ETV Bharat / state

ದರದಲ್ಲಿ ಏರಿಳಿತ, ಮಕ್ಕಳಿಗೆ ವಾರಪೂರ್ತಿ ಮೊಟ್ಟೆ, ಬಾಳೆಹಣ್ಣು ನೀಡುವುದೇ ಶಿಕ್ಷಕರಿಗೆ ಸವಾಲಿನ ಕೆಲಸ!: ಹೊರೆಯಾದ ಒಂದು ಮೊಟ್ಟೆಯ ಕಥೆ

ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ 1,499 ಶಾಲೆಗಳಿಗಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದ್ದು, ಸರಾಸರಿ 1.21 ಲಕ್ಷ ಫಲಾನುಭವಿ ಮಕ್ಕಳು ಬಿಸಿಯೂಟ ಯೋಜನೆಯಡಿ ಬರಲಿದ್ದಾರೆ.

Providing eggs and bananas to children throughout the week is a challenging task for teachers
ಬಿಸಿಯೂಟ ಯೋಜನೆ (ETV Bharat)
author img

By ETV Bharat Karnataka Team

Published : December 16, 2025 at 2:40 PM IST

6 Min Read
Choose ETV Bharat

ವರದಿ: ನೂರುಲ್ಲಾ.ಡಿ.

ದಾವಣಗೆರೆ: ರಾಜ್ಯ ಸರ್ಕಾರ ಮಹತ್ವದ ಯೋಜನೆಗಳಲ್ಲಿ ಬಿಸಿಯೂಟ ಯೋಜನೆ ಕೂಡ ಒಂದು. ಮಕ್ಕಳ ಅಪೌಷ್ಟಿಕತೆ ನಿವಾರಿಸಿ, ಅವರ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಬಿಸಿಯೂಟದ ಜೊತೆ ಜೊತೆಗೆ ಮಕ್ಕಳಿಗೆ ವಾರದಲ್ಲಿ 6 ದಿನಗಳ ಕಾಲ ಮೊಟ್ಟೆ, ಬಾಳೆಹಣ್ಣು ನೀಡುವ ಸಂಕಲ್ಪ ಮಾಡಿದೆ. ವಾರದಲ್ಲಿ 2 ದಿನ ರಾಜ್ಯ ಸರ್ಕಾರ ಮೊಟ್ಟೆ ನೀಡಿದರೆ ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ವಾರದ 4 ದಿನ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಆದರೆ, ಈ ಮೊಟ್ಟೆಯನ್ನು ಮಕ್ಕಳಿಗೆ ವಿತರಣೆ ಮಾಡುವುದೇ ಸವಾಲಿನ ಕೆಲಸ ಆಗಿದೆ.‌

ಬಿಸಿಯೂಟ ಯೋಜನೆ ಕುರಿತು ಮಾಹಿತಿ (ETV Bharat)

ಒಂದು ಮಗುಗೆ ನಿತ್ಯ ಮೊಟ್ಟೆ ನೀಡಲು 6 ರೂಪಾಯಿಯನ್ನು ಸರ್ಕಾರ ಖರ್ಚು ಮಾಡುತ್ತಿದೆ. ಆದರೆ, ನಿತ್ಯ ಮೊಟ್ಟೆ ದರ ಏರಿಳಿತ ಆಗುತ್ತಿರುವುದರಿಂದ ಕೆಲ ಸಮಯದಲ್ಲಿ ಶಿಕ್ಷಕರೇ ಹಣ ಭರಿಸಿ ಮೊಟ್ಟೆ ವಿತರಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಯೋಜನೆಯ‌ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ, ಈ ಯೋಜನೆಗೆ ಬೇಕಾದ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿರುವುದಾಗಿ ಕೆಲವರು ಬೇಸರ ಹೊರಹಾಕಿದರೆ, ಇತ್ತ ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ‌ ಎಂದಿದ್ದಾರೆ.

Providing eggs and bananas to children throughout the week is a challenging task for teachers
ಪಿಎಂ‌ಶ್ರೀ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ (ETV Bharat)

83 ಸಾವಿರ ಮಕ್ಕಳಿಗೆ ಮೊಟ್ಟೆ, 30 ಸಾವಿರ‌‌‌ ಮಕ್ಕಳಿಗೆ ಬಾಳೆ ಹಣ್ಣು: ಮೊಟ್ಟೆಗಳನ್ನು ಖರೀದಿಸಲು ಸರ್ಕಾರ ನೀಡುವ ಸೀಮಿತ ಹಣ ಸಾಕಾಗದ ಕಾರಣ ಬಿಸಿಯೂಟದ ಜವಾಬ್ದಾರಿಯು ಆಯಾಯ ಶಾಲೆಯ ಶಿಕ್ಷಕರಿಗೆ ನೀಡಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯದ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿತ್ತು.‌ ಇದೀಗ ಮೊಟ್ಟೆ ಹಾಗೂ ಬಾಳೆ ಹಣ್ಣನ್ನು ವಾರದಲ್ಲಿ 6 ದಿನಕ್ಕೆ ಸರ್ಕಾರ ವಿಸ್ತರಿಸಿದೆ. 1500 ಕೋಟಿ ರೂ. ವೆಚ್ಚದ ಈ ಯೋಜನೆಗೆ ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸಹಯೋಗ ನೀಡಿದೆ. 2025 - 26ರ ಬಜೆಟ್ ಭಾಷಣದಲ್ಲಿ ಇದು ಪ್ರಸ್ತಾಪವಾಗಿದೆ.‌

Providing eggs and bananas to children throughout the week is a challenging task for teachers
ವಿದ್ಯಾರ್ಥಿಗಳಿಗಾಗಿ ನೀಡಲಾಗುವ ಬಾಳೆಹಣ್ಣು (ETV Bharat)

ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ 1,499 ಶಾಲೆಗಳಿಗಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಸರಾಸರಿ 1.21 ಲಕ್ಷ ಫಲಾನುಭವಿ ಮಕ್ಕಳು ಬಿಸಿಯೂಟ ಯೋಜನೆ ಅಡಿ ಬರಲಿದ್ದಾರೆ. ಈ ಪೈಕಿ 2025 ನವೆಂಬರ್ ತಿಂಗಳ ತನಕ ಒಟ್ಟು 83,436 ಮಕ್ಕಳ ಪೈಕಿ ಶೇ.70% ರಷ್ಟು ಮಕ್ಕಳು ಮೊಟ್ಟೆ ಪಡೆದಿದ್ದಾರೆ. 38,334ರಲ್ಲಿ ಶೇ.30% ವಿದ್ಯಾರ್ಥಿಗಳು ಬಾಳೆಹಣ್ಣು ಪಡೆದಿದ್ದಾರೆ. ಜಿಲ್ಲೆಯ ಮಕ್ಕಳಿಗೆ ಆಹಾರ ತಯಾರಿಸಲು ಮೊಟ್ಟೆ - ಬಾಳೆ ಹಣ್ಣು ವಿತರಣೆ ಮಾಡಲು ಒಟ್ಟು 3,244 ಜನ ಅಡುಗೆ ಸಿಬ್ಬಂದಿ ಇದ್ದಾರೆ. ಅಲ್ಲದೇ ಆಯಾಯ ಶಾಲೆಗೆ ಓರ್ವ ಶಿಕ್ಷಕರನ್ನು ಬಿಸಿಯೂಟದ ಉಸ್ತುವಾರಿ ಆಗಿ ನೇಮಿಸಿದ್ದು, ಅವರೇ ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ.

Providing eggs and bananas to children throughout the week is a challenging task for teachers
ವಿದ್ಯಾರ್ಥಿಗಳಿಗಾಗಿ ನೀಡಲಾಗುವ ಮೊಟ್ಟೆ (ETV Bharat)

ಮೊಟ್ಟೆ ದರ ಏರಿಳಿತ ಶಿಕ್ಷಕರಿಗೆ ಪ್ರಾಣ ಸಂಕಟ: ಸರ್ಕಾರ ವಿತರಣೆ ಮಾಡುವ ಮೊಟ್ಟೆ ಅನುಷ್ಠಾನ ಹಂತದಲ್ಲಿಯೇ ಸಮಸ್ಯೆಗಳಿವೆ. ಮುಖ್ಯವಾಗಿ ಸರ್ಕಾರ ಪ್ರತಿ ಮೊಟ್ಟೆಗೆ 6 ರೂಪಾಯಿ ಮಾತ್ರ ನೀಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆ ದರ ನಿತ್ಯ ಏರಿಳಿತ ಕಾಣುವುದರಿಂದ ಶಿಕ್ಷಕರಿಗೆ ಸಮಸ್ಯೆ ಆಗಿದೆ. ಕೆಲವೊಮ್ಮೆ 6.75, ಇನ್ನು ಕೆಲವೊಮ್ಮೆ 7. 7.30 ರೂಪಾಯಿ ಇರುತ್ತದೆ. ಹೀಗೆ... ದರ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಸರ್ಕಾರ ನೀಡುವ ಒಂದು ಮೊಟ್ಟೆಯ ಖರ್ಚು, ದರದ ಏರಿಳಿತ ಸರಿದೂಗಿಸುವುದೇ ಶಿಕ್ಷಕರಿಗೆ ಒಂದ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತದೆ. ಕೆಲವು ಶಾಲೆಗಳಲ್ಲಿ ವಾರದಲ್ಲಿ ಒಮ್ಮೆ ಅಥವಾ ಎರಡು ದಿನ ಮೊಟ್ಟೆ ಬದಲು ಎಲ್ಲರಿಗೂ ಬಾಳೆಹಣ್ಣು ನೀಡಲಾಗುತ್ತದೆ. ಬೆಳಗ್ಗೆ ಶಾಲೆ ಆರಂಭದ ತಕ್ಷಣ ಹಾಜರಾತಿ ಮೂಲಕ ಯಾರಿಗೆ ಮೊಟ್ಟೆ ಬೇಕು, ಯಾರಿಗೆ ಯಾರಿಗೆ ಬಾಳೆಹಣ್ಣು ಬೇಕೆಂದು ಅಡುಗೆ ಸಿಬ್ಬಂದಿ ಕೇಳಿ ಪಟ್ಟಿ ಮಾಡಿ ಮೊಟ್ಟೆ ಬಾಳೆಹಣ್ಣು ವಿತರಣೆ ಮಾಡುತ್ತಾರೆ. ಮಾರುಕಟ್ಟೆಯಿಂದ ಶಾಲೆಗೆ ದಿನವೂ ಮೊಟ್ಟೆಗಳನ್ನು ತರುವುದು ಕೂಡಾ ಮತ್ತೊಂದು ಸವಾಲಾಗಿದೆ. ವಾಹನದಲ್ಲಿ ತರುವಾಗ ಕೆಲವೊಮ್ಮೆ ಒಡೆದು ಹೋಗುವ ಸಂದರ್ಭ ಇರುತ್ತದೆ. ಹೆಚ್ಚು ಮೊಟ್ಟೆಗಳನ್ನು ತಂದು ದಾಸ್ತಾನು ಮಾಡಿದರೆ ಅವು ಹಾಳಾಗುತ್ತವೆ. ಆದ್ದರಿಂದ ಶಿಕ್ಷಕರಿಗೆ ಈ ಮೊಟ್ಟೆ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

Providing eggs and bananas to children throughout the week is a challenging task for teachers
ವಿದ್ಯಾರ್ಥಿಗಳಿಗಾಗಿ ಸಿದ್ಧಗೊಂಡಿರುವ ಬಿಸಿಯೂಟ (ETV Bharat)

ಸರ್ಕಾರಿ ಹಾಗೂ ಅನುದಾನಿತ 1,499 ಶಾಲೆಗಳಿಗಲ್ಲಿ ಮೊಟ್ಟೆ-ಬಾಳೆಹಣ್ಣು ವಿತರಣೆ: ಅಕ್ಷರ ದಾಸೋಹ ಕಾರ್ಯಕ್ರಮ‌ದ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ ಎಂ. ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ "ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ 1,499 ಶಾಲೆಗಳಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡುತ್ತಿದ್ದೇವೆ. ನಾವು ಮೊದಲಿಗೆ ಮೊಟ್ಟೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಸರ್ಕಾರದಿಂದ ಎರಡು ದಿನಗಳ ಕಾಲ ಹಾಗೂ ಅಜೀಮ್ ಪ್ರೇಮ್ ಜೀ ಫೌಂಡೇಶನ್ ಅವರ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ಸೇರಿದಂತೆ ಒಟ್ಟು ಆರು ದಿನಗಳ ಕಾಲ ಮೊಟ್ಟೆ ನೀಡಲಾಗುತ್ತಿದೆ. ಪ್ರತಿ ಮಗುವಿಗೆ ಆರು ರೂಪಾಯಿಯಂತೆ ಖರ್ಚು ಭರಿಸುತ್ತಿದ್ದೇವೆ. ಪೌಷ್ಟಿಕಾಂಶ ಬೆಳವಣಿಗೆ ದೃಷ್ಟಿಯಿಂದ ಮೊಟ್ಟೆ ಕೊಡಲಾಗುತ್ತಿದೆ. 1.27 ಲಕ್ಷ ಜನ (ಮೊಟ್ಟೆ-ಬಾಳೆಹಣ್ಣು) ಸೇರಿ ಬಿಸಿ ಊಟದ ಫಲಾನುಭವಿ ಮಕ್ಕಳಿದ್ದಾರೆ. 70% ಮಕ್ಕಳು ಮೊಟ್ಟೆ ಸೇವನೆ ಮಾಡುತ್ತಿದ್ದಾರೆ. ಅದನ್ನು 75 - 80%ಕ್ಕೆ ಏರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಮೊಟ್ಟೆ ವಿತರಣೆ: ತಮ್ಮ ಮಾತು ಮುಂದುವರಿಸಿದ ಮಂಜುನಾಥಸ್ವಾಮಿ, "ಮಕ್ಕಳಿಗೆ ಮೊಟ್ಟೆ ಕೊಡಬೇಕೋ ಅಥವಾ ಬೇಡ್ವೋ ಎಂದು ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಮೊಟ್ಟೆ ಎಂದರೆ ಮೊಟ್ಟೆ, ಬಾಳೆಹಣ್ಣು ಬೇಕು ಎಂದರೆ ಬಾಳೆಹಣ್ಣು ವಿತರಣೆ ಮಾಡಲಾಗುತ್ತದೆ.‌ ಬಾಳೆಹಣ್ಣು ಪಡೆಯುವ ಮಕ್ಕಳ ಸಂಖ್ಯೆ 1.27 ಲಕ್ಷ ಇದೆ. ಪ್ರತಿದಿನ 83,436 ಮಕ್ಕಳ ಪೈಕಿ ಶೇ.70 ಮೊಟ್ಟೆ ಸೇವನೆ ಮಾಡುತ್ತಿದ್ದಾರೆ. ಇನ್ನು 38,334 ಮಕ್ಕಳ ಪೈಕಿ ಶೇ 30ರಷ್ಟು ಬಾಳೆಹಣ್ಣು ಪಡೆಯುತ್ತಿದ್ದಾರೆ.‌ ಈ ಅಂಕಿ - ಅಂಶ ಪ್ರತಿ ದಿನ ಏರಿಕೆ ಇಳಿಕೆ ಆಗುತ್ತಿರುತ್ತದೆ. ಎಸ್​ಎಟಿಎಸ್​ನಲ್ಲಿ ಎಷ್ಟು ಜನ ಮಕ್ಕಳು ಮೊಟ್ಟೆ ಹಾಗೂ ಬಾಳೆಹಣ್ಣು ಸೇರಿದಂತೆ ಬಿಸಿಯೂಟ ಸೇವಿಸಿದರು ಎಂಬ ಮಾಹಿತಿಯನ್ನು ಅಪ್​ಲೋಡ್​ ಮಾಡಲಾಗುತ್ತದೆ. ಈ ಮಾಹಿತಿ ಇಲಾಖೆಗೆ ಸರ್ಕಾರಕ್ಕೆ ಹೋಗಲಿದೆ. ಅಡುಗೆ ಸಿಬ್ಬಂದಿ 3,244 ಜನ ಇದ್ದು, ಅವರಿಗೆ ನವೆಂಬರ್ ತಿಂಗಳ ಅಂತ್ಯದ ವೇತನ ಜಮೆ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ. ಅವರಿಗೆ ತರಬೇತಿ ನೀಡಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಅನುದಾನದ ಕೊರತೆ ಇಲ್ಲ" ಎಂದರು.‌

ಶಾಲೆಗೆ ತೆರಳಿ ರಿಯಾಲಿಟಿ ಚೆಕ್: ಶಾಲೆಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಆಗುತ್ತಿದೆಯೋ ಅಥವಾ ಇಲ್ಲವೋ ಎಂದು ಈಟಿವಿ ಭಾರತ ಪ್ರತಿನಿಧಿಯು ನಗರದ ನಿಟ್ಟುವಳ್ಳಿಯಲ್ಲಿರುವ ಪಿಎಂ‌ಶ್ರೀ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಗೆ ತೆರಳಿ ರಿಯಾಲಿಟಿ ಚೆಕ್ ಮಾಡಲಾಯಿತು. ‌ಶಾಲೆಯಲ್ಲಿ ವಾರ ಪೂರ್ತಿ ಮೊಟ್ಟೆ ಬಾಳೆ ಹಣ್ಣು ವಿತರಣೆ ಮಾಡಲಾಗುತ್ತದೆ. ಮೊಟ್ಟೆ ದರ ಏರಿಳಿತ ಕಂಡಾಗ ಸಮಸ್ಯೆ ಆಗಲಿದೆ. ಈ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ ಸೇರಿ 1-7 ಹಾಗೂ 08-10 ತರಗತಿ ಸೇರಿ ಒಟ್ಟು 575 ಜನ ಮಕ್ಕಳಿದ್ದು, ಎಲ್ಲರಿಗೂ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಆಗುತ್ತಿದೆ.

ಶಾಲೆಯ ಬಿಸಿಯೂಟ ಉಸ್ತುವಾರಿ ಶಿಕ್ಷಕ ಚಿದಾನಂದ್ ಮಾತನಾಡಿ "ವಾರದ ತುಂಬಾ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡುತ್ತಿದ್ದೇವೆ.‌ ಅಡುಗೆ ಸಹಾಯಕರು ತರಗತಿಗೆ ತೆರಳಿ ಹಾಜರಾತಿ ತರುತ್ತಾರೆ. ಅದರಲ್ಲಿ ಬಾಳೆಹಣ್ಣು ಬರೆಸಿದವರಿಗೆ ಬಾಳೆಹಣ್ಣು, ಮೊಟ್ಟೆ ಬೇಕು ಎಂದು ಬರೆಸಿದವರಿಗೆ ಮೊಟ್ಟೆ ಕೊಡಲಾಗುತ್ತದೆ. ವಿಶೇಷವಾಗಿ ತರಕಾರಿ ಸೊಪ್ಪು, ಪಲಾವ್, ಬಿಸಿಬೇಳೆ ಬಾತ್ ಮೆನ್ಯೂವಿನಲ್ಲಿರುವ ಆಹಾರ‌ ನೀಡುತ್ತಿದ್ದೇವೆ. ಮಕ್ಕಳಿಗೆ ಪ್ರೋಟೀನ್ ಹೆಚ್ಚು ಬೇಕು. ಅದಕ್ಕಾಗಿ ಬೇಳೆ ಕಾಳು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ‌ ಶಾಲೆಯಲ್ಲಿ 575 ಮಕ್ಕಳು ಊಟ ಮಾಡಲಿದ್ದಾರೆ" ಎಂದರು.‌

ವಿದ್ಯಾರ್ಥಿಗಳ ಅಭಿಪ್ರಾಯ: ವಿದ್ಯಾರ್ಥಿನಿ ಹರ್ಷಾವಾಹಿನಿ ಮಾತನಾಡಿ "ದಿನನಿತ್ಯ ನಮಗೆ ಮೊಟ್ಟೆ, ರಾಗಿ ಮಾಲ್ಟ್, ಹಾಲು ವಿತರಣೆ ಮಾಡುತ್ತಾರೆ. ಅಲ್ಲದೇ, ಬಾಳೆಹಣ್ಣು ಅಂದ್ರೆ ಬಾಳೆಹಣ್ಣು, ಇಲ್ಲವೇ ಮೊಟ್ಟೆ ಎಂದರೆ ಮೊಟ್ಟೆ ನಮಗೇನು ಬೇಕೋ ಅದನ್ನು ನಿತ್ಯ ವಿತರಣೆ ಮಾಡುತ್ತಾರೆ. ಎಲ್ಲ ರೀತಿಯ ತಿಂಡಿ ಸಹ ವಿತರಣೆ ಮಾಡುತ್ತಿದ್ದಾರೆ. ಪ್ರೋಟೀನ್ ವಿಟಮಿನ್ ಇರುವ ಆಹಾರ ಹೆಚ್ಚು ಕೊಡುತ್ತಿದ್ದಾರೆ. ಆಹಾರ ಸರಿ ಇಲ್ಲದ ಉದಾಹರಣೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವೆ" ಎಂದು ಖುಷಿ ಹಂಚಿಕೊಂಡಳು.

ಮತ್ತೋರ್ವ ವಿದ್ಯಾರ್ಥಿನಿ ಸಂಧ್ಯಾ ಮಾತನಾಡಿ, "ಈ ಶಾಲೆಯಲ್ಲಿ ಪ್ರತಿದಿನ ನಮಗೆ ಮೊಟ್ಟೆ ಹಾಗೂ ಬಾಳೆಹಣ್ಣು ಕೊಡುತ್ತಿದ್ದಾರೆ. ಮಕ್ಕಳಾದ ನಮಗೆ ಬೇಕಾದ ವಿಟಮಿನ್ ತಕ್ಕಂತೆ ಆಹಾರ ನೀಡುತ್ತಿರುವುದು ಖುಷಿಯ ವಿಚಾರ. ಊಟ ತಿಂಡಿ ಎಲ್ಲಾವೂ ಒಳ್ಳೆಯ ಗುಣಮಟ್ಟದಲ್ಲಿರುತ್ತದೆ. ಊಟದಿಂದ ಹಿಡಿದೂ ನಮಗೆ ಏನೇ ಸಮಸ್ಯೆ ಆದಲ್ಲಿ ಅದನ್ನು ಹೇಳಿದರೆ ಸರಿಪಡಿಸುತ್ತಾರೆ" ಎಂದು ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: