ETV Bharat / state

ಡಾ. ರಾಜ್‍ಕುಮಾರ್- ಪಾರ್ವತಮ್ಮ ಮದುವೆಯಾದ ಛತ್ರ ಈಗ ಹೇಗಿದೆ ಗೊತ್ತಾ? ರಾಣಪ್ಪ ನೆನಪಿನಂಗಳದಲ್ಲಿ ರಾಜಣ್ಣನ ವಿವಾಹ ನೆನಪು

ಪ್ರಸ್ತುತ ದಿನಗಳಲ್ಲಿಯೂ ರಾಣಪ್ಪ ಛತ್ರದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ. ಆದರೆ, ಹಿಂದಿನ ದಿನಗಳಲ್ಲಿ ನಡೆಯುತ್ತಿದ್ದ ವೈಭಯುತವಾಗಿ ನಡೆಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ವರದಿ - ಕೇಶವ್ ಎಂ

Rajkumar Wedding Hall
ಡಾ. ರಾಜ್‍ಕುಮಾರ್ ಮದುವೆಯಾದ ಛತ್ರ (ETV Bharat)
author img

By ETV Bharat Karnataka Team

Published : May 6, 2026 at 5:03 PM IST

2 Min Read
Choose ETV Bharat

ಮೈಸೂರು: ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ಅವರ ದಾಂಪತ್ಯ ಜೀವನದ ಶುಭಾರಂಭಕ್ಕೆ ಸಾಕ್ಷಿಯಾದ ಕಲ್ಯಾಣಮಂಟಪ ಇಂದಿಗೂ ರಾಜಣ್ಣನ ವಿವಾಹದ ಇತಿಹಾಸ ಸಾರುತ್ತಿದೆ.

ನಂಜನಗೂಡು ಪಟ್ಟಣದ ರಸ್ತೆಯಲ್ಲಿರುವ ''ರಾಣಪ್ಪ'' ಛತ್ರದಲ್ಲಿ 1953ರ ಜೂನ್ 25ರಂದು ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ವಿವಾಹ ಎರಡು ಕುಟುಂಬಗಳ ಕುಟುಂಬಸ್ಥರ ಸಮ್ಮುಖದಲ್ಲಿ ನೆರೆವೇರಿತ್ತು. ಆದರೆ, ಕಾಲಕ್ರಮೇಣ ನಂಜನಗೂಡು ಪಟ್ಟಣದಲ್ಲಿ ಐಷಾರಾಮಿ ಕಲ್ಯಾಣ ಮಂಟಪಗಳು ತಲೆ ಎತ್ತಿದ ಪರಿಣಾಮ, ಶತಮಾನ ಪೂರೈಸಿರುವ ''ರಾಣಪ್ಪ'' ಛತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅದ್ಧೂರಿಯಾಗಿ ಶುಭ ಸಮಾರಂಭಗಳು ನಡೆಯುವುದು ಕಡಿಮೆಯಾಗಿದೆ. ಛತ್ರ ಮಾತ್ರ ರಾಜಣ್ಣನ ಮದುವೆಯಿಂದ ತನ್ನ ಇತಿಹಾಸವನ್ನು ಸದಾ ತನ್ನೊಡಲಿನಲ್ಲಿ ಇಟ್ಟುಕೊಂಡಿದೆ.

ತಮ್ಮ 24ನೇ ವಯಸ್ಸಿನಲ್ಲಿ ಪಾರ್ವತಮ್ಮ ಅವರನ್ನು ವರಿಸಿದ್ದ ರಾಜ್‌ಕುಮಾರ್ ಅವರು ವಿವಾಹದ ಬಳಿಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇತಿಹಾಸ ಸೃಷ್ಟಿಸಿದರು. ಕೆಲವು ದಿನಗಳ ಕಾಲ ಮದ್ರಾಸ್‌ನಲ್ಲಿದ್ದು, ಅಲ್ಲಿಂದ ಗಾಜನೂರಿಗೆ ಬಂದ ರಾಜ್‌ಕುಮಾರ್ ಅವರು, ವಿವಾಹವಾದ ನಂತರ ಬೆಂಗಳೂರಿಗೆ ತೆರಳಿ ಚಿತ್ರರಂಗದ ಮೂಲಕ ತಮ್ಮ ಬದುಕು ಕಟ್ಟಿಕೊಂಡರು. ತಾವು ಬೆಳೆದಂತೆ ಚಿತ್ರರಂಗವನ್ನು ಸಹ ಬೆಳೆಸಿದರು.

Rajkumar Wedding Hall
ವರನಟ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ವಿವಾಹದ ಆಮಂತ್ರಣ ಪತ್ರಿಕೆ (Special Arrangement)

100 ವರ್ಷಗಳ ಇತಿಹಾಸ ಹೊಂದಿರುವ ರಾಣಪ್ಪ ಛತ್ರವು, ಹಳೆಯ ಶೈಲಿಯ ಕಟ್ಟಡ ವಿನ್ಯಾಸ, ವಿಶಾಲ ಮಂಟಪ ಹಾಗೂ ಧಾರ್ಮಿಕ ವಾತಾವರಣದಿಂದ ಮದುವೆ, ಉಪನಯನ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಕುಟುಂಬ ಸಮಾರಂಭಗಳಿಗೆ ಪ್ರಸಿದ್ಧವಾಗಿತ್ತು. ಆಧುನಿಕ ವೇಗದಲ್ಲಿ ಐಷಾರಾಮಿ ಕಲ್ಯಾಣಮಂಟಪಗಳು ತಲೆ ಎತ್ತಿದ್ದರೂ, ಈ ಛತ್ರವು ತನ್ನ ಪರಂಪರೆಯ ನೋಟವನ್ನು ಇಂದಿಗೂ ಉಳಿಸಿಕೊಂಡಿರುವುದು ಗಮನಾರ್ಹ.

Rajkumar Wedding Hall
ಡಾ. ರಾಜ್‍ಕುಮಾರ್ ಮದುವೆಯಾದ ಛತ್ರ (ETV Bharat)

ಪ್ರಸ್ತುತ ದಿನಗಳಲ್ಲಿಯೂ ರಾಣಪ್ಪ ಛತ್ರದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ. ಆದರೆ, ಹಿಂದಿನ ದಿನಗಳಲ್ಲಿ ನಡೆಯುತ್ತಿದ್ದಷ್ಟು ವೈಭಯುತವಾಗಿ ನಡೆಯುತ್ತಿಲ್ಲ. ರಾಜ್‌ಕುಮಾರ್ ಅವರ ವಿವಾಹದ ಸ್ಥಳವಾಗಿರುವುದರಿಂದ ಈ ಛತ್ರವನ್ನು ಕುತೂಹಲದಿಂದ ನೋಡುತ್ತಾರೆ ಅಷ್ಟೇ. ರಾಣಪ್ಪ ಛತ್ರವು ಕಲ್ಯಾಣಮಂಟಪದ ಕಟ್ಟಡವಾಗಿ ಮಾತ್ರ ಸೀಮಿತವಾಗಿಲ್ಲ. ಅಂದಿನ ಸಂಸ್ಕೃತಿ, ಪರಂಪರೆಯನ್ನು ಗೋಡೆಗಳು, ನೆಲದ ಮೇಲೆ ಹಾಸುಹೊಕ್ಕಾಗುವಂತೆ ಮಾಡುತ್ತಿದೆ. ಶತಶತಮಾನ ಕಳೆದರೂ, ಛತ್ರದ ಹೆಸರು ಹಾಗೆಯೇ ಉಳಿಯಲಿದೆ. ಮುಂದೆಯೂ ಉಳಿಯಬೇಕು ಎನ್ನುತ್ತಾರೆ ಸ್ಥಳೀಯರು.

Rajkumar Wedding Hall
ಡಾ. ರಾಜ್‍ಕುಮಾರ್ ಮದುವೆಯಾದ ಛತ್ರ (ETV Bharat)

ಡಾ. ರಾಜ್‍ಕುಮಾರ್ ಅವರ ಕಲಾ ಸೇವೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ ನೀಡಲಾಗಿದೆ. ಅವರ ಕೊಡುಗೆ ಚಿತ್ರರಂಗಕ್ಕೆ ಮಾತ್ರವಲ್ಲ, ಸಮಾಜಕ್ಕೂ ಸಾಕಷ್ಟಿದೆ. ಹಾಗಾಗಿ ಇಂದಿಗೂ ಅನೇಕರು ನಂಜನಗೂಡಿಗೆ ಹೋದಾಗ,​ ಡಾ. ರಾಜ್‍ಕುಮಾರ್ ಅವರು ಮದುವೆಯಾದ ಈ ಛತ್ರಕ್ಕೆ ಭೇಟಿ ನೀಡಿ ಆ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಗಮನಾರ್ಹದ ಸಂಗತಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

Rajkumar Wedding Hall
ಡಾ. ರಾಜ್‍ಕುಮಾರ್ ಮದುವೆಯಾದ ಛತ್ರ (ETV Bharat)

ರಾಜಣ್ಣನ ವಿವಾಹದ ಇತಿಹಾಸ ಈಗಲೂ ಉಳಿದುಕೊಂಡಿದೆ. ಈ ಕಲ್ಯಾಣಮಂಟಪದಲ್ಲಿ ರಾಜ್‌ ಹಾಗೂ ಪಾರ್ವತಮ್ಮ ವಿವಾಹವಾಗಿದ್ದು, ನಮ್ಮೂರಿಗೆ ಹಾಗೂ ಛತ್ರಕ್ಕೆ ಹೆಮ್ಮೆಯ ವಿಷಯ. ಇತ್ತೀಚೆಗೆ ಪಟ್ಟಣದಲ್ಲಿ ಹಲವು ಛತ್ರಗಳು ತಲೆ ಎತ್ತಿವೆ. ಆದರೆ, ರಾಣಪ್ಪ ಛತ್ರದ ಇತಿಹಾಸ ಹಾಗೂ ಪರಂಪರೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಲ್. ವೆಂಕಟೇಶ್.

ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರ ಅಭಿಮಾನಿ ನಾಲಾಬೀದಿ ರವಿ, ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರು ಮದುವೆಯಾಗಿದ್ದು ಇದೇ ರಾಣಪ್ಪ ಕಲ್ಯಾಣ ಮಂಟಪದಲ್ಲಿ. ಮಂಟಪದ ಮಾಲೀಕರ ಬಳಿ ಡಾ.ರಾಜ್‌ ಅವರ ಮದುವೆಯಾದ ಫೋಟೋಗಳಿದ್ದರೆ ಗೋಡೆಗಳ ಮೇಲೆ ಹಾಕಿದರೆ ಆಧುನಿಕ ಭರಾಟೆಯ ನಡುವೆ ಛತ್ರಕ್ಕೆ ಮತ್ತಷ್ಟು ಮೆರಗು ಬರಲಿದೆ. ರಾಜ್‌ಕುಮಾರ್ ಅವರು ಮೈಸೂರಿನಲ್ಲಿ ಶಕ್ತಿಧಾಮ ಸ್ಥಾಪನೆ ಮಾಡಿ ನೊಂದ ಹೆಣ್ಣು ಮಕ್ಕಳ ಕಣ್ಣೀರು ಒರೆಸಿದ್ದಾರೆ. ಅವರ ಕೊಡುಗೆ ಚಿತ್ರರಂಗಕ್ಕೆ ಮಾತ್ರವಲ್ಲ, ಸಮಾಜಕ್ಕೂ ಸಾಕಷ್ಟು ಇದೆ ಎಂದು ಸ್ಮರಿಸಿದರು.

ಇದನ್ನೂ ಓದಿ: ಪ್ರಧಾನಿಗೆ ಮದುವೆ ಆಮಂತ್ರಣ ಪತ್ರಿಕೆ ಕಳಿಸಿದ್ದ ರಾಯಚೂರಿನ ಯುವಕ: ಮೋದಿಯಿಂದ ಬಂತು ಶುಭಾಶಯ ಸಂದೇಶ