ETV Bharat / state

ರಾಯಚೂರು: ವಿದ್ಯಾರ್ಥಿಯ ತಲೆಕೂದಲು ಕತ್ತರಿಸಿದ ಶಿಕ್ಷಕರ ವಿರುದ್ಧ ದೂರು ದಾಖಲು

ವಿದ್ಯಾರ್ಥಿಯೊಬ್ಬನ ತಲೆ ಕೂದಲನ್ನು ಕೆಟ್ಟದಾಗಿ ಕತ್ತರಿಸಿದ ಶಿಕ್ಷಕರ ವಿರುದ್ಧ ದೂರು ದಾಖಲಾಗಿದೆ.

COMPLAINT AGAINST TEACHERS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : February 26, 2026 at 4:40 PM IST

2 Min Read
Choose ETV Bharat

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ ತಲೆ ಕೂದಲನ್ನು ಕೆಟ್ಟದಾಗಿ ಕತ್ತರಿಸಿ ಅವಮಾನವೀಯವಾಗಿ ನಡೆದುಕೊಂಡ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಸಿಂಧನೂರು ನಗರದ ಹೋಲಿಫ್ಯಾಮಿಲಿ ಶಾಲೆಯಲ್ಲಿ ಈ‌ ಘಟನೆ ಜರುಗಿದ್ದು, ವಿದ್ಯಾರ್ಥಿಯ ಪೋಷಕರು ನೀಡಿದ ದೂರು ಹಿನ್ನೆಲೆಯಲ್ಲಿ ಶಾಲೆಯ ಮೂವರು ಶಿಕ್ಷಕರ ವಿರುದ್ಧ ಸಿಂಧನೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಲಿಫ್ಯಾಮಿಲಿ ಶಾಲೆಯ ಫಾದರ್ ಗ್ಯಾನ್​ ಪ್ರಕಾಶ್​ ಹಾಗೂ ಅದೇ ಶಾಲೆಯ ಸಹ ಶಿಕ್ಷಕಿಯರಾದ ವಿಶಾಲಾಕ್ಷಿ ಮತ್ತು ಸ್ವಾತಿ ಎನ್ನುವರು ತನ್ನ ಮಗನ ತಲೆ ಕೂದಲನ್ನು ಕೆಟ್ಟದಾಗಿ ಕತ್ತರಿಸಿ ಅವಮಾನವೀಯವಾಗಿ ನಡೆದುಕೊಂಡಿದ್ದು, ಶಾಲೆಯ ಶಿಕ್ಷಕರು ಹಾಗೂ ಫಾದರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ.

ತಮ್ಮ ಪುತ್ರನ ತಲೆ ಕೂದಲು ಕತ್ತರಿಸಿದ್ದಾರೆ ಎಂಬ ವಿಚಾರ ತಿಳಿದು ಈ ಕುರಿತು ಮಾಹಿತಿ ಪಡೆಯಲು ಹೋಲಿಫ್ಯಾಮಿಲಿ ಶಾಲೆಯ ಫಾದರ್‌ ಗ್ಯಾನ್​ ಪ್ರಕಾಶ್​ ಅವರ ಮೊಬೈಲ್​ಗೆ ಕರೆ ಮಾಡಿದ್ದರೂ, ಕರೆಗೆ ಸ್ಪಂದಿಸಿಲ್ಲ. ವಿಚಾರಿಸಲೆಂದು ಶಾಲೆಗೆ ಹೋದಾಗ ಫಾದರ್ ಗ್ಯಾನ್​ ಪ್ರಕಾಶ್​ ಅವರು ತಮ್ಮೊಂದಿಗೆ ಸರಿಯಾಗಿ ವರ್ತಿಸಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ದೂರಿನಲ್ಲಿ ಬೇಸರ ಹೊರಹಾಕಿದ್ದಾರೆ.

ನನ್ನ ಮಗನ ಕಟಿಂಗ್​ ಬಗ್ಗೆ ಈವರೆಗೂ ಯಾವುದೇ ರಿಮಾರ್ಕ್​ ಬಂದಿಲ್ಲ. ಅಷ್ಟು ಶಿಸ್ತಾಗಿ ಕಟಿಂಗ್​ ಮಾಡಿಸಿ ಕಳಿಸುತ್ತೇವೆ. ಶಾಲೆಯಲ್ಲಿ ಎಲ್ಲರೂ ಹೇಗೆ ಮಕ್ಕಳನ್ನು ಕಳಿಸುತ್ತಾರೆಯೋ ಹಾಗೆಯೇ ನಾವು ತಮ್ಮ ಪುತ್ರನನ್ನು ಕಳಿಸುತ್ತೇವೆ. ಆದರೆ, ಕೂದಲು ಹೆಚ್ಚಾಗಿವೆ ಎಂದು ಶಾಲೆಯ ಕೆಲವು ಸಿಬ್ಬಂದಿ ನನ್ನ ಮಗನ ಕೂದಲನ್ನು ಕತ್ತಿಯಿಂದ ಕತ್ತರಿಸಿದ್ದಾರೆ. ಅಲ್ಲದೇ, ತಲೆಗೆ ಮುಷ್ಠಿ ಮಾಡಿ ಹೊಡೆದಿದ್ದಾರೆ. ನನ್ನ ಪುತ್ರನಿಗೆ ಏನಾದರೂ ಆಗಿದ್ದರೆ ಯಾರು ಹೊಣೆ? ಎಂದು ವಿದ್ಯಾರ್ಥಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರಿನಲ್ಲಿ ದಾಖಲಾದ ಸಾರಾಂಶ ಹೀಗಿದೆ: 10 ವರ್ಷದವನಾದ ನನ್ನ ಮಗ ಸಿಂಧನೂರು ನಗರದ ಹೋಲಿ ಫ್ಯಾಮಿಲಿ ಶಾಲೆಯಲ್ಲಿ 5ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಶಾಲೆಯ ಫಾದರ್​ ಗ್ಯಾನ್​ ಪ್ರಕಾಶ್​, ಶಿಕ್ಷಕಿಯರಾದ ಸ್ವಾತಿ ಹಾಗೂ ವಿಶಾಲಾಕ್ಷಿ ಎಂಬುವರು ದಿನಾಂಕ 24/02/2026 ರಂದು ಶಾಲೆಗೆ ಹೋದ ತಮ್ಮ ಪುತ್ರನ ಕೂದಲನ್ನು ಕತ್ತರಿಯಿಂದ ಕತ್ತರಿಸಿದ್ದಾರೆ. ಅಲ್ಲದೇ, ಗ್ಯಾನ್​ ಪ್ರಕಾಶ್ ಅವರು ಮುಷ್ಟಿ ಮಾಡಿ ತನ್ನ ಮಗನಿಗೆ ಹೊಡೆದರೆ, ಶಿಕ್ಷಕಿಯರಾದ ಸ್ವಾತಿ ಅವರು ಶಟಲ್​ ಕಾಕ್​ ಪೈಪಿನಿಂದ ಹಲ್ಲೆ ಮಾಡಿದ್ದಾರೆ. ಈ ವಿಷಯವನ್ನು ತಮ್ಮ ಮಗ ಫೋನ್​ ಮಾಡಿ ತಿಳಿಸಿದ್ದು, ಪ್ರಕರಣ ಸಂಬಂಧ ಈ ಮೂವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇವರು ನೀಡಿದ ದೂರಿನನ್ವಯ ಠಾಣೆಯ ಗುನ್ನೆ ನ. 77/2026 ಕಲಂ 75,82 ಜೆಜೆ ಕಾಯ್ದೆ -2026 ಮತ್ತು ಕಲಂ 115(2) ಸಹಿತ 3(5) ಬಿ.ಎನ್.ಎಸ್​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ​

ಇದನ್ನೂ ಓದಿ: ಚಿಕ್ಕ ವಯಸ್ಸಿಗೆ ಬೋಳು ತಲೆ ಸಮಸ್ಯೆ ಆಗಿದೆಯೇ?; ಕೂದಲು ಕಸಿ ಮಾಡಿದರೆ ಆಗುವ ತೊಂದರೆಗಳೇನು?