ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ಈ ಹಣ ವಿನಿಯೋಗಿಸಿದ್ದಾರೆ.
ಅಂದಹಾಗೆ ರವಿ ಕಟಪಾಡಿ ಶ್ರೀಮಂತರೇನಲ್ಲ. ಅವರದ್ದು ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕಾರ್ಮಿಕ ವೃತ್ತಿ. ಉಡುಪಿ ಜಿಲ್ಲೆಯ ಕಟಪಾಡಿ ಹುಟ್ಟೂರು. ವಯಸ್ಸಾದ ತಾಯಿ ದೇಯಿ, ಅಣ್ಣ ಶಂಕರ - ಅತ್ತಿಗೆ, ತಮ್ಮ ಚಂದ್ರಶೇಖರ ಅವರೊಟ್ಟಿಗೆ ವಾಸ. ಸಹೋದರರಿಬ್ಬರೂ ಸೆಂಟ್ರಿಂಗ್ ಕಾರ್ಮಿಕರು. ತಂದೆ ಬಿ.ಗೋವಿಂದ ಕೆಲವು ವರ್ಷಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡಿದ್ದಾರೆ.
ವರ್ಷಕ್ಕೆ ಒಂದೇ ಬಾರಿ ವೇಷ: ಇವರು ವರ್ಷಕ್ಕೆ ಒಂದು ಬಾರಿ ಮಾತ್ರ ವೇಷ ಹಾಕುತ್ತಾರೆ. ಒಮ್ಮೆ ಹಾಕಿದ ವೇಷ ಕೃಷ್ಣ ಜನ್ಮಾಷ್ಟಮಿ ಮತ್ತು ಅದರ ಮರುದಿನವಷ್ಟೆ ಇರುತ್ತದೆ. ಈ ವರ್ಷ ಅವರು ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಲು ವೇಷ ಹಾಕಲು ನಿರ್ಧರಿಸಿದ್ದಾರೆ.
ಏನು ಈ ವರ್ಷದ ವಿಶೇಷ?: ರವಿ ಫ್ರೆಂಡ್ಸ್ ಕಟಪಾಡಿ ವತಿಯಿಂದ ಕಳೆದ 14 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ವೇಷ ಧರಿಸಿ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆ ಗಾಗಿ ವಿನಿಯೋಗಿಸಿದವರು ರವಿ ಕಟಪಾಡಿ. ಮಾಮೂಲಿ ಕೂಲಿ ಕೆಲಸ ಮಾಡುವ ರವಿ ಕಟಪಾಡಿಯ ಈ ಮಾನವೀಯ ಸೇವಾ ಕಾರ್ಯ ಈ ಅಷ್ಠಮಿಯಲ್ಲೂ ಮುಂದುವರೆಯಲಿದೆ.ಈ ಬಾರಿ ವಿಶಿಷ್ಟ ವೇಷ ಧರಿಸಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ವಿನಿಯೋಗಿಸಲು ಅವರು ನಿರ್ಧಾರ ಮಾಡಿದ್ದಾರೆ.
"ಕಳೆದ 14 ವರ್ಷಗಳಲ್ಲಿ ನಮ್ಮ ತಂಡದಿಂದ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಒಟ್ಟು ₹1.85 ಕೋಟಿ ಮೊತ್ತವನ್ನು 204 ಅನಾರೋಗ್ಯ ಪೀಡಿತ ಪುಟಾಣಿ ಮಕ್ಕಳಿಗೆ ಹಸ್ತಾಂತರಿಸಿ, ಅವರ ಚಿಕಿತ್ಸೆಗೆ ನೆರವು ನೀಡಿದ್ದೇವೆ. ಕಳೆದ 14 ವರ್ಷಗಳಿಂದ ಈ ಸೇವೆ ಮಾಡಿಕೊಂಡು ಬಂದಿದ್ದು ಈ ಬಾರಿ ತಂಡವು 15ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ವೇಷ ಧರಿಸಲು ಮುಂದಾಗಿದೆ.
ಈ ವರ್ಷ ತಮ್ಮ ಹಾಗೂ ತಂಡದ ಸದಸ್ಯರ ಕೊನೆಯ ಕೃಷ್ಣ ಜನ್ಮಾಷ್ಟಮಿ ವೇಷವಾಗಿದ್ದು, ಇನ್ನು ಮುಂದೆ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸುವುದಿಲ್ಲ. ಹಾಗಾಗಿ ಈ ಬಾರಿ ದಾನಿಗಳು ಹೆಚ್ಚಿನ ಸಹಾಯಧನ ನೀಡಬೇಕು ಎಂದು ರವಿ ಕಟಪಾಡಿ ಮನವಿ ಮಾಡಿದ್ದಾರೆ.
ಸೆ. 4 ಮತ್ತು 5 ರಂದು ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಬ್ಬ ನಡೆಯಲಿದೆ. ಹಿಂದಿನ ವರ್ಷಗಳಲ್ಲಿ ಹಾಲಿವುಡ್ ಸಿನೆಮಾಗಳಲ್ಲಿ ಕಂಡುಬರುವ ಅಪರೂಪದ ವೇಷ ಧರಿಸಿ ಹಣ ಸಂಗ್ರಹಿಸಿದ್ದರು. ಈ ವೇಷ ಕೂಡ ಸಾಧಾರಣ ವೇಷ ಅಲ್ಲ. ಎರಡು ದಿನ ವೇಷ ಹಾಕಲು ಬೇಕಾಗುತ್ತದೆ. ಆರೋಗ್ಯದ ಮೇಲೂ ಈ ವೇಷದ ಪರಿಕರಗಳು ಕೆಲಸ ಮಾಡುತ್ತವೆ. ಪೈಂಟ್ ಕೆಮಿಕಲ್ ಬಣ್ಣ ಬಳಸಿ ವೇಷ ಹಾಕುವುದು ಸುಲಭ ಅಂತೂ ಅಲ್ಲ. ಈ ವರ್ಷದ ಅಷ್ಠಮಿ ಸಂದರ್ಭದಲ್ಲಿ ಸಮುದ್ರ ಜೀವಿಯೊಂದರ ವಿಶಿಷ್ಟ ವೇಷ ಧರಿಸಿ ನಗರದೆಲ್ಲೆಡೆ ಸಂಚಾರ ಮಾಡಿ ಹಣ ಸಂಗ್ರಹ ಮಾಡಲು ಅವರು ನಿರ್ಧರಿಸಿದ್ದಾರೆ.
"ಈ ವರ್ಷ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಾಣಿ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧರಿಸಿದ್ದೇವೆ.
ಪುಟಾಣಿ ಮಕ್ಕಳ ಚಿಕಿತ್ಸೆಗೆ ನೆರವಾಗುವ ಈ ಸೇವಾ ಕಾರ್ಯಕ್ಕೆ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಬೇಕು. ಅದೂ ಅಲ್ಲದೇ ಕಳೆದ ವರ್ಷ ಅನಾರೋಗ್ಯ ಇದ್ದ ಕಾರಣ ವೇಷ ಧರಿಸಿರಲಿಲ್ಲ. ಈ ವರ್ಷ ವೇಷ ಧರಿಸುತ್ತೇನೆ. ಮುಂದಿನ ವರ್ಷದಿಂದ ವೇಷ ಧರಿಸದೇ ಮಕ್ಕಳಿಗೆ ಸಹಾಯ ಮಾಡುತ್ತೇನೆ. ಹಾಗಾಗಿ ಈತನಕ 1.85 ಲಕ್ಷ ಸಂಗ್ರಹಿಸಿ ಚಿಕಿತ್ಸೆಗೆ ನೀಡಿದ್ದು ಈ ವರ್ಷ 15 ಲಕ್ಷ ಸಂಗ್ರಹವಾದರೆ 2 ಕೋಟಿ ಹಣ ಸಂಗ್ರಹಿಸಿದಂತೆ ಆಗುತ್ತದೆ. ಆದ್ದರಿಂದ ದಾನಿಗಳು ಈ ವರ್ಷ ಹೆಚ್ಚು ಸಹಾಯ ಮಾಡಬೇಕು" ಎನ್ನುತ್ತಾರೆ ಸಮಾಜಸೇವಕ ರವಿ ಕಟಪಾಡಿ.
ಇದನ್ನೂ ಓದಿ:
ಈ ಬಾರಿ ಡೀ ಮನ್ ರೂಪದಲ್ಲಿ ಅಬ್ಬರಿಸಿದ ಉಡುಪಿಯ ರವಿ ಕಟಪಾಡಿ
ಕಲಿಯುಗ ಕರ್ಣ ರವಿ ಕಟಪಾಡಿ: ಹಾಲಿವುಡ್ ವೇಷ ಧರಿಸಿ ಮಿಂಚಿದ ಕೂಲಿ ಕಾರ್ಮಿಕ

