ಮೈಸೂರಿನಲ್ಲಿ ಅಪರೂಪದ ಬಾಳೆ ತಳಿ ಪ್ರದರ್ಶನ; ಬಾಳೆಯಿಂದ ಬರಬಹುದಾದ ಆದಾಯದ ಕುರಿತು ಪ್ರಗತಿಪರ ರೈತರು ಹೇಳುವುದಿಷ್ಟು
ಸಾಂಸ್ಕೃತಿಕ ನಗರಿಯಲ್ಲಿ ಅಪರೂಪದ ಬಾಳೆ ತಳಿ ಪ್ರದರ್ಶನ ಏರ್ಪಡಿಸಲಾಗಿದ್ದು, 260ಕ್ಕೂ ಹೆಚ್ಚು ಬಾಳೆ ತಳಿಗಳ ಪ್ರದರ್ಶನ ಹಾಗೂ ಮಾರಟ ಮಾಡಲಾಗುತ್ತಿದೆ.

Published : November 8, 2025 at 6:13 PM IST
|Updated : November 8, 2025 at 6:48 PM IST
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಬಾಳೆ ಮೇಳದ ಮೊದಲ ದಿನವಾದ ಇಂದು ಅಪರೂಪದ ಬಾಳೆ ತಳಿಗಳ ಪರಿಚಯ ಹಾಗೂ ಮಾರಾಟ ಮೇಳ ಆಯೋಜನೆ ಮಾಡಲಾಯಿತು. ಮೇಳದಲ್ಲಿ ಪ್ರಗತಿಪರ ರೈತರು ತಾವು ಬೆಳೆದ ತಂದು ಅಪರೂಪದ ಬಾಳೆ, ಅದರ ಪ್ರಯೋಜನ ಹಾಗೂ ಬಾಳೆಯಿಂದ ಬರಬಹುದಾದ ಆದಾಯದ ಕುರಿತು ಈಟಿವಿ ಭಾರತದಲ್ಲಿ ಎಳೆಎಳೆಯಾಗಿ ಹಂಚಿಕೊಂಡರು.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ 260ಕ್ಕೂ ಹೆಚ್ಚು ಬಾಳೆ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ಇಂದಿನ ಮೇಳದಲ್ಲಿ ಶಿರಸಿಯ ಡಾ.ಪ್ರಸಾದ್ ರಾಮ್ ಹೆಗ್ಗಡೆ ಅವರು ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ನ ಅಪರೂಪದ ಬಾಳೆ ತಳಿಗಳನ್ನು ಪ್ರದರ್ಶನ ಮಾಡಿದರು. ಇದರ ಜೊತೆಗೆ ಇಡೀ ಗಿಡವೇ ಕೆಂಪು ಅಗಿರುವ ಕೆಂಪು ಬಾಳೆ, ನಮಸ್ತ ಬಾಳೆ, ಫಿಂಗರ್ ಬಾಳೆ, ಮದರಂಗಿ ಬಾಳೆ, ಬೂದ್ ಬಾಳೆ ಸೇರಿದಂತೆ 260ಕ್ಕೂ ಹೆಚ್ಚು ತಳಿಗಳ ಬಾಳೆ ಪ್ರದರ್ಶನದ ಬಗ್ಗೆ ವಿವರಿಸಿದರು.
ಡಾ.ಪ್ರಸಾದ್ ರಾಮ್ ಹೆಗ್ಗಡೆ ಹೇಳಿದೇನು?: ನಾವು ಮೊದಲು ಪೂಜೆಗೆ ಮಾತ್ರ ಬಾಳೆಹಣ್ಣನ್ನು ಉಪಯೋಗಿಸುತ್ತಿದ್ದವು. ಈಗ ಬಾಳೆಯ ಎಲೆ, ಬಾಳೆ ದಿಂಡು, ಬಾಳೆ ಗೆಡ್ಡೆಗಳನ್ನು ಮಾರಬಹುದು. ಇದರ ಜೊತೆಗೆ ಬಾಳೆ ಎಲೆ ಹಾಗೂ ನಾರುಗಳಿಂದ ಸೀರೆ ಹಾಗೂ ಟವಲ್ ಕೂಡ ತಯಾರಿಸಲಾಗುತ್ತಿದೆ. ಇವೆಲ್ಲವೂ ಬಾಳೆ ಬೆಳೆಯುವ ರೈತರಿಗೆ ತಂದು ಕೊಡುವ ಆದಾಯಗಳು. ತಮ್ಮ ತೋಟದಲ್ಲಿ 260ಕ್ಕೂ ಜಾತಿಯ ಬಾಳೆ ತಳಗಳಿವೆ. ಇದರ ಜೊತೆಗೆ 13 ದೇಶದ ವಿವಿಧ ತಳಿಯ ಬಾಳೆಗಳಿವೆ ಎಂದು ಇಂಡೋನೇಷ್ಯಾ ಹಾಗೂ ಇತರ ದೇಶದ ಬಾಳೆ ಹಾಗೂ ನಮ್ಮ ದೇಶದ ಬಾಳೆಗಳ ಬಗ್ಗೆ ವಿವರಣೆ ನೀಡಿದರು.

ಬಾಳೆಯನ್ನು ವೈಜ್ಞಾನಿಕವಾಗಿ ಹಾಗೂ ಉತ್ತಮ ತಳಿಗಳನ್ನು ಬೆಳೆಯುವುದರಿಂದ ಉತ್ತಮ ಲಾಭ ಗಳಿಸಬಹುದು. ನಮ್ಮ ತೋಟದಲ್ಲಿ 260 ತಳಿಯ ಬಾಳೆ ಇದ್ದು 1800ಕ್ಕೂ ಹೆಚ್ಚು ಜಾತಿಯ ದೇಶಿಯ - ವಿದೇಶಿಯ ಹಾಗೂ ಕಾಡು ಬಾಳೆ ಗಿಡಗಳಿವೆ ಎನ್ನುತ್ತಾರೆ ಡಾ.ಪ್ರಸಾದ್ ರಾಮ್ ಹೆಗ್ಗಡೆ.

ಇತರ ಬಾಳೆ ತಳಿಗಳು: ಬಾಳೆ ಮೇಳದಲ್ಲಿ 45 ಮಳಿಗೆಗಳಿದ್ದು ಬಾಳೆ ಹಣ್ಣು, ಬಾಳೆ ಹಣ್ಣಿನಿಂದ ಮಾಡಿದ ಪದಾರ್ಥಗಳ ಮಾರಾಟ ಮಾಡಲಾಗುತ್ತಿದೆ. ಮೇಳದಲ್ಲಿ ರಸಬಾಳೆ, ಎಲಕ್ಕಿ ಬಾಳೆ, ಚಂದ್ರ ಬಾಳೆ, ಮದರಂಗ, ನೇಂದ್ರ, ಪೂವನ್, ನಮಸ್ತ ಬಾಳೆ, ಹಣ್ಣು, ಗೆಡ್ಡೆಗಳು ಗಮನ ಸೆಳೆಯುತ್ತಿವೆ.
ಬಾಳೆ ತಳಿಗಳ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಹೆಚ್ ಡಿ ಕೋಟೆಯ ಅಂತರಸಂತೆ ಗ್ರಾಮದ ರೈತ ಮಹಿಳೆ ನಾಗಮ್ಮ ಮಾತನಾಡಿ, ನಾವು ನಮ್ಮ ಊರಿನಿಂದ ಏಲಕ್ಕಿ ಬಾಳೆ, ನೇಂದ್ರ ಬಾಳೆ ಸೇರಿದಂತೆ ತೊಂಡೆ, ವೀಳ್ಯದೆಲೆ, ಬಾಳೆ ಹೂವು, ಬಾಳೆ ದಿಂಡು ತಂದಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದೇವೆ. ನಮ್ಮ ಬಳಿ ಇದ್ದ ಎರಡು ಎಕರೆ ಗದ್ದೆಯಲ್ಲಿ ತರಕಾರಿ ಕೂಡ ಬೆಳೆಯುತ್ತೇವೆ ಎಂದು ವಿವರಿಸಿದರು.
ಇದನ್ನೂ ಓದಿ: ಮುಖ್ಯ ಬೆಳೆ ಜೊತೆಗೆ ಉಪ ಬೆಳೆ ಬೆಳೆದರೆ ಆದಾಯ ಹೆಚ್ಚಿಸಿಕೊಳ್ಳಬಹುದು: ರೈತರಿಗೆ ಕೃಷಿ ವಿಜ್ಞಾನಿ ಸಲಹೆ

