ETV Bharat / state

ಸೊರಬ: ಹೋರಿ ಹಬ್ಬಕ್ಕೆ ಮಾನ್ಯತೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ವಿದೇಶಿ ಕ್ರೀಡೆಗಳಿಗೆ ಕ್ರೀಡಾಂಗಣ ಮಾಡುವ ಸರ್ಕಾರ, ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೂ ಪ್ರತಿ ತಾಲೂಕಿನಲ್ಲಿ ಕ್ರೀಡಾಂಗಣ ಮಾಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

PROTEST FOR FARMERS FOLK SPORT
ಹೋರಿ ಹಬ್ಬಕ್ಕೆ ಮಾನ್ಯತೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ (ETV Bharat)
author img

By ETV Bharat Karnataka Team

Published : December 24, 2025 at 2:17 PM IST

2 Min Read
Choose ETV Bharat

ಶಿವಮೊಗ್ಗ: ಸೊರಬ ಪಟ್ಟಣದ ಪುರಸಭೆ ಮುಂಭಾಗದ ವೃತ್ತಕ್ಕೆ ರೈತ ವೃತ್ತ ಎಂದು ನಾಮಕರಣ ಮಾಡಬೇಕು ಹಾಗೂ ಹೋರಿ ಹಬ್ಬಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಇಂದು ಸೊರಬದ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಗೋ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ವತಿಯಿಂದ ಸೊರಬ ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು‌.

ಪ್ರತಿಭಟನೆ ವೇಳೆ, ಮಾತನಾಡಿದ ಹೋರಾಟಗಾರರು, ಜಿಲ್ಲಾಡಳಿತ ಪುರಸಭೆ ಮುಂಭಾಗದ ವೃತ್ತಕ್ಕೆ ರೈತ ವೃತ್ತ ಎಂದು ನಾಮಕರಣ ಮಾಡಬೇಕು. ಜೊತೆಗೆ ನಮ್ಮ ರೈತರ ಜಾನಪದ ಕ್ರೀಡೆಯಾಗಿದ್ದು, ಈ ಕ್ರೀಡೆಯನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಕೆಲವರ ಅಚಾತುರ್ಯಕ್ಕೆ ಈ ಕ್ರೀಡೆಯನ್ನು ವಿರೋಧಿಸಲಾಗುತ್ತಿದೆ. ಇದು‌ ಜಾನಪದ‌ ಕ್ರೀಡೆಯಾಗಿದ್ದು, ಇದನ್ನು ರದ್ದು ಮಾಡುವುದು ಸರಿಯಲ್ಲ‌. ಇದರಿಂದ ಜಿಲ್ಲಾಡಳಿತ ಸೂಕ್ತ ಷರತ್ತುಗಳನ್ನು ಅನ್ವಯಿಸಿ ಕ್ರೀಡೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಜನಪದ ಕ್ರೀಡೆ ಹೋರಿ ಹಬ್ಬಕ್ಕೆ ಸರ್ಕಾರ ಮಾನ್ಯತೆ ನೀಡಬೇಕು. ವಿದೇಶಿ ಕ್ರೀಡೆಗಳಿಗೆ ಕ್ರೀಡಾಂಗಣ ಮಾಡುವ ಸರ್ಕಾರ, ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೂ ಪ್ರತಿ ತಾಲೂಕಿನಲ್ಲಿ ಕ್ರೀಡಾಂಗಣ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕಾರಿಪುರದ ಅವರ ನಿವಾಸಕ್ಕೆ ತೆರಳಿ ಮನವಿ ಸಹ ಸಲ್ಲಿಸಲಾಗಿತ್ತು. ಮಾತ್ರವಲ್ಲದೆ, ರೈತ ದಿನಾಚರಣೆಗೆ ಆಗ್ರಹಿಸಿ ಇತ್ತೀಚೆಗೆ ಬೆಳಗಾವಿ ಅಧಿವೇಶನಕ್ಕೆ ತೆರಳಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೂ ಮನವಿ ಮಾಡಲಾಗಿದೆ. ರೈತರಿಗೆ ಗೌರವಿಸುವ ನಿಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಮಿತಿಯ ಅಧ್ಯಕ್ಷ ಚಿದಾನಂದ ಗೌಡ ಮಾತನಾಡಿ, ದೇಶದಲ್ಲಿ ವಿವಿಧ ಆಚರಣೆಗಳನ್ನು ನಡೆಸಲಾಗುತ್ತಿದೆ. ಆದರೆ, ರೈತ ದಿನಾಚರಣೆಗೆ ತಾತ್ಸರದ ಮನೋಭಾವ ಸಲ್ಲದು. ಸಮಿತಿಯಿಂದ ಹಲವಾರು ಹೋರಾಟಗಳನ್ನು ಮಾಡಲಾಗುತ್ತಿದೆ. ರೈತ ವೃತ್ತ ಹಾಗೂ ರೈತ ದಿನಾಚರಣೆಗೆ ಆಗ್ರಹಿಸಿ ಅನೇಕ ಮನವಿಗಳನ್ನು ಸಲ್ಲಿಸಲಾಗಿದೆ. ರೈತರು ಕೃಷಿ ಚಟುವಟಿಕೆಗಳು ಮುಗಿದ ಮೇಲೆ ದೀಪಾವಳಿ ನಂತರದಲ್ಲಿ ಹೋರಿ ಹಬ್ಬ ಮಾಡುತ್ತಾರೆ. ಅದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದರು.

ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಷಣ್ಮುಖಪ್ಪ ಹರಗಿ ಮಾತನಾಡಿ, ರೈತರು ಹೋರಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಈಗಾಗಲೇ ತಮಿಳುನಾಡಿನಲ್ಲಿ ಜಲ್ಲಿಕಟ್ಟು, ಕರಾವಳಿ ಭಾಗದಲ್ಲಿ ಕಂಬಳಕ್ಕೆ ಮಾನ್ಯತೆ ನೀಡಲಾಗಿದೆ. ಆದರೆ, ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಸಮಿತಿಯಿಂದ ಹೈಕೋರ್ಟ್ ಮೊರೆ ಸಹ ಹೋಗಲಾಗಿದೆ. ರೈತ ದಿನಾಚರಣೆ ಆಚರಿಸುವ ಜೊತೆಗೆ ಹೋರಿ ಹಬ್ಬಕ್ಕೆ ಸರ್ಕಾರ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ, ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಕೊಡಕಣಿ ಡೇಂಜರ್ ಬಸವ, ಹಳೇಸೊರಬದ ಜೀವದ ಒಡೆಯ, ಮರೂರು ತಾರಕಾಸುರ, ಪುಟ್ಟನಹಳ್ಳಿ ಮಲೆನಾಡ ಸಿರಿ, ಹಳೇಸೊರಬ ಶ್ರೀಕೃಷ್ಣ ಹೆಸರಿನ ಹೋರಿಗಳು ಪಾಲ್ಗೊಂಡಿದ್ದವು.

ಪುರಸಭೆ ಮುಖ್ಯಾಧಿಕಾರಿ ಚಂದನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಉಪಾಧ್ಯಕ್ಷ ನಾಗಪ್ಪ ಬಿದರಗೇರಿ, ಸಂಘಟನಾ ಕಾರ್ಯದರ್ಶಿ ಶರತ್ ಸ್ವಾಮಿ, ಕುರುಬ ಸಮಾಜದ ಮುಖಂಡ ತಿಪ್ಪಣ್ಣ, ವೀರಶೈವ ಸಮಾಜದ ಮುಖಂಡ ಡಿ. ಶಿವಯೋಗಿ, ಯುವ ಮುಖಂಡರು ಹಾಜರಿದ್ದರು.

ಇದನ್ನೂ ಓದಿ: ಉತ್ತರ ಕರ್ನಾಟಕದ 'ಕೆಡಿಎಂ ಕಿಂಗ್‌' ಹೃದಯಾಘಾತದಿಂದ ಸಾವು! ಅದರ ಟ್ರ್ಯಾಕ್​ ರೆಕಾರ್ಡ್​ ಬಗ್ಗೆ ಫ್ಯಾನ್ಸ್​ ಹೇಳಿದ್ದಿಷ್ಟು