ETV Bharat / state

ನೂರು ಕೇಸ್ ದಾಖಲಿಸಿದರೂ ರಾಹುಲ್ ಗಾಂಧಿ ಹೆದರಲ್ಲ: ಸಿಎಂ ಡಿ ಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷ ಇಂತಹ ಕೇಸ್​ಗಳಿಗೆ ಹೆದರುವುದಿಲ್ಲ. ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಬಂದಿದ್ದಾರೆ. ಹೋರಾಟ ಅವರ ರಕ್ತಗತದಲ್ಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Rahul Gandhi is not afraid even if a hundred cases are filed: CM DK Shivakumar
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡದಲ್ಲಿ ದುರುದ್ದೇಶಪೂರಿತ ಎಫ್​ಐಆರ್ ದಾಖಲಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಫ್ರೀಡಂ ಪಾರ್ಕ್​ನಲ್ಲಿ ಬುಧವಾರ ಪ್ರತಿಭಟನೆ ನಡೆಸಿತು. (ETV Bharat)
author img

By ETV Bharat Karnataka Team

Published : September 2, 2026 at 6:11 PM IST

4 Min Read
Choose ETV Bharat

ಬೆಂಗಳೂರು: ರಾಹುಲ್ ಗಾಂಧಿ ಹುಟ್ಟು ಹೋರಾಟಗಾರ, ಹೋರಾಟಗಾರನಾಗಿ ಬದುಕುತ್ತಿದ್ದು, ಹೋರಾಟಗಾರನಾಗಿಯೇ ಸಾಯುತ್ತಾರೆ. ಇಂತಹ ನೂರು ಕೇಸ್ ದಾಖಲಿಸಿದರೂ ರಾಹುಲ್ ಗಾಂಧಿ ಅವರು ಈ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಬೇರೆಯವರಂತೆ ರಾಹುಲ್ ಗಾಂಧಿ ಅವರು ಮುಚ್ಚಳಿಕೆ ಬರೆದುಕೊಡಲ್ಲ, ಕ್ಷಮೆ ಕೇಳಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡದಲ್ಲಿ ದುರುದ್ದೇಶಪೂರಿತ ಎಫ್​ಐಆರ್ ದಾಖಲಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಫ್ರೀಡಂ ಪಾರ್ಕ್​ನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

Rahul Gandhi is not afraid even if a hundred cases are filed: CM DK Shivakumar
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಖಂಡದಲ್ಲಿ ದುರುದ್ದೇಶಪೂರಿತ ಎಫ್​ಐಆರ್ ದಾಖಲಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಫ್ರೀಡಂ ಪಾರ್ಕ್​ನಲ್ಲಿ ಬುಧವಾರ ಪ್ರತಿಭಟನೆ ನಡೆಸಿತು. (ETV Bharat)

ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಗಾಂಧಿ ಕುಟುಂಬ ದೇಶ ಹಾಗೂ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಾಗಿಡಲು ತ್ಯಾಗ-ಬಲಿದಾನ ಮಾಡಿದೆ. ಈ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ತಂದಿದ್ದು ಯಾರು? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮುನ್ನಡೆಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯ ಯಾವುದಾದರೂ ನಾಯಕರು ದೇಶದ ಇತಿಹಾಸದ ಚರಿತ್ರೆಯಲ್ಲಿ ಭಾಗಿಯಾಗಿದ್ದಾರಾ? ಆ ಮೂಲಕ ದೇಶದ ಸ್ವಾತಂತ್ರ್ಯ, ಸಮಗ್ರತೆ, ಶಾಂತಿ ತರುವ ಕೊಡುಗೆಯಲ್ಲಿ ಪಾಲು ಹೊಂದಿದ್ದಾರಾ? ಎಂದು ಪ್ರಶ್ನಿಸಿದರು.

ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿದ ಶತಮಾನೋತ್ಸವ ಹಿನ್ನೆಲೆಯಲ್ಲಿ ನಾವು ನಮ್ಮ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮಾಡಿದೆವು. ನಾವಿಲ್ಲಿ ಪ್ರತಿಭಟನೆ ಮಾಡುತ್ತಿರುವುದು ಕೇವಲ ರಾಹುಲ್ ಗಾಂಧಿ ಅವರ ಪರವಾಗಿ ಅಲ್ಲ. ಕಳ್ಳನನ್ನು ಹಿಡಿಯಿರಿ ಎಂದು ಹೇಳಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದರೆ, ಕಾಂಗ್ರೆಸ್ ಪಕ್ಷ ಈ ಕೇಸ್​ಗಳಿಗೆ ಹೆದರುವುದಿಲ್ಲ. ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಬಂದಿದ್ದಾರೆ. ಹೋರಾಟ ಅವರ ರಕ್ತಗತದಲ್ಲಿದೆ. ನೆಹರು ಅವರು ಎಷ್ಟು ವರ್ಷ ಜೈಲಲ್ಲಿದ್ದರು? ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಈ ದೇಶಕ್ಕೆ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ನಾನು ಉತ್ತರಾಖಂಡಕ್ಕೆ ಹೋಗಿದ್ದಾಗ ಅಲ್ಲಿ ಸ್ನೇಹಿತರ ಬಗ್ಗೆ ಚರ್ಚೆ ಮಾಡುವಾಗ, ಮುಂದೆ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲವೆಂದು ಹೇಳಿದ್ದರು. ಇದನ್ನು ಮನಗಂಡ ಬಿಜೆಪಿಯವರು, ವಿಷಯ ಸೃಷ್ಟಿಸಲು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಸಮಾವೇಶ ಮಾಡಿದ ಜಾಗವನ್ನು ಯಾರಾದರೂ ಶುದ್ಧೀಕರಣ ಮಾಡುತ್ತಾರಾ? ಈ ಕೃತ್ಯವನ್ನು ತಪ್ಪು ಎಂದು ಹೇಳಲು ಅವರಿಂದ ಸಾಧ್ಯವಾಗಿಲ್ಲ ಎಂದರು.

Rahul Gandhi is not afraid even if a hundred cases are filed: CM DK Shivakumar
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡದಲ್ಲಿ ದುರುದ್ದೇಶಪೂರಿತ ಎಫ್​ಐಆರ್ ದಾಖಲಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಫ್ರೀಡಂ ಪಾರ್ಕ್​ನಲ್ಲಿ ಬುಧವಾರ ಪ್ರತಿಭಟನೆ ನಡೆಸಿತು. (ETV Bharat)

ಯುವಕರು ಪ್ರತಿಭಟನೆ ಮಾಡಿದರು. ಅವರ ಮೇಲೆ ಪೆಲೆಟ್ ಗನ್ ದಾಳಿ ಮಾಡಿದಿರಿ, ಅವರ ಮೇಲೆ ನಡೆದ ದಾಳಿ ಬಗ್ಗೆ ಕೇಳಿದಾಗ ಕೇಂದ್ರ ಸರ್ಕಾರಕ್ಕೆ ಉತ್ತರ ನೀಡಲು ಆಗಲಿಲ್ಲ. ಸುಪ್ರೀಂ ಕೋರ್ಟ್ ಈ ಕೃತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ನಮ್ಮ ತಪ್ಪನ್ನು ಯಾರಾದರೂ ಎತ್ತಿ ತೋರಿಸಿದರೆ ನಾವು ಅದನ್ನು ತಿದ್ದುಕೊಳ್ಳಬೇಕು. ಈ ವಿಚಾರವಾಗಿ ಚರ್ಚೆ ಮಾಡಲಾಗದೇ ಇಂತಹ ಅಮಾನವೀಯವಾಗಿ ನಡೆದುಕೊಂಡಿದ್ದೀರಿ. ಇದು ಈ ರಾಜ್ಯದ ವಿಚಾರವಲ್ಲ. ಇಡೀ ಪ್ರಪಂಚದ ಮಾನವೀಯತೆ ವಿಚಾರವಾಗಿದೆ. ಮಹಾತ್ಮ ಗಾಂಧಿ ಅವರನ್ನು ಇಡೀ ಪ್ರಪಂಚ ಗೌರವಿಸುತ್ತದೆ. ನಮ್ಮ ಸಂವಿಧಾನವನ್ನು ಬೇರೆ ದೇಶಗಳು ಪ್ರಶಂಸಿಸಿವೆ ಎಂದು ಹೇಳಿದರು.

ಬಿಜೆಪಿ ಎಲ್ಲರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಅವರಿಗೆ ಕೊನೆಗಾಲ ಸಮೀಪಿಸುತ್ತಿದೆ. 2028ರಲ್ಲಿ ಕರ್ನಾಟಕದಲ್ಲಿ ಹಾಗೂ 2029ರಲ್ಲಿ ದೇಶದಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜನರೇ ನಮ್ಮ ಆಡಳಿತ, ಕಾರ್ಯಕ್ರಮ ಮೆಚ್ಚಿದ್ದಾರೆ. ಇದನ್ನು ಸಹಿಸಲು ಬಿಜೆಪಿಯವರಿಂದ ಸಾಧ್ಯವಾಗುತ್ತಿಲ್ಲ. ನಾವು ಭಾರತ ಜೋಡೋ ಯಾತ್ರೆ ಮಾಡಿದ್ದೇ ಸಮಾಜದ ಎಲ್ಲ ವರ್ಗದ ಜನ ಒಗ್ಗಟ್ಟಾಗಿ ಸಾಗಬೇಕು ಎಂಬ ಸಂದೇಶ ಸಾರಲು. ನಾವು ಹುಟ್ಟುವಾಗ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ ಎಂದು ಹೇಳಿದರು.

ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಹುಲ್ ಗಾಂಧಿ ಅವರು ಯಾವ ತಪ್ಪು ಮಾಡದಿದ್ದರೂ ಅವರ ಮೇಲೆ ಕೇಸು ದಾಖಲು ಮಾಡಲಾಗಿದೆ. ಇದು ಘನಘೋರ ಅನ್ಯಾಯ. ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡಲಾಗಿದೆ.‌ ಇದನ್ನು ಪ್ರಶ್ನೆ ಮಾಡಿದ್ದೇ ಅಪರಾಧ ಎಂಬಂತೆ ರಾಹುಲ್ ಗಾಂಧಿಯವರ ಮೇಲೆ ಕೇಸು ದಾಖಲು ಮಾಡಲಾಗಿದೆ. ಭಾಷಣ ಮಾಡಿದ ಜಾಗದ ಶುದ್ಧೀಕರಣ ಸಂವಿಧಾನ ವಿರೋಧಿ ಕೆಲಸ.‌ ಅಸ್ಪೃಶ್ಯತೆಗೆ ಅವಕಾಶವಿಲ್ಲ ಎಂದು ಸಂವಿಧಾನ ಹೇಳಿದೆ. ಹೀಗಾಗಿ ಇದು ಸಂವಿಧಾನಕ್ಕೆ ಮಾಡಿದ ಅಪ್ರಚಾರ ಎಂದು ಆರೋಪಿಸಿದರು.

ಇದು ಖರ್ಗೆ ಅವರಿಗೆ ಮಾಡಿದ ಅಪಮಾನ ಮಾತ್ರವಲ್ಲ. ಎಫ್​ಐಆರ್ ದಾಖಲಿಸುವ ಮೂಲಕ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರನ್ನೂ ಅವಮಾನಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಅವರೇನು ತಪ್ಪು ಮಾಡಿದ್ದಾರೆ?. ಶುದ್ಧೀಕರಣ ಕೆಲಸ ಪ್ರಶ್ನಿಸಿದ್ದಾರೆ ಅಷ್ಟೇ. ಇಷ್ಟಕ್ಕೆ ದಲಿತರ ಮೇಲಿನ ದೌರ್ಜನ್ಯ ಕೇಸು ದಾಖಲಿಸಲಾಗಿದೆ. ಇದು ಅತ್ಯಂತ ಖೇದಕರ. ಸಂವಿಧಾನದ ಪ್ರಕಾರ ಯಾರು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೊ ಅವರ ಮೇಲೆ ಕೇಸು ಹಾಕಬೇಕು. ಆದರೆ ದುರುದ್ದೇಶಪೂರ್ವಕವಾಗಿ ರಾಹುಲ್ ಗಾಂಧಿಯವರ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಏನಾದರೂ ಮಾಡಿ ರಾಹುಲ್ ಅವರ ಬಾಯಿ ಮುಚ್ಚಿಸಬೇಕು ಎಂದು ಬಿಜೆಪಿ ತೀರ್ಮಾನಿಸಿದಂತಿದೆ. ಈ ಹಿಂದೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನ ಟೀಕೆ ಮಾಡಿದಾಗಲೂ ರಾಹುಲ್ ಗಾಂಧಿಯವರ ಮೇಲೆ ಕೇಸು ದಾಖಲಾಗಿಸಲಾಗಿತ್ತು. ಅವರ ಸದಸ್ಯತ್ವವನ್ನೂ ರದ್ದು ಮಾಡಿದ್ದರು. ಕೊನೆಗೆ ಕಾನೂನಿನ ಮೊರೆ ಹೋದಾಗ ನ್ಯಾಯಾಲಯ ಕೇಸು ರದ್ದು ಮಾಡಿತು. ರಾಹುಲ್ ಗಾಂಧಿಯವರು ಸಂವಿಧಾನದ ಪರ - ಅಸ್ಪೃಶ್ಯತೆ ವಿರುದ್ಧ ಇದ್ದಾರೆ. ಆದರೆ ಮನುವಾದಿಗಳಾದ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ರಾಹುಲ್ ಗಾಂಧಿಯವರ ವಿರುದ್ಧ ಕೇಸು ದಾಖಲು ಮಾಡಿರುವುದು ಘೋರ ಅಪರಾದ. ಇದನ್ನು ಸಹಿಸಲು ಆಗದು. ಇದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಆಗಬೇಕು. ಅಧಿಕಾರದಲ್ಲಿರಲು ಬಿಜೆಪಿಯವರು ನಾಲಾಯಕ್. ನಾವೆಲ್ಲ ರಾಹುಲ್ ಗಾಂಧಿಯವರ ಜೊತೆಗೆ ಇರುತ್ತೇವೆ‌. ಅವರ ಹೋರಾಡುವ ಕೈಗಳನ್ನು ಬಲಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೆಆರ್‌ಐಡಿಎಲ್‌ ಲಂಚ ಪ್ರಕರಣ; ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐ ತನಿಖೆಗೆ ನೀಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ