ETV Bharat / state

ಶಿಥಿಲಾವಸ್ಥೆಯ ಒಳಚರಂಡಿ ಮೇಲ್ದರ್ಜೆಗೇರಿಸಲು ₹1,250 ಕೋಟಿ ಯೋಜನೆಗೆ ಸಾರ್ವಜನಿಕ ಉದ್ಯಮಗಳ ಸಮಿತಿ‌ ಶಿಫಾರಸು: ಐವನ್ ಡಿಸೋಜ

ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲು 1,250 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ರೂಪಿಸುವಂತೆ 16ನೇ ವಿಧಾನಸಭೆಯ ಸಾರ್ವಜನಿಕ ಉದ್ಯಮಗಳ ಸಮಿತಿಯು ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ ಎಂದು ಎಂಎಲ್​ಸಿ ಐವನ್ ಡಿಸೋಜಾ ತಿಳಿಸಿದ್ದಾರೆ.

IVAN D SOUZA
ಎಂಎಲ್​ಸಿ ಐವನ್ ಡಿಸೋಜಾ (ETV Bharat)
author img

By ETV Bharat Karnataka Team

Published : July 5, 2026 at 1:25 PM IST

2 Min Read
Choose ETV Bharat

​ಮಂಗಳೂರು(ದಕ್ಷಿಣ ಕನ್ನಡ): ಸ್ಮಾರ್ಟ್ ಸಿಟಿ ಮಂಗಳೂರಿನ ನಗರದಾದ್ಯಂತ ತೀವ್ರವಾಗಿ ಹದಗೆಟ್ಟಿರುವ ಒಳಚರಂಡಿ (UGD) ವ್ಯವಸ್ಥೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲು ಮತ್ತು ಸಮಗ್ರ ಅಭಿವೃದ್ಧಿಗೆ ಪೂರಕವಾಗಿ 1,250 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ರೂಪಿಸುವಂತೆ 16ನೇ ವಿಧಾನಸಭೆಯ ಸಾರ್ವಜನಿಕ ಉದ್ಯಮಗಳ ಸಮಿತಿಯು ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.

​ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ 20 ಶಾಸಕರನ್ನೊಳಗೊಂಡ ಸಾರ್ವಜನಿಕ ಉದ್ಯಮಗಳ ಸಮಿತಿಯು ನಗರದ ಒಳಚರಂಡಿ ವ್ಯವಸ್ಥೆಯ ಗಂಭೀರ ಸ್ಥಿತಿಯನ್ನು ಪರಿಶೀಲಿಸಿ ಈ ವರದಿಯನ್ನು ನೀಡಿದೆ ಎಂದರು.

ಎಂಎಲ್​ಸಿ ಐವನ್ ಡಿಸೋಜಾ (ETV Bharat)

ಸಚಿವರ ಭೇಟಿ ಮತ್ತು ಡಿಪಿಆರ್ ಸಿದ್ಧತೆಗೆ ಸೂಚನೆ: ​ಸಮಿತಿಯ ವರದಿ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಎಂಎಲ್‌ಸಿ ಐವನ್ ಡಿಸೋಜಾ, ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಎಸಿಎಸ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿದ್ದಾರೆ.

​"ನಗರಾಭಿವೃದ್ಧಿ ಸಚಿವರು ಶೀಘ್ರದಲ್ಲೇ ಮಂಗಳೂರಿಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಲಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ. ಈಗಾಗಲೇ ತಕ್ಷಣವೇ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡುವಂತೆ ನಗರಾಭಿವೃದ್ಧಿ ಇಲಾಖೆಯು ಸರ್ಕಾರಕ್ಕೆ ಪತ್ರ ಬರೆದಿದೆ" ಎಂದು ಐವನ್ ಡಿಸೋಜಾ ಮಾಹಿತಿ ನೀಡಿದರು.

1,250 ಕೋಟಿ ರೂ. ಯೋಜನೆಯ ಮುಖ್ಯ ಉದ್ದೇಶಗಳು: ಸಮಿತಿಯ ಶಿಫಾರಸಿನ ಅನ್ವಯ ಈ ಬೃಹತ್ ಯೋಜನೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿರಲಿದೆ.

​ಎಸ್‌ಟಿಪಿ ಮತ್ತು ವೆಟ್‌ವೆಲ್ ಉನ್ನತೀಕರಣ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಜಲ ಸಂಸ್ಕರಣಾ ಘಟಕಗಳ (STP) ಆಧುನೀಕರಣ ಮತ್ತು ಹೊಸ ವೆಟ್‌ವೆಲ್‌ಗಳ ನಿರ್ಮಾಣ.

​ನೀರಿನ ಮರುಬಳಕೆ: ಪ್ರಸ್ತುತ ಸಂಸ್ಕರಿಸಿದ ನೀರನ್ನು ರಾಜಕಾಲುವೆಗಳ ಮೂಲಕ ನದಿಗಳಿಗೆ ಹರಿಸಿ ಕಲುಷಿತಗೊಳಿಸಲಾಗುತ್ತಿದೆ. ಹೊಸ ಯೋಜನೆಯಲ್ಲಿ ಈ ನೀರಿನ ಮರುಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಲೋಪದೋಷಗಳಿಗೆ ಬ್ರೇಕ್: ಈ ಹಿಂದಿನ ಕಾಮಗಾರಿಗಳಲ್ಲಿದ್ದ ನ್ಯೂನತೆಗಳನ್ನು ಸಿಎಜಿ (CAG) ಲೆಕ್ಕ ಪರಿಶೋಧನೆಯಲ್ಲಿ ಗುರುತಿಸಿದ್ದು, ಹೊಸ ಯೋಜನೆಯಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಹಾಗೂ ದುಂದುವೆಚ್ಚ ತಡೆಯಲು ಎಚ್ಚರಿಕೆ ವಹಿಸಲಾಗುವುದು.

ಕಾಲಮಿತಿಯ ಅನುಷ್ಠಾನ: ನಿರಂತರ ನಗರೀಕರಣ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಗಿಸಲು ಸಮಿತಿ ಸೂಚಿಸಿದೆ.

ಕಲುಷಿತ ನೀರು: ಕಳವಳ ವ್ಯಕ್ತಪಡಿಸಿದ ಐವನ್ ​ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 1952ರಲ್ಲಿ ಆರಂಭಗೊಂಡ ಒಳಚರಂಡಿ ವ್ಯವಸ್ಥೆ ಇಂದಿಗೂ ಅಸಮರ್ಪಕವಾಗಿದೆ.

ಇತ್ತೀಚೆಗೆ ಕದ್ರಿ ಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಒಳಚರಂಡಿ ನೀರು ಸೇರಿ ಸಾರ್ವಜನಿಕರು ಅಸ್ವಸ್ಥಗೊಂಡಿದ್ದರು. ಬೋಳಾರದ ದೇವಸ್ಥಾನದ ಸುತ್ತಮುತ್ತಲಿನ ಮನೆಗಳ ಬಾವಿ ನೀರು ಕೂಡ ಕಲುಷಿತಗೊಂಡಿದೆ. ನಗರದ ಹೃದಯಭಾಗದಲ್ಲೂ ಇಂದಿಗೂ ಒಳಚರಂಡಿಗಾಗಿ ಪಿಟ್‌ಗಳನ್ನೇ ಬಳಸುವ ಸ್ಥಿತಿ ಇದೆ ಎಂದು ಅವರು ವಿಷಾದಿಸಿದರು.

ರಾಜಕೀಯ ಬದಿಗಿಟ್ಟು ಒಟ್ಟಾಗಿ ಶ್ರಮಿಸಿ: ​ಈ ಹಿಂದೆ ಬಿಜೆಪಿ ಆಡಳಿತವಿದ್ದಾಗ ಪಾಲಿಕೆ ಸಭೆಯಲ್ಲಿ ಧ್ವನಿ ಎತ್ತಿದಾಗ ಎಲ್ಲವೂ ಸಮರ್ಪಕವಾಗಿದೆ ಎಂದಿದ್ದರು. ಆದರೆ ಈಗ ಕಲುಷಿತ ನೀರಿನ ಸಮಸ್ಯೆ ಎದುರಾದಾಗ ಶಾಸಕರು ಕಾಂಗ್ರೆಸ್ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಶಾಸಕರಾಗಿರುವ ವೇದವ್ಯಾಸ ಕಾಮತ್ ಅವರು ಈ ಸಮಗ್ರ ಯೋಜನೆಗಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಐವನ್, ಆರೋಪ-ಪ್ರತ್ಯಾರೋಪಗಳಿಂದ ಜನರಿಗೆ ಮೂಲಭೂತ ಸೌಕರ್ಯ ಸಿಗುವುದಿಲ್ಲ ಎಂದರು. ಈ ಬೃಹತ್ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳ ಅನುದಾನ ಬೇಕಿರುವುದರಿಂದ ಸ್ಥಳೀಯ ಶಾಸಕರು ಮತ್ತು ಸಂಸದರು ರಾಜಕೀಯ ಬದಿಗಿಟ್ಟು ಒಟ್ಟಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಾಧ್ಯಮಗೋಷ್ಟಿಯಲ್ಲಿ ಪ್ರಮುಖರಾದ ಶಶಿಧರ ಹೆಗ್ಡೆ, ಅಪ್ಪಿ, ಪ್ರಕಾಶ್‌ ಸಾಲಿಯಾನ್‌, ಭಾಸ್ಕರ ರಾವ್‌, ಮೀನಾ ಟೆಲ್ಲಿಸ್‌, ನಾಗೇಂದ್ರ ಕುಮಾರ್‌, ರೆಹಮಾನ್‌, ನವೀನ್‌ ಡಿಸೋಜಾ ಉಪಸ್ಥಿತರಿದ್ದರು.

ಇವುಗಳನ್ನೂ ಓದಿ: