ದಾಳಿಂಬೆಗೆ ಚಳಿ, ಶೀತ ಬಾಧೆ: ಮೂತಿ, ಕೊಳೆ ರೋಗದಿಂದ ಬೆಳೆಗಾರರಿಗೆ ಅಪಾರ ನಷ್ಟ
ದಾಳಿಂಬೆ ಬೆಳೆಗೆ ಮೂತಿ ರೋಗ, ಕೊಳೆ ರೋಗ ಬಂದಿರುವುದರಿಂದ ದಾವಣಗೆರೆ ಜಿಲ್ಲೆಯ ರೈತರು ನಷ್ಟ ಅನುಭವಿಸುತ್ತಿದ್ದಾರೆ.

Published : January 9, 2026 at 4:30 PM IST
|Updated : January 9, 2026 at 4:49 PM IST
ದಾವಣಗೆರೆ: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ದಾಳಿಂಬೆ ಬೆಳೆ ನೆಲಕಚ್ಚುತ್ತಿದೆ. ತೀವ್ರ ಚಳಿ ಹಾಗೂ ಶೀತ ಬಾಧೆಯಿಂದಾಗಿ ಮೂತಿ ರೋಗ ಉಲ್ಬಣಗೊಂಡಿದೆ. ಇದರಿಂದಾಗಿ ಬೆಳೆಗಾರರು ನಲುಗಿ ಹೋಗಿದ್ದಾರೆ. ಅಲ್ಲದೇ, ಲಕ್ಷಾಂತರ ರೂಪಾಯಿ ಲಾಭ ಗಳಿಸಬೇಕಿದ್ದ ರೈತರೀಗ ಸಾಲದ ಸುಳಿಗೆ ಸಿಲುಕಿದ್ದಾರೆ.
ರೈತ ಟಿ.ಎಸ್.ಸ್ವಾಮಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, "ಹವಾಮಾನ ವೈಪರೀತ್ಯದಿಂದಾಗಿ ಹೂವು ಉದುರುತ್ತಿದೆ. ಚಿಗುರು ಜಾಸ್ತಿ ಬರುತ್ತಿದೆ. ಕೂಲಿ, ಔಷಧ ವೆಚ್ಚವೆಲ್ಲವೂ ವ್ಯರ್ಥವಾಗುತ್ತಿದೆ. ಒಂದು ಗಿಡದಲ್ಲಿ 150-200ಕ್ಕೂ ಹೆಚ್ಚು ಹೂವುಗಳಿದ್ದವು. ಎಲ್ಲವೂ ಮೊನ್ನೆ ಮಳೆ, ಚಳಿಗೆ ಉದುರಿ ಹೋಗಿವೆ. ಇದೀಗ ಮುಂದಿನ ಬೆಳೆಗೆ ನಾವು ರೆಡಿ ಮಾಡಬೇಕಿದೆ. ಮೊದಲೆಲ್ಲ ಒಳ್ಳೆಯ ಬೆಳೆ ಬೆಳೆದಿದ್ದೆವು. ನಾಲ್ಕೈದು ವರ್ಷದಿಂದ ಒಂದು ರೂಪಾಯಿ ಲಾಭವನ್ನೂ ಪಡೆಯಲು ಆಗ್ತಿಲ್ಲ" ಎಂದು ಸಂಕಷ್ಟ ತೋಡಿಕೊಂಡರು.
"ಮೂತಿ ರೋಗ, ಕೊಳೆ ರೋಗ, ಕಾಯಿ ಮೇಲೆ ಚುಕ್ಕಿ ಆಗುವುದೆಲ್ಲವೂ ಆಗ್ತಿದೆ. ಮೂತಿ ರೋಗ ಬಂದು ಕಾಯಿ ಬೀಜ ಕೆಟ್ಟು ಹೋಗುತ್ತಿದೆ. ಡ್ರೈಬ್ಯಾಕ್ನಿಂದಾಗಿ ವರ್ಷಕ್ಕೆ 60-70 ಗಿಡಗಳು ನೆಲಕಚ್ಚುತ್ತಿವೆ. ಇಲ್ಲಿಯತನಕ ತೋಟದಲ್ಲಿ ಒಟ್ಟು 200 - 300 ಗಿಡಗಳು ಹೋಗಿವೆ. ಮೂರು ಎಕರೆಯಲ್ಲಿ 1,200 ಗಿಡಗಳಿವೆ. ಗಿಡದಲ್ಲಿ ಎರಡು ಮೂರು ಹೂವುಗಳಿವೆ. ಈಗ ಮೊದಲಿನಷ್ಟೇ ಔಷಧ ಹೊಡೆಯಬೇಕು. ಈ ಬಾರಿ ಬೆಳೆ ಕೈ ಸೇರಿದ್ದರೆ 25 ಲಕ್ಷ ರೂ ಲಾಭ ಆಗುವ ನಿರೀಕ್ಷೆ ಇತ್ತು" ಎಂದು ತಿಳಿಸಿದರು.
"ಬಹಳ ರೈತರು ದಾಳಿಂಬೆ ಬೆಳೆ ಹಾಕಿದ್ದರು. ಎಲ್ಲವೂ ಹಾಳಾಗಿ ಹೋಗಿದೆ. ಜಮೀನಿಗೆ ಯಾವೊಬ್ಬ ಅಧಿಕಾರಿಗಳೂ ಬಂದು ನೋಡ್ತಿಲ್ಲ. ಬೆಳೆಗೆ ರೋಗ ಬಂದಿರುವುದರಿಂದಾಗಿ ನಮ್ಮ ಪರಿಸ್ಥಿತಿ ಹೇಳತೀರದು. ನಮ್ಮ ಭಾಗದಲ್ಲಿ ನಾಲ್ಕರಿಂದ ಐದು ಲಕ್ಷ ದಾಳಿಂಬೆ ಹಾಕಿದ್ದಾರೆ. ವೈರಸ್ ಆಗಿ ಹೂವು ಉದುರಿ ಹೋಗಿವೆ. ಔಷಧ ಅಂಗಡಿಗೆ ತೆರಳಿ ಔಷಧ ತಂದು ಸಿಂಪಡಣೆ ಮಾಡಿದ್ರೂ ಪ್ರಯೋಜನ ಆಗಿಲ್ಲ. ರೈತರ ಕಷ್ಟ ಬಾರಿ ಕಷ್ಟವಾಗಿದೆ" ಎಂದು ಮತ್ತೊಬ್ಬ ರೈತ ಶಿವಣ್ಣ ಹೇಳಿದರು.

ಈ ಕುರಿತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಜಿ.ಸಿ. ಅವರು ಪ್ರತಿಕ್ರಿಯಿಸಿದ್ದು, "ಈ ಶೀತಮಯ ವಾತಾವರಣದಲ್ಲಿ ದಾಳಿಂಬೆಗೆ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ. ಮೂತಿ ರೋಗ ಕೂಡ ಸರ್ವೇಸಾಮಾನ್ಯ. ಈ ವಾತಾವರಣದಲ್ಲಿ ಹೂವು ಕಟ್ಟುವುದಿರಲಿ, ಕಾಯಿ ಕೂಡಾ ಕಟ್ಟಲ್ಲ. ದಾಳಿಂಬೆ ಮೇಲೆ ಚುಕ್ಕಿ ಇದ್ರೆ ಬೆಲೆ ಕೂಡ ಕಡಿಮೆ ಆಗಲಿದೆ. ಶೀತದಿಂದ ಫಸಲು ಕಡಿಮೆಯಾಗಲಿದೆ. ರೈತರು ಈ ವಾತಾವರಣದಲ್ಲಿ ದಾಳಿಂಬೆ ಬೆಳೆಯುವ ಮುನ್ನ ಯೋಚನೆ ಮಾಡಬೇಕಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 250 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತದೆ. ಅದರಲ್ಲೂ ಜಗಳೂರಿನಲ್ಲಿ ಶೇ.80ರಷ್ಟು ಬೆಳೆ ಬೆಳೆಯಲಾಗುತ್ತದೆ. ಉಳಿದ ಶೇ.20 ಮಾಯಕೊಂಡದಲ್ಲಿ ಬೆಳೆಯುತ್ತಾರೆ. ಬ್ಯಾಕ್ಟೀರಿಯಾಗಳ ಕಾರಣದಿಂದಾಗಿ ದಾಳಿಂಬೆಗೆ ಮೂತಿರೋಗ ಬರಲಿದೆ. ರೈತರು ತಕ್ಷಣವೇ ಹತ್ತಿರದ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ, ಮಾಹಿತಿ ಕಲೆ ಹಾಕಬೇಕು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಡಿಕೆಗೆ ಕಾಡುತ್ತಿರುವ ಕೊಳೆರೋಗ, ಎಲೆಚುಕ್ಕೆ ರೋಗಗಳ ಹತೋಟಿಗೆ ಸಲಹೆಗಳು ಇಲ್ಲಿವೆ

