ಕಾಂಗ್ರೆಸ್ ಪಕ್ಷದಲ್ಲಿ ರೇಟ್ ಫಿಕ್ಸ್, ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿಲ್ಲ: ಬಿ.ವೈ.ವಿಜಯೇಂದ್ರ
ಮುಖ್ಯಮಂತ್ರಿ ಸಾಫ್ಟ್ ಹಿಂದುತ್ವವಾದ, ಗೃಹಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರ ಹಿಂದೂ ವಿರೋಧಿ ನೀತಿ - ಹೇಳಿಕೆಗಳು ಮತೀಯ ಶಕ್ತಿಗಳಿಗೆ ಧೈರ್ಯ ನೀಡುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು.

Published : July 3, 2026 at 4:20 PM IST
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರೇಟ್ ಫಿಕ್ಸ್ ಆಗಿದೆ. ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಿಜೆಪಿ ಮಲ್ಲೇಶ್ವರಂ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಳೆ ಬೆಳೆಯದಿರಿ ಎಂದು ಮುಖ್ಯಮಂತ್ರಿ ನೀಡಿದ ಹೇಳಿಕೆ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದೆ. ನಿನ್ನೆ ಈ ನಾಡಿನ ದೊರೆ, ಮುಖ್ಯಮಂತ್ರಿ ಒಂದು ಹೇಳಿಕೆ ಕೊಟ್ಟಿದ್ದಾರೆ. ನೀರಿಲ್ಲ; ಬೆಳೆ ಬೆಳೆಯುವುದು ಬೇಡ. ಭೀಕರ ಬರಗಾಲದ ಮುನ್ಸೂಚನೆ ವಿಚಾರವನ್ನು ಸಂಪುಟದಲ್ಲಿ ಚರ್ಚಿಸಿ ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಬೆಳೆಯದಿರಿ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದು ಬಹಳ ಆಶ್ಚರ್ಯ ಮಾತ್ರವಲ್ಲದೇ ಅತ್ಯಂತ ನೋವನ್ನು ತಂದಿದೆ. ನಾವೇನೇ ಹೇಳಿಕೆ ನೀಡಿದರೂ ಪ್ರಬುದ್ಧತೆಯಿಂದ ಮಾತನಾಡಬೇಕು ಎಂದು ವಿನಂತಿಸಿದರು.
ಇಡೀ ದೇಶದಲ್ಲಿ ಬರಗಾಲದ ಛಾಯೆ ಮೂಡಿದೆ. ಪ್ರಕೃತಿ ಮುನಿಸಿಕೊಂಡ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಅಭಯ, ಭರವಸೆಯನ್ನು ಸರಕಾರ ನೀಡಬೇಕಿತ್ತು. ಮುಂದಿನ 15-20 ದಿನ ಮಳೆ ಬೀಳುವ ಆಶಾಭಾವ ಇದೆ. ಮುಖ್ಯಮಂತ್ರಿ ಹೇಳಿದರೆಂದು ಬಿತ್ತನೆಯೇ ಮಾಡದೇ ಇದ್ದರೆ ಯಾರು ಹೊಣೆಗಾರರು ಎಂದು ಕೇಳಿದರು.
ಶೇ. 50- 60 ಮಳೆ ಕಡಿಮೆ ಇರುವಾಗ ರಾಜ್ಯ ಸರಕಾರದ ಆದ್ಯತೆ ಏನು? ಇವರೇನಾದರೂ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದಾರಾ? ರೈತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಸಂಬಂಧಿಸಿ ಅನುದಾನ ಬಿಡುಗಡೆ ಮಾಡಿದ್ದಾರಾ? ಬರಗಾಲದ ಮುನ್ಸೂಚನೆ ವಿಚಾರ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯೇ? ಯಾಕೆ ಈ ರೀತಿ ಕಪಟ ನಾಟಕ ಆಡುತ್ತಿದ್ದೀರಿ? ಮುಖ್ಯಮಂತ್ರಿ ರೈತ ಪರವಾಗಿಲ್ಲದೇ ರಿಯಲ್ ಎಸ್ಟೇಟ್ ಪರ ಆದರೆ ರಾಜ್ಯದ ಹಣೆಬರಹ ಇದೇ ಆಗುತ್ತದೆ ಎಂದು ಆಕ್ಷೇಪಿಸಿದರು.
ಹೀಗಿರುವಾಗ ನಮ್ಮ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವ ದುಸ್ಸಾಹಸಕ್ಕೆ ಯಾಕೆ ಕೈ ಹಾಕಿದ್ದೀರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ರೈತರಿಗೆ ಕೊಡಬೇಕಾದ ಯೋಜನೆ, ಆಡಳಿತ ಸನ್ನದ್ಧತೆ ಕಡೆಗೆ ಗಮನಿಸದೇ ಮುಖ್ಯಮಂತ್ರಿ ಕೈಚೆಲ್ಲಿ ಕೂತರೆ ಹೇಗೆ? ಎಸ್‍ಐಆರ್ ಇರುವ ಕಾರಣ ಆಗಸ್ಟ್ ಮಧ್ಯದಲ್ಲಿ ಮುಂಗಾರು ಅಧಿವೇಶನ ಮಾಡುವುದಾಗಿ ಹೇಳಿದ್ದಾರೆ. ಶಾಸಕರು ಮನೆ ಮನೆಗೆ ತೆರಳಿ ಎಸ್‍ಐಆರ್ ಮಾಡುತ್ತಾರಾ? ಇದೇ ಕಾರಣಕ್ಕೆ ಅಧಿವೇಶನ ಮುಂದೂಡುತ್ತಿದ್ದಾರೆ. ಸಿದ್ದರಾಮಯ್ಯ ಅವರದ್ದು ಪೂರ್ಣ ಸಂಪುಟ ಇದ್ದರೂ ನೆರೆ ಬಂದಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ ಎಂದು ದೂರಿದರು.
ಹಾನಗಲ್ ತಾಲೂಕಿನ ನರೇಗಲ್‍ನಲ್ಲಿ ಹಾಲುಮತ ಸಮಾಜದ ಒಂದೇ ಕುಟುಂಬದ ಆರು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮತ್ತೊಂದೆಡೆ ರಟ್ಟಿಹಳ್ಳಿಯಲ್ಲಿ ಮರಾಠ ಸಮಾಜದ ಬಡ ಕುಟುಂಬದ ಶಿವಾಜಿ ರಾವ್ ಅವರನ್ನು ಹಾಡಹಗಲೇ ಒದ್ದು ಪ್ರಾಣ ತೆಗೆಯುವ ಕೆಲಸ ಆಗಿದೆ. ಚಿಕ್ಕಬಳ್ಳಾಪುರದಲ್ಲಿ ಲವ್ ಜಿಹಾದ್‍ಗೆ ಒಳಗಾಗಿ ಫಿಸಿಯೋಥೆರಪಿಸ್ಟ್ ಕೊಲೆಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಸಾಫ್ಟ್ ಹಿಂದುತ್ವವಾದ, ಗೃಹಸಚಿವ ಪಿ.ಕೆ. ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಅವರ ಹಿಂದೂ ವಿರೋಧಿ ನೀತಿ- ಇವರ ಹೇಳಿಕೆಗಳು ಮತೀಯ ಶಕ್ತಿಗಳಿಗೆ ಧೈರ್ಯ ನೀಡುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆಯೇ ಇದಕ್ಕೆ ಕಾರಣ ಎಂದು ಆಕ್ಷೇಪಿಸಿದರು.
ಬಿಎಲ್ಒಗಳು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಕೆ: ಮಸೀದಿಯಲ್ಲಿ ಕೂರಿಸಿ ಎಸ್‍ಐಆರ್ ಪ್ರಕ್ರಿಯೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಸ್‍ಐಆರ್ ಅಡಿ ಬಿಎಲ್‍ಒಗಳ ದುರುಪಯೋಗ ಆಗುತ್ತಿದೆ. ಅಧಿಕಾರಿಗಳನ್ನು ಮಸೀದಿಯಲ್ಲಿ ಕೂರಿಸಿ ಎಸ್‍ಐಆರ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದೆ. ರಾಜ್ಯ ಸರ್ಕಾರದಿಂದ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸಾಗರದಲ್ಲಿ ಬಿಎಲ್‍ಒಗಳನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಎಸ್‍ಐಆರ್ ವಿಚಾರದಲ್ಲಿ ಚಾಮರಾಜಪೇಟೆ ಮೊದಲಾದ ಕಡೆ ಆಗುತ್ತಿರುವ ಗೊಂದಲದ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದನ್ನು ಚುನಾವಣಾ ಅಧಿಕಾರಿಗಳು ಸರಿಪಡಿಸಲಿ. ಕ್ಯಾಬಿನೆಟ್ ವಿಸ್ತರಿಸಿದರೆ ಈ ಸರ್ಕಾರದ ಬುಡ ಅಲ್ಲಾಡುವ ವಾಸ್ತವಿಕ ಸತ್ಯ ಸಿಎಂಗೆ ಗೊತ್ತಿದೆ. ಹಾಗಾಗಿ ಎಸ್‍ಐಆರ್ ನೆಪ ಒಡ್ಡಿದ್ದಾರೆ. ರಾಹುಲ್ ಗಾಂಧಿಯವರು 12 ತಿಂಗಳಲ್ಲಿ 8 ತಿಂಗಳು ವಿದೇಶದಲ್ಲೇ ಇರುತ್ತಾರೆ. ಸ್ವದೇಶದಲ್ಲಿ ಯಾವಾಗ ಇರುತ್ತಾರೆ ಎಂದು ಪ್ರಶ್ನಿಸಿದರು. ಒಂದು ಮ್ಯಾನೇಜ್‍ಮೆಂಟ್ ಕೋಟಾ, ಇನ್ನೊಂದು ಪೇಮೆಂಟ್ ಕೋಟಾ ಇರುವುದಾಗಿ ಹಿಂದೆಯೂ ಹೇಳಿದ್ದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಜಿಬಿಎ ವಾರ್ಡ್‍ಗಳಲ್ಲಿ ಸಮಾನಾಂತರ ಎಸ್‍ಐಆರ್ ನಿಲ್ಲಿಸಬೇಕು: ಚುನಾವಣಾ ಆಯೋಗ ಮಧ್ಯಪ್ರದೇಶಿಸಲಿ: ಶೋಭಾ ಕರಂದ್ಲಾಜೆ

