ETV Bharat / state

ನೇಮಕಾತಿಯಲ್ಲಿ ಜನಸಂಖ್ಯೆಗೆ ತಕ್ಕಂತೆ ಎಸ್‌ಸಿ, ಎಸ್‌ಟಿ ಮೀಸಲಾತಿ ನೀಡಿ: ವಿ.ಎಸ್. ಉಗ್ರಪ್ಪ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇಮಕಾತಿ ಅಧಿಸೂಚನೆಯಲ್ಲಿ ಎಸ್‌ಸಿಗೆ ಶೇ.17, ಎಸ್‌ಟಿಗೆ ಶೇ.7ರಷ್ಟು ಮೀಸಲಾತಿ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.

V S UGRAPPA
ವಿ.ಎಸ್.ಉಗ್ರಪ್ಪ (ETV Bharat)
author img

By ETV Bharat Karnataka Team

Published : February 28, 2026 at 7:44 PM IST

2 Min Read
Choose ETV Bharat

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇಮಕಾತಿ ಅಧಿಸೂಚನೆಯಲ್ಲಿ ಎಸ್‌ಸಿಗೆ ಶೇ.17, ಎಸ್‌ಟಿಗೆ ಶೇ.7ರಷ್ಟು ಮೀಸಲಾತಿ ನೀಡಬೇಕು ಎಂದು ನಾಯಕ ಸಮುದಾಯದ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ, ಅಂದಿನ ಹಾಗೂ ಇಂದಿನ ಜನಸಂಖ್ಯೆಗೆ ಬಹಳಷ್ಟು ವ್ಯತ್ಯಾಸಗಳಿವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿವೆ. ಇದು ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸ್ವಾತಂತ್ರ್ಯ ನಂತರ ಈವರೆಗೂ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನ್ಯಾಯ ಮಾಡುತ್ತಲೇ ಬಂದಿವೆ. ಜನಸಂಖ್ಯೆಗೆ ಅನುಗುಣವಾಗಿ ಈ ಸಮುದಾಯಗಳಿಗೆ ಮೀಸಲಾತಿ ನೀಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರೂ ರಾಜಕೀಯ ಪಕ್ಷಗಳು ಈ ಎರಡೂ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡದೇ ಬರೀ ವೋಟ್​ ಬ್ಯಾಂಕ್​ಗಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ, ರಾಜ್ಯ ಸರ್ಕಾರ 52 ಸಾವಿರ ಹುದ್ದೆಗಳನ್ನು ಹಳೆ ಮೀಸಲಾತಿಯನ್ವಯ ಭರ್ತಿ ಮಾಡುವುದಾಗಿ ಹೇಳಿದೆ. ಇದರಿಂದ 1,600 ಪರಿಶಿಷ್ಟ ಪಂಗಡ ಮತ್ತು 2 ಸಾವಿರ ಪರಿಶಿಷ್ಟ ಜಾತಿಯ ಹುದ್ದೆಗಳು ವಂಚಿತವಾಗಲಿವೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 2022 ರಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶೇ.4 ಮತ್ತು ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.2 ಹೆಚ್ಚಳ ಮಾಡಿ ಶೇ.50 ರಷ್ಟು ಇದ್ದ ಮೀಸಲಾತಿಯನ್ನು ಒಟ್ಟಾರೆ ಶೇ.56ಕ್ಕೆ ಹೆಚ್ಚಳ ಮಾಡಿದರೂ ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನು ಅನುಸರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಶೇ.56 ಮೀಸಲಾತಿಯನ್ನು ಒಂಬತ್ತನೇ ಶೆಡ್ಯೂಲ್​​ಗೆ ಸೇರಿಸಿ, ಶೇ.56ರ ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸುವ ಮೂಲಕ ನ್ಯಾಯಾಂಗ ವಿಚಕ್ಷಣೆಯಿಂದ ಈ ಕಾನೂನನ್ನು ಹೊರಗಿಡಲು ಬೇಕಾದ ಸಂಸದರ ಸಂಖ್ಯಾಬಲವಿದ್ದರೂ ಕೇಂದ್ರದ ಬಿಜೆಪಿ ಸರ್ಕಾರವಾಗಲಿ, ರಾಜ್ಯ ಬಿಜೆಪಿಯಾಗಲಿ ಇದರ ಬಗ್ಗೆ ಮುತುವರ್ಜಿ ವಹಿಸಲಿಲ್ಲ ಎಂದು ಅವರು ದೂರಿದರು.

2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಇದರ ಬಗ್ಗೆ ಮುತುವರ್ಜಿ ವಹಿಸಿ ಒಂಬತ್ತನೇ ಶಡ್ಯೂಲ್​​ಗೆ ಸೇರಿಸುವ ಪ್ರಯತ್ನ ಮಾಡಲಿಲ್ಲ. ಇದರಿಂದ ಎಸ್‌ಸಿ, ಎಸ್‌ಟಿ ಸಮುದಾಯಗಳು ಅನ್ಯಾಯಕ್ಕೊಳಗಾಗಿವೆ. ಇದರ ಬಗ್ಗೆ ದನಿಯತ್ತಬೇಕಿದ್ದ ಸಮುದಾಯಗಳ ಸಚಿವರು, ಶಾಸಕರುಗಳು ಮೌನ ವಹಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರ ಬೇಕಾದರೆ ದಲಿತರು ಎನ್ನುವ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಎಸ್‌ಸಿ, ಎಸ್‌ಟಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರು, ಪ್ರಧಾನಮಂತ್ರಿಗಳಿಗೆ ಮೀಸಲಾತಿ ಹೆಚ್ಚಳದ ಬಗ್ಗೆ ಒತ್ತಡ ಹಾಕಬೇಕು. ಮೈಸೂರು ಸಂಸದ ಯದುವೀರ್, ಚಾಮರಾಜನಗರ ಸಂಸದ ಸುನೀಲ್ ಬೋಸ್ ಈ ಬಗ್ಗೆ ಹಚ್ಚು ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಸಮುದಾಯ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ರವಾನಿಸಿದರು.

ಈ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ರಾಜ್ಯಾಧ್ಯಕ್ಷ ನರಸಿಂಹಯ್ಯ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರು, ಹಿನಕಲ್ ಕೆಂಪನಾಯಕ, ಕೆ.ಸಣ್ಣಯ್ಯ ನಾಯಕ, ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ದ್ಯಾವಪ್ಪ ನಾಯಕ ಮತ್ತಿತರರು ಇದ್ದರು.

ಇವುಗಳನ್ನೂ ಓದಿ: