ETV Bharat / state

ಗೌರಿಬಿದನೂರಿನ ಅಲಿಪುರಕ್ಕೆ ಭೇಟಿ ನೀಡಿದ್ದ ಖಮೇನಿ; ಹತ್ಯೆ ಖಂಡಿಸಿ ಪ್ರತಿಭಟನೆ, 3 ದಿನ ಶೋಕಾಚರಣೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಹತ್ಯೆ ವರದಿಗಳ ಹಿನ್ನೆಲೆಯಲ್ಲಿ, ಗೌರಿಬಿದನೂರಿನ ಅಲಿಪುರದಲ್ಲಿ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

protest-in-gauribidanur-alipur-condemning-assassination-of-ayatollah-ali-khamenei
ಅಲಿಪುರದಲ್ಲಿ ಪ್ರತಿಭಟನೆ (ETV Bharat)
author img

By ETV Bharat Karnataka Team

Published : March 1, 2026 at 2:04 PM IST

3 Min Read
Choose ETV Bharat

ಅಲಿಪುರ/ಬೆಂಗಳೂರು: ಇರಾನ್ ಮೇಲೆ ಅಮೆರಿಕ-ಇಸ್ರೇಲ್​ ದಾಳಿ ಮತ್ತು ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಸಾವಿನ ವರದಿಗಳ ಬೆನ್ನಲ್ಲೇ, ರಾಜ್ಯದ ಕೆಲವೆಡೆ ಪ್ರತಿಭಟನೆ, ದುಃಖ, ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಅಲಿಪುರದಲ್ಲಿ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಮೂರು ದಿನಗಳವರೆಗೆ ಶೋಕಾಚರಣೆ ಘೋಷಿಸಿ, ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಲಾಗಿದೆ.

ಖಮೇನಿ ಹತ್ಯೆ ವರದಿಗಳ ಹಿನ್ನೆಲೆಯಲ್ಲಿ, ಅಲಿಪುರ ಪಟ್ಟಣದ ಜನರು ಸಾಮೂಹಿಕ ಶೋಕಾಚರಣೆ ಮಾಡಿದರು. ದುಃಖದ ಸಂಕೇತವಾಗಿ ಕಪ್ಪು ಬಟ್ಟೆ ಧರಿಸಿ, ಬಾವುಟಗಳನ್ನು ಹಿಡಿದು ಅಲ್ಲಿನ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಖಮೇನಿ ಅವರ ಫೋಟೋ ಹಿಡಿದು ಕಣ್ಣೀರು ಹಾಕಿದರು. ಗ್ರಾಮದ ತುಂಬ ಶೋಕ ಅವರಿಸಿದ್ದು, ಗ್ರಾಮದ ಅಂಜುಮನ್ ಎ ಜಾಫರಿಯಾ ಸಮಿತಿ ನೇತೃತ್ವದಲ್ಲಿ ಮಧ್ಯಾಹ್ನ ಬೃಹತ್ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಖಮೇನಿ ಹತ್ಯೆ ಖಂಡಿಸಿ ಅಲಿಪುರದಲ್ಲಿ ಪ್ರತಿಭಟನೆ (ETV Bharat)

ಪೊಲೀಸ್ ಬಂದೋಬಸ್ತ್: ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿಯೂ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಸದಸ್ಯರು ಖಮೇನಿ ಹತ್ಯೆಯನ್ನು ಖಂಡಿಸಿದ್ದಾರೆ.

ಖಮೇನಿ 1986ರಲ್ಲಿ ಅಲಿಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈಗಲೂ ಕೂಡ ಅಲಿಪುರದಲ್ಲಿ ಇರಾನ್ ದೇಶದ ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆ ವ್ಯಾಪಾರ, ವಹಿವಾಟು ಮತ್ತು ಶಿಕ್ಷಣ ಕಾರಣಕ್ಕೆ ಸಂಬಂಧ ಹೊಂದಿದ್ದಾರೆ. ವಿಶೇಷವಾಗಿ ಅಲಿಪುರದ ಜನರು ಇರಾನ್ ದೇಶದೊಂದಿಗೆ ವೈವಾಹಿಕ ಸಂಬಂಧಗಳನ್ನೂ ಸಹ ಮಾಡಿಕೊಂಡಿದ್ದಾರೆ.

ಅಲಿಪುರದ ಕರ್ನಾಟಕ ಉರ್ದು ಅಕಾಡೆಮಿ ಸದಸ್ಯ ನಾತಿಕ್ ಅಲಿಪುರಿ ಮಾತನಾಡಿ, ಈ ಸುದ್ದಿ ನಿವಾಸಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇರಾನ್ ಮೇಲಿನ ದಾಳಿ ಮತ್ತು ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಹತ್ಯೆಯಿಂದ ನಾವು ಬಹಳ ದುಃಖಿತರಾಗಿದ್ದೇವೆ. ಅವರು ತುಳಿತಕ್ಕೊಳಗಾದವರ, ವಿಶೇಷವಾಗಿ ಪ್ಯಾಲೆಸ್ಟೈನ್ ಜನರ ಪರ ಧ್ವನಿಯಾಗಿದ್ದರು ಎಂದು ಹೇಳಿದರು.

ಕೆಲ ವರ್ಷಗಳ ಹಿಂದೆ ಖಮೇನಿ ಅಲಿಪುರಕ್ಕೆ ಭೇಟಿ ನೀಡಿದ್ದನ್ನು ನೆನೆದ ಅವರು, ಖಮೇನಿ ಈ ಹಿಂದೆ ಅಲಿಪುರಕ್ಕೆ ಆಗಮಿಸಿದ್ದು, ಆ ಕ್ಷಣವು ಪಟ್ಟಣಕ್ಕೆ ಅವರನ್ನು ಇನ್ನಷ್ಟು ಹತ್ತಿರವಾಗಿಸಿತ್ತು. ಇರಾನ್‌ನಲ್ಲಿ ನಡೆದ ಶಾಲಾ ಬಾಂಬ್ ದಾಳಿಯ ವರದಿಗಳು ಖಂಡನೀಯ. ಶಾಲಾ ಮಕ್ಕಳು ಸಾವನ್ನಪ್ಪಿದ್ದು, ಇದು ಕೇವಲ ಒಂದು ದೇಶದ ಮೇಲಿನ ದಾಳಿಯಲ್ಲ, ಬದಲಿಗೆ ಮಾನವೀಯತೆಯ ಮೇಲಿನ ದಾಳಿಯಾಗಿದೆ. ಇಂತಹ ಕೃತ್ಯಗಳಿಗೆ ಯಾರೇ ಜವಾಬ್ದಾರರಾಗಿದ್ದರೂ ಸಹ ಅದನ್ನು ಖಂಡಿಸಬೇಕು ಎಂದರು.

ಅಲಿಪುರದಲ್ಲಿ ಅಂಜುಮನ್ ಕುರಾನ್ ಪಠಣ ಮತ್ತು ವಿಶೇಷ ಪ್ರಾರ್ಥನೆಗಳನ್ನು ಒಳಗೊಂಡ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಪೊಲೀಸರ ಅನುಮತಿ ಪಡೆದು ಮೆರವಣಿಗೆ ಆಯೋಜಿಸಲಾಗುತ್ತಿದೆ. ನಾವು ಎಲ್ಲಾ ಸರ್ಕಾರಿ ನಿಯಮಗಳನ್ನು ಅನುಸರಿಸುತ್ತೇವೆ ಎಂದು ತಿಳಿಸಿದರು.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸಮುದಾಯದ ಮುಖಂಡ ಮೌಲಾನಾ ಸೈಯದ್ ಇಬ್ರಾಹಿಂ, ಇರಾನ್ ಮೇಲೆ ಇಸ್ರೇಲಿ ಮತ್ತು ಯುಎಸ್ ದಾಳಿಗಳು ಅಪ್ರಚೋದಿತ ಮತ್ತು ಅತ್ಯಂತ ಖಂಡನೀಯವಾಗಿವೆ. ಆದರೆ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಮೂಕಪ್ರೇಕ್ಷಕರಾಗಿರುವುದು ದುರದೃಷ್ಟಕರ. ಒಗ್ಗಟ್ಟಿನಿಂದ ನಿಲ್ಲುವ ಬದಲು, ಅವರು ವಿಭಜನೆಗೊಂಡು ಆಂತರಿಕ ಸಂಘರ್ಷಗಳ ಮೇಲೆ ಕೇಂದ್ರೀಕರಿಸಿದಂತೆ ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿದರು.

ಬೆಂಗಳೂರು ಮೂಲದ ಸೈಯದ್ ಇಬೆ ಹಸನ್ ಮಾತನಾಡಿ, ಈ ಹಿಂದೆಯೇ ಹಲವು ಸಲ ಚರ್ಚೆಗಳು ನಡೆದಿದ್ದವು. ಆದರೆ ಈ ಹಠಾತ್ ದಾಳಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇರಾನ್​ ಸೇನೆಯು ಹೆಚ್ಚಿನ ಜಾಗರೂಕತೆಯಿಂದ ಇದ್ದಿದ್ದರೆ, ಇದೆಲ್ಲಾ ನಡೆಯಲು ಹೇಗೆ ಸಾಧ್ಯವಿತ್ತೇ? ಎಂದ ಅವರು, ಇರಾನಿನ ನಾಯಕರು ತಲೆಮರೆಸಿಕೊಂಡಿದ್ದಾರೆ ಎಂಬ ಕೆಲವು ಪಾಶ್ಚಿಮಾತ್ಯ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದರು.

ಉತ್ತರಾಧಿಕಾರದ ಕುರಿತು ಇರಾನ್‌ನಲ್ಲಿ ಹೊಸ ಸರ್ವೋಚ್ಚ ನಾಯಕನ ನೇಮಕವನ್ನು ಸುಮಾರು 50ರಿಂದ 60 ಹಿರಿಯ ಧರ್ಮಗುರುಗಳ ಮಂಡಳಿಯು ನಿರ್ಧರಿಸುತ್ತದೆ. ಘೋಷಣೆ ಯಾವಾಗ ಆಗಲಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ದೇಶವು ಸದ್ಯ ಪ್ರಸ್ತುತ ರೀತಿಯಲ್ಲೇ ಮುಂದುವರೆಯುವ ನಿರೀಕ್ಷೆಯಿದೆ ಎಂದು ಹಸನ್​ ತಿಳಿಸಿದರು.

ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ: ಬೆಂಗಳೂರಿನಲ್ಲಿ, ಅಧಿಕೃತ ಅನುಮತಿ ಪಡೆದು ಸಾರ್ವಜನಿಕ ಪ್ರತಿಭಟನೆ ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಂಜುಮನ್ ಇ ಇಸ್ಲಾಮಿಯಾ ಬೆಂಗಳೂರಿನ ಅಧ್ಯಕ್ಷ ಸೈಯದ್ ಜಮೀನ್ ರಜಾ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ದಾಳಿ ಖಂಡಿಸಿ ನಗರದ ಅಸ್ಕರಿ ಮಸೀದಿಯಲ್ಲಿ ಮೌನ ಪ್ರತಿಭಟನೆ ಆಯೋಜಿಸಲಾಗಿದೆ. ಈ ಬಗ್ಗೆ ಅಗತ್ಯ ಅನುಮತಿ ಪಡೆಯಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಅಮೆರಿಕ-ಇಸ್ರೇಲ್ ಭೀಕರ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: 200ಕ್ಕೂ ಹೆಚ್ಚು ಸಾವು, ಇರಾನ್‌ನಲ್ಲಿ 40 ದಿನ ಶೋಕ