ETV Bharat / state

ನೇಮಕಾತಿ ಅಕ್ರಮ ಸಾಬೀತಾಗಿದ್ದರೂ ಪ್ರಿಯಾಂಕ್​ ಖರ್ಗೆ ಅವರಿಂದ ನೇಮಕಾತಿ ಆದೇಶ: ದಾಖಲೆ ಸಮೇತ ಹೆಚ್​ಡಿಕೆ ಆರೋಪ

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

H D KUMARASWAMY
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : August 28, 2026 at 1:23 PM IST

7 Min Read
Choose ETV Bharat

ಬೆಂಗಳೂರು: ಕೆಪಿಎಸ್​​ಸಿ ಉಪಸಮಿತಿ ವರದಿ, ಅಕ್ರಮ ನಡೆದಿರುವ ಬಗ್ಗೆ ಎಫ್ಎಸ್ಎಲ್ ವರದಿ ಇದ್ದರೂ ಆರ್​​ಡಿಪಿಆರ್ ಸಹಾಯಕ ಕಾರ್ಯಕಾರಿ ಇಂಜಿನಿಯರ್ ನೇಮಕಾತಿ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಅವರು, ರಾಜ್ಯದ ಗೃಹ ಸಚಿವರ ಪ್ರತಿ ದಿನ ಹೇಳಿಕೆ ಕೊಡುತ್ತಿರುವುದನ್ನು ನೋಡಿದ್ದೇನೆ. ಅವರು ಚರ್ಚೆ ಮಾಡದ ವಿಷಯನೇ ಇಲ್ಲದಂತಾಗಿದೆ. ಕೆಪಿಎಸ್​​ಸಿ ಸಂಸ್ಥೆಯ ಹಗರಣಗಳು ಮುನ್ನಲೆಗೆ ಬರುತ್ತಲೇ ಇದೆ. ಆರ್​​ಡಿಪಿಆರ್ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಗ್ರೇಡ್ 1 ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆಗಿರುವುದು ಸಾಬೀತಾಗಿದ್ದರೂ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದಾಗ ಪ್ರಿಯಾಂಕ್​ ಖರ್ಗೆ ತರಾತುರಿಯಲ್ಲಿ 24 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)

ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, ಪ್ರಿಯಾಂಕ್​ ಖರ್ಗೆ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದರು. 3.9.2022ರಲ್ಲಿ ಆರ್​​ಡಿಪಿಆರ್ ಇಲಾಖೆ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಗ್ರೇಡ್ 1 ನೇಮಕಾತಿಗೆ ಕೆಪಿಎಸ್​​ಸಿ ಅಧಿಸೂಚನೆ ಹೊರಡಿಸಿತ್ತು. 16.6.2023, 2.07.2023ಕ್ಕೆ ಈ ಸಂಬಂಧ ಲಿಖಿತ ಪರೀಕ್ಷೆ ನಡೆಸುತ್ತಾರೆ. ಬಳಿಕ 15.9.2023, 16.09.2023 ಪರ್ಸನಾಲಿಟಿ ಪರೀಕ್ಷೆ ಕೈಗೊಳ್ಳುತ್ತಾರೆ. 31.1.2024 ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಾರೆ. ಅದಕ್ಕೂ ಮುಂಚೆ ಹಂಗಾಮಿ ಆಯ್ಕೆ ಪಟ್ಟಿ ಪ್ರಕಟಿಸುತ್ತಾರೆ. 22.09.2023 ಹಂಗಾಮಿ ಪಟ್ಟಿ ಪ್ರಕಟವಾಗುತ್ತದೆ. ಈ ಸಂಬಂಧ ಸಾರ್ವಜನಿಕವಾಗಿ ಆಕ್ಷೇಪ ಸಲ್ಲಿಸಲು ಏಳು ದಿನಗಳ ಸಮಯಾವಕಾಶ ನೀಡಲಾಗುತ್ತದೆ ಎಂದು ವಿವರಿಸಿದರು.

25.09.2023ರಂದು ಆನಂದ್ ಸಿದ್ದಾರೆಡ್ಡಿ ಎಂಬವರು ಕೆಪಿಎಸ್​​ಸಿ ಆಯೋಗದ ಕಾರ್ಯದರ್ಶಿಗೆ ಇ-ಮೇಲ್ ಮೂಲಕ ತಕರಾರು ಅರ್ಜಿ ಹಾಕಿ ದೂರು ಸಲ್ಲಿಸುತ್ತಾರೆ. ಅವರು ದೂರಿನಲ್ಲಿ 1,2,3,4,6,7,8,9 ಸೀರಿಯಲ್ ಸಂಖ್ಯೆಯ ಅಭ್ಯರ್ಥಿಗಳು ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿಲ್ಲ. ಅವರು ಈ ಬಾರಿ ಉತ್ತೀರ್ಣ ಆಗಿದ್ದಾರೆ. ಈ ಅಭ್ಯರ್ಥಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸತ್ತಾ ಅವರ ಒಎಂಆರ್ ಶೀಟ್, ಸಿಸಿಟಿವಿ ಫೂಟೇಜ್​​ ಪರಿಶೀಲಿಸುವಂತೆ ಕೋರುತ್ತಾರೆ. ಆ ದೂರನ್ನು 3.10.2023 ಕೆಪಿಎಸ್​​ಸಿ ಸಭೆಯ ಅಜೆಂಡಾದಲ್ಲಿ ಸೇರಿಸಿ, ಚರ್ಚೆ ನಡೆಸಲಾಗುತ್ತದೆ. ಈ ವೇಳೆ ಕಾರ್ಯದರ್ಶಿಗೆ ಮರುಪರೀಕ್ಷೆ ಮಾಡಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಆಯೋಗದ ಆಗಿನ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಜೊತೆ ಚರ್ಚೆ ಮಾಡಿ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶ ನೀಡುತ್ತಾರೆ. 23.11.2023 ಆಯೋಗದ ಸಭೆಯ ಚರ್ಚೆ ವೇಳೆ ಆಯೋಗದ ಕಾರ್ಯದರ್ಶಿ, 9 ಅಭ್ಯರ್ಥಿಗಳ ಹಂಗಾಮಿ ಪಟ್ಟಿಯಲ್ಲಿ ಹೆಸರು ಇದ್ದು, ಅದರ ಬಗ್ಗೆ ತನಿಖೆ ಮಾಡಲು ನಿರ್ದೇಶನ ನೀಡಲಾಗಿದೆ. ಸಿಸಿಟಿವಿ ಚಿತ್ರ ಕೆಲವರದ್ದು ಲಭ್ಯವಿಲ್ಲ ಎಂದು ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಈ ಹಂಗಾಮಿ ಪಟ್ಟಿ ಪ್ರಕಟವಾಗಿದೆ. ಈಗ ಈ ದೂರಿನ ಮೇರೆಗೆ ಅಂತಿಮ ಪಟ್ಟಿ ತಡೆ ಹಿಡಿಯುವುದು ಅನಾವಶ್ಯಕ, ಅಂತಿಮ‌ ಪಟ್ಟಿ ಪ್ರಕಟಿಸಲು ಅನುಮತಿ ನೀಡುವಂತೆ ಕಾರ್ಯದರ್ಶಿ ಮನವಿ ಮಾಡುತ್ತಾರೆ. ಆದರೆ ಆಯೋಗ ಅನುಮತಿ ಕೊಡುವುದಿಲ್ಲ ಎಂದು ವಿವರಿಸಿದರು.

8.12.2023ಕ್ಕೆ ಮತ್ತೆ ಆಯೋಗದ ಸಭೆಯಲ್ಲಿ ಈ ಸಂಬಂಧ ತನಿಖೆ ಮಾಡಲು ಮೂವರು ಸದಸ್ಯರ ಉಪಸಮಿತಿ ರಚನೆ ಮಾಡಲಾಗುತ್ತದೆ. ಉಪಸಮಿತಿಯವರು ಎರಡು ಸಭೆಗಳನ್ನು ಮಾಡುತ್ತಾರೆ. ಈ ಉಪಸಮಿತಿಗೆ ಅಂದಿನ ಕಾರ್ಯದರ್ಶಿ ಸಹಕಾರ ಕೊಡುವುದಿಲ್ಲ. ಆಯೋಗದ ಹಿತದೃಷ್ಟಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಸಹಕಾರ ಕೊಡುತ್ತಿಲ್ಲ. ಅವರ ನಡವಳಿಕೆ ಹಿನ್ನೆಲೆ ತನಿಖೆ ಮುಂದುವರಿಸಲು ಇಷ್ಟ ಇಲ್ಲ ಅಂತ ಉಪಸಮಿತಿ ಆಯೋಗ ಅಧ್ಯಕ್ಷರ ಗಮನಕ್ಕೆ ತರುತ್ತಾರೆ ಎಂದು ದಾಖಲೆ ಸಮೇತ ತಿಳಿಸಿದರು.

31.1.2024ರಂದು ಅಂದಿನ‌ ಕಾರ್ಯದರ್ಶಿಗೆ ಆಯೋಗದ ಅಧ್ಯಕ್ಷರು ಪತ್ರ ಬರೆದು, ಉಪಸಮಿತಿಯ ತೀರ್ಮಾನಕ್ಕೆ ಒಳಪಟ್ಟು ಆಯ್ಕೆಯ ಅಂತಿಮ‌ಪಟ್ಟಿ ಪ್ರಕಟಿಸಬಹುದು ಅಂತ ಹೇಳುತ್ತಾರೆ. ಇದನ್ನೇ ಲಾಭ ಮಾಡಿಕೊಂಡು ಅಂತಿಮ ಪಟ್ಟಿ ಬಿಡುಗಡೆ ಸಂಬಂಧ ಆಯೋಗದ ಅಧ್ಯಕ್ಷರ ಸಹಿ ಇಲ್ಲದೇ ಕಾರ್ಯದರ್ಶಿ ಅಂತಿಮ‌ಪಟ್ಟಿಯನ್ನು ಸಿಎಸ್​​ಗೆ ಕಳುಹಿಸುತ್ತಾರೆ. 1.2.2024ರಲ್ಲಿ ಆಯೋಗದ ಅಧ್ಯಕ್ಷರು ಸಿಎಸ್​​ಗೆ ಪತ್ರ ಬರೆದು ನಮ್ಮ ಒಪ್ಪಿಗೆ ಇಲ್ಲದೇ ಅಂತಿಮ‌ಪಟ್ಟಯನ್ನು ಕಳುಹಿಸಲಾಗಿದೆ. ಅದನ್ನು ತಡೆಹಿಡಿಯುವಂತೆ ಕೋರುತ್ತಾರೆ ಎಂದು ತಿಳಿಸಿದರು.

19.3.2024ರಲ್ಲಿ ಉಪಸಮಿತಿಯವರು ಒಎಂಆರ್ ಶೀಟ್, ಕಾರ್ಬನ್ ಕಾಪಿಗಳ ಬಗ್ಗೆ ತನಿಖೆ ಮಾಡುತ್ತಾರೆ. 21.3.2024ರಲ್ಲಿ 24 ಅಭ್ಯರ್ಥಿಗಳನ್ನು ಉಪಸಮಿತಿಯವರು ವಿಚಾರಣೆಗೆ ಕರೆಯುತ್ತಾರೆ. ವಿಚಾರಣೆಗೆ 20 ಅಭ್ಯರ್ಥಿಗಳು ಮಾತ್ರ ಹಾಜರಾಗುತ್ತಾರೆ. 25.3.2024ರಲ್ಲಿ ಈ ಎಲ್ಲ ಒಎಂಆರ್, ಕಾರ್ಬನ್ ಕಾಪಿಗಳನ್ನು ವೈಜ್ಞಾನಿಕ ಪರಿಶೀಲನೆಗಾಗಿ ಎಫ್ಎಸ್​​ಎಲ್​​ಗೆ ಕಳುಹಿಸಲು ತೀರ್ಮಾನಿಸಲಾಗುತ್ತದೆ. 25.06.2024ಕ್ಕೆ ಎಫ್​​ಎಸ್​​ಎಲ್​​ಗೆ ಈ ಮೆಟೀರಿಯಲ್​​ಗಳನ್ನು ಕಳುಹಿಸಿ ಕೊಡಲಾಗುತ್ತದೆ. ಎಫ್​​ಎಸ್​​ಎಲ್ ವರದಿಯಲ್ಲಿ ಓಎಂಆರ್ ಶೀಟ್​​ನಲ್ಲಿ ತಿದ್ದಿರುವುದು ಗೊತ್ತಾಗಿದೆ. ಇದೇ ಪ್ರಿಯಾಂಕ್​ ಖರ್ಗೆಯವರು ಇದ್ದ ಇಲಾಖೆಯ ಸಹಾಯಕ ಕಾರ್ಯಕಾರಿ ಇಂಜಿನಿಯರ್ ನೇಮಕಾತಿ ಪರೀಕ್ಷೆಯಲ್ಲಿ ನಡೆದ ವ್ಯವಹಾರ ಇದು ಎಂದು ಹೆಚ್​​ಡಿಕೆ ದೂರಿದರು.

ಈತರ ಅವ್ಯವಹಾರ ಆಗಿದ್ದರೂ, ಕೋರ್ಟ್ ಆದೇಶ ಇದ್ದರೂ ತರಾತುರಿಯಲ್ಲಿ ನೇಮಕಾತಿ ಆದೇಶ ಕೊಟ್ಟಿದ್ದೀರಿ. ಏಕೆ ತರಾತುರಿಯಲ್ಲಿ ನೇಮಕಾತಿ ಆದೇಶ ಕೊಟ್ಟಿದ್ದೀರಿ. ಇಷ್ಟೆಲ್ಲಾ ಅವ್ಯವಹಾರ ಆಗಿದ್ದರೂ ಏಕೆ ನೇಮಕಾತಿ ಆದೇಶ ಹೊರಡಿಸಿದ್ದೀರಿ?. ದೊಡ್ದದಾಗಿ ಪಾರದರ್ಶಕ ಅಂತ ಹೇಳುತ್ತೀರಿ. ಹೈಕೋರ್ಟ್​ನಲ್ಲಿ ಈ ವಿಚಾರವನ್ನು ಸಿಬಿಐಗೆ ಕೊಡುವಂತೆ ಅರ್ಜಿದಾರರ ಪರ ವಕೀಲರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೈಕೋರ್ಟ್ ವಿಚಾರಣೆ ವೇಳೆ ಸಿಬಿಐಗೆ ಈ ಪ್ರಕರಣವನ್ನು ತನಿಖೆ ಕೊಡುವ ಸಾಧ್ಯತೆ ಬಗ್ಗೆ ಸಿಬಿಐ ಪರ ವಕೀಲ ಪ್ರಸನ್ನ‌ ಕುಮಾರ್ ಕೋರ್ಟ್​ನಲ್ಲಿ ವಿಚಾರಣೆ ವೇಳೆ ಹಾಜರು ಇರುವಂತೆ 19.3.2023ರಲ್ಲಿ ಮೌಖಿಕ ಆದೇಶ ಮಾಡುತ್ತದೆ ಎಂದು ತಿಳಿಸಿದರು.

ನೀವು ಆ ನಾಲಿಗೆಯಲ್ಲಿ ಪದ ಬಳಕೆ ಮಾಡುತ್ತೀರಿ ಅದಕ್ಕೆ ಗೌರವ ಕೊಡುವುದಾದರೆ ನೀವು ರಾಜೀನಾಮೆ ಕೊಡಬೇಕು. ಇಷ್ಟೆಲ್ಲಾ ಅಕ್ರಮ ಆಗಿದೆ ಎಂಬುದು ಸಾಬೀತಾಗಿದೆ. ಆದರೂ ತರಾತುರಿಯಲ್ಲಿ ಏಕೆ ನೇಮಕಾತಿ ಆದೇಶ ಕೊಟ್ಟಿದ್ದೀರಾ?. ಅವರು ಒಂದು ವರ್ಷದಿಂದ ಈಗ ಸಂಬಳ ಪಡೆಯುತ್ತಿದ್ದಾರೆ. ಈಗ ಸಿಐಡಿ ತನಿಖೆ ಮಾಡುತ್ತಿರುವುದು ಪ್ರಕರಣ ಮುಚ್ಚಿ ಹಾಕಲಾ?. ಕ್ಯಾಮೆರಾ ಮುಂದೆ ಹೇಳಿಕೆ ಕೊಟ್ಟಿದ್ದೇ ಕೊಟ್ಟಿದ್ದು. ಸ್ವಲ್ಪ ನಾಲಿಗೆಗೆ ಬೀಗ ಹಾಕಿ ಕೊಳ್ಳಿ. ನೀವು ಇದ್ದ ಇಲಾಖೆನೇ ಅಕ್ರಮವಾಗಿ ನೇಮಕಾತಿ ಆದೇಶ ಹೊರಡಿಸಿದೆ. ನಾನೇ ಹರಿಶ್ಚಂದ್ರ ಬೇರೆ ಯಾರೂ ಇಲ್ಲ. ಬಹಳ ಪರಿಶುದ್ಧವಾಗಿ ಆಡಳಿತ ನಡೆಸುವವನು ಅನ್ನೋದನ್ನು ನಿಲ್ಲಿಸಿ ಎಂದು ಪ್ರಿಯಾಂಕ್​​ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಜಾತಿ ಹೆಸರಲ್ಲಿ, ಹಣ ನಿಗದಿ ಮಾಡಿ ಸದಸ್ಯರನ್ನು ನೇಮಕ ಮಾಡಲಾಗುತ್ತಿದೆ. ಕೆಪಿಎಸ್​​ಸಿ ಸಂಸ್ಥೆ ಹಾಗಾಗಿ ಕಲುಷಿತವಾಗಿದೆ. ಸಂಸ್ಥೆ ಮೇಲೆ ವಿಶ್ವಾಸ ಕಳೆದುಕೊಳ್ಳಲು ಸರ್ಕಾರಗಳೇ ಕಾರಣವಾಗಿದೆ. ಆಡು ಮುಟ್ಟದೇ ಸೊಪ್ಪಿಲ್ಲ ಎಂಬ ಪ್ರಿಯಾಂಕ್​ ಖರ್ಗೆ ಕೃಪಾ ಪೋಷಿತ ಮಂಡಳಿ ಅದು. ನನಗೆ ಅಧಿಕಾರ ಕೊಟ್ಟರೆ ಕೆಪಿಎಸ್​​ಸಿಯನ್ನೇ ರದ್ದು ಮಾಡುತ್ತಿದ್ದೆ ಅಂತ ಹೇಳಿಕೆ ಕೊಡುತ್ತಾರೆ. ಐಎಎಸ್ ಅಧಿಕಾರಿ ಕೆಪಿಎಸ್​​ಸಿ ಪರೀಕ್ಷಾ ನಿಯಂತ್ರಣಾಧಿಕಾರಿ ಜ್ಞಾನೇಂದ್ರ ನಾಪತ್ತೆ ಯಾಗುತ್ತಾರೆ. ಪಶು ವೈದ್ಯಾಧಿಕಾರಿ ಹುದ್ದೆಗೆ 80 ಲಕ್ಷ ಬೇಡಿಕೆ ಸಂಬಂಧ ಮಂಜುನಾಥ್ ಎಂಬವರು ದೂರು ಹಿನ್ನೆಲೆ ಇಡಿಯವರು ಎಂಟ್ರಿ ಕೊಡುತ್ತಾರೆ. ಈ ಮಧ್ಯೆ ಐಎಎಸ್ ಅಧಿಕಾರಿ ನಾಪತ್ತೆ ಎಂಬ ಸುದ್ದಿ ಬರುತ್ತದೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ಪ್ರಿಯಾಂಕ್​​ ಖರ್ಗೆ, ಅವರ ತಂದೆಗೆ ಹುಷಾರಿಲ್ಲ. ಅನುಮತಿ ಪಡೆದು ಹೋಗಿದ್ದಾರೆ ಅಂತಾರೆ. ಅವರು ನಮಗೆ ಕರೆ ಮಾಡಿ ಹೇಳಿದ್ದಾರೆ. ಅವರು ಎರಡು ದಿನಗಳಲ್ಲಿ ವಾಪಸು ಆಗಲಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಆ.23ಕ್ಕೆ ಕೊಡುತ್ತಾರೆ. ಆ.25ರಂದು ಹೇಳಿಕೆ ನೀಡಿ ಅಧಿಕಾರಿ ಜ್ಞಾನೇಂದ್ರ ಎಲ್ಲಿದ್ದಾರೆ ಅಂತ ಗೊತ್ತಿಲ್ಲ ಅಂತಾರೆ. ಮತ್ತೆ ಗೃಹ ಇಲಾಖೆ ಯಾಕ್ರಿ ನಡೆಸುತ್ತೀರಾ?. ಈ ತದ್ವಿರುದ್ದ ಹೇಳಿಕೆನಾ ಏನೂಂತ ಕರೆಯಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರಿಯಾಂಕ್​ ಖರ್ಗೆ ರಾಜೀನಾಮೆ ಕೊಡಬೇಕು: ದಿಲ್ಲಿಯಲ್ಲಿ ಅವರ ನಾಯಕ ಯುವಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಅಂತ . ದಿನಾ ಲೆಕ್ಚರ್ ಗಿರಿ ಹೊಡೆದಿದ್ದೇ ಹೊಡೆದಿದ್ದು. ಇಲ್ಲಿ ಏನಾಗುತ್ತಿದೆ?. ನೀವು ಕೆಪಿಎಸ್​ಸಿಯಲ್ಲಿ 18 ಜನ ಸದಸ್ಯರನ್ನಾಗಿ ನೇಮಕ ಮಾಡಿದ್ದೀರಿ. ಇದು ಅಕ್ರಮ ಅಂಥ ಗೊತ್ತಿದ್ದರೂ ನೇಮಕಾತಿ ಮಾಡಿದ್ದೀರಿ. ನೀವು ಪರಿಶುದ್ದರಾ?. ಇದರಲ್ಲಿ ಏನು ನಡೆದಿದೆ ಅಂತ ಹೇಳಬೇಕು ಎಂದು ಆಗ್ರಹಿಸಿದರು.

ಸಂಸ್ಥೆಗಳನ್ನು ಕುಲಗೆಡಿಸುತ್ತಿರುವುದು ನೀವು?. ಸರಿಯಾದ ಸದಸ್ಯರನ್ನು ಆಯ್ಕೆ ಮಾಡಿದ್ದರೆ ಈ ಸಂಸ್ಥೆಗಳು ಹೇಗೆ ಕುಲಗೆಡುತ್ತವೆ?. ಆಯೋಗದಲ್ಲಿ 18 ಜನ ಸದಸ್ಯರಿದ್ದಾರೆ. ಅವರಿಗೆ ಆಯೋಗದಲ್ಲಿ ಕೂರಲು ಸೀಟ್ ಇದಿಯಾ ಅಂತ ಗೊತ್ತಿಲ್ಲ. ಸದಸ್ಯರಿಗೆ ರೇಟ್​​ಫಿಕ್ಸ್ ಮಾಡುತ್ತಿದ್ದೀರಿ. ಮೌಲ್ಯ ನಿಗದಿ ಮಾಡಿ ಸದಸ್ಯರ ನೇಮಕ ಮಾಡುತ್ತೀರಿ. ಕೇಂದ್ರದಲ್ಲಿ ಯಾರನ್ನಾದರು ದೊಡ್ಡ ಹುದ್ದೆಗೆ ನೇಮಕಾತಿ ಮಾಡಬೇಕಾದರೆ 360 ಡಿಗ್ರಿ ತನಿಖೆ ಮಾಡುತ್ತಾರೆ. ಯುಪಿಎಸ್​​ಸಿಯಲ್ಲಿ ಏಕೆ ದೂರು ಬರಲ್ಲ.‌ ಕೆಪಿಎಸ್​​ಸಿಯಲ್ಲಿ ಏಕೆ ದೂರು ಬರುತ್ತದೆ?. ಬೇವಿನ‌ಮರ ನೆಟ್ಟು, ಮಾವಿನ ಹಣ್ಣು ಸಿಕ್ಕಿಲ್ಲ, ಕಿತ್ತಲೆ ಹಣ್ಣು ಕೊಟ್ಡಿಲ್ಲ ಅಂದರೆ ಕೊಡುತ್ತಾ?. ನಿಮ್ಮಲ್ಲೇ ಲೋಪದೋಷ ಇದೆ. ಜಾತಿ ಹೆಸರಲ್ಲಿ ಸದಸ್ಯರನ್ನು ನೇಮಕ ಮಾಡುತ್ತೀರಿ ಎಂದು ಆರೋಪಿಸಿದರು.

ಆ ಜಾತಿಯವನಿಗೆ ಸದಸ್ಯ ಸ್ಥಾನ ಕೊಟ್ಟರೆ ಮತ ಬರುತ್ತದೆ ಎಂದು ಸದಸ್ಯನಾಗಿ ಮಾಡಿದರೆ ಹೇಗೆ?. ಈ ತರ ಮಾಡಿದರೆ ಕೆಪಿಎಸ್​​ಸಿ ಉದ್ಧಾರ ಆಗುತ್ತದಾ?. ಬಿಜೆಪಿ ಸರ್ಕಾರ ಕೇವಲ ಪರೀಕ್ಷೆ ಅಧಿಸೂಚನೆ ಅಷ್ಟೇ. ಮಿಕ್ಕಿದ್ದೆಲ್ಲ ಇವರು ಸಚಿವರಾದ ಬಳಿಕ ಇವರ ಕಾಲದಲ್ಲೇ ಇವೆಲ್ಲಾ ಪ್ರಕ್ರಿಯೆಗಳು ಆಗಿವೆ. ಎಲ್ಲಾ ಮಾನದಂಡವನ್ನು ಗಾಳಿಗೆ ತೂರಿದ್ದು ಯಾರು?. ಭಾಷಣ ಮಾಡುವುದು ಬಿಡಲಿ. ಇವರು ರಾಜೀನಾಮೆ ಪಡೆದು ಹೊರಗೆ ಬಂದು ರಾಜಕೀಯ ಮಾಡಬೇಕು ಎಂದು ಆಗ್ರಹಿಸಿದರು.

ಯುವಕರು, ನಿರುದ್ಯೋಗಿಗಳು ಬೀದಿಗಿಳಿಯಿರಿ: ಇದುವರೆಗೆ ರಾಜ್ಯದಲ್ಲಿ ಎಸ್ಐಟಿ ತನಿಖೆ ಮಾಡಿ ದೇವೇಗೌಡರನ್ನು ಮುಗಿಸುವ ಕೆಲಸ ಮಾಡಿದ್ದಾರೆ ಹೊರತು ಬೇರೆ ಯಾವುದೇ ತನಿಖೆ ತಾರ್ತಿಕ ಅಂತ್ಯ ಸಿಕ್ಕಿಲ್ಲ. ರಾಜ್ಯದಲ್ಲಿ ಈ ನೇಮಕಾತಿ ಅವ್ಯವಹಾರ ಘಟನೆಗಳು ನಡೆಯುತ್ತಿವೆ. ಕರ್ನಾಟಕ ರಾಜ್ಯದ ವ್ಯವಸ್ಥೆಯನ್ನು ಸರಿಪಡಿಸಲು ಯುವಕರು, ನಿರುದ್ಯೋಗಿಗಳು ಬೀದಿಗಿಳಿಯಿರಿ. ನಿರುದ್ಯೋಗಿಗಳು, ಯುವಕರು ಹೋರಾಟ ಮಾಡಬೇಕು. ಏಕೆ ಮೌನವಾಗಿದ್ದೀರಿ? ಎಂದು ಪ್ರಶ್ನಿಸಿದರು.

ಅಕ್ರಮ ಆದರೂ ನೇಮಕಾತಿ ಆದೇಶ ಕೊಟ್ಟಿದ್ದೀರಿ. ಇದು ಸರ್ಕಾರದ ಜವಾಬ್ದಾರಿ.‌ ಮಾತಿಗೂ ಕೃತಿಗೂ ಸಾಮ್ಯತೆ ಇದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಿ. ಪ್ರಿಯಾಂಕ್​ ಖರ್ಗೆಯವರು ಆ ಇಲಾಖೆಯ ಸಚಿವರಾಗಿದ್ದರು. ಅವರಿಗೆ ಜವಾಬ್ದಾರಿ ಇತ್ತು. ಈ ಬಗ್ಗೆ ಅವರಿಗೆ ಗೊತ್ತಿರುತ್ತದೆ. ಕೋರ್ಟ್ ತೀರ್ಪು ಕೊಡುವ ಮುನ್ನವೇ ಏಕೆ ನೇಮಕಾತಿ ಆದೇಶ ಕೊಟ್ಟಿದ್ದೀರಿ?. ಈ ಪ್ರಕರಣ ಸಿಬಿಐ ತನಿಖೆಗೆ ಫಿಟ್​ಕೇಸ್ ಎಂದು ಹೈಕೋರ್ಟ್ ಹೇಳಿದೆ ಎಂದು ತಿಳಿಸಿದರು.

ಸದನದಲ್ಲಿ ನಾನಿದ್ದರೆ ನನ್ನ ಸಬ್ಜೆಕ್ಟೇ ಬೇರೆ: ಇದನ್ನು ಅಧಿವೇಶನದ ವೇಳೆ ಚರ್ಚಿಸ ಬಹುದಿತ್ತಲ್ಲಾ ಎಂಬ ಪ್ರಶ್ನೆಗೆ, ಸದನದಲ್ಲಿ ಏನು ಮಾಡಬೇಕು ಅಂತ ಸದನದಲ್ಲಿ ಇರುವವರನ್ನು ಕೇಳಿ‌. ನನ್ನನ್ನು ಕೇಳಿದರೆ ಏನು ಪ್ರಯೋಜನ?. ಸದನದಲ್ಲಿ ನಾನು ಇದ್ದಿದ್ದರೆ ನನ್ನ ಸಬ್ಜೆಕ್ಟ್ ಬೇರೇನೇ ಇತ್ತು. ನನ್ನ ಕರ್ತವ್ಯ ಏನು ಮಾಡಬೇಕು ಅದನ್ನು ಮಾಡುತ್ತೇನೆ. ಮುಂದಿನ ವಾರ ಮತ್ತೊಂದು ವಿಚಾರದ ಬಗ್ಗೆ ಮಾಧ್ಯಮಗೋಷ್ಠಿ ನಡೆಸುತ್ತೇನೆ ಎಂದರು.

ಇವುಗಳನ್ನೂ ಓದಿ: