ETV Bharat / state

ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚು ಪ್ರಯೋಜನಕಾರಿಯಾಗುವಂತೆ ಬಜೆಟ್ ಮಂಡಿಸಿ: ಸಿಎಂಗೆ ರಾಜ್ಯಪಾಲರ ಮನವಿ

ವಿವಿ ಬಗ್ಗೆ ವಿಶೇಷ ಕಾಳಜಿ ವಹಿಸಿ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡಿ ಎಂದು ರಾಜ್ಯಪಾಲರು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.

VVCONFERENCE_GOVERNOR
ಕುಲಪತಿಗಳ ಸಮ್ಮೇಳನ -2026 ರಲ್ಲಿ ಭಾಗಿಯಾದ ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : February 21, 2026 at 8:27 PM IST

5 Min Read
Choose ETV Bharat

ಬೆಂಗಳೂರು: ವಿಶ್ವವಿದ್ಯಾಲಯಗಳು ಯಾವುದೇ ಆದಾಯವನ್ನು ಹೊಂದಿಲ್ಲದ ಕಾರಣ, ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 6 ರಂದು ಮಂಡಿಸುವ ಬಜೆಟ್ ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚು ಪ್ರಯೋಜನಕಾರಿಯಾಗುವಂತೆ ಬಜೆಟ್ ಮಂಡಿಸಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮನವಿ ಮಾಡಿದರು.

ಲೋಕಭವನ, ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ -2026 ರ ಅಧ್ಯಕ್ಷತೆ ವಹಿಸಿ ಮಾತನಾತಡಿದ ಅವರು, ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ -2026ಕ್ಕೆ ಭಾಗವಹಿಸಿರುವುದು ಸಂತಸ ತಂದಿದೆ. ಈ ಬಾರಿಯ ಬಜೆಟ್ ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸುತ್ತೇನೆ. ಸಂಗೀತ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಕರ್ನಾಟಕ ಜನಪದ ವಿಶ್ವವಿದ್ಯಾಲಯ, ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಬೇಕು ಹಾಗೂ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಬಜೆಟ್ ವ್ಯವಸ್ಥೆಯನ್ನು ಕಲ್ಪಿಸುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಿನವಿಡೀ ನಡೆದ ಚರ್ಚೆಗಳು, ಸಲಹೆಗಳು ಮತ್ತು ಫಲಪ್ರದ ಚರ್ಚೆಗಳು ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯು ಹೊಸ ದಿಕ್ಕಿನಲ್ಲಿ ಮುಂದುವರಿಯಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿವೆ. ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸಂಖ್ಯೆಯನ್ನು ಹೇಗೆ ಹೆಚ್ಚಿಸುವುದು ಎಂಬುದು ಅತಿದೊಡ್ಡ ಕಾಳಜಿ ಮತ್ತು ಕಾರ್ಯವಾಗಿರಬೇಕು. ಹೆಚ್ಚಿನ ಶುಲ್ಕವಿದ್ದರೂ ವಿದ್ಯಾರ್ಥಿಗಳು ಖಾಸಗಿ ವಿಶ್ವವಿದ್ಯಾಲಯಗಳತ್ತ ಆಕರ್ಷಿತರಾಗುತ್ತಿರುವುದು ಏಕೆ? ಈ ಸಮಸ್ಯೆಯನ್ನು ಪರಿಹರಿಸಲು, ನಾವು ಎರಡು ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳ ಪ್ರವೇಶ ಮತ್ತು ಪರೀಕ್ಷೆಗಳನ್ನು ನಿಗದಿತ ಸಮಯದೊಳಗೆ ನಡೆಸಿ, ಪರೀಕ್ಷಾ ಫಲಿತಾಂಶಗಳನ್ನು ನಿಗದಿತ ಸಮಯದೊಳಗೆ ಘೋಷಿಸಲು ನಮ್ಮ ವಾರ್ಷಿಕ ಕ್ಯಾಲೆಂಡರ್ ನ್ನು ಸಕಾಲಿಕವಾಗಿ ಅನುಸರಿಸಬೇಕು” ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ಕುಲಪತಿ - ಕುಲಸಚಿವರ ನಡುವೆ ಸಮನ್ವಯದ ಅವಶ್ಯಕತೆ ಇದೆ; ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸಲು ಕುಲಪತಿಗಳು ಮತ್ತು ಕುಲಸಚಿವರ ನಡುವೆ ಉತ್ತಮ ಸಮನ್ವಯದ ಅವಶ್ಯಕತೆಯಿದೆ. ಶೈಕ್ಷಣಿಕ ಸಿಬ್ಬಂದಿಯನ್ನು ಸಕಾಲಿಕವಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಪ್ರಸ್ತುತ ಅವಶ್ಯಕತೆಗಳಿಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ನವೀಕರಿಸುವುದು ಅವಶ್ಯಕ. ವಿದ್ಯಾರ್ಥಿಗಳನ್ನು ಹೆಚ್ಚು ಹೆಚ್ಚು ಉದ್ಯೋಗದೊಂದಿಗೆ ಸಂಪರ್ಕಿಸುವ ಅವಶ್ಯಕತೆಯಿದೆ. ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ಹೊಸ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪ್ರಾರಂಭಿಸುವ ಅವಶ್ಯಕತೆಯಿದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಕ್ಯಾಂಪಸ್ ಪರಿಸರವನ್ನು ಸುಧಾರಣೆಯಾಗಬೇಕಾಗಿದೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ಹೆಚ್ಚು ಹೆಚ್ಚು ಸ್ವಚ್ಛವಾಗಿಡುವ ಅವಶ್ಯಕತೆಯಿದೆ. ಹೆಚ್ಚಿನ ಮರಗಳನ್ನು ನೆಡುವ ಮೂಲಕ ವಿಶ್ವವಿದ್ಯಾಲಯ ಆವರಣದ ಸೌಂದರ್ಯವನ್ನು ಹೆಚ್ಚಿಸುವ ಅವಶ್ಯಕತೆಯಿದೆ. ತಾಯಿಗಾಗಿ ಒಂದು ಮರ ಅಭಿಯಾನವನ್ನು ಸಕ್ರಿಯವಾಗಿ ಜಾರಿಗೆ ತರಬೇಕು. ವಿದ್ಯಾರ್ಥಿಗಳನ್ನು ಕ್ರೀಡಾ ಚಟುವಟಿಕೆಗಳೊಂದಿಗೆ ಸಂಪರ್ಕಿಸುವ ಅವಶ್ಯಕತೆಯಿದೆ, ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಉಪಸ್ಥಿತಿಯನ್ನು ವ್ಯಕ್ತಪಡಿಸಲು ಅಂತಹ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಯುಜಿಸಿ ಮಾರ್ಗಸೂಚಿಗಳನ್ನು ಪಾಲಿಸುವುದು ಅವಶ್ಯಕ: ಭಾರತ ಸರ್ಕಾರ ಮತ್ತು ಯುಜಿಸಿಯ ಮಾರ್ಗಸೂಚಿಗಳನ್ನು ಕಾಲಮಿತಿಯೊಳಗೆ ಸಕ್ರಿಯವಾಗಿ ಪಾಲಿಸುವುದು ಅವಶ್ಯಕ. ವಿಶ್ವವಿದ್ಯಾನಿಲಯದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಬೇಕು, ಈ ವಿಷಯದಲ್ಲಿ ದೊಡ್ಡ ಅಡಚಣೆಯೆಂದರೆ- ವಿಶ್ವವಿದ್ಯಾನಿಲಯದ ನೌಕರರ ನಡುವೆ ವಿವಾದಗಳು, ಕುಲಪತಿ ಮತ್ತು ಸಿಂಡಿಕೇಟ್ ಸದಸ್ಯರ ನಡುವಿನ ವಿವಾದಗಳಾಗಿವೆ. ಈ ವಿವಾದಗಳನ್ನು ತಡೆಯಬೇಕಾದರೆ ಕುಲಪತಿಗಳು ಎಲ್ಲರ ಮಾತನ್ನೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಲಿಸುವ ಮೂಲಕ ಸಮನ್ವಯವನ್ನು ಸೃಷ್ಟಿಸಲು ಪ್ರಯತ್ನಿಸಬೇಕು. ನಿಯಮಗಳನ್ನು ಪಾಲಿಸುವ ಮೂಲಕ ಹಣಕಾಸಿನ ವಿಷಯಗಳಲ್ಲಿ ಪಾರದರ್ಶಕವಾಗಿ ಕೆಲಸ ಮಾಡುವ ಅವಶ್ಯಕತೆಯಿದೆ. ಅನೇಕ ಸಂದರ್ಭಗಳಲ್ಲಿ, ನಾವು ವಿಚಾರಣಾ ಆಯೋಗಗಳನ್ನು ರಚಿಸಬೇಕಾಗುತ್ತದೆ. ಅಂತಹ ಸಂದರ್ಭಗಳು ಉದ್ಭವಿಸುವುದಿಲ್ಲ ಎಂಬುದು ಆದರ್ಶ ಪರಿಸ್ಥಿತಿ ಎಂದು ಹೇಳಿದರು.

ಇಂದಿನ ಕಾಲದಲ್ಲಿ, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿ ಇಬ್ಬರೂ ಪ್ರಯೋಜನ ಪಡೆಯುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಮೇಲೆ ಹೇಳಿರುವಂತಹ ಕ್ರಮಗಳನ್ನು ಸಕ್ರಿಯವಾಗಿ ಅಳವಡಿಸಿಕೊಂಡರೆ, ವಿಶ್ವವಿದ್ಯಾನಿಲಯದ ವಿಶ್ವಾಸಾರ್ಹತೆ ಖಂಡಿತವಾಗಿಯೂ ಹೆಚ್ಚಾಗುತ್ತದೆ ಮತ್ತು ರಾಷ್ಟ್ರಮಟ್ಟದಲ್ಲಿ ಅದರ ಶ್ರೇಯಾಂಕವೂ ಹೆಚ್ಚಾಗುತ್ತದೆ ಎಂಬ ವಿಶ್ವಾಸವಿದೆ. ವಿಶ್ವವಿದ್ಯಾಲಯಗಳ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಶೈಕ್ಷಣಿಕ ಸಿಬ್ಬಂದಿಯ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಬಹಳ ಸಮಯದಿಂದ ಖಾಲಿ ಇವೆ. ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಂಚಿಕೆಯ ಕೊರತೆಯಿದೆ. ಭಾರತ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಮತ್ತು ಕೈಗಾರಿಕೆಗಳ ಸಿಎಸ್ಆರ್ ನಿಧಿಯನ್ನು ಬಳಸಿಕೊಳ್ಳುವ ಮೂಲಕ ಹಂಚಿಕೆಯಲ್ಲಿನ ಕೊರತೆಯ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಬಹುದು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರವು ನೆರವಾಗಬೇಕು ಎಂದು ತಿಳಿಸಿದರು.

ಭಾರತೀಯ ಸಮವಸ್ತ್ರಗಳಿಗೆ ಆದ್ಯತೆ ನೀಡಿ: ರಾಜ್ಯದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ನಡೆಯಲಿರುವ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಏಕರೂಪತೆಯಲ್ಲಿ ಭಾರತೀಯ ಸಂಪ್ರದಾಯದ ಸಮವಸ್ತ್ರ ಧರಿಸಲು ಆದ್ಯತೆ ನೀಡಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದರು.

ರಾಜ್ಯದ ಎಲ್ಲಾ ವಿವಿಗಳಿಗೆ ಆರ್ಥಿಕ ಮುಗ್ಗಟ್ಟು- ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ “ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಅದಲ್ಲದೇ, ಪಿಂಚಣಿ ಸಮಸ್ಯೆ ಕುರಿತು ಪ್ರಸ್ತಾಪಿಸಿದ್ದಾರೆ. ಈ ಕುರಿತು ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿದ್ದು, ಈ ಸಮಸ್ಯೆ ಬಗೆಹರಿಸಲು ಸಮಿತಿ ರಚಿಸಲು ಸಲಹೆ ನೀಡಿದ್ದೇನೆ. ಕುಲಪತಿ ಯುವಜನತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ನಿಗಾವಹಿಸಬೇಕು. ಪದವಿ ಪ್ರಮಾಣ ಪತ್ರ ನೀಡುವುದು ಶಿಕ್ಷಣವಾಗುವುದಿಲ್ಲ. ಸಮಾಜದಲ್ಲಿ ಉತ್ತಮ ನಾಗಕರಿಕರನ್ನಾಗಿ ಮಾಡುವುದು ನಿಜವಾದ ಶಿಕ್ಷಣ. ಯುವಜನತೆಯಲ್ಲಿ ವೈಜ್ಞಾನಿಕ ಮತ್ತು ವೈಚಾರಿಕತೆ ಮನಸ್ಥಿತಿಯನ್ನು ಬೆಳೆಸಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಶಿಕ್ಷಣ ನೀತಿ: ಎಲ್ಲರನ್ನೂ ಒಳಗೊಳ್ಳುವಂತಹ ಕರ್ನಾಟಕ ರಾಜ್ಯ ಶಿಕ್ಷಣ ನೀತಿ (2025) ಯನ್ನು ನಾವು ರೂಪಿಸಿದ್ದೇವೆ. ಯುಜಿಸಿಯ ಚೇರ್‌ಮೆನ್ ಆಗಿದ್ದ ಪ್ರೊ ಸುಖದೇವ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಇದಕ್ಕಾಗಿ 2023ರ ಅಕ್ಟೋಬರ್‌ನಲ್ಲಿ ನಾವು ಸಮಿತಿಯನ್ನು ರಚಿಸಿದ್ದೆವು. ಸಮಿತಿಯು ಸಮಗ್ರವಾದ ಶಿಕ್ಷಣ ನೀತಿಯನ್ನು ರೂಪಿಸಿದೆ. ನಮ್ಮ ಸರ್ಕಾರವು ಭವಿಷ್ಯಕ್ಕೆ ಹೊಂದುವಂತಹ, ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ನಾವು ಸಿದ್ಧರಾಗಬೇಕಾಗಿದೆ. ಈ ದೃಷ್ಟಿಕೋನಕ್ಕೆ ಸ್ಪಷ್ಟ ನಿರ್ದೇಶನ ನೀಡುವ ಸಲುವಾಗಿ, ಆಯೋಗದ ಮಧ್ಯಂತರ ಶಿಫಾರಸುಗಳನ್ನು 2024-25 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತಂದಿದ್ದೇವೆ. ಉಳಿದ ಶಿಫಾರಸ್ಸುಗಳನ್ನು ಕೂಡಲೇ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.

2000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಪ್ರಕ್ರಿಯೆ ಜಾರಿಯಲ್ಲಿದೆ; ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಬಾಲಕರಿಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಹುಡುಗಿಯರು 51% ರಷ್ಟಿದ್ದಾರೆ ಹಾಗೂ ಸುಮಾರು 81% ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದವರು. ಕಳೆದ ಎರಡು ದಶಕಗಳಿಂದ ಕಾಲ ಕಾಲಕ್ಕೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ನೇಮಕಾತಿ ಸರಿಯಾಗಿ ಆಗದಿರುವುದರಿಂದ ಶಿಕ್ಷಕರ ಕೊರತೆ ಕಾಡುತ್ತಿದೆ. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಶೇಕಡಾ 60-70 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಿರುವುದು ಸರ್ಕಾರದ ಗಮನದಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಸರ್ಕಾರಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದೇವೆ ಎಂದರು.

ನಮ್ಮ ಪಠ್ಯಕ್ರಮವು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿರುವಂತೆ ಖಚಿತಪಡಿಸಿಕೊಳ್ಳುವುದು ಇಲ್ಲಿ ಉಪಸ್ಥಿತರಿರುವ ಎಲ್ಲಾ ಉಪಕುಲಪತಿಗಳು ಮತ್ತು ಶೈಕ್ಷಣಿಕ ತಜ್ಞರ ಜವಾಬ್ದಾರಿಯಾಗಿದೆ. ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಯಂತ್ರ ಕಲಿಕೆ ಮುಂತಾದ ಕ್ಷೇತ್ರಗಳನ್ನು ಪ್ರಮುಖ ಶೈಕ್ಷಣಿಕ ಚೌಕಟ್ಟಿನಲ್ಲಿ ಸೇರಿಸುವುದು ಪ್ರಸ್ತುತ ಒಂದು ಆಯ್ಕೆಯಾಗಿ ಉಳಿದಿಲ್ಲ, ಬದಲಿಗೆ ಅವಶ್ಯಕತೆಯಾಗಿದೆ. ಇಂದು ಉನ್ನತ ಶಿಕ್ಷಣವು ತಾಂತ್ರಿಕ ಬದಲಾವಣೆ ಮತ್ತು ಜಾಗತಿಕ ಸ್ಪರ್ಧೆಯ ಮಟ್ಟದಲ್ಲಿದೆ. ನಮ್ಮ ಸಂಸ್ಥೆಗಳು ಕೇವಲ ಪದವಿ ನೀಡುವುದನ್ನು ಗುರಿಯನ್ನಾಗಿಟ್ಟುಕೊಳ್ಳಬಾರದು. ಕಲಿಕೆಯಲ್ಲಿ ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ ಮತ್ತು ಉದ್ಯೋಗಾವಕಾಶವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು, ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಬೆಂಬಲದೊಂದಿಗೆ ರೂ. 2,500 ಕೋಟಿ ವೆಚ್ಚದ "ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ"ಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.

ಇದನ್ನು ಓದಿ:

ಬಿಜೆಪಿ - ಜೆಡಿಎಸ್​ ಸೇರಿ ಚುನಾವಣೆ ಎದುರಿಸಿದರೆ ತುಮಕೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿಯೂ ಗೆಲುವು: ನಿಖಿಲ್ ಕುಮಾರಸ್ವಾಮಿ

ಸರ್ಕಾರಿ ನೌಕರರು ವರ್ಗಾವಣೆ ಏಜೆಂಟ್​ಗಳ ಹಾವಳಿಗೆ ಬಲಿಯಾಗಬಾರದು: ಸಿಎಂ ಸಿದ್ದರಾಮಯ್ಯ

ಪಂಚ ಗ್ಯಾರಂಟಿಯಿಂದ ಅಭಿವೃದ್ಧಿ ಆಗಿದೆಯೇ?; ತಜ್ಞರಿಂದ ಸಮೀಕ್ಷೆಗೆ ವಿಧಾನಪರಿಷತ್​​​ ಸದಸ್ಯ ವಿಶ್ವನಾಥ್​​ ಒತ್ತಾಯ

ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಕೋರೆ ಪುತ್ರ ಅಮಿತ್ ಆಯ್ಕೆ