ETV Bharat / state

ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಘಟಾನುಘಟಿ ನಾಯಕರ ಪೈಪೋಟಿ ಯಾಕೆ?; ಇಲ್ಲಿದೆ ಈಟಿವಿ ಭಾರತದ ವಿಸ್ತೃತ ವರದಿ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸದ್ಯ ಹಾಲಿ - ಮಾಜಿ ಶಾಸಕರ ದಂಡೇ ದುಂಬಾಲು ಬಿದ್ದಿದೆ.

Belgaum District Central Cooperative Bank
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ETV Bharat)
author img

By ETV Bharat Karnataka Team

Published : October 14, 2025 at 4:45 PM IST

5 Min Read
Choose ETV Bharat

ಬೆಳಗಾವಿ : ಅದೊಂದು ಕಾಲ ಇತ್ತು, ಜಿಲ್ಲೆಯ ಪ್ರಭಾವಿ ನಾಯಕರ ಶಿಷ್ಯರು, ಆಪ್ತರು, ದ್ವಿತೀಯ ಸಾಲಿನ ನಾಯಕರು ಮತ್ತು ಕಾರ್ಯಕರ್ತರು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಆಗುತ್ತಿದ್ದರು. ಆದರೆ, ಸದ್ಯ ಹಾಲಿ - ಮಾಜಿ ಶಾಸಕರ ದಂಡೇ ಅಧಿಕಾರಕ್ಕಾಗಿ ದುಂಬಾಲು ಬಿದ್ದಿದೆ. ಅದರಲ್ಲೂ ಪ್ರಭಾವಿ ಕುಟುಂಬಗಳೂ ಪೈಪೋಟಿಗೆ ಬಿದ್ದಿದ್ದು, ಈ ಕುರಿತು ಈಟಿವಿ ಭಾರತದ ವಿಸ್ತೃತ ವರದಿ ಇಲ್ಲಿದೆ.

ಮಾಜಿ ಇದ್ದವರು ಹಾಲಿ ಆಗಲು ಇದು ಸಹಕಾರಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ಜಿಲ್ಲಾ ರಾಜಕಾರಣದ ಕೇಂದ್ರಬಿಂದುವಾಗಿದೆ. ಜಿಲ್ಲೆಯ ಘಟಾನುಘಟಿ ನಾಯಕರಿಗೆ ರಾಜಕೀಯ ನೆಲೆ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಕೂಡ ಈ ಬ್ಯಾಂಕಿಗೆ ಇದೆ. ಅಲ್ಲದೇ ರಾಜ್ಯದಲ್ಲಿಯೇ ನಂ.1 ಸ್ಥಾನ ಹೊಂದಿದೆ. ಇದರಲ್ಲಿ ಹಿಡಿತ ಸಾಧಿಸಿದರೆ ಇಡೀ ಜಿಲ್ಲೆಯಲ್ಲಿ ಪ್ರಭಾವ ಹೊಂದಬಹುದು. ನಿರ್ದೇಶಕರಾಗಿ ಆಯ್ಕೆ ಆದವರು ಮುಂದೆ ಶಾಸಕರಾಗಬಹುದು. ಮಾಜಿಗಳು ಮತ್ತೆ ಮುಂದೆ ಎಂಎಲ್ಎಗಳಾಗಿ ಆಗಿ ಆಯ್ಕೆ ಆಗಬಹುದು ಎಂಬ ಲೆಕ್ಕಾಚಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳದ್ದು ಮತ್ತು ಅವಿರೋಧವಾಗಿ ಆಯ್ಕೆ ಆದವರದ್ದು.

ರಾಜಕೀಯ ವಿಶ್ಲೇಷಕ ಅಶೋಕ ಚಂದರಗಿ ಅವರು ಮಾತನಾಡಿದರು (ETV Bharat)

ಮಂತ್ರಿಗಳು, ಡಿಸಿಎಂ ಆದವರಿಂದಲೂ ಪ್ರಯತ್ನ: ಜಿಲ್ಲೆಯಲ್ಲಿ ಅನೇಕ ರಾಜಕಾರಣಿಗಳು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರ ರಂಗದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದವರೇ ಹೆಚ್ಚು. ಬಳಿಕ ಶಾಸಕ, ಎಂಪಿ, ಮಂತ್ರಿ, ಡಿಸಿಎಂ ಆದವರು ಅನೇಕರು. ಅಂತಹ ತಾಕತ್ತು ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಇರುವುದು ವಿಶೇಷ.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೇಲೆಯೇ ಲಕ್ಷ್ಮಣ ಸವದಿ ಶಾಸಕ, ಮಂತ್ರಿ ಮತ್ತು ಡಿಸಿಎಂ ಆಗಿದ್ದರು. ಅದೇ ರೀತಿ ಸತೀಶ್ ಜಾರಕಿಹೊಳಿ ಶಾಸಕ ಮತ್ತು ಮಂತ್ರಿ ಸ್ಥಾನ ಪಡೆದಿದ್ದಾರೆ. ಇನ್ನು ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸಂಸದರಾಗಿದ್ದರು. ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಗಣೇಶ ಹುಕ್ಕೇರಿ ಸೇರಿ‌ ಮೊದಲಾದವರು ಶಾಸಕರಾಗಿದ್ದರು. ಹಾಗಾಗಿ, ಡಿಸಿಸಿ ನಿರ್ದೇಶಕ ಸ್ಥಾನ ಮುಂದಿನ ಎಲ್ಲ ವಿಧದ ಚುನಾವಣೆಗಳಿಗೆ ಒಂದು ಪೀಠಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Satish Jarakiholi
ಸತೀಶ್ ಜಾರಕಿಹೊಳಿ (ETV Bharat)

3 ಹಾಲಿ ಶಾಸಕರು, ಇಬ್ಬರು ಮಾಜಿ ಎಂಎಲ್​ಎಗಳು ಅವಿರೋಧವಾಗಿ ಆಯ್ಕೆ: ಈಗಾಗಲೇ ಮೂವರು ಹಾಲಿ ಶಾಸಕರು, ಓರ್ವ ಹಾಲಿ ಎಂಎಲ್ಸಿ ಹಾಗೂ ಓರ್ವ ಮಾಜಿ ಶಾಸಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಕಣದಲ್ಲಿ ಓರ್ವ ಹಾಲಿ ಶಾಸಕ, ಇಬ್ಬರು ಮಾಜಿ ಸಂಸದರು, ಮೂವರು ಮಾಜಿ ಶಾಸಕರು ಇದ್ದಾರೆ.

ಕಣದಲ್ಲಿರುವ ಹಾಲಿ, ಮಾಜಿಗಳು ಯಾರ್ಯಾರು? : ಕಳೆದ 20 ವರ್ಷಗಳಲ್ಲಿ ಶಾಸಕರು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವುದು ಹೆಚ್ಚಾಗುತ್ತಿದೆ. ಈ ಬಾರಿಯ ಕಣದಲ್ಲಿ ಅಥಣಿ ತಾಲೂಕಿನಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಠಳ್ಳಿ ಸ್ಪರ್ಧಿಸಿದ್ದಾರೆ. ಇನ್ನು ಹುಕ್ಕೇರಿಯಿಂದ ಮಾಜಿ ಸಂಸದ ಮತ್ತು‌ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ, ನಿಪ್ಪಾಣಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಪರಾಜಿತ ಎಂಎಲ್ಎ ಅಭ್ಯರ್ಥಿ ಉತ್ತಮ ಪಾಟೀಲ, ಬೈಲಹೊಂಗಲದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಕಿತ್ತೂರಿನಿಂದ ಮಾಜಿ ಸಚಿವ ದಿ.ಡಿ.ಬಿ. ಇನಾಮದಾರ್ ಪುತ್ರ ವಿಕ್ರಮ್ ಇನಾಮದಾರ್ ವಿರುದ್ಧ ಹಾಲಿ ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ ನಾನಾಸಾಹೇಬ ಪಾಟೀಲ ಕಣದಲ್ಲಿದ್ದಾರೆ. ಇನ್ನು ರಾಮದುರ್ಗದಲ್ಲಿ ಹಾಲಿ‌ ನಿರ್ದೇಶಕ ಎಸ್. ಎಸ್.ಢವಣ ವಿರುದ್ಧ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಸ್ಪರ್ಧಿಸಿದ್ದಾರೆ.

Ramesh Jarkiholi
ರಮೇಶ್​ ಜಾರಕಿಹೊಳಿ (ETV Bharat)

ಅವಿರೋಧವಾಗಿ ಆಯ್ಕೆಯಾದವರು : ಇದೇ ಮೊದಲ ಬಾರಿ ಡಿಸಿಸಿ ಬ್ಯಾಂಕಿಗೆ ಸ್ಪರ್ಧಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ, ಗೋಕಾಕಿನಿಂದ ಶಾಸಕ ರಮೇಶ ಜಾರಕಿಹೊಳಿ ಪುತ್ರ ಅಮರನಾಥ್ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಇತರ ಕ್ಷೇತ್ರದಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಚಿಕ್ಕೋಡಿಯಿಂದ ಹಿರಿಯ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಪುತ್ರ ಶಾಸಕ ಗಣೇಶ ಹುಕ್ಕೇರಿ, ಯರಗಟ್ಟಿ ತಾಲೂಕಿನಿಂದ ಸವದತ್ತಿ ಶಾಸಕ‌ ವಿಶ್ವಾಸ ವೈದ್ಯ, ಸವದತ್ತಿಯಿಂದ ಮಾಜಿ ಶಾಸಕ ರಾಜಣ್ಣ ಮಾಮನಿ ಸಹೋದರ ರಾಜಣ್ಣ ಮಾಮನಿ, ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ.

Minister Lakshmi Hebbalkar
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat)

ರಾಜಕೀಯ ಸಂಘರ್ಷ ಕಾರಣ : ಈ ಕುರಿತು ಈಟಿವಿ ಭಾರತದ ಜೊತೆಗೆ ರಾಜಕೀಯ ವಿಶ್ಲೇಷಕ ಅಶೋಕ ಚಂದರಗಿ ಅವರು ಮಾತನಾಡಿ, 'ಕೆಎಂಎಫ್ ರಾಜ್ಯಾಧ್ಯಕ್ಷ ಸ್ಥಾನ ಸೇರಿ ವಿವಿಧ ರಾಜ್ಯ ಮಟ್ಟದ ಸಂಸ್ಥೆಗಳ ಚುನಾವಣೆಗಿಂತ ಹೆಚ್ಚು ಪ್ರಚಾರ ಪಡೆದಿದೆ. ಇದಕ್ಕೆ ಇಲ್ಲಿನ ಪ್ರತಿಷ್ಠಿತ ಕುಟುಂಬಗಳ ನಡುವಿನ ರಾಜಕೀಯ ಸಂಘರ್ಷವೇ ಕಾರಣ. ಕಳೆದ 40 ವರ್ಷದ ನನ್ನ ಅನುಭವದಲ್ಲಿ ಇಂಥ ಚುನಾವಣೆ ನಾನು ನೋಡಿಲ್ಲ. 1980ರ ದಶಕದಲ್ಲಿ ರಾಯಬಾಗ ಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಸಚಿವ ವಸಂತರಾವ ಪಾಟೀಲ, ಮಾಜಿ ಸಚಿವ ಎ. ಬಿ. ಪಾಟೀಲರ ತಂದೆ ಅಮ್ಮಿನಭಾವಿಯ ಬಸಗೌಡ ಪಾಟೀಲ, ಮಾಜಿ ಸಚಿವ ರಾಮಭಾವು ಪೋತದಾರ ಈ ಮೂವರ ನಡುವೆ ರಾಜಕಾರಣ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಎಲ್ಲಿಯೂ ಸಭ್ಯತೆ ಮೀರುತ್ತಿರಲಿಲ್ಲ. ಘನತೆ ಮತ್ತು ಗೌರವದಿಂದ ಚುನಾವಣೆ ಮಾಡುತ್ತಿದ್ದರು. ಹಣದ ಹೊಳೆ, ಅಧಿಕಾರದ ದರ್ಪ ಇರುತ್ತಿರಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲರೂ ಅಭಿವೃದ್ಧಿಯತ್ತ ಮುಖ ಮಾಡುತ್ತಿದ್ದರು. ಅವತ್ತಿನ ನಾಯಕರು ತಮ್ಮ ಬೆಂಬಲಿಗರನ್ನು, ಸಹಕಾರಿ ರಂಗದಲ್ಲಿ ಕೆಲಸ ಮಾಡಿದವರನ್ನು ನಿರ್ದೇಶಕರನ್ನಾಗಿ ಆರಿಸಿ ತರುತ್ತಿದ್ದರು. ಇದರಲ್ಲಿ ಹಿರಿಯರೇ ಇರುತ್ತಿದ್ದರು. ಇವತ್ತು ಘಟಾನುಘಟಿ ಶಾಸಕರು ಮತ್ತು ಅವರ ಕುಟುಂಬದವರು ಚುನಾವಣೆಗೆ ನಿಂತಿರುವುದು ಅತ್ಯಂತ ಖೇದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Balachandra Jarakiholi
ಬಾಲಚಂದ್ರ ಜಾರಕಿಹೊಳಿ (ETV Bharat)

ಬೆಂಬಲಿಗರೇ ಪ್ರತಿಸ್ಪರ್ಧಿ ಆಗುವ ಭಯ: ತಮ್ಮ ಬೆಂಬಲಿಗರನ್ನು ಡಿಸಿಸಿಗೆ ನಿಲ್ಲಿಸಿದರೆ ಎಲ್ಲಿ ಅವರೇ ನಾಳೆ ನಮಗೆ ಪ್ರತಿಸ್ಪರ್ಧಿ ಆಗುತ್ತಾರೆ ಎನ್ನುವ ಆತಂಕದಲ್ಲಿ ಬಹಳಷ್ಟು ಶಾಸಕರು ಮತ್ತು ಕುಟುಂಬಸ್ಥರು ಸ್ವತಃ ತಾವೇ ಡಿಸಿಸಿ ಚುನಾವಣಾ ಅಖಾಡಕ್ಕೆ ಧುಮಿಕಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ 8 ಸಾವಿರ ಕೋಟಿ ಹಣ ಇದೆ. ಇವರೆಲ್ಲ ಸಕ್ಕರೆ ಕಾರ್ಖಾನೆ ಸೇರಿ ತಮ್ಮ ಸಂಸ್ಥೆಗಳಿಗೆ ಸಾಲದ ರೂಪದಲ್ಲಿ ಹಣ ಕೊಡಿಸಲು ಈ ರೀತಿ ಕುಸ್ತಿ ಹಿಡಿದಿದ್ದಾರೆ. ಹುಲಿ, ಕರಡಿ ಎಲ್ಲ ಒಂದೇ ಬೋನಿನಲ್ಲಿ ಬೀಳುತ್ತಿದ್ದು, ಈ ಅಧಿಕಾರ ಸುಗಮವಾಗಿ ನಡೆಯುವ ಸಂಶಯ ವ್ಯಕ್ತವಾಗಿದೆ‌. ಈಗಾಗಲೇ ಆಡಳಿತ, ವಿರೋಧ ಪಕ್ಷಗಳು ಎಂದು ಬಿಂಬಿಸಲಾಗುತ್ತಿದೆ. ಜಿದ್ದಾಜಿದ್ದಿ ಏರ್ಪಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. 50 ಲಕ್ಷ ರೈತರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ಬ್ಯಾಂಕ್​ಗೆ ಅವಲಂಬಿತರಾಗಿದ್ದಾರೆ. ಹಾಗಾಗಿ, ಬಹಳ ಎಚ್ಚರಿಕೆಯಿಂದ ಬ್ಯಾಂಕ್ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Lakshmana Savadi
ಲಕ್ಷಣ ಸವದಿ (ETV Bharat)

2028ರ ಚುನಾವಣೆ ಮೇಲೆ ಬೀರುತ್ತೆ ಪರಿಣಾಮ : ಪ್ರಬಲ ರಾಜಕೀಯ ಕುಟುಂಬಗಳು ತಮ್ಮ ಬೆಂಬಲಿಗರನ್ನು ನಿಲ್ಲಿಸಿದ್ದರೆ ಇಷ್ಟೊಂದು ಸುದ್ದಿ ಆಗುತ್ತಿರಲಿಲ್ಲ. ಆದರೆ, ತಾವೇ ಸ್ವತಃ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಕಣ ರಂಗೇರಿ ಇಡೀ ರಾಜ್ಯಾದ್ಯಂತ ಇದು ಗಮನಸೆಳೆಯುವಂತಾಗಿದೆ. ಹಾಗಾಗಿ, ಇಡೀ ರಾಜ್ಯದಲ್ಲಿ ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಕೂಡ ಇಷ್ಟೊಂದು ಪ್ರಚಾರ ಪಡೆದ ಉದಾಹರಣೆ ಇಲ್ಲ. ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆ 2028ರ ವಿಧಾನಸಭೆ ಚುನಾವಣೆಯ ಮೇಲೆ ಅಲ್ಪ ಸ್ವಲ್ಪ ಪರಿಣಾಮ ಬೀರುವುದು ನಿಶ್ಚಿತ. ಇದು ದಿಕ್ಸೂಚಿ ಆದರೂ ಅಚ್ಚರಿಪಡಬೇಕಿಲ್ಲ ಎಂದು ವಿಶ್ಲೇಷಿಸಿದರು.

Ramesh Katti
ರಮೇಶ್ ಕತ್ತಿ (ETV Bharat)

ವೈಯಕ್ತಿಕ‌ ನಿಲುವು ಬದಿಗಿಡಿ : ಬ್ಯಾಂಕಿನಲ್ಲಿ ಠೇವಣಿ ಹಣ ಇಟ್ಟವರು ಮತ್ತು ರೈತರ ಹಿತದೃಷ್ಟಿಯಿಂದ ಪ್ರಬುದ್ಧ ರಾಜಕಾರಣಿಗಳು ಚಿಂತನೆ ಮಾಡಬೇಕು. ಹೇಗೋ ಆರಿಸಿ ಬಂದಿದ್ದೇವೆ. ಹೇಗೋ ಆಡಳಿತ ನಡೆಸುತ್ತೇವೆ ಎನ್ನುವ ಮನೋಭಾವನೆ ಇರಬಾರದು. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ, ಟ್ರ್ಯಾಕ್ಟರ್, ಕೃಷಿ ಉಪಕರಣಗಳ ಖರೀದಿ ಸೇರಿ ಮತ್ತಿತರ ಸಾಲ ಸೌಲಭ್ಯ ನೀಡಲಾಗುತ್ತದೆ. ಆದ್ದರಿಂದ ಈ ಎರಡು ತಿಂಗಳಿನಿಂದ ನಡೆಯುತ್ತಿರುವ ರಾಜಕೀಯ ಜಟಾಪಟಿ, ನಾಳೆ ಚುನಾವಣೆ ಮುಗಿದು ಆಡಳಿತ ಮಂಡಳಿ ರಚನೆ ಆದಾಗ ಬ್ಯಾಂಕಿನಲ್ಲೂ ಮುಂದುವರಿದರೆ ಬ್ಯಾಂಕ್ ಸುಲಲಿತವಾಗಿ ನಡೆಯುತ್ತಾ ಎಂಬ ಕಳವಳ ನನ್ನದಾಗಿದೆ. ಬಿಜೆಪಿ, ಕಾಂಗ್ರೆಸ್ ಎಲ್ಲಾ ಪಕ್ಷದವರು ಇದರಲ್ಲಿದ್ದಾರೆ. 10 ರೂ. ವ್ಯರ್ಥ ಆಗದಂತೆ ಎಚ್ಚರ ವಹಿಸಬೇಕು. ತಮ್ಮ ವೈಯಕ್ತಿಕ ಅಜೆಂಡಾ ಮತ್ತು ನಿಲುವುಗಳನ್ನು ಬದಿಗಿಟ್ಟು ಕೆಲಸ ಮಾಡಬೇಕು ಎನ್ನುತ್ತಾರೆ ಅಶೋಕ ಚಂದರಗಿ.

ಇದನ್ನೂ ಓದಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಕದನ: 9 ಮಂದಿ ಅವಿರೋಧ ಆಯ್ಕೆ, 7 ಕ್ಷೇತ್ರಗಳಲ್ಲಿ ಚುನಾವಣೆ!