ಕೆಆರ್‌ಐಡಿಎಲ್ ಅಧಿಕಾರಿಗಳ ವಿರುದ್ಧ ಲಂಚದ ಆರೋಪ; ಸಿಎಂಗೆ ದೂರು ನೀಡಿದ ಪುತ್ತೂರು ಶಾಸಕ, ತನಿಖೆಗೆ ಆಗ್ರಹ
ಶಾಸಕರೇ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ, ಕ್ರಮಕ್ಕೆ ಒತ್ತಾಯಿಸಿದ್ದಾರೆ.

Published : September 1, 2026 at 11:19 AM IST
ಪುತ್ತೂರು (ದಕ್ಷಿಣ ಕನ್ನಡ): ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ಮಂಗಳೂರು ವಿಭಾಗದ ಅಧಿಕಾರಿಗಳ ವಿರುದ್ಧ ಲಂಚ, ಸುಲಿಗೆ ಹಾಗೂ ಗುತ್ತಿಗೆದಾರರಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ದೂರು ಸಲ್ಲಿಸಿ, ಆರೋಪಗಳ ಕುರಿತು ತಕ್ಷಣ ನಿಷ್ಪಕ್ಷಪಾತ ಇಲಾಖಾ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಕೆಆರ್‌ಐಡಿಎಲ್ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ಹಾಗೂ ಕಿರಿಯ ಎಂಜಿನಿಯರ್ ಪ್ರಜ್ವಲ್ ಅವರು ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ದೂರಿನಲ್ಲಿ ಆರೋಪಿಸಿದ್ದಾರೆ.
‘ಕೆಆರ್‌ಐಡಿಎಲ್ ಚಾರ್ಜ್’ ಎಂಬ ಹೆಸರಿನಲ್ಲಿ ಗುತ್ತಿಗೆದಾರರಿಂದ ಕಾಮಗಾರಿಯ ಮೊತ್ತದ ಶೇ.7ರವರೆಗೆ ಅನಧಿಕೃತ ಶುಲ್ಕ ಪಡೆಯುವಂತೆ ಒತ್ತಾಯಿಸಲಾಗುತ್ತಿದೆ. ಈ ಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖಾ ಸಚಿವರಿಗೆ ಮಾಸಿಕವಾಗಿ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಶಾಸಕರು ಮಾಡಿದ್ದಾರೆ. ಅನಧಿಕೃತ ಹಣ ಪಾವತಿಸಲು ಪ್ರಶ್ನಿಸುವ ಅಥವಾ ವಿರೋಧಿಸುವ ಗುತ್ತಿಗೆದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕ ಹಣದಿಂದ ನಡೆಯುವ ಕಾಮಗಾರಿಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಹಾಗೂ ನಿಯಮಾನುಸರಣೆ ಅತ್ಯಂತ ಮುಖ್ಯವಾಗಿದ್ದು, ಆರೋಪಗಳು ಸಾಬೀತಾದಲ್ಲಿ ಅದು ಸರ್ಕಾರಿ ಹಣದ ದುರ್ಬಳಕೆ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿದಂತಾಗುತ್ತದೆ ಎಂದು ಶಾಸಕರಾದ ಅಶೋಕ್ ರೈ ಅವರು ಹೇಳಿದ್ದಾರೆ.
ಆರೋಪಗಳ ಕುರಿತು ತಕ್ಷಣ ನಿಷ್ಪಕ್ಷಪಾತ ಇಲಾಖಾ ತನಿಖೆ ನಡೆಸಬೇಕು. ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಇಬ್ಬರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸುವುದು ಅಥವಾ ವರ್ಗಾವಣೆ ಮಾಡಬೇಕು ಎಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ರೈ, ಜನರ ಹಿತಕ್ಕಾಗಿ ಬಂದ ಹಣವನ್ನೂ ಸರಿಯಾಗಿ ಆ ಕಾರ್ಯಕ್ಕೆ ಬಳಸಲಾಗುತ್ತಿಲ್ಲ ಎನ್ನುವ ಆರೋಪ ಎದುರಾಗಿದೆ. ಜನರಿಗಾಗುತ್ತಿರುವ ತೊಂದರೆ ಮತ್ತು ಆರೋಪಗಳ ಬಗ್ಗೆ ತಕ್ಷಣ ನಿಷ್ಪಕ್ಷಪಾತವಾಗಿ ಇಲಾಖಾ ತನಿಖೆ ನಡೆಸಬೇಕು. ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಇಬ್ಬರು ಎಂಜಿನಿಯರ್‌ಗಳನ್ನು ಕೂಡಲೇ ಅಮಾನತುಗೊಳಿಸುವುದು ಅಥವಾ ವರ್ಗಾವಣೆ ಮಾಡಬೇಕು. ಮತ್ತು ಆರೋಪವು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಂಡು, ಅಕ್ರಮವಾಗಿ ಸಂಗ್ರಹಿಸಿರುವ ಅಥವಾ ದುರ್ಬಳಕೆಯಾಗಿರುವ ಸರ್ಕಾರಿ ಹಣವನ್ನು ವಸೂಲಿ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 4 ವಿಧವಾಗಿ ಕಸ ವಿಂಗಡಣೆ ಕಡ್ಡಾಯ: 1 ತಿಂಗಳ ಗಡುವು, ಉಲ್ಲಂಘಿಸಿದರೆ ದಂಡದ ಎಚ್ಚರಿಕೆ

