ಜ.29ರಿಂದ ಮೂರು ದಿನ ರಾಯಚೂರು ಉತ್ಸವ: ಸಚಿವ ಶರಣಪ್ರಕಾಶ್ ಪಾಟೀಲ್
ಜ.29ರಿಂದ ಮೂರು ದಿನ ರಾಯಚೂರು ಜಿಲ್ಲಾ ಉತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಿದರು.

Published : January 4, 2026 at 6:59 PM IST
ರಾಯಚೂರು: ಹಲವು ವರ್ಷಗಳ ಬಳಿಕ ರಾಯಚೂರು ಜಿಲ್ಲಾ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಜ.29, 30, 31ರಂದು ಮೂರು ದಿನ ಅದ್ಧೂರಿಯಾಗಿ ಉತ್ಸವ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಭವನದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಯಚೂರು ಉತ್ಸವದ ಯಶಸ್ಸಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು, ಕಲಾವಿದರು, ಸಾಹಿತಿಗಳು, ಸಾರ್ವಜನಿಕರು ಸೇರಿ ಜಿಲ್ಲೆಯ ಎಲ್ಲರೂ ಸಹಕರಿಸಬೇಕು. ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉತ್ಸವ ಸಂಬಂಧ ಕೆಲಸ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈಗಾಗಲೇ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಇನ್ನೂ ಅಗತ್ಯವಿರುವ ಹಣವನ್ನು ಸಂಗ್ರಹಿಸಿ ಉತ್ಸವವನ್ನು ಯಶಸ್ವಿಗೊಳಿಸಲಾಗುವುದು ಎಂದರು.
ಉತ್ಸವದಲ್ಲಿ ಮತ್ಸ್ಯ ಮೇಳ, ಉದ್ಯೋಗ ಮೇಳ, ಗ್ಯಾರೆಂಟಿ ಮೇಳ ಸೇರಿದಂತೆ ವಿವಿಧ ಮೇಳಗಳನ್ನು ಆಯೋಜನೆ ಮಾಡಲಾಗುವುದು. ಇದಕ್ಕಾಗಿ ಎಲ್ಲ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಸ್ಥಳೀಯ ದೇಶಿ ಕ್ರೀಡೆಗಳು, ಸ್ಥಳೀಯ ಕಲಾವಿದರಿಗೆ ಪ್ರಥಮ ಆದ್ಯತೆ ನೀಡುವ ಮೂಲಕ ಯಾವುದೇ ಲೋಪವಾಗದಂತೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
ಬಳ್ಳಾರಿ ಘರ್ಷಣೆ ಕುರಿತು ಪ್ರತಿಕ್ರಿಯೆ: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಡೆದಿರುವ ಘಟನೆ ಕುರಿತಂತೆ ತನಿಖೆ ನಡೆಯುತ್ತಿದೆ. ಅಧ್ಯಕ್ಷರು ಪಕ್ಷದಿಂದಲೂ ಒಂದು ಸಮಿತಿ ರಚಿಸಿ ಸ್ಥಳಕ್ಕೆ ಕಳುಹಿಸಿದ್ದಾರೆ. ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಸ್ಪಷ್ಟನೆ ನೀಡಿರುವ ಕಾರಣ ಅದರ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದರು.
ಏಕಾಏಕಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಕ್ರಮ ಕೈಗೊಂಡಿರುವ ಕುರಿತು ಪ್ರತಿಕ್ರಿಯಿಸಿ, ಅಲ್ಲಿ ಕರ್ತವ್ಯ ಲೋಪದ ಆರೋಪವಿದೆ. ಇಂತಹ ದೊಡ್ಡ ಘಟನೆ ಆದಾಗ ಸ್ಥಳೀಯವಾಗಿ ಹತೋಟಿಗೆ ತೆಗೆದುಕೊಳ್ಳಬೇಕು. ಅಧಿಕಾರ ಸ್ವೀಕಾರ ಮಾಡಿದ ಮೇಲೆ ಅದು ಅವರ ಜವಾಬ್ದಾರಿ. ನಿಗದಿತ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಡಯಿಸಿ ಕ್ರಮ ಕೈಗೊಳ್ಳಬೇಕು. ರಿಪೋರ್ಟ್ ಆಧರಿಸಿ ಕ್ರಮ ಕೈಗೊಂಡಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಚಿವರಾದ ಎನ್.ಎಸ್.ಭೋಜರಾಜು, ಶಾಸಕರಾದ ಡಾ.ಶಿವರಾಜ್ ಪಾಟೀಲ್, ಹಂಪನಗೌಡ ಪಾಟೀಲ್, ಬಸವನಗೌಡ ದದ್ದಲ್, ಎ.ವಸಂತಕುಮಾರ, ಹಂಪಯ್ಯ ನಾಯಕ ಮತ್ತು ಬಸವನಗೌಡ ತುರುವಿಹಾಳ ಇದ್ದರು.
ಇವುಗಳನ್ನೂ ಓದಿ:

