ETV Bharat / state

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

ಮದ್ದೂರು ನಗರಸಭೆಗೆ ಸ್ಥಳೀಯ ಗ್ರಾಮ ಪಂಚಾಯತ್​ಗಳ ವಿಲೀನವನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಿದರು.

protest-against-addition-of-gejjalagere-village-to-maddur-municipal-council
ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ಬಿಜೆಪಿಯವರು ಪ್ರತಿಭಟಿಸಿದರು (ETV Bharat)
author img

By ETV Bharat Karnataka Team

Published : January 11, 2026 at 5:00 PM IST

3 Min Read
Choose ETV Bharat

ಮಂಡ್ಯ : ಮದ್ದೂರು ನಗರಸಭೆಗೆ ಸ್ಥಳೀಯ ಗ್ರಾಮ ಪಂಚಾಯತ್​ಗಳ ವಿಲೀನದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಗೆಜ್ಜಲಗೆರೆ ಗ್ರಾಮ ಪಂಚಾಯತ್​ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ಇದೀಗ ಪ್ರತಿಭಟನೆಗೆ ವಿರೋಧ ಪಕ್ಷ ಬಿಜೆಪಿ ಸಾಥ್ ನೀಡಿದೆ.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸ್ಥಳೀಯ NDA ನಾಯಕರಿಂದ ಪ್ರತಿಭಟನೆ ನಡೆಯಿತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ಬಿಜೆಪಿಯವರಿಂದ ಪ್ರತಿಭಟನೆ ನಡೆಸಲಾಯಿತು (ETV Bharat)

'ಅಭಿವೃದ್ಧಿ ಹೆಸರಲ್ಲಿ ಶಾಸಕರು ದರೋಡೆ, ದ್ರೋಹದ ಕೆಲಸ ಮಾಡಿದ್ದಾರೆ. ಗೆಜ್ಜಲಗೆರೆ ಗ್ರಾ.ಪಂ.ಯನ್ನು ಉಳಿಸಿಕೊಟ್ಟು, ಹೊಸ ಇತಿಹಾಸ ಸೃಷ್ಟಿಸಿ' ಎಂದು ಬಿಜೆಪಿ ವಿಪಕ್ಷ ನಾಯಕರಿಗೆ ಗೆಜ್ಜಲಗೆರೆಯಲ್ಲಿ ರೈತ ನಾಯಕಿ ಸುನಂದಾ ಜಯರಾಮ್ ಅವರು ಮನವಿ ಮಾಡಿದ್ರು.

ಮದ್ದೂರು ನಗರಸಭೆಗೆ ಗ್ರಾಮ ಪಂಚಾಯತ್​ಗೆ ಸೇರ್ಪಡೆ ಖಂಡನೀಯ. ಈ ವಿಚಾರ ವಿಧಾನ ಪರಿಷತ್​ನಲ್ಲೂ ಚರ್ಚೆ ಆಗಬೇಕು. ಸ್ಥಳೀಯ ಶಾಸಕರು ಯಾರ ಅಭಿಪ್ರಾಯವನ್ನೂ ಸಂಗ್ರಹಿಸಿಲ್ಲ. ಒಬ್ಬರೇ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಶಾಸಕರು ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡ್ತಾರೆ. ಯಾವ ಕೈಗಾರಿಕೆ ಬೇಡ, ನಮ್ಮ ಭೂಮಿಯನ್ನು ನಾವು ಉಳಿಸಿಕೊಳುತ್ತೇವೆ‌. ಸರ್ಕಾರ ಗ್ರಾಮ ಪಂಚಾಯತ್​ ಮಟ್ಟದಲ್ಲಿ ಅಭಿವೃದ್ಧಿ ಮಾಡಲಿ ಎಂದರು.

ಮಾಜಿ ಸಚಿವ ಡಿಸಿ ತಮ್ಮಣ್ಣ ಮಾತನಾಡಿ, 'ಈ ತರಹ ಉದ್ಧಾರ ಮಾಡುವ ಎಷ್ಟೋ ಜನರನ್ನು ನೋಡಿದ್ದೇನೆ. ಗ್ರಾ.ಪಂ.ಯಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಮಾಡುವ ಅವಕಾಶ ಇದೆ. ನಗರಸಭೆಯಲ್ಲಿ ಕಡಿಮೆ ಸದಸ್ಯರು ಮಾತ್ರ ಬರ್ತಾರೆ. ಸಭೆ ಕರೆಯದೆ ಗ್ರಾಮಸ್ಥರ ಭಾವನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಗ್ರಾಮಸ್ಥರು, ಸದಸ್ಯರ ಜೊತೆ ಚರ್ಚಿಸದೆ ನಿರ್ಧಾರ ಕೈಗೊಂಡಿದ್ದಾರೆ. ನಗರಸಭೆ ಸೇರ್ಪಡೆ ಕೈಬಿಡಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡಿ ನಿಲ್ಲಿಸಬೇಕಾಗುತ್ತೆ.
ನಮ್ಮ ಬೆಂಬಲ ಇದ್ದೇ ಇರುತ್ತೆ. ನಾವು ಗ್ರಾಮಸ್ಥರ ಜೊತೆ ಇರುತ್ತೇವೆ. ಜಯ ಸಿಕ್ಕುವವರೆಗೆ ಹೋರಾಟ ಮುಂದುವರಿಯುತ್ತದೆ' ಎಂದು ತಿಳಿಸಿದರು.

ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಜಗ್ಗಲ್ಲ ಬಗ್ಗಲ್ಲ ಅಂದ್ರೆ ಇದೇ ನಿಮಗೆ ಕೊನೆ ಅನ್ಸುತ್ತೆ, ಈಗಾಗಲೇ ಫಾರಿನ್​​ನಲ್ಲಿ ಜಾಗ ಹುಡುಕಿಟ್ಟುಕೊಂಡಿದಿರಿ. ನೀವು ಫಾರಿನ್​​ಗಾ ಎಂಎಲ್​​ಎ ಆಗಿರೋದು? ಇಲ್ಲಿನ ಶಾಸಕರಿಗೆ ಪ್ರಜ್ಞೆ ಇಲ್ಲ ಅನ್ಸುತ್ತೆ. ಹಳ್ಳಿ, ಗ್ರಾಮ ಪಂಚಾಯತ್​ಆಗಿ ಉಳಿಯಬೇಕು ಅನ್ನೋದು ಒಂದು ಅರ್ಥ ಇದೆ. ನಿಮ್ಮಲ್ಲಿ ಆದಾಯ ಇದೆ ಅಂತ ಸೇರಿಸಿಕೊಳ್ಳೋ ಪ್ಲಾನ್. ಸವಲತ್ತುಗಳು ಕೊಡಿ ಅಂದಾಗ ಕೊಡ್ತಾರಾ? ನಿಮ್ಮ ಆದಾಯ ನೋಡಿ ನಿಮ್ಮನ್ನ ಪ್ರೀತಿ ಮಾಡ್ತಿದ್ದಾರೆ. ಹಳ್ಳಿಯ ಸೊಗಡು ಪಟ್ಟಣದಲ್ಲಿ ಸಿಗಲ್ಲ‌. ನಗರಸಭೆಗೆ ಸೇರ್ಪಡೆ ಮಾಡಿರುವ ಹಳ್ಳಿಗಳನ್ನು ದಯವಿಟ್ಟು ಬಿಟ್ಟುಬಿಡಿ' ಎಂದು ವಾಗ್ದಾಳಿ ನಡೆಸಿದರು.

'ಸರ್ಕಾರ ಪಾಪರ್ ಆಗಿದೆ, ಸಿದ್ದರಾಮಯ್ಯ ಅವರು ರಾಜ್ಯದ ಈ ಹಿಂದಿನ ಎಲ್ಲಾ ಸಿಎಂಗಳು ಮಾಡಿದಷ್ಟು ಸಾಲವನ್ನು ಒಬ್ಬರೇ ಮಾಡಿದ್ದಾರೆ. ಗೆಜ್ಜಲಗೆರೆ ಗ್ರಾ. ಪಂ ಉದ್ಘಾಟನೆ ಮಾಡಿದ್ದು ನಾನು. ಈಗ ಇದನ್ನು ಉಳಿಸಿಕೊಳ್ಳಲು ನಾನೇ ಬಂದಿದ್ದೇನೆ. ಗಾಂಧೀಜಿ ಅವರು ಗ್ರಾಮ ರಾಜ್ಯ, ರಾಮರಾಜ್ಯ ಎಂದು ಹೇಳಿದ್ದಾರೆ. ಈಗ ಗ್ರಾಮವನ್ನು ಪಟ್ಟಣ ಮಾಡಲು ಹೋಗುತ್ತಿದ್ದಾರೆ' ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದರು.

'ಗಾಂಧೀಜಿ ಅವರ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಈ ಹೋರಾಟ ನಡೆಯುತ್ತಿರುವುದು ಮುಂದಿನ ಪೀಳಿಗೆಗೆ. ನಗರಸಭೆಗೆ ಸೇರಿದರೆ ಏನೂ ಬರಲ್ಲ. ಬೆಂಗಳೂರಿನಲ್ಲಿ ಎಲ್ಲಾ ಬೆಳವಣಿಗೆ ಆಗಿದೆ. ಅದಕ್ಕೆ ಅದನ್ನು ನಗರೀಕರಣ ಮಾಡಲಾಗಿದೆ. ಆದರೆ, ಇಲ್ಲಿ ಹೊಲ ಗದ್ದೆಗಳು ಇವೆ. ತೆರಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಏರಿಕೆ ಆಗುತ್ತೆ. ಇದರಿಂದ ರೈತರಿಗೆ ತೀವ್ರ ಅನಾನುಕೂಲ ಆಗುತ್ತದೆ' ಎಂದು ತಿಳಿಸಿದರು.

ಇಲ್ಲಿ ಬರುವ ಆದಾಯವನ್ನು ಅವರು ಬಳಸಿಕೊಳ್ಳುತ್ತಾರೆ. ಇದರಿಂದ ಹಳ್ಳಿ‌ ಉದ್ಧಾರ ಆಗಲ್ಲ, ಹಾಳಾಗುತ್ತದೆ. ಹಳ್ಳಿಗಳು ಹಳ್ಳಿಯಾಗಿ ಉಳಿದರೆ ಸರ್ಕಾರ ಖುಷಿ ಪಡಬೇಕು. ಎಲ್ಲವನ್ನು ಪಟ್ಟಣ ಮಾಡಿದರೆ ಅನ್ನಕ್ಕೆ ಏನು ಮಾಡೋದು. ಕಂಪ್ಯೂಟರ್‌ನಲ್ಲಿ ಅನ್ನ ಬರುತ್ತಾ?. ಅನ್ನ ಹೇಗೆ ಉತ್ಪಾದನೆ ಮಾಡೋದು?. ಮುಂದಿನ ಅನಾಹುತಗಳ ಬಗ್ಗೆ ಯೋಚನೆ ಮಾಡಬೇಕಾಗಿದೆ. ಗ್ರಾಮೀಣಾಭಿವೃದ್ಧಿ ವಿಚಾರವಾಗಿ ಇರುವ ಎಲ್ಲಾ ಸೌಕರ್ಯಗಳು ಬರುವುದಿಲ್ಲ. ಚುನಾಯಿತ ಪ್ರತಿನಿಧಿಗಳು ದುರಹಂಕಾರದಲ್ಲಿ ಇರಬಾರದು. ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಮಾತಾಡುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಇಲ್ಲಿರುವ ಜನರು ನಗರಸಭೆಗೆ ಸೇರೋದು ಬೇಡ ಎಂದ್ರೂ ಏಕೆ ಮಾಡ್ತಾ ಇದೀರಾ. ದುಡ್ಡು ಇದ್ರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ. ಈ ಚಳವಳಿಗೆ ನಮ್ಮ ಬೆಂಬಲವಿದೆ. ಒಳಿತು ಮಾಡು ಮನುಷ್ಯ ನೀ ಇರೋದು ಎರಡು ವರ್ಷ. ಇರುವವರೆಗೆ ಜನರಿಗೆ ಒಳ್ಳೆಯದು ಮಾಡಲಿ ಎಂದು ಕೇಳ್ತೀನಿ. ಜನರು ತಿರುಗಿ ಬಿದ್ರೆ ಯಾರೂ ಉಳಿಯಲ್ಲ. ಜನರ ಅಭಿಪ್ರಾಯವನ್ನು ಗೌರವಿಸಿ. ಗೆಜ್ಜಲಗೆರೆಯನ್ನು ನಗರಸಭೆಯಿಂದ ಕೈ ಬಿಡಿ ಎಂದು ಆಗ್ರಹಿಸಿದರು.

ಮಾಜಿ ಸಚಿವ ಡಿಸಿ ತಮ್ಮಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಎಸ್ಪಿ ಸ್ವಾಮಿ, ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಮ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ್, ಸುನಂದಾ ಜಯರಾಮ್ ಸೇರಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : ಬಿಜೆಪಿಯವರು ಬಳ್ಳಾರಿಯಿಂದ ಪಾದಯಾತ್ರೆ ಮಾಡಲಿ, ಬೇಡ ಅಂದವರು ಯಾರು?: ಸಿಎಂ